10 ನಿಮಿಷ ನಿಂತರೆ ನಿಮ್ಮದೇ ಭಾವಚಿತ್ರ ಕೈಗೆ ಸಿಗುತ್ತದೆ!
ಚಿರಂಜೀವಿ ಸಿ. ಹುಲ್ಲಹಳ್ಳಿ
ಮೈಸೂರು: ಕೇವಲ ೫ ನಿಮಿಷಗಳಲ್ಲಿ ಫೋಟೊ ತೆಗೆದುಕೊಡಲಾಗುತ್ತದೆ ಎಂಬುದಾಗಿ ಅನೇಕ ಸ್ಟುಡಿಯೋಗಳಲ್ಲಿ ಬೋರ್ಡ್‌ಗಳನ್ನು ನೇತು ಹಾಕಿರುವುದನ್ನು ನೋಡುತ್ತೇವೆ. ಅದು ಯಂತ್ರಾಧಾರಿತ. ಇಲ್ಲಿ ಕೇವಲ ೧೦ ನಿಮಿಷಗಳು ಅವರೆದುರು ನಿಂತರೆ ಸಾಕು, ಪೆನ್ಸಿಲ್ ಹಿಡಿದ ಕೈಯೊಂದರ ನರ್ತನ ದೊಂದಿಗೆ ನಿಮ್ಮ ಭಾವಚಿತ್ರ ವಿಕಸಿತಗೊಳ್ಳುತ್ತದೆ!
ನಾಟಕ, ಸಿನಿಮಾ, ಜಾನಪದ ನೃತ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಅನಾವರಣದ ಬಹು ರೂಪಿಯಲ್ಲಿ ೧೦ ನಿಮಿಷಗಳಲ್ಲಿ ಕುಂಚದಲ್ಲಿ ಭಾವ ಚಿತ್ರವನ್ನು ಅರಳಿಸುವ ಮಳಿಗೆಯೊಂದು ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.
‘ಬಿಡುಗಡೆ’ ಘೋಷ ವಾಕ್ಯ ಹೊತ್ತಿರುವ ಬಹು ರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಭೇಟಿ ನೀಡುವ ಕಲಾಸಕ್ತರು ಅರಮನೆ ಸ್ಕೂಲ್ ಆ- ಆರ್ಟ್ಸ್ ಮೈಸೂರು ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ ಮಳಿಗೆಯಲ್ಲಿ ಒಂದೆರಡು ನಿಮಿಷ ಕಲೆಯನ್ನು ಆಸ್ವಾದಿಸುವುದರ ಜೊತೆಗೆ ಕುಂಚದ ಲಾಸ್ಯದಲ್ಲಿ ಕಪ್ಪು-ಬಿಳುಪು ಬಣ್ಣದಲ್ಲಿ ಅರಳುವ ತಮ್ಮ ಭಾವಚಿತ್ರವನ್ನು ಕಂಡು ಪುಳಕಿತರಾಗುತ್ತಿದ್ದಾರೆ.
ಎದುರಿಗೆ ಕುಳಿತ ವ್ಯಕ್ತಿಯ ಚಹರೆಯನ್ನು ಕೇವಲ ೧೦ ನಿಮಿಷಗಳೊಳಗೆ ಗ್ರಹಿಸಿ ಅದರ ಪಡಿ ಯಚ್ಚು ಮೂಡಿಸುವ ಮೂಲಕ ಪ್ರತಿಭಾವಂತ
ಕಲಾವಿದ ಹಾಗೂ ಚಿತ್ರಕಲಾ ಶಿಕ್ಷಕ ರಾಜಶೇಖರ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ರಾಜಶೇಖರ್, ಮೊದಲಿನಿಂದಲೂ ಭಾವನೆಗಳನ್ನು ಚಿತ್ರಗಳ ಮೂಲಕ ಸೆರೆ ಹಿಡಿಯುವುದನ್ನು ರೂಢಿಸಿಕೊಂಡಿದ್ದರು. ಅದು ಅಷ್ಟು ಸುಲಭವಲ್ಲ, ಎದುರಿಗೆ ಕೂರಿಸಿ, ಕೆಲವೇ ನಿಮಿಷಗಳಲ್ಲಿ ಚಹರೆ ಯನ್ನು ಗಮನಿಸಿ ಸೆರೆ ಹಿಡಿಯುವುದು ಕಠಿಣ ಕೆಲಸ. ಯಾರ ಚಿತ್ರವನ್ನು ರಚಿಸಬೇಕೋ ಅವರ ವ್ಯಕ್ತಿತ್ವವನ್ನು ಆಮೂಲಾಗ್ರವಾಗಿ ಗ್ರಹಿಸುತ್ತೇವೆ ಎನ್ನುತ್ತಾರೆ ರಾಜಶೇಖರ್.
ಬಾಲ್ಯದ ನೆನಪುಗಳನ್ನು ಮರುಕಳಿಸುವ ಕಲಾಕೃತಿಗಳು: ಇದೇ ಮಳಿಗೆಯ ಮತ್ತೊಂದು ಭಾಗದಲ್ಲಿ ಬಹುತೇಕ ಶಾಲಾ ದಿನಗಳಲ್ಲಿ ಆಡುತ್ತಿದ್ದ ವಿವಿಧ ಆಟಗಳನ್ನು ನೆನಪಿಸುವ ಕಲಾಕೃತಿಗಳು ನೋಡುಗರ ಮನವನ್ನು ಮುದಗೊಳಿಸುತ್ತಿವೆ.
ಕಲಾವಿದ ಶಿವಕುಮಾರ್ ಅವರು, ಲ್ಯಾಂಡ್ ಸ್ಕೇಪ್, ವಾಲ್ ಪೇಯಿಂಟ್‌ಗಳಲ್ಲಿ ಅರಳಿಸಿರುವ ಮಕ್ಕಳ ಬಂಡಿ ಆಟ, ಗಿಲ್ಲಿದಾಂಡು, ಅರೆಪೆಟ್ಲು ಸೈಕಲ್ ಓಡಿಸುವುದು, ಅಮ್ಮ-ಮಗ, ಉಯ್ಯಾಲೆ ಆಟ, ನಾಯಿಯೊಂದಿಗೆ ವಿಹಾರದ ಕಪ್ಪು-ಬಿಳುಪು ಚಿತ್ರಗಳು ಬಾಲ್ಯದ ಜೀವನವನ್ನು ಮೆಲುಕು ಹಾಕಿಸುತ್ತವೆ. ಮನೆಯ ಅಲಂಕಾರಿಕ ವಸ್ತುಗಳನ್ನು ಕೂಡ ರಚಿಸಿದ್ದಾರೆ. ಅವರು ತಮ್ಮ ಚಿತ್ರಕಲಾ ಜೀವನದ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದಾರೆ.





