ಭೇರ್ಯ ಮಹೇಶ್
ಸಮಗ್ರ ಕೃಷಿ ಪದ್ಧತಿ ಮತ್ತು ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡರೆ ಕೃಷಿ ಖಂಡಿತವಾಗಿಯೂ ಲಾಭದಾಯಕವಾಗಿರುತ್ತದೆ ಎಂಬುದನ್ನು ಕೆ. ಆರ್. ನಗರ ತಾಲ್ಲೂಕಿನ ಕೆಂಪನಕೊಪ್ಪಲು ಗ್ರಾಮದ ಪ್ರಗತಿಪರ ರೈತ ಕೆ. ಪಿ. ಜಗದೀಶ್ ಸಾಧಿಸಿ ತೋರಿಸಿದ್ದಾರೆ.
ತಂದೆಯಿಂದ ಬಳುವಳಿಯಾಗಿ ಬಂದ ಕೃಷಿ ಕಾಯಕದಲ್ಲಿಯೇ ಖುಷಿಯನ್ನು ಕಾಣುವ ಕನಸು ಕಟ್ಟಿಕೊಂಡ ಜಗದೀಶ್, ತನಗಿರುವ ಮೂರೂವರೆ ಎಕರೆ ಜಮೀನಿನಲ್ಲಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆದು ಉತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಉತ್ತಮ ಕೃಷಿ ಕಾಯಕದಲ್ಲಿ ತೊಡಗಿರುವ ಇವರನ್ನು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ರೇಷ್ಮೆ ಇಲಾಖೆಗಳು ‘ಆಧುನಿಕ ಪ್ರಗತಿಪರ ರೈತ’ ಎಂದು ಗುರುತಿಸಿ ಗೌರವಿಸಿವೆ. ಇತರೆ ರೈತರು ಕೂಡ ಇವರ ತೋಟಕ್ಕೆ ಭೇಟಿ ನೀಡಿ ಸಮಗ್ರ ಕೃಷಿ ಪದ್ದತಿ ಮತ್ತು ಮಿಶ್ರ ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ.
ಸಾಮಾನ್ಯವಾಗಿ ಕೃಷಿ ಲಾಭದಾಯಕವಲ್ಲ, ಬೆಳೆನಷ್ಟ, ರೋಗರುಜಿನಗಳ ಕಾಟ, ಬೆಲೆ ಕುಸಿತದಿಂದ ಚೇತರಿಸಿಕೊಳ್ಳುವುದೇ ರೈತರಿಗೆ ಕಷ್ಟ ಎಂದು ಅನೇಕ ಮಂದಿ ಕೃಷಿಯಿಂದಲೇ ವಿಮುಖರಾಗುತ್ತಾರೆ. ಆದರೆ ಕೆ. ಪಿ. ಜಗದೀಶ್ ವಿವಿಧ ತೋಟಗಾರಿಕೆ, ಮಿಶ್ರ ಬೆಳೆಗಳಿಂದಲೇ ಹೆಚ್ಚು ಲಾಭ ಗಳಿಸುತ್ತಾ ಕೃಷಿಯಲ್ಲಿಯೂ ಲಾಭ ಗಳಿಸಬಹುದು ಎಂಬುದನ್ನು ತೋರಿಸಿದ್ದಾರೆ. ಇವರ ತೋಟದಲ್ಲಿ ಸೀಬೆ, ನೇರಳೆ, ತೆಂಗು, ಮಾವು, ಸಪೋಟ, ಡ್ರಾಗನ್ ಫ್ರೂಟ್, ಪಪ್ಪಾಯ, ನಿಂಬೆ, ಏಲಕ್ಕಿ ಸೇರಿದಂತೆ ಹಲವು ರೀತಿಯ ಬೆಳೆಗಳನ್ನು ಮೂಲಕ ಬೆಳೆದಿದ್ದಾರೆ.
ಕೃಷಿಯಲ್ಲೂ ಸಮಗ್ರ ಯೋಜನೆ
ರೈತರು ಅಧಿಕ ಇಳುವರಿ ಅಥವಾ ಅಧಿಕ ಲಾಭದ ಹಿನ್ನೆಲೆಯಲ್ಲಿ ಒಂದೇ ಬೆಳೆಗೆ ಜೋತುಬೀಳ ಬಾರದು. ಇರುವ ಜಮೀನಿನಲ್ಲಿಯೇ ಅನೇಕ ಅಲ್ಪಾವಧಿ ಮತ್ತು ದೀರ್ಘಾವಧಿ ಬೆಳೆಗಳನ್ನು ಬೆಳೆಯಬೇಕು. ಕಡಿಮೆ ಖರ್ಚು ಮಾಡಿ ಲಾಭ ಪಡೆಯುವ ಬೆಳೆ ಬೆಳೆಯಬೇಕು. ಒಂದು ಬೆಳೆ ಕೈಕೊಟ್ಟರೆ ಮತ್ತೊಂದು ಬೆಳೆ ರೈತರ ಕೈಹಿಡಿಯುತ್ತದೆ. ಪ್ರಕೃತಿಯ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟ, ಬೆಲೆ ಕುಸಿತ ರೈತರನ್ನು ಹೆಚ್ಚು ಬಾಧಿಸುವುದುಂಟು ಇರುವ ಜಮೀನಿನಲ್ಲಿ ಅನೇಕ ಬೆಳೆಗಳನ್ನು ಬೆಳೆಯುವುದರಿಂದ ಇಂತಹ ನಷ್ಟದಿಂದ ದೂರವಾಗಬಹುದು ಎನ್ನುತ್ತಾರೆ ಕೃಷಿಕ ಕೆ. ಪಿ. ಜಗದೀಶ್.
ಜಗದೀಶ್, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೊಂದಿಗೆ ನಿರಂತರ ಸಂಪರ್ಕ ದಲ್ಲಿದ್ದು, ಅವರಿಂದ ಸಲಹೆ ಪಡೆಯುತ್ತಾರೆ. ಕೃಷಿಯಲ್ಲೂ ಹೊಸ ಹೊಸ ಅನ್ವೇಷಣೆಯನ್ನು ಮಾಡುವುದು ಅವರ ಚಿಂತನೆಯಾಗಿದೆ. ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ, ಹಸಿರು ಸೊಪ್ಪು, ಎರೆಹುಳ ಗೊಬ್ಬರ, ಬೇವಿನ ಹಿಂಡಿ ಜೊತೆಗೆ ಸಾವಯವ ಜೀವಾಮೃತವನ್ನು ಬಳಸುತ್ತಾರೆ.
ಜಗದೀಶ್ ಉಪಕಸುಬಾಗಿ ಕುರಿ, ಕೋಳಿ, ನಾಟಿ ಹಸು ಸಾಕಾಣಿಕೆ ಮಾಡುತ್ತಾರೆ. ಅವರ ಪತ್ನಿಯೂ ಕೃಷಿಗೆ ಸಾಥ್ ನೀಡುತ್ತಿದ್ದಾರೆ.





