Mysore
20
clear sky

Social Media

ಶುಕ್ರವಾರ, 02 ಜನವರಿ 2026
Light
Dark

ಕುತೂಹಲ ಮೂಡಿಸಿದ ಎಚ್‌ಡಿಕೆ-ಕೃಷ್ಣನಾಯಕ ಭೇಟಿ

ಕೋಟೆ: ತಾಲ್ಲೂಕಿನ ರಾಜಕಾರಣದಲ್ಲಿ ಬದಲಾವಣೆ ಸಾಧ್ಯತೆ ಸೃಷ್ಟಿಸಿದ ಮುಖಂಡರ ನಡೆ
ಮಂಜು ಕೋಟೆ

ಎಚ್. ಡಿ. ಕೋಟೆ: ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ಮುಖಂಡ ಕೃಷ್ಣನಾಯಕ ಭೇಟಿ ಮಾಡಿರುವುದು ತಾಲ್ಲೂಕಿನ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜಾ. ದಳ ಪಕ್ಷದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮತ್ತು ಎಚ್. ಡಿ. ಕುಮಾರಸ್ವಾಮಿ ಅವರಿಗೆ ಆಪ್ತರಾಗಿದ್ದ ಕೃಷ್ಣನಾಯಕ ಅವರಿಗೆ ಟಿಕೆಟ್ ಕೈತಪ್ಪಿ, ಜಿ. ಟಿ. ದೇವೇಗೌಡ, ಸಾ. ರಾ. ಮಹೇಶ್‌ರವರ ಹೋರಾಟ ಮತ್ತು ತಂತ್ರಗಾರಿಕೆಯಿಂದ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣನವರ ಪುತ್ರ ಜಯಪ್ರಕಾಶ್ ಅವರಿಗೆ ಟಿಕೆಟ್ ಲಭಿಸಿತ್ತು.

ಇದರಿಂದ ರೊಚ್ಚಿಗೆದ್ದ ಮಾಜಿ ಅಧ್ಯಕ್ಷ ಸಿ. ವಿ. ನಾಗರಾಜು ಮತ್ತಿತರರು ಕೃಷ್ಣನಾಯಕ ಅವರಿಗೆ ಟಿಕೆಟ್ ಅನ್ನು ಯಾವುದೇ ಪಕ್ಷದಿಂದಾದರೂ ಕೊಡಿಸಲೇ ಬೇಕೆಂದು ಪಟ್ಟುಹಿಡಿದು ಬಿಜೆಪಿ ಮುಖಂಡರೊಡನೆ ಚರ್ಚಿಸಿ ಆ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಕೃಷ್ಣಸ್ವಾಮಿಯವರಿಗೆ ಟಿಕೆಟ್ ತಪ್ಪಿಸಿ ಕೃಷ್ಣನಾಯಕ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸಿದ್ದರು.

ಕೃಷ್ಣನಾಯಕ ಅವರು ಪ್ರತಿಸ್ಪರ್ಧಿಗಳಾದ ಅನಿಲ್ ಚಿಕ್ಕಮಾದು, ಜಯಪ್ರಕಾಶ್ ಅವರಿಗೆ ಪ್ರಬಲವಾಗಿ ಪೈಪೋಟಿ ನೀಡಿ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದರು.

ಇವರ ಕಾರ್ಯವೈಖರಿ ಗುರುತಿಸಿದ ಬಿಜೆಪಿ ಕೃಷ್ಣನಾಯಕ ಅವರನ್ನು ರಾಜ್ಯ ಎಸ್‌ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿತ್ತು. ಆದರೆ, ಕೃಷ್ಣನಾಯಕ ಕೆಲ ತಿಂಗಳುಗಳ ಹಿಂದೆ ಬಿಜೆಪಿ ಪಕ್ಷಕ್ಕೆ ಮತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ತಟಸ್ಥವಾಗಿದ್ದವರು. ಇತ್ತೀಚೆಗೆ ಕೃಷ್ಣನಾಯಕ ಅವರು ಜಾ. ದಳ ವರಿಷ್ಠರಾದ ಎಚ್. ಡಿ. ಕುಮಾರಸ್ವಾಮಿ, ಮಾಜಿ ಸಚಿವ ಸಾ.ರಾ. ಮಹೇಶ್, ಜಿ. ಡಿ. ಹರೀಶ್ ಗೌಡ, ನಿಖಿಲ್ ಕುಮಾರಸ್ವಾಮಿ, ಮಹದೇವ್ ಅವರ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡು ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವುದು ಕುತೂಹಲ ಮೂಡಿಸಿದೆ.

ಅದರಲ್ಲೂ ಮೈಸೂರಿಗೆ ಕುಮಾರಸ್ವಾಮಿ ಅವರು ಆಗಮಿಸಿದ್ದ ಸಂದರ್ಭದಲ್ಲಿ ಅವರಿಗೆ ಸಾ. ರಾ. ಮಹೇಶ್ ಜೊತೆಗೂಡಿ ಹೊಸ ವರ್ಷದ ಪ್ರಯುಕ್ತ ಶುಭ ಕೋರಿರುವ ಘಟನೆ ಜಾ. ದಳ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮುನ್ಸೂಚನೆಯನ್ನು ನೀಡಿದೆ. ಅಲ್ಲದೆ, ಇದು ಜಿಲ್ಲೆಯ ಹಾಗೂ ತಾಲ್ಲೂಕಿನ ಜಾ. ದಳ ಮುಖಂಡರು ಮತ್ತು ಕಾರ್ಯಕರ್ತರಿಗೆ ನೀಡಿರುವ ಸಂದೇಶದಂತೆ ಕಾಣುತ್ತಿದ್ದು, ಚರ್ಚೆಗೆ ಕಾರಣವಾಗಿದೆ.

ಒಟ್ಟಿನಲ್ಲಿ ಶಾಸಕ ಅನಿಲ್ ಚಿಕ್ಕಮಾದು ಮತ್ತು ಕಾಂಗ್ರೆಸ್ ಪಕ್ಷದ ಆಡಳಿತದ ಅವಧಿಯಲ್ಲಿ ತಾಲ್ಲೂಕಿನಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿ ಮತ್ತು ಜಾ. ದಳ ಪಕ್ಷಗಳು ಮಂಕಾಗಿದ್ದು, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲವೊಂದು ರಾಜಕೀಯ ಬೆಳವಣಿಗೆಗಳು ಬಿಜೆಪಿ ಮತ್ತು ಜಾ. ದಳ ಪಕ್ಷಗಳಲ್ಲಿ ಯಾವ ರೀತಿಯ ಬದಲಾವಣೆ ಉಂಟು ಮಾಡಬಲ್ಲವು ಎಂಬುದನ್ನು ಕಾದುನೋಡಬೇಕಿದೆ.

ಸಂಕ್ರಾಂತಿಯ ನಂತರ ತಾಲ್ಲೂಕಿನ ರಾಜಕಾರಣದಲ್ಲಿ ಬಹಳಷ್ಟು ಬದಲಾವಣೆ ನಡೆಯಲಿದೆ. ಮುಖಂಡರು, ಕಾರ್ಯಕರ್ತರು, ಕ್ಷೇತ್ರದ ಜನತೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಕ್ಷೇತ್ರದ ರೈತರು ಮತ್ತು ಅಭಿವೃದ್ಧಿ ಕೆಲಸಗಳ ವಿಚಾರವಾಗಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ. -ಕೆ. ಎಂ. ಕೃಷ್ಣನಾಯಕ, ಮುಖಂಡರು

Tags:
error: Content is protected !!