ಡಾ. ದುಷ್ಯಂತ್ ಪಿ.
ಆರೋಗ್ಯಕರ ವೃದ್ಧಾಪ್ಯ (Heakthy Aging) ಇತ್ತೀಚಿನ ದಿನಗಳಲ್ಲಿ ಪ್ರಚಲಿತದಲ್ಲಿರುವ ಒಂದು ಪರಿಕಲ್ಪನೆ. ವೃದ್ಧಾಪ್ಯದೆಡೆಗೆ ಸಾಗುವಾಗ ಹಲವು ಅಂಶಗಳನ್ನು ಪಾಲಿಸುತ್ತಾ ಸಾಗಿದರೆ, ವೃದ್ಧಾಪ್ಯವು ಆರೋಗ್ಯಕರವಾಗಿಯೂ ಮತ್ತು ಉತ್ಸಾಹದಾಯಕವಾಗಿಯೂ ಇರುತ್ತದೆ. ಈ ನಿಟ್ಟಿನಲ್ಲಿ ದೈಹಿಕ ವ್ಯಾಯಾಮ ಮತ್ತು ದೇಹದ ಚಲನೆ ಪ್ರಮುಖವಾಗಿದೆ.
ನಮಗೆಲ್ಲರಿಗೂ ತಿಳಿದಿರುವಂತೆ ದೈಹಿಕ ವ್ಯಾಯಾಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ವ್ಯಾಯಾಮದಿಂದ ದೇಹ ಸದೃಢಗೊಳ್ಳುತ್ತದೆ. ಮೂಳೆಗಳು ಮತ್ತು ಸ್ನಾಯುಗಳಲ್ಲಿ ಬಲ ಹೆಚ್ಚಿಸುತ್ತದೆ. ಡಯಾಬಿಟಿಸ್, ರಕ್ತದೊತ್ತಡ ಮತ್ತು ಹೃದಯ ಸಂಬಂಽ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ವ್ಯಾಯಾಮ ಮತ್ತು ದೈಹಿಕ ಚಲನೆ ಮಾನಸಿಕ ಆರೋಗ್ಯಕ್ಕೂ ಸಹಕಾರಿಯಾಗಿದೆ. ವ್ಯಾಯಾಮದಿಂದ ದೇಹದಲ್ಲಿ ಖುಷಿಯ ಹಾರ್ಮೋನ್ (ಹ್ಯಾಪಿ ಹಾರ್ಮೋನ್ಸ್) ಉತ್ಪತ್ತಿಯಾಗಿ ಒತ್ತಡ, ಆತಂಕ, ಖಿನ್ನತೆ ದೂರವಾಗುತ್ತದೆ. ನೆನಪಿನ ಶಕ್ತಿ ಉತ್ತಮಗೊಂಡು ವಯಸ್ಸಾದ ಬಳಿಕವೂ ಸದಾ ಚಟುವಟಿಕೆಯಿಂದಿರಲು ಸಹಕಾರಿಯಾಗಲಿದೆ.
ಚಲನಶೀಲತೆ ಹಿರಿಯರ ಸಾಮಾಜಿಕ ಜೀವನದಲ್ಲೂ ಪರಿಣಾಮ ಬೀರುತ್ತದೆ. ಜನರೊಂದಿಗೆ ಒಡನಾಟ, ಭಾಗ ವಹಿಸುವಿಕೆ ಹೆಚ್ಚಾಗಿ ಸ್ವಾವಲಂಬನೆ ಮತ್ತು ಆತ್ಮಸ್ಥೆ ರ್ಯ ಮೂಡಿಸುತ್ತದೆ. ಜೀವನದಲ್ಲಿ ದೈಹಿಕ ವ್ಯಾಯಾಮ ಮತ್ತು ಚಲನಶೀಲತೆಯನ್ನು ಸುಲಭವಾಗಿ ಅನುಸರಿಸಬಹುದು. ವೃದ್ಧರಲ್ಲಿ ವ್ಯಾಯಾಮದ ಪ್ರಮಾಣಕ್ಕಿಂತ ಅದನ್ನು ನಿರಂತರವಾಗಿ ಅಭ್ಯಾಸ ಮಾಡುವುದು ಬಹಳ ಮುಖ್ಯ. ಪ್ರಾರಂಭಿಕ ಹಂತದಲ್ಲಿ ಕಡಿಮೆ ಪ್ರಮಾಣದಿಂದ ಆರಂಭಿಸಬೇಕು. ಕೇವಲ ೧೦-೧೫ ನಿಮಿಷಗಳ ನಡಿಗೆಯಿಂದ ಪ್ರಾರಂಭಿಸಬಹುದು. ತಮ್ಮ ಆರೋಗ್ಯ ಮತ್ತು ಶಕ್ತಿ ಅನುಸಾರ ಹೆಚ್ಚಿಸುತ್ತಾ ಹೋಗಬೇಕಾಗುತ್ತದೆ. ದೇಹದ ಶಕ್ತಿ ಹೆಚ್ಚಾದಂತೆ ನಡಿಗೆಯ ವೇಗ ಮತ್ತು ಸಮಯ ಹೆಚ್ಚಿಸುತ್ತಾ ಹೋಗಬಹುದು.
ನಿಧಾನವಾಗಿ ಪ್ರತಿದಿನ ೨೦-೩೦ ನಿಮಿಷ ಮತ್ತು ವಾರದಲ್ಲಿ ಕನಿಷ್ಠ ೫ ದಿನಗಳಾದರೂ ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು. ನಡಿಗೆ ಅಲ್ಲದೆ ಸ್ನಾಯು ಗಳನ್ನು ಸಡಿಲಿಸುವ ಸ್ಟ್ರೇಚಿಂಗ್ ವ್ಯಾಯಾಮ ಕೂಡ ಮಾಡುವುದು ಉತ್ತಮ.
ಕತ್ತು, ಕೈ, ಕಾಲು, ಸೊಂಟದ ಭಾಗಗಳನ್ನು ಸಡಿಲಗೊಳಿಸುವುದರಿಂದ ದೇಹದ ಚಲನೆ ಉತ್ತಮಗೊಳ್ಳುತ್ತದೆ. ವ್ಯಾಯಾಮ ಮಾಡುವುದು ಕಷ್ಟವಾದರೆ ದಿನನಿತ್ಯದ ಚಟುವಟಿಕೆಗಳಿಂದಲೂ ಚಲನಶೀಲತೆಯನ್ನು ಉತ್ತಮಗೊಳಿಸಬಹುದು. ಮೆಟ್ಟಿಲು ಗಳನ್ನು ಹತ್ತಿ ಇಳಿಯುವುದು, ವಾಹನದ ಬಳಕೆ ಕಡಿಮೆ ಮಾಡಿ ಹತ್ತಿರದ ಕೆಲಸಗಳಿಗೆ ನಡೆದುಕೊಂಡೇ ಹೋಗುವುದು, ತೋಟಗಾರಿಕೆ, ಅಡುಗೆ ಕೆಲಸ, ಮನೆಯನ್ನು ಸ್ವಚ್ಛಗೊಳಿಸುವುದು ಹೀಗೆ ಹಲವು ಚಟುವಟಿಕೆಗಳ ಮೂಲಕ ದೇಹವನ್ನು ಸಕ್ರಿಯವಾಗಿರಿಸಿಕೊಳ್ಳಬಹುದು.
ವೃದ್ಧರು ತಮ್ಮ ಸ್ನೇಹಿತರೊಂದಿಗೆ ಕೂಡಿ ಗುಂಪುಗಳಲ್ಲಿ ವ್ಯಾಯಾಮ ಮತ್ತು ನಡಿಗೆ ಮಾಡಬಹುದು. ಕೂಡಿ ವ್ಯಾಯಾಮ ಮಾಡುವುದರಿಂದ ಉತ್ಸಾಹ ಹೆಚ್ಚುತ್ತದೆ ಮತ್ತು ನಿರಂತರತೆ ಕಾಯ್ದುಕೊಳ್ಳುವಲ್ಲಿ ಸಹಾಯವಾಗುತ್ತದೆ. ವೃದ್ಧರಿಗೆ ದೈಹಿಕ ವ್ಯಾಯಾಮ ಮಾಡುವಲ್ಲಿ ಹಲವು ಅಡೆತಡೆಗಳು ಇರುವುದು ಸಹಜ. ಜಾಗದ ಕೊರತೆ, ಜೊತೆಯಲ್ಲಿ ಸಹಾಯಕ್ಕೆ ಯಾರು ಇಲ್ಲದೆ ಇರುವುದು, ಅವರಲ್ಲಿರುವ ಆರೋಗ್ಯದ ಸಮಸ್ಯೆ ಹೀಗೆ ಹಲವು ಕಾರಣಗಳಿಂದ ಇವುಗಳನ್ನು ಮಾಡಲು ಸಾಧ್ಯವಾಗದೆ ಇರಬಹುದು. ಹಾಗಾಗಿ ಕುಟುಂಬದವರ ಪಾತ್ರ ಇದರಲ್ಲಿ ಪ್ರಮುಖವಾಗಿರುತ್ತದೆ. ವೃದ್ಧರು ಹೆಚ್ಚು ಚಟುವಟಿಕೆಯಿಂದ ಇರಲು ಕುಟುಂಬದ ಸದಸ್ಯರು ಸಹಕರಿಸಬೇಕು. ಸಾಧ್ಯವಾದಷ್ಟು ಅವರಿಗೆ ಪ್ರೋತ್ಸಾಹ ಮತ್ತು ಸಹಾಯ ನೀಡಬೇಕು. ವಯಸ್ಸಾಗಿದೆ ನಿಮ್ಮ ಕೈಯಲ್ಲಿ ಏನೂ ಆಗುವುದಿಲ್ಲ ಎನ್ನುವ ಮಾತು, ನಡವಳಿಕೆ ಮನೆಯಲ್ಲಿ ಇರಬಾರದು. ವೃದ್ಧರು ನಿರೀಕ್ಷಿಸುವ ಸಹಾಯಸ್ತ ನೀಡಲು ಮುಂದಾಗಬೇಕು.
‘ಚಲನೆಯೇ ಔಷಧಿ’ ಎನ್ನುವ ಮಾತಿನಂತೆ ವೃದ್ಧರು ದೈಹಿಕ ಚಟುವಟಿಕೆಯಿಂದ ತಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದರಿಂದ ಆರೋಗ್ಯಕರ ವೃದ್ಧಾಪ್ಯವನ್ನು ಸಾಧಿಸಬಹುದು.





