ಎರಡನೆಯ ಮಹಾಯುದ್ಧದ ನಂತರ ಜಗತ್ತು ಕಂಡ ಅತ್ಯಂತ ಕರಾಳ ವರ್ಷ ೨೦೨೪. ಸುಮಾರು ೭೦ ದೇಶಗಳಲ್ಲಿ ಚುನಾವಣೆ ನಡೆದು ಪ್ರಜಾತಂತ್ರದ ಪರೀಕ್ಷೆ ನಡೆದಿದೆ. ರಾಜಕೀಯ ತಳಮಳದಲ್ಲಿ ದೊಡ್ಡ ದೊಡ್ಡ ನಾಯಕರನ್ನೇ ಜನ ಮೂಲೆಗೆ ತಳ್ಳಿದ್ದಾರೆ. ಕೆಲವು ದೇಶಗಳಲ್ಲಿ ಹಠಾತ್ ರಾಜಕೀಯ ಬೆಳವಣಿಗೆಗಳಿಂದಾಗಿ ರಾಜಕೀಯ ನಾಯಕರು ಪರಾರಿಯಾಗುವಂತೆ ಆಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆಯೇ ಸತ್ತು ಹೋದಂತೆ ಯುದ್ಧಗಳು ಮುಂದುವರಿದು ರಕ್ತ ಹರಿಯುತ್ತಿದೆ. ಅಸಮಾನತೆ, ಬಡತನ ಮತ್ತಷ್ಟು ಹೆಚ್ಚಿದೆ.
ವಿಶ್ವದ ಬಲಿಷ್ಠ ದೇಶಗಳಾದ ಅಮೆರಿಕ, ಜರ್ಮನಿ, ಫ್ರಾನ್ಸ್‌ನಲ್ಲಿ ಜನರು ಆಡಳಿತಾರೂಢ ನಾಯಕರನ್ನು ಮನೆಗೆ ಕಳುಹಿಸಿದ್ದಾರೆ. ಬಾಂಗ್ಲಾ ದೇಶದ ಪ್ರಧಾನಿಯಾಗಿದ್ದ ಷೇಖ್ ಹಸೀನಾ ಭಾರತಕ್ಕೆ ಪರಾರಿಯಾಗಿದ್ದಾರೆ. ಸಿರಿಯಾದಲ್ಲಿ ಅಧ್ಯಕ್ಷರಾಗಿದ್ದ ಬಷರ್ ಅಲ್ ಅಸ್ಸಾದ್ ರಷ್ಯಾಕ್ಕೆ ಪರಾರಿಯಾಗಿದ್ದಾರೆ.
ಭಾರತದಲ್ಲಿ ನಡೆದ ಚುನಾವಣೆಗಳಲ್ಲಿ ನರೇಂದ್ರ ಮೋದಿ ಮೂರನೆಯ ಬಾರಿ ಪ್ರಧಾನಿಯಾಗಿದ್ದಾರೆ. ಆಡಳಿತ ಭಾರತೀಯ ಜನತಾಪಕ್ಷ ಬಹುಮತ ಗಳಿಸುವಲ್ಲಿ ವಿಫಲವಾದರೂ ಮಿತ್ರಪಕ್ಷಗಳ ಜೊತೆಗೂಡಿ ಅಧಿಕಾರಕ್ಕೇರಿದೆ. ಅಮೆರಿಕದ ರಾಜಕೀಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಾಲಿ ಉಪಾಧ್ಯಕ್ಷೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ಜನರು ಸೋಲಿಸಿದ್ದಾರೆ. ಅನೇಕ ಆರೋಪಗಳನ್ನು ಹೊತ್ತು ಕೋರ್ಟ್ ವಿಚಾರಣೆ ಎದುರಿಸುತ್ತಿರುವ ಮಾಜಿ ಅಧ್ಯಕ್ಷ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಮುಂದಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಬ್ರಿಟನ್‌ನಲ್ಲಿ ನಡೆದ ಚುನಾವಣೆಗಳಲ್ಲಿ ೧೩ ವರ್ಷಗಳ ಕನ್ಸರ್‌ವೇಟಿವ್ ಪಕ್ಷದ ಆಡಳಿತ ಅಂತ್ಯಗೊಂಡಿದೆ. ಜನರು ಲೇಬರ್ ಪಕ್ಷಕ್ಕೆ ಬಹುಮತ ನೀಡಿದ್ದು ಕೇರ್ ಸ್ಟಾರ್ಮರ್ ಪ್ರಧಾನಿಯಾಗಿದ್ದರೆ. ಆರ್ಥಿಕ ಸಮಸ್ಯೆಗಳಿಂದಾಗಿ ರಾಜಕೀಯ ಕ್ಷೋಭೆಗೆ ಸಿಲುಕಿದ್ದ ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾರ್ಕ್ಸ್‌ವಾದಿ ಅನುರಕುಮಾರ ದಿಸ್ಸನಾಯಕೆ ಅವರು ಆಯ್ಕೆಯಾಗಿದ್ದಾರೆ. ಯೂರೋಪ್ ಪಾರ್ಲಿಮೆಂಟ್‌ಗೆ ನಡೆದ ಚುನಾವಣೆಗಳಲ್ಲಿ ಫ್ರಾನ್ಸ್‌ನ ಆಡಳಿತಾರೂಢ ಪಕ್ಷಗಳು ಹಿನ್ನಡೆ ಅನುಭವಿಸಿದ ಹಿನ್ನೆಲೆಯಲ್ಲಿ ಫ್ರಾನ್ಸ್‌ನಲ್ಲಿ ದಿಢೀರ್ ಚುನಾವಣೆ ಘೋಷಿಸಲಾಯಿತು. ಆಡಳಿತಾರೂಢ ಮೈತ್ರಿ ಕೂಟ ಬಹುಮತ ಗಳಿಸುವಲ್ಲಿ ವಿಫಲವಾಗಿ ಪ್ರಧಾನಿ ಮೈಕಲ್ ಬರ್ನಿಯರ್ ಸರ್ಕಾರ ಕುಸಿಯಿತು. ಎರಡನೇ ಸುತ್ತಿನ ಚುನಾವಣೆಗಳಲ್ಲಿ ಎಡ ಪಕ್ಷಗಳು ಅತಿ ಹೆಚ್ಚು ಸ್ಥಾನ ಗಳಿಸಿದರೂ ಬಹುಮತ ಬರಲಿಲ್ಲ. ಅಧ್ಯಕ್ಷ ಇಮಾನ್ಯುಯಲ್ ಮೆಕ್ರಾನ್ ದೇಶದಲ್ಲಿ ಸ್ಥಿರತೆ ಸ್ಥಾಪಿಸಲು ಭಾರಿ ರಾಜಕೀಯ ಸರ್ಕಸ್ ನಡೆಸುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಚುನಾವಣೆಗಳಲ್ಲಿ ಇದೇ ಮೊದಲ ಬಾರಿಗೆ ಆಡಳಿತಾರೂಡ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಬಹುಮತ ಗಳಿಸುವಲ್ಲಿ ವಿಫಲವಾಗಿದೆ. ಜಪಾನ್‌ನಲ್ಲಿಯೂ ಪಾರ್ಲಿಮೆಂಟ್ ಚುನಾವಣೆಗಳಲ್ಲಿ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಬಹುಮತಗಳಿಸುವಲ್ಲಿ ವಿಫಲವಾಗಿ ರಾಜಕೀಯ ಅಸ್ಥಿರತೆ ತಲೆದೋರಿದೆ.
ದಕ್ಷಿಣ ಕೊರಿಯಾದಲ್ಲಿಯೂ ರಾಜಕೀಯ ಅಸ್ಥಿರತೆ ಕಾಡುತ್ತಿದೆ. ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಮತ್ತು ಅವರ ರಾಜಕೀಯ ಪಕ್ಷವನ್ನು ನಿಷೇಧಿಸಿದ ನಂತರ ನಡೆದ ಚುನಾವಣೆಗಳಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಪ್ ನೇತೃತ್ವದ ಪಿಎಮ್‌ಎಲ್(ಎನ್) ಬಹುಮತ ಗಳಿಸುವಲ್ಲಿ ವಿಫಲವಾಯಿತು. ಆದರೆ ಪಾರ್ಲಿಮೆಂಟಿನಲ್ಲಿ ಅತಿ ದೊಡ್ಡ ಪಕ್ಷ ವಾಗಿದ್ದ ಆ ಪಕ್ಷದ ನೇತೃತ್ವದಲ್ಲಿ ಇತರ ಪಕ್ಷಗಳು ಸೇರಿ ಸರ್ಕಾರ ರಚನೆಯಾಗಿದೆ. ಹಿಂದಿನ ಪ್ರಧಾನಿ ನವಾಜ್ ಷರೀಫ್ ಅವರ ಸೋದರ ಶೆಹಬಾಜ್ ಷರೀಫ್ ಮತ್ತೆ ಪ್ರಧಾನಿಯಾಗಿದ್ದಾರೆ. ಆರ್ಥಿಕ ಸಮಸ್ಯೆಯಿಂದ ತತ್ತರಿಸಿರುವ ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ದೊಡ್ಡ ಸಮಸ್ಯೆಯಾಗಿದೆ. ಇದೀಗ ಹಿಂದೆ ತಾನೆ ಪೋಷಿಸಿದ ಆಫ್ಘಾನಿಸ್ತಾನದ ತಾಲಿಬಾನ್ ಉಗ್ರರು ಸರ್ಕಾರದ ವಿರುದ್ಧ ಬಂದೂಕು ಹಿಡಿದಿದ್ದಾರೆ.
ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿ ಚಳವಳಿ ಅಲ್ಲಿನ ಸರ್ಕಾರ ಪತನಗೊಳ್ಳಲು ಕಾರಣವಾಗಿದೆ. ಮೀಸಲಾತಿ ವಿರುದ್ಧ ಆರಂಭವಾದ ವಿದ್ಯಾರ್ಥಿ ಚಳವಳಿ ಕ್ರಮೇಣ ರಾಜಕೀಯ ಚಳವಳಿಯಾಗಿ ಮಾರ್ಪಟ್ಟಿತು. ಆ ಚಳವಳಿಗೆ ವಿರೋಧ ಪಕ್ಷಗಳು ಮತ್ತಿತರರು ಸೇರಿಕೊಂಡ ಪರಿಣಾಮವಾಗಿ ಪ್ರಧಾನಿ ಷೇಖ್ ಹಸೀನಾ ಅವರು ದೇಶ ಬಿಟ್ಟು ಪರಾರಿಯಾಗಬೇಕಾಯಿತು. ಅವರಿಗೆ ಭಾರತ ಆಶ್ರಯ ನೀಡಿದೆ. ಹಸೀನಾ ನಿರ್ಗಮನದ ನಂತರ ಅಧಿಕಾರಕ್ಕೆ ಬಂದ ನೊಬೆಲ್ ಪ್ರಶಸ್ತಿ ವಿಜೇತ ಮಹಮದ್ ಯೂನಸ್ ನೇತೃತ್ವದ ಸರ್ಕಾರ ದೇಶದಲ್ಲಿ ಸ್ಥಿರತೆ ಸ್ಥಾಪಿಸಲು ಹೆಣಗುತ್ತಿದೆ. ಅಲ್ಪಸಂಖ್ಯಾತ ಹಿಂದೂಗಳ ಮೇಲೆ, ದೇವಾಲಯಗಳ ಮೇಲೆ ದಾಳಿ ನಡೆದಿದೆ. ಈ ದಾಳಿಗಳಲ್ಲಿ ಸುಮಾರು ೭೦೦ ಜನರು ಸತ್ತಿದ್ದಾರೆಂದು ವರದಿಯಾಗಿದೆ. ಈ ಬೆಳವಣಿಗೆ ಭಾರತ ಮತ್ತು ಬಾಂಗ್ಲಾ ನಡುವಣ ಬಾಂಧವ್ಯವನ್ನು ಹಾಳುಮಾಡುತ್ತಿದೆ. ಬಾಂಗ್ಲಾದೇಶದ ಈಗಿನ ಆಡಳಿತಗಾರರು ಪಾಕಿಸ್ತಾನದ ಜೊತೆ ಸ್ನೇಹ ಬೆಳೆಸುತ್ತಿರುವುದು ಹೊಸ ಹೊಸ ಸಮಸ್ಯೆಗಳನ್ನು ಹುಟ್ಟಿಹಾಕುತ್ತಿದೆ.
ಈ ವರ್ಷದ ಅನಿರೀಕ್ಷಿತ ಬೆಳವಣಿಗೆ ಸಿರಿಯಾದಲ್ಲಿ ನಡೆದಿದೆ. ಕಳೆದ ೧೩ ವರ್ಷಗಳಿಂದ ಸಿರಿಯಾದ ಬಷರ್ ಅಲ್ ಅಸ್ಸಾದ್ ಸರ್ಕಾರದ ವಿರುದ್ಧ ಬಂಡಾಯಗಾರ ಗುಂಪುಗಳು ನಡೆಸುತ್ತಿದ್ದ ಹೋರಾಟಕ್ಕೆ ಹಠಾತ್ತನೆ ಜಯಸಿಕ್ಕಿದೆ. ಬಂಡಾಯಗಾರರ ಗುಂಪುಗಳು ಒಂದಾಗಿ ಒಂದು ವೇದಿಕೆ ರಚಿಸಿಕೊಂಡು ಮುನ್ನುಗ್ಗಿದ ಪರಿಣಾಮವಾಗಿ ಅಸಹಾಯಕರಾದ ಅಸ್ಸಾದ್ ಹಠಾತ್ತನೆ ಅಽಕಾರ ತ್ಯಜಿಸಿ ರಷ್ಯಾಕ್ಕೆ ಪಲಾಯನ ಮಾಡಿದ್ದಾರೆ. ಬಹುಶಃ ಬಂಡಾಯಗಾರರ ವಿರುದ್ಧ ಹೋರಾಡಲು ಸೇನೆ ನಿರಾಕರಿಸಿದ್ದೇ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ. ವಿವಿಧ ಬಂಡಾಯಗಾರರ ಗುಂಪುಗಳು ಸೇರಿ ರಚಿಸಿಕೊಂಡಿದ್ದ ಹಯಾತ್ ತಹರೀರ್ ಶಾಮ್ (ಎಚ್‌ಟಿಎಸ್) ನಾಯಕ ಅಹಮದ್ ಅಲ್ ಶೇರಾ ಈಗ ಸಿರಿಯಾದ ತಾತ್ಕಾಲಿಕ ಅಧ್ಯಕ್ಷರಾಗಿದ್ದು, ದೇಶದಲ್ಲಿ ರಾಜಕೀಯ ಸ್ಥಿರತೆ ಸ್ಥಾಪಿಸಲು ಮೊದಲು ಹೆಜ್ಜೆ ಇಟ್ಟಿದ್ದಾರೆ. ಆದರೆ ದೇಶದಲ್ಲಿ ಶಿಯಾ-ಸುನ್ನಿ ಮತ್ತು ಬಂಡಾಯಗಾರರ ವಿವಿಧ ಗುಂಪುಗಳ ನಡುವಣ ಭಿನ್ನಾಭಿಪ್ರಾಯಗಳು ಆಂತರಿಕ ಯುದ್ಧಕ್ಕೆ ಕಾರಣವಾದರೆ ಆಶ್ಚರ್ಯವಿಲ್ಲ.
ಸಿರಿಯಾ ಬೆಳವಣಿಗೆಗಳು ಹಠಾತ್ತನೆ ಸಂಭವಿಸಿದಂಥವು. ಎಲ್ಲರ ಗಮನ ಇದ್ದದ್ದು ಪ್ಯಾಲೆಸ್ಟೇನ್ ಮತ್ತು ಲೆಬನಾನ್ ಮೇಲೆ. ಪ್ಯಾಲೆಸ್ಟೇನ್ ಜನರ ಗಾಜಾ ಪ್ರದೇಶದ ಮೇಲೆ ಇಸ್ರೇಲ್ ಕಳೆದ ಒಂದು ವರ್ಷದಿಂದಲೂ ಭೀಕರ ದಾಳಿ ನಡೆಸುತ್ತ ಬಂದಿದೆ. ಇಸ್ರೇಲ್ ಜನರ ಮೇಲೆ ಪ್ಯಾಲೆಸ್ಟೇನ್ ಉಗ್ರರ ಗುಂಪು ಹಮಾಸ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ದಾಳಿ ನಡೆಸುತ್ತಿದೆ. ಈ ದಾಳಿಗಳಲ್ಲಿ ಸಹಸ್ರಾರು ಪ್ಯಾಲೆಸ್ಟೇನ್ ಜನರು ಸತ್ತಿದ್ದಾರೆ. ಒತ್ತೆಯಾಳುಗಳ ಬಿಡುಗಡೆ ಮತ್ತು ಹಮಾಸ್ ಉಗ್ರರನ್ನು ನಿರ್ನಾಮ ಮಾಡಲು ಈ ದಾಳಿ ನಡೆಸುತ್ತಿರುವುದಾಗಿ ಇಸ್ರೇಲ್ ಹೇಳುತ್ತಿದೆ. ಎರಡನೆಯ ಮಹಾಯುದ್ಧದ ನಂತರದ ಅತಿ ದೊಡ್ಡ ದುರಂತ ಇದೆಂದು ವರ್ಣಿಸಲಾಗಿದೆ. ಹಮಾಸ್ ನಾಶ ಮಾಡುವ ಹೆಸರಿನಲ್ಲಿ ನಡೆಯುತ್ತಿರುವ ದಾಳಿಯಲ್ಲಿ ಸಹಸ್ರಾರು ಸಾಮಾನ್ಯ ಜನರು ಸತ್ತಿದ್ದಾರೆ. ಗಾಜಾ ಪ್ರದೇಶ ಜನರು ವಾಸಿಸಲು ಅಸಾಧ್ಯವಾಗುವಂತೆ ನಾಶ ಮಾಡಲಾಗಿದೆ. ಜನರಿಗೆ ಆಹಾರ ಸಿಗದಂತೆ ಮಾಡಲಾಗಿದೆ. ಬಹುಶಃ ಇಂಥ ಕರಾಳ ಕೃತ್ಯಗಳನ್ನು ಈ ಜಗತ್ತು ಹಿಂದೆಂದೂ ಕಂಡಿರಲಾರದು. ಇಸ್ರೇಲ್ ಗೆ ಅಮೆರಿಕ ಬೆಂಬಲವಾಗಿ ನಿಂತಿರುವುದು ವಿಪರ್ಯಾಸ. ಇಸ್ರೇಲ್ ನಡೆಸುತ್ತಿರುವ ಈ ಅಮಾನುಷ ಕೃತ್ಯವನ್ನು ತಡೆಯಲು ವಿಶ್ವಸಂಸ್ಥೆಯಿಂದಲೂ ಸಾಧ್ಯವಾಗಿಲ್ಲದಿರುವುದು ಮತ್ತೊಂದು ದೊಡ್ಡ ದುರಂತ.
ಪ್ಯಾಲೆಸ್ಟೇನ್ ಉಗ್ರರ ನೆರವಿಗೆ ಬಂದ ನೆರೆಯ ಲೆಬನಾನ್ ದೇಶದ ಹಿಜಬುಲ್ಲಾ ಸಂಘಟನೆಯೂ ಇಸ್ರೇಲ್ ದಾಳಿಗೆ ಒಳಗಾಗಿ ತತ್ತರಿಸಿದೆ. ಹಿಜಬುಲ್ಲಾ ಉಗ್ರರನ್ನು ಮುಗಿಸುವ ಹೆಸರಿನಲ್ಲಿ ಇಸ್ರೇಲ್ ನಡೆಸುತ್ತಿರುವ ಕ್ಷಿಪಣಿ ದಾಳಿಯಲ್ಲಿ ಲೆಬನಾನ್ ಕೂಡ ನಾಶದ ಅಂಚಿನಲ್ಲಿದೆ. ಸದ್ಯಕ್ಕೆ ಹಿಜಬುಲ್ಲಾ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಘೋಷಿತವಾಗಿದೆ. ಆದರೆ ಗಾಜಾ ಸಮಸ್ಯೆ ಇತ್ಯರ್ಥವಾಗದೆ ಲೆಬನಾನ್‌ನಲ್ಲಿ ಸ್ಥಿರತೆ ನಿರ್ಮಾಣವಾಗುವ ಸಾಧ್ಯತೆ ಕಡಿಮೆ. ಹಮಾಸ್ ಮತ್ತು ಹೆಜಬುಲ್ಲಾ ಉಗ್ರರಿಗೆ ಬೆಂಬಲ ನೀಡುತ್ತಿದ್ದ ಇರಾನ್ ಮತ್ತು ಯೆಮನ್ ಯುದ್ಧಕ್ಕಿಳಿಯುವಂತೆ ಮಾಡಿವೆ. ಇಸ್ರೇಲ್ ಈಗಾಗಲೇ ಯೆಮನ್ ಮೇಲೆ ದಾಳಿ ನಡೆಸುತ್ತಿದೆ. ಇರಾನ್ ಮತ್ತು ಇಸ್ರೇಲ್ ನಡುವಣ ಮುಸುಕಿನ ಯುದ್ಧ ಎಂದು ಬೇಕಾದರೂ ಭೀಕರ ಸ್ವರೂಪ ತಾಳುವ ಸಾಧ್ಯತೆ ಇದೆ.
೨೦೨೪ರ ಮತ್ತೊಂದು ಮಹತ್ವದ ಯುದ್ಧ ರಷ್ಯಾ ಮತ್ತು ಉಕ್ರೇನ್ ನಡುವಿನದ್ದು. ನ್ಯಾಟೋ ಸದಸ್ಯತ್ವ ಪಡೆಯಲು ಉಕ್ರೇನ್ ಯತ್ನಿಸಿದ್ದೇ ಕಾರಣವಾಗಿ ಈ ಯುದ್ಧ ಸಿಡಿದಿದೆ. ಉಕ್ರೇನ್‌ನ ಗಡಿಯ ಕೆಲವು ಮುಖ್ಯ ಪ್ರದೇಶಗಳನ್ನು ರಷ್ಯಾ ಅತಿಕ್ರಮಿಸಿದೆ. ಇದನ್ನು ತೆರವು ಮಾಡಲಿಸಲು ಉಕ್ರೇನ್ ಯುದ್ಧಕ್ಕೆ ಇಳಿದಿದೆ. ಆದರೆ ಇದುವರೆಗೆ ಉಕ್ರೇನ್ ತನ್ನ ಗುರಿಯಲ್ಲಿ ಯಶಸ್ಸು ಕಂಡಿಲ್ಲ. ಈ ಯುದ್ಧದಲ್ಲಿ ಉಕ್ರೇನ್ ಅಷ್ಟೇ ಅಲ್ಲ ರಷ್ಯಾ ಕೂಡ ಹಾನಿಗೊಳಗಾಗಿದೆ. ಸಾವಿರಾರು ಸೈನಿಕರು ಸತ್ತಿದ್ದಾರೆ, ಉಕ್ರೇನ್‌ಗೆ ಅಮೆರಿಕ ಮತ್ತು ಯುರೋಪ್ ದೇಶಗಳು ಬೆಂಬಲ ನೀಡುತ್ತಿದ್ದರೆ ರಷ್ಯಾಕ್ಕೆ ಉತ್ತರ ಕೊರಿಯಾ, ಇರಾನ್, ಚೀನಾ ಬೆಂಬಲಕ್ಕೆ ನಿಂತಿರುವಂತಿದೆ. ಇರಾನ್ ಮತ್ತು ಚೀನಾ ರಷ್ಯಾಕ್ಕೆ ಯುದ್ಧಾಸ್ತ್ರಗಳ ನೆರವು ನೀಡುತ್ತಿವೆ ಎಂದು ಆರೋಪಿಸಲಾಗಿದೆ. ಉತ್ತರ ಕೊರಿಯಾ ಉಕ್ರೇನ್ ಮೇಲಿನ ದಾಳಿಗೆ ತನ್ನ ಸೈನಿಕರನ್ನೇ ಕಳುಹಿಸಿದೆ.
ಈ ಎಲ್ಲಕ್ಕೂ ಅಂತ್ಯ ಅಮೆರಿಕದ ಮುಂದಿನ ಅಧ್ಯಕ್ಷರಾಗಲಿರುವ ಡೊನಾಲ್ಡ್ ಟ್ರಂಪ್ ಅವರಿಂದ ಸಿಗಬಹುದು ಎಂಬ ಆಶಾಭಾವನೆ ವ್ಯಕ್ತವಾಗುತ್ತಿದೆ. ಆದರೆ ಅದು ಅಷ್ಟು ಸುಲಭವಲ್ಲ. ರಷ್ಯಾ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಸಂಧಾನಕ್ಕೆ ಸಿದ್ಧ ಎಂದಿದ್ದಾರೆ. ಉಕ್ರೇನ್ ಅಧ್ಯಕ್ಷ ಜಲನೆಸ್ಕಿ ಕೂಡ ರಾಜಿಗೆ ಸಿದ್ಧವಿದ್ದಾರೆ. ಆದರೆ ವಿವಾದಾತ್ಮಕ ಪ್ರದೇಶಗಳನ್ನು ಬಿಟ್ಟುಕೊಡಲು ಇಬ್ಬರೂ ಸಿದ್ಧವಿಲ್ಲದ್ದರಿಂದ ರಾಜಿ ಕಷ್ಟ. ಇಂಥ ಸನ್ನಿವೇಶದಲ್ಲಿ ಉಕ್ರೇನ್ ಅನಿವಾರ್ಯವಾಗಿ ಸೋಲು ಒಪ್ಪಿಕೊಳ್ಳಬೇಕಾಗಬಹುದು. ಯುದ್ಧ ಮುಂದುವರಿಸುವ ಇಚ್ಛೆ ಉಕ್ರೇನ್ ಬೆಂಬಲಕ್ಕೆ ನಿಂತಿರುವ ಅಮೆರಿಕ ಮತ್ತು ಯುರೋಪ್ ನಾಯಕರಿಗೆ ಇದ್ದಂತೆ ಇಲ್ಲ. ಈಗಾಗಲೇ ಉಕ್ರೇನ್ ನಾಶದ ಅಂಚಿನಲ್ಲಿದೆ. ಆರ್ಥಿಕವಾಗಿಯೂ ಕುಸಿದಿದೆ.





