ರಾಜ್ಯ ಕಾಂಗ್ರೆಸ್ ಒಂದು ಕುತೂಹಲಕಾರಿ ಸನ್ನಿವೇಶವನ್ನು ಎದುರಿಸುತ್ತಿದೆ. ಸರ್ಕಾರ ಮುಂದಿನ ದಿನಗಳಲ್ಲಿ ಮತ್ತಷ್ಟು ಭದ್ರವಾಗಬೇಕು ಎಂಬ ಕಾಂಗ್ರೆಸ್ ನಾಯಕರ ಮನಃಸ್ಥಿತಿಯೇ ಇದಕ್ಕೆ ಕಾರಣ.
ಹಾಗೆ ನೋಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸುಭದ್ರ ಸ್ಥಿತಿಯಲ್ಲಿಯೇ ಇದೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ನೂರಾ ಮೂವತ್ತಕ್ಕೂ ಅಕ ಸ್ಥಾನಗಳನ್ನು ಗಳಿಸಿದ ಕಾಂಗ್ರೆಸ್ ಪಕ್ಷ, ಇತ್ತೀಚೆಗೆ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಗಳಲ್ಲೂ ಅಭೂತಪೂರ್ವ ಗೆಲುವು ದಾಖಲಿಸಿತು. ಕುತೂಹಲದ ಸಂಗತಿ ಎಂದರೆ ಶಿಗ್ಗಾಂವಿ, ಚನ್ನಪಟ್ಟಣ ಕ್ಷೇತ್ರಗಳನ್ನು ವಶಕ್ಕೆ ಪಡೆಯುವ ಮೂಲಕ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹೆಚ್. ಡಿ. ಕುಮಾರಸ್ವಾಮಿ ಅವರ ಮುಖಭಂಗಕ್ಕೆ ಕಾರಣವಾಯಿತು.
ಸಂಡೂರು ಕ್ಷೇತ್ರದ ಗೆಲುವು ಅದರ ಶಕ್ತಿಯನ್ನು ಹಿಗ್ಗಿಸಿತು ಎಂದು ಹೇಳಲಾಗದಿದ್ದರೂ ಬಿಜೆಪಿ-ಜಾ. ದಳ ಮೈತ್ರಿಕೂಟದ ವಶದಲ್ಲಿದ್ದ ಶಿಗ್ಗಾಂವಿ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿನ ಅದರ ಗೆಲುವು ಅಭೂತಪೂರ್ವ ಅನ್ನಲೇಬೇಕು. ಹೀಗೆ ಉಪಚುನಾವಣೆಗಳ ಗೆಲುವಿನ ಮೂಲಕ ಕಾಂಗ್ರೆಸ್ ಶಾಸಕಾಂಗದ ಬಲ ೧೩೭ ಕ್ಕೇರಿರುವುದೇನೋ ಸರಿ.
ಆದರೆ ಇಷ್ಟು ಸಶಕ್ತ ಶಾಸಕಾಂಗ ಬಲವಿದ್ದರೂ ಕಾಂಗ್ರೆಸ್ ಪಾಳೆಯದಲ್ಲಿ ಇನ್ನಷ್ಟು ಬಲ ಬೇಕು ಎನ್ನುವ ತವಕವಿದೆ. ಅಂದ ಹಾಗೆ ಶಾಸಕಾಂಗ ಬಲವನ್ನು ಹಿಗ್ಗಿಸಿಕೊಳ್ಳುವ ತವಕ ಹೊಸದೇನಲ್ಲ. ೧೯೯೪ರಲ್ಲಿ ಅಸ್ತಿತ್ವಕ್ಕೆ ಬಂದ ಹೆಚ್. ಡಿ. ದೇವೇಗೌಡ ನೇತೃತ್ವದ ಜನತಾದಳ ಸರ್ಕಾರ ಕೆಲವೇ ದಿನಗಳಲ್ಲಿ ಇಂತಹ ಆತುರಕ್ಕೆ ಒಳಗಾಗಿತ್ತು. ಪರಿಣಾಮ ಅವತ್ತು ವಿಧಾನಸಭೆಯಲ್ಲಿ ಸುಮಾರು ಹತ್ತು ಮಂದಿ ಶಾಸಕರ ಬಲವನ್ನು ಹೊಂದಿದ್ದ ಬಂಗಾರಪ್ಪ ನೇತೃತ್ವದ ಕೆಸಿಪಿ ಪಾಳೆ ಯದಿಂದ ಆರು ಮಂದಿ ಶಾಸಕರು ಜನತಾದಳದ ಪಾಳೆಯ ಸೇರಿದ್ದರು.
ಮುಂದೆ ೧೯೯೯ರಲ್ಲಿ ಅಸ್ತಿತ್ವಕ್ಕೆ ಬಂದ ಎಸ್. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ಪ್ರತಿಪಕ್ಷಗಳ ಪಾಳೆಯದಲ್ಲಿದ್ದ ಕೆಲ ಶಾಸಕರನ್ನು ಸೆಳೆದಿತ್ತು. ಆದರೆ ಆ ಎಲ್ಲ ಸಂದರ್ಭಗಳಲ್ಲಿ ಆಳುವ ಸರ್ಕಾರಗಳು ಅಸ್ತಿತ್ವದ ಭೀತಿಗೆ ಒಳಗಾಗಿರಲಿಲ್ಲ. ಬದಲಿಗೆ ತಮ್ಮ ಬಲಕ್ಕೆ ಇನ್ನಷ್ಟು ಬಲ ಸೇರಿದರೆ ಒಳ್ಳೆಯದು ಎಂಬ ಮನಃಸ್ಥಿತಿಯಲ್ಲಿದ್ದವು. ಆದರೆ ೨೦೦೮ರಲ್ಲಿ ಅಸ್ತಿತ್ವಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಿಜಕ್ಕೂ ಆತಂಕದಲ್ಲಿತ್ತು. ಕಾರಣ ಆ ಸಂದರ್ಭದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ೧೧೦ ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಗಳಿಸಿತ್ತು. ಆ ಸಂದರ್ಭದಲ್ಲಿ ಅದು ೬ ಮಂದಿ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿತಾದರೂ ಅದರ ಆತಂಕ ದೂರವಾಗಿರಲಿಲ್ಲ. ಏಕೆಂದರೆ ಬಿಜೆಪಿ ನೂರಾ ಹತ್ತು ಕ್ಷೇತ್ರಗಳಲ್ಲಿ ಗೆಲುವು ಗಳಿಸಿದ್ದರೆ ಪ್ರತಿಪಕ್ಷಗಳ ಒಟ್ಟು ಗಳಿಕೆ ನೂರಾ ಎಂಟರಷ್ಟು ಇತ್ತು. ಇಂತಹ ಸಂದರ್ಭದಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದ ಆರು ಮಂದಿ ಪಕ್ಷೇತರ ಶಾಸಕರು ತಮ್ಮ ಮನಸ್ಸು ಬದಲಿಸಿದರೆ ಬಿಜೆಪಿ ಸರ್ಕಾರ ಉರುಳಿ ಕಾಂಗ್ರೆಸ್-ಜಾ. ದಳ ಮೈತ್ರಿಕೂಟ ಅಽಕಾರ ಹಿಡಿಯುವುದು ಅಸಂಭವವಾಗಿರಲಿಲ್ಲ.
ಸಾಲದು ಎಂಬಂತೆ ಜಾ. ದಳ ವರಿಷ್ಠ, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಕೂಡ ದಿಲ್ಲಿಯ ಕಾಂಗ್ರೆಸ್ ವರಿಷ್ಠರಿಗೆ ಒಂದು ಡೆಡ್ಲಿ ಐಡಿಯಾ ಕೊಟ್ಟಿದ್ದರು. ಅದೆಂದರೆ, ಕಾಂಗ್ರೆಸ್ ನೇತೃತ್ವದಲ್ಲೇ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬರಲಿ. ದಲಿತ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಈ ಮೈತ್ರಿಕೂಟ ಸರ್ಕಾರದ ಚುಕ್ಕಾಣಿ ಹಿಡಿಯಲಿ ಎಂದಿದ್ದರು. ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಹೊತ್ತಿನಲ್ಲಿ ಗೌಡರು ನೀಡಿದ ಈ ಸಲಹೆಯನ್ನು ಕಾಂಗ್ರೆಸ್ ಒಪ್ಪಿದ್ದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ಕಷ್ಟವಿತ್ತು. ಅದೇ ರೀತಿ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್-ಜಾ. ದಳ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಅದನ್ನು ಉರುಳಿಸುವುದೂ ಕಷ್ಟವಿತ್ತು. ಏಕೆಂದರೆ ಮೊಟ್ಟ ಮೊದಲ ದಲಿತ ಮುಖ್ಯಮಂತ್ರಿ ನೇತೃತ್ವದ ಸರ್ಕಾರವನ್ನು ಬೀಳಿಸಿದರೆ ಎದುರಾಗುವ ದಲಿತ ವಿರೋಽ ಹಣೆ ಪಟ್ಟಿಯನ್ನು ನಿಭಾಯಿಸುವುದು ಬಿಜೆಪಿಗೆ ಕಷ್ಟವಿತ್ತು. ಹಾಗೆ ನೋಡಿದರೆ ಕರ್ನಾಟಕದ ನೆಲೆಯಲ್ಲಿ ಬಿಜೆಪಿ ದೊಡ್ಡ ಶಕ್ತಿಯಾಗಿ ತಲೆ ಎತ್ತಿ ನಿಲ್ಲಲು ದಲಿತ ಸಮುದಾಯದ ಕೊಡುಗೆ ದೊಡ್ಡದಾಗಿತ್ತು. ಆ ಸಮುದಾಯದ ಎಡಗೈ ಮತಗಳು ಜತೆ ಸೇರದಿದ್ದರೆ ಬಿಜೆಪಿ ಸರ್ಕಾರ ರಚಿಸುವ ಹಂತಕ್ಕೆ ಬೆಳೆಯಲು ಸಾಧ್ಯವೇ ಇರಲಿಲ್ಲ.
ಈ ವಸ್ತುಸ್ಥಿತಿಯನ್ನರಿತಿದ್ದ ಯಡಿಯೂರಪ್ಪ ಎಷ್ಟು ಬೇಗ ಕಾರ್ಯೋನ್ಮುಖರಾದರು ಎಂದರೆ ಕಾಂಗ್ರೆಸ್ ವರಿಷ್ಠರು ದೇವೇಗೌಡರ ಸಲಹೆಯನ್ನು ಪರಿಶೀಲಿಸುವ ಮುನ್ನವೇ ಆರು ಮಂದಿ ಪಕ್ಷೇತರರ ಬೆಂಬಲ ಪಡೆದು ಸರ್ಕಾರ ರಚನೆ ಮಾಡಿದರು. ಆದರೆ ಹೀಗೆ ಸರ್ಕಾರ ರಚನೆ ಮಾಡಿದರೂ ಅದಕ್ಕಿರುವ ಅಪಾಯ ಕಡಿಮೆಯಾಗಿರಲಿಲ್ಲ. ಅರ್ಥಾತ್, ಸರ್ಕಾರಕ್ಕೆ ಬೆಂಬಲ ನೀಡಿದ ಆರು ಮಂದಿ ಪಕ್ಷೇತರ ಶಾಸಕರು ಯಾವುದೇ ಕ್ಷಣದಲ್ಲಿ ಯೂಟರ್ನ್ ಹೊಡೆಯಬಹುದಿತ್ತು. ಅವತ್ತು ಬಿಜೆಪಿಗೆ ಬೆಂಬಲ ನೀಡಬೇಕೆಂದರೆ ತಮ್ಮನ್ನೇ ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಬೇಕು ಅಂತ ಪಕ್ಷೇತರ ಶಾಸಕರೊಬ್ಬರು ವಿಚಿತ್ರ ಬೇಡಿಕೆ ಮಂಡಿಸಿದ್ದರು ಎಂಬ ಅಂಶವನ್ನು ಗಮನಿಸಿದರೆ, ಪಕ್ಷೇತರ ಶಾಸಕರ ವಿಷಯದಲ್ಲಿ ಯಡಿಯೂರಪ್ಪ ಅವರಿಗಿದ್ದಿರಬಹುದಾದ ಆತಂಕ ಸ್ಪಷ್ಟವಾಗುತ್ತದೆ. ಹೀಗಾಗಿಯೇ ಅವತ್ತು ಆಪರೇಷನ್ ಕಮಲ ಕಾರ್ಯಾಚರಣೆಗೆ ಇಳಿದ ಯಡಿಯೂರಪ್ಪನವರು ಕಾಂಗ್ರೆಸ್ ಮತ್ತು ಜಾ. ದಳ ಪಾಳೆಯದ ಡಜನ್‌ಗೂ ಹೆಚ್ಚು ಶಾಸಕರನ್ನು ಬಿಜೆಪಿಗೆ ಸೆಳೆದು ಉಪಚುನಾವಣೆಗಳಿಗೆ ವೇದಿಕೆ ಸೃಷ್ಟಿಸಿದರು. ಮತ್ತು ಇದರಲ್ಲಿ ಯಶಸ್ಸು ಪಡೆದು ಬಿಜೆಪಿ ಸರ್ಕಾರ ಭದ್ರವಾಗುವಂತೆ ನೋಡಿಕೊಂಡರು. ಅವತ್ತಿನ ಸಂದರ್ಭಕ್ಕೆ ಹೋಲಿಸಿದರೆ ಇವತ್ತು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ. ಆದರೆ ಇಂತಹ ನಿರಾತಂಕ ಸ್ಥಿತಿಯನ್ನು ದಿಲ್ಲಿಯ ಬಿಜೆಪಿ ವರಿಷ್ಠರು ಕರಗಿಸಬಹುದು ಎಂಬ ಅನುಮಾನ ಒಂದು ಮಟ್ಟದಲ್ಲಿ ಇದ್ದೇ ಇದೆ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಯ ಪರಿಣಾಮ ಇರಬಹುದು.
ಇಲ್ಲವೇ ಅಧಿಕಾರ ಹಂಚಿಕೆಯಂತಹ ಪ್ರಕ್ರಿಯೆ ನಡೆಯುವುದೇ ಇರಬಹುದು. ಈ ಪೈಕಿ ಏನೇ ಆದರೂ ಸರ್ಕಾರದ ಬುಡ ಅಲುಗಾಡಬಹುದು. ಹಾಗೇನಾದರೂ ಅದು ಅಲುಗಾಡುವ ಸಂದರ್ಭ ಬಂದರೆ ಪರಿಸ್ಥಿತಿಯನ್ನು ತೂಗಿಸಲು ಇನ್ನಷ್ಟು ಶಾಸಕ ಬಲ ಇರುವುದು ಒಳ್ಳೆಯದು ಅಂತ ಕೈ ಪಾಳೆಯದ ಕೆಲ ನಾಯಕರು ಭಾವಿಸುತ್ತಿದ್ದಾರೆ. ಪರಿಣಾಮ ಇವತ್ತು ಜಾ. ದಳ ಪಾಳೆಯದಿಂದ ದೊಡ್ಡ ಮಟ್ಟದಲ್ಲಿ ಶಾಸಕರನ್ನು ಸೆಳೆಯುವ ಪ್ರಯತ್ನ ಆಳದಲ್ಲಿ ನಡೆದಿದೆ. ಇದೇ ರೀತಿ ಬಿಜೆಪಿ ಪಾಳೆಯದಿಂದಲೂ ಕೆಲ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ವೇದಿಕೆ ಸಿದ್ದಪಡಿಸಿದೆ. ಮುಂದಿನ ಕೆಲ ದಿನಗಳಲ್ಲಿ ಇದನ್ನು ಕಾರ್ಯಗತಗೊಳಿಸುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ. ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಬೇರೆ ವಿಚಾರ. ಆದರೆ ಸರ್ಕಾರ ಸುಭದ್ರವಾಗಿರುವ ಕಾಲದಲ್ಲೂ ಅದು ಎದುರಿಸುತ್ತಿರುವ ತಲ್ಲಣವಿದೆಯಲ್ಲ ಅದು ಮಾತ್ರ ನಿಜಕ್ಕೂ ವಿಸ್ಮಯಕಾರಿ.





