ಮಂಡ್ಯ: ಶಾಲಾ ಮಕ್ಕಳಿಂದ ವ್ಯಾಸನಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವಂತಹ ಪತ್ರಗಳನ್ನು ಬರೆಸುವ ಕಾರ್ಯಕ್ರಮ ಯೋಜಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ನಾರ್ಕೋ ಸಮನ್ವಯ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ವತಿಯಿಂದ ಮಕ್ಕಳೂ ಅವರ ಪೋಷಕರಿಗೆ ದುಶ್ಚಟಗಳಿಂದ ಉಂಟಾಗುವ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಮತ್ತು ಶಾಲಾ ಮಟ್ಟದಲ್ಲಿ ಆಯೋಜಿಸಿ. ಬೀದಿ ನಾಟಕ ಹಾಗೂ ಜಾಥಾಗಳನ್ನು ಹೆಚ್ಚು ಆಯೋಜಿಸುವಂತೆ ಸೂಚಿಸಿದರು.
ಶಾಲೆಯ ಸುತ್ತಲಿನ 100 ಮೀಟರ್ ಅಂತರದಲ್ಲಿ ಯಾವುದೇ ಮಾದಕ ವಸ್ತುಗಳು ಮತ್ತು ತಂಬಾಕು ಮಾರಾಟ ಮಾಡುವಂತಿಲ್ಲ, ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಬೇಟಿ ನೀಡಿ ಪರಿಶೀಲಿಸಿ ಹಾಗೂ ಎಲ್ಲಾ ಶಾಲೆಗಳಲ್ಲೂ ತಂಬಾಕು ನಿಯಂತ್ರಣ ವಿಷಯದ ಕುರಿತು ಭಿತ್ತಿ ಚಿತ್ರ ಅಂಟಿಸಿ ಅರಿವು ಮುಡಿಸಿ ಎಂದರು.
ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಯಾರು ಗಾಂಜಾ ಗಿಡಗಳನ್ನು ಬೆಳೆದು ಮಾರಾಟ ಮಾಡದಂತೆ ನಿಗಾ ವಹಿಸಿ, ಅಬಕಾರಿ ಇಲಾಖೆಯವರು ಮಾದಕ ವಸ್ತುಗಳ ನಿಗ್ರಹಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಯಾವುದೇ ಮೆಡಿಕಲ್ ಶಾಪ್ ಗಳಲ್ಲಿ ವೈದ್ಯರು ನೀಡಿರುವ ಸಲಹಾ ಚೀಟಿ ಇಲ್ಲದೆ ಮಾತ್ರೆಗಳನ್ನು ನೀಡದಂತೆ ನಿಗಾ ವಹಿಸಿ ಹಾಗೂ ಮೆಡಿಕಲ್ ಶಾಪ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ಜಿಲ್ಲೆಗೆ ಹೊರ ಜಿಲ್ಲೆಗಳಿಂದ ಗಾಂಜಾ ರಫ್ತು ಮಾಡಲಾಗುತ್ತಿದೆ, ಈಗಾಗಲೇ ಸಾಕಷ್ಟು ಪ್ರಕರಣ ದಾಖಲಾಗಿದ್ದು ಅವರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ, ರೈಲುಗಳು ಮುಖಾಂತರ ಹೆಚ್ಚು ಮಾದಕ ವಸ್ತುಗಳ ಸಾಗಾಣಿಕೆಯಾಗುತ್ತಿರುವುದು ಗಮನಕ್ಕೆ ಬಂದಿರುತ್ತದೆ. ರೈಲ್ವೆ ಪೋಲಿಸ್ ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿ ತಡೆಗಟ್ಟಿ ಹಾಗೂ ಅಗತ್ಯವಿದ್ದಲ್ಲಿ ಜಿಲ್ಲಾ ಶ್ವಾನದಳ ಬೆಳೆಸಿಕೊಳ್ಳಿ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಮೋಹನ್, ಕೃಷಿ ಇಲಾಖೆಯ ಮಾಲತಿ ಮತ್ತು ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.





