Mysore
19
overcast clouds

Social Media

ಮಂಗಳವಾರ, 13 ಜನವರಿ 2026
Light
Dark

ಇಂದು ಪ್ರೊ. ಬಸವೇಗೌಡರಿಗೆ ಅಭಿನಂದನಾ ಸಮಾರಂಭ

ಕೋಟೆ: ಆದಿಚುಂಚನಗಿರ ಶಿಕ್ಷಣ ಸಂಸ್ಥೆಯ ಪ್ರಗತಿಗೆ ಶ್ರಮಿಸಿದ ಹಿರಿಯರಿಗೆ ಗೌರವ ಸಮರ್ಪಣೆ

ಮಂಜು ಕೋಟೆ
ಹೆಚ್. ಡಿ. ಕೋಟೆ: ಹಿಂದುಳಿದ ತಾಲ್ಲೂಕಿನಲ್ಲಿ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ೩೩ ವರ್ಷಗಳ ಕಾಲ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ವೇತನ ಪಡೆಯದೆ ಶ್ರಮಿಸಿದ ೯೧ ವರ್ಷ ವಯಸ್ಸಿನ ಚುಂಚಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ. ಕೆ. ಪಿ. ಬಸವೇಗೌಡ ಅವರಿಗೆ ಗೌರವ ವಂದನೆ ಸಮಾರಂಭ ಬುಧವಾರ ನಡೆಯಲಿದೆ.

ಪಟ್ಟಣದ ಬಿಜಿಎಸ್ ಸಭಾ ಭವನದಲ್ಲಿ ತಾಲ್ಲೂಕು ಒಕ್ಕಲಿಗರ ಸಮುದಾಯ ಮತ್ತು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಸಂಯುಕ್ತ ಆಶಯದಲ್ಲಿ ಬುಧವಾರ ಕೆ. ಪಿ. ಬಸವೇ ಗೌಡರವರಿಗೆ ಅಭಿನಂದನಾ ಸಮಾರಂಭ ವನ್ನು ಪ್ರೊ. ಪಿ. ಎಂ. ಚಿಕ್ಕಬೋರಯ್ಯ ನುಡಿ ನಮನ ಕಾರ್ಯಕ್ರಮದಲ್ಲಿ ಏರ್ಪಡಿಸಲಾಗಿದೆ.

ತಾಲ್ಲೂಕಿನ ಕೊತ್ತೇಗಾಲದಲ್ಲಿ ೧೯೩೪ರಲ್ಲಿ ಪುಟ್ಟಸ್ವಾಮಿಗೌಡ ಮತ್ತು ಆಲಮ್ಮ ದಂಪತಿಯ ಪುತ್ರನಾಗಿ ಜನಿಸಿದ ಬಸವೇಗೌಡ ಅವರ ಕಲಿಯುವ ಆಸೆ ಅರಿತ ಸಂಬಂಽಯೊಬ್ಬರು ಮೈಸೂರು ತಾಲ್ಲೂಕಿನ ಮೈದನಹಳ್ಳಿಗೆ ಕರೆದು ಕೊಂಡು ಹೋಗಿ ಆಶ್ರಯ ನೀಡಿದರು. ಮುಂದೆ ೧೯೪೭-೪೮ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ವಿಶ್ವನಾಥಯ್ಯನವರ ಮಾರ್ಗದರ್ಶ ನದಲ್ಲಿ ಇಂಟರ್‌ಮೀಡಿಯಟ್ ಶಿಕ್ಷಣ ಹಾಗೂ ಉನ್ನತ ಶಿಕ್ಷಣವನ್ನು ಕೊಡಿಸಿದರು. ಮೊದಲು ಕೊಳ್ಳೇಗಾಲದ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ಮಂಡ್ಯದ ಮಹಿಳಾ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡು ಮೈಸೂರಿನ ಮಹಿಳಾ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ೧೯೯೪-೯೫ ರಲ್ಲಿ ಸೇವೆಯಿಂದ ನಿವೃತ್ತರಾದರು.

ಮುಂದಿನ ದಿನಗಳನ್ನು ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ತಾವು ಹೆಚ್ಚಾಗಿ ಪ್ರೀತಿಸುವ ಹುಟ್ಟೂರಿಗೆ ಸೇವೆ ಸಲ್ಲಿಸುವ ಸಲುವಾಗಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದ ಪ್ರೊ. ಪಿ. ಎಂ. ಚಿಕ್ಕಬೋರಯ್ಯ ಅವರ ಸಹಕಾರ ದೊಂದಿಗೆ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಯವರೊಂದಿಗೆ ತಮ್ಮ ಆಸೆ ಆಕಾಂಕ್ಷೆಗಳನ್ನು ಹೇಳಿಕೊಂಡು, ಮೈಸೂರಿನ ಶಾಖಾ ಮಠದ ಅಧ್ಯಕ್ಷ ರಾಗಿದ್ದ ಶ್ರೀ ಸೋಮೇಶ್ವರನಾಥ ಸ್ವಾಮೀಜಿಯವರ ಸಹಕಾರದೊಂದಿಗೆ ಹಳ್ಳಿ ಹಳ್ಳಿಗೂ ತೆರಳಿ ಎಲ್ಲರ ಮನದಲ್ಲಿ ಅಕ್ಷರದ ಬೀಜ ಬಿತ್ತಿ, ಅವರ ದಾನ, ಪ್ರೀತಿ, ಸಹಕಾರದಿಂದ ೧೯೯೯-೨೦೦೦ರಲ್ಲಿ ಸಂಸ್ಥೆಯನ್ನು ಆರಂಭಿಸಿದರು.

ಕೇವಲ ೩೦ ಮಕ್ಕಳಿಂದ ಪ್ರಾರಂಭವಾದ ಸಂಸ್ಥೆ ಇಂದು ಸುಮಾರು ೩,೬೦೦ ಮಕ್ಕಳಿಗೆ ಜ್ಞಾನದ ಬೆಳಕು ನೀಡುವ ಹೆಮ್ಮರವಾಗಿ ಬೆಳೆದು ನಿಂತಿದೆ. ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ.

Tags:
error: Content is protected !!