50 ವರ್ಷಗಳ ದೂರದೃಷ್ಟಿಯ ಡಿಪಿಆರ್ ಸಿದ್ಧ ಆಗಬೇಕು
• ಭಾಮಿ ವಿ ಶೆಣೈ, ಮೈಸೂರು ಗ್ರಾಹಕರ ಪರಿಷತ್
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮುಂದಿನ ಗ್ರೇಟರ್ ಮೈಸೂರಿನ ಸ್ವರೂಪದ ಬಗ್ಗೆ ಒಂದು ವಿಷನ್ ಡಾಕ್ಯುಮೆಂಟ್ ತಯಾರಿಗೆ ಸಾರ್ವಜನಿಕ ಸಭೆ ನಡೆಸಲು ಮುತುವರ್ಜಿ ವಹಿಸಿರುವುದು ಸಮಯೋಚಿತವಾಗಿದೆ. ಮೈಸೂರು ನಗರದ ಅಭಿವೃದ್ಧಿಗೆ ಕೈಗೊಂಡ ಈ ಮುಂಚಿನ ಸಮಗ್ರ ಅಭಿವೃದ್ಧಿ ಯೋಜನೆಗಳು (ಸಿಡಿಪಿ) ಮತ್ತು ಮಾಸ್ಟರ್ ಪ್ಲಾನ್‌ಗಳು ಮತ್ತು ನಗರಾಭಿವೃದ್ಧಿಗೆ ಪೂರಕವಾದ ನಿಯಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಂಪೂರ್ಣ ವಿಫಲವಾಗಿ ರುವ ಕಾರಣದಿಂದ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸುವ ಅಗತ್ಯ ಇದೆ. ಮೈಸೂರು ಕೂಡ ಯೋಜಿತ ನಗರವಾಗಿ ರೂಪುಗೊಳ್ಳಲು ವಿಫಲವಾಗಿ ಬೆಂಗಳೂರಿನ ಹಾದಿಯತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ವಿಷನ್ ಡಾಕ್ಯುಮೆಂಟ್‌ನ ಜರೂರು ಇದೆ.
ಹಿಂದೆ ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರಂತಹ ದಾರ್ಶನಿಕರ ದೂರ ದೃಷ್ಟಿಯ ಕೆಲಸದ ಫಲವಾಗಿ ಮೈಸೂರು ನಗರ ಸದ್ಯ ಸಂಪೂರ್ಣ ದುಸ್ಥಿತಿಯನ್ನು ತಲುಪಿಲ್ಲ. ಆದರೆ ಇಂದು ಜನಸಂಖ್ಯೆ ಅಗಾಧವಾಗಿ ಹೆಚ್ಚುತ್ತಿರುವ ಪರಿಣಾಮ ವಾಗಿ, ವಸತಿಯ ಅವಶ್ಯಕತೆ, ನೀರು ಸರಬರಾಜಿಗೆ ಹೆಚ್ಚಿನ ಒತ್ತಡ ಬೀಳುತ್ತಿದೆ.
ಜತೆಗೆ ಕೆಲವು ರಸ್ತೆಗಳಲ್ಲಿ ಒತ್ತುವರಿಯಿಂದ ಪಾದ ಚಾರಿ ಮಾರ್ಗಗಳು ಮಾಯವಾಗುತ್ತಿವೆ. ಇನ್ನು ಮುಡಾ ಅಥವಾ ಖಾಸಗಿ ಡೆವಲಪರ್‌ಗಳು ರಚಿಸಿರುವ ಹೊಸ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಪೂರ್ಣಯ್ಯ ಕಾಲುವೆ ಒತ್ತುವರಿಯಾಗಿರುವಂತೆ ನಗರದ ಎಲ್ಲ ರಾಜ ಕಾಲುವೆಗಳನ್ನೂ ಒತ್ತುವರಿ ಮಾಡಲಾಗಿದೆ ಎಂದು ದೂರಿದ್ದಾರೆ.
ಸದ್ಯ ಮೈಸೂರಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಕಾರ್ಯಸಾಧುವಾಗುವಂತೆ ಮಾಡುವ ನಿಟ್ಟಿನಲ್ಲಿ ಮೊದಲನೆಯದಾಗಿ ಚಂಡಿಗಢ ನಗರ ಯೋಜನೆ ರೂಪಿಸಿದ ಕಾರ್‌ಬ್ಯುಸಿಯ ರಂತಹ ವಿಶ್ವ ಪ್ರಸಿದ್ಧ ನಗರ ಯೋಜಕರು/ ವಿನ್ಯಾಸಕಾರರ ಸಲಹೆಪಡೆಯುವುದು ಅಗತ್ಯವಾಗಿದೆ.
ಉಸ್ತುವಾರಿಗೆ ಜಿಲ್ಲಾ ಕೆರೆ ಅಭಿವೃದ್ಧಿ ಪ್ರಾಧಿಕಾರ, ಹೆರಿಟೇಜ್ ಸಮಿತಿಗಳು ಇದ್ದರೂ ಕೆರೆಗಳು, ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯನ್ನು ನಿರ್ಲಕ್ಷಿಸಲಾಗಿದೆ. ವಸಾಹತುಶಾಹಿ ಕಾಲದ ಪದ್ಧತಿಯನ್ನೇ ಅನುಸರಿಸಿ ಆಡಳಿತ ನಡೆಸುತ್ತಿರುವುದರಿಂದ ಇಂತಹ ದುಸ್ಥಿತಿ ತಲುಪುವಂತಾಗಿದೆ.
ಪ್ರತಿಯೊಂದು ಪ್ರಮುಖವಾದ ಆಯೋಗ, ಪ್ರಾಧಿಕಾರ, ನಿಯಂತ್ರಣ ವಿಷಯಕ್ಕಾಗಲೀ ಜಿಲ್ಲಾಧಿ ಕಾರಿಯೇ ಮುಖ್ಯಸ್ಥರಾಗಿರುವರು. ಹೀಗಾಗಿ ತಾವು ಎಷ್ಟು ಸಮಿತಿಗಳಿಗೆ ಮುಖಸ್ಥನಾಗಿರುವೆ ಎಂಬುದೇ ಸ್ವತಃ ಜಿಲ್ಲಾಧಿಕಾರಿಗೇ ಗೊತ್ತಿಲ್ಲದಂತಹ ಸ್ಥಿತಿ ಇದೆ. ಆದ್ದರಿಂದ ಒಬ್ಬರೇ ಎಲ್ಲ ಜವಾಬ್ದಾರಿಗಳನ್ನೂ ನಿಭಾಯಿಸುವುದು ಕಷ್ಟ ಸಾಧ್ಯ. 1992ರಲ್ಲಿ ಅಧಿಕಾರ ವಿಕೇಂದ್ರೀಕರಣ ಸಂಬಂಧವಾಗಿ 74ನೇ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದ್ದರೂ ಅದನ್ನು ಜಾರಿಗೆ ತರುವಲ್ಲಿ ಯಾವ ಕೆಲಸವೂ ಆಗಿಲ್ಲ.
ವಾರ್ಡ್ ಸಮಿತಿಗಳು ರಚನೆಯಾಗಿದ್ದಿದ್ದರೆ, ನಗರ ಆಡಳಿತದಲ್ಲಿ ಪ್ರಗತಿ ಕಾಣಬಹುದಿತ್ತು ಜತೆಗೆ ಭ್ರಷ್ಟಾ ಚಾರವೂ ಕಡಿಮೆ ಆಗುತ್ತಿತ್ತು. ಆದ್ದರಿಂದ ಆಡಳಿತ ಸುಧಾರಣೆ ಕ್ರಮವಾಗಿ ಮೊದಲನೆಯದಾಗಿ ವಾರ್ಡ್ ಸಮಿತಿಗಳ ರಚನೆಯಾಗಬೇಕು.
ಎರಡನೆಯದಾಗಿ ಎಚ್ಚರಿಕೆಯಿಂದ ಯೋಜಿಸಿದ ನಂತರವಷ್ಟೇ ಅಗತ್ಯವಿರುವಸುಧಾರಣೆಯನ್ನು ನಿರ್ಧರಿಸಿ ಜಾರಿಗೆ ತರಬೇಕು ಎಂದು ಸಲಹೆ ನೀಡಿದ್ದಾರೆ.ಈ ಸಿಎಎ ಕಲ್ಪನೆಯಂತೆ ಮಹಾನಗರಪಾಲಿಕೆಯಡಿ ಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕೆಲಸ ನಿರ್ವಹಿಸುವಂತೆ ಪುನಾರಚಿಸುವುದು. ಸುಧಾರಣೆಗೆ ಅನುಗುಣವಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ವರ್ಗದ ಖಾಸಗಿ ಡೆವಲಪರ್‌ಗಳು ಮಾಡುವ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸುವ ಕೆಲಸವಾಗಬೇಕು. ಕೇವಲ ಉತ್ತಮವಾಗಿ ಕೆಲಸ ನಿರ್ವಹಿಸುವ ದೊಡ್ಡ ಕಂಪೆನಿಗಳಿಗೆ ಮಾತ್ರ ಗುತ್ತಿಗೆಯನ್ನು ಕೊಡಬೇಕು. ಹಾಗೂ ಬಡವರಿಗೆ ಅವಶ್ಯವಾಗುವ ರೀತಿಯಲ್ಲಿ ವಸತಿ ಯೋಜನೆಯ ಗುತ್ತಿಗೆ ರೂಪಿತವಾಗಿರಬೇಕು.
ಮೈಸೂರಿನಲ್ಲಿ ದಿನೇ ದಿನೇ ತ್ಯಾಜ್ಯ ಹೆಚ್ಚುತ್ತಿದ್ದು, ಅದರ ನಿರ್ವಹಣೆ ಅತ್ಯಂತ ಸಂಕೀರ್ಣತೆಯಿಂದ ಕೂಡಿರುವ ಹಿನ್ನೆಲೆಯಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ಪ್ರತ್ಯೇಕ ಕಂಪೆನಿಯನ್ನು ರಚಿಸಬೇಕು. ಈ ಸಂಬಂಧ ಅಭಿವೃದ್ಧಿ ಹೊಂದಿದ ದೇಶಗಳ ಮಾದರಿಯನ್ನು ಅನುಸರಿಸಬೇಕು. ಆದಷ್ಟು ಬೇಗನೆ ಸಿಎಎಗೆ ಅಗತ್ಯವಾಗಿರುವಂತೆ ವಾರ್ಡ್ ಸಭೆಗಳನ್ನು ರಚಿಸಬೇಕು. ಈ ಬಗ್ಗೆ ನ್ಯಾಯಾಲಯದಿಂದಲೂ ಆದೇಶದ ಮೂಲಕ ಕಡ್ಡಾಯ ಮಾಡಲಾಗಿದೆ.
ಮೈಸೂರಿನ ಉತ್ಕೃಷ್ಟ ಸಾಂಸ್ಕೃತಿಕ, ಶೈಕ್ಷಣಿಕ ಪರಂಪರೆ, ಪಾರಂಪರಿಕತೆಗೆ ಅನುಗುಣವಾಗಿ ಮೈಸೂರು ನಗರದ ಸುಧಾರಣೆಗೆ ಬೆಂಗಳೂರು ಮೂಲದ ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹೂಮನ್ ಸೆಟಲ್‌ಮೆಂಟ್ಸ್‌ನಂತಹವರಿಂದ (ಐಐಎಚ್‌ಎಸ್) ಮೈಸೂರಿನ ಅಭಿವೃದ್ಧಿ ಸಂಬಂಧ 50 ವರ್ಷದ ಡಾಕ್ಯುಮೆಂಟ್ ತಯಾರಿಕೆಗೆ ಸಚಿವರು ಸಲಹೆ ಪಡೆಯುವುದು ಸೂಕ್ತ.