Mysore
21
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಸಿ.ಟಿ.ರವಿ ಪ್ರಕರಣ; ಬಿಜೆಪಿಗೆ ಮಹತ್ವದ ಸಲಹೆ ಕೊಟ್ಟ ಎಚ್.ಡಿ.ಕುಮಾರಸ್ವಾಮಿ

ಹಾಸನ: ಸಿ.ಟಿ.ರವಿ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಬಿಜೆಪಿ ಸ್ನೇಹಿತರು ಸರಿಯಾದ ರೀತಿಯಲ್ಲಿ ಕಾನೂನು ಹೋರಾಟ ಮಾಡಿದರೆ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಪೊಲೀಸ್ ಅಧಿಕಾರಿಗಳೆಲ್ಲಾ ಸಸ್ಪೆಂಡ್ ಆಗುತ್ತಾರೆ ಎಂದರು.

ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ರಾಜ್ಯಸಭೆಯಲ್ಲಿನ ಅಮಿತ್ ಶಾ ಅವರ ಹೇಳಿಕೆ ಬಗ್ಗೆ ಇವರು ವಿಧಾನಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಇದು ರಾಜ್ಯಸಭೆಯಲ್ಲಿ ಪ್ರಾರಂಭವಾದದ್ದು. ಈ ವಿಷಯ ಆ ಸದನಕ್ಕೆ ಸಂಬಂಧಪಟ್ಟ ವಿಷಯ. ಅಮಿತ್ ಶಾ ಅವರು ವಿಧಾನ ಪರಿಷತ್ ಸದಸ್ಯರಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆಗೆ ವಿಶೇಷವಾದ ಅವಕಾಶ ಕೊಡುತ್ತೇವೆ ಎಂದು ಡಂಗೂರ ಹೊಡೆದರು. ನಿನ್ನೆಯೂ ಒಬ್ಬ ಹೆಣ್ಣುಮಗಳು ಬಳ್ಳಾರಿಯಲ್ಲಿ ಮಗುವಿಗೆ ಜನ್ಮ ಕೊಡುವಾಗ ತೀರಿಕೊಂಡಿದ್ದಾಳೆ. ಪ್ರತಿನಿತ್ಯ ಈ ಸಾವುಗಳು ಸಂಭವಿಸುತ್ತಿವೆ. ಇದ್ಯಾವುದರ ಬಗ್ಗೆ ರಾಜ್ಯ ಸರಕಾರಕ್ಕೆ ಕಿಂಚಿತ್ತೂ ಚಿಂತೆ ಇಲ್ಲ ಎಂದು ಕೇಂದ್ರ ಸಚಿವರು ಕಟುವಾಗಿ ಟೀಕಿಸಿದರು.

ಈ ಸರಕಾರಕ್ಕೆ ನಾಡಿನ ಭವಿಷ್ಯದ ಬಗ್ಗೆ ಚಿಂತೆ ಇಲ್ಲ. ಕೆಲವು ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ರಾಜಕೀಯ ವಿರೋಧಿಗಳನ್ನು ದಮನ ಮಾಡಲು ಹೊರಟಿದ್ದಾರೆ. ಸಿ.ಟಿ.ರವಿ ಅವರನ್ನು ರಾತ್ರಿಯೆಲ್ಲಾ ಸುತ್ತಿಸಬೇಕಿತ್ತಾ? ಅವರು ಒಬ್ಬ ಜನಪ್ರತಿನಿಧಿ ಇದ್ದಾರೆ. ಬಂಧಿಸುವುದಿದ್ದರೆ ನೇರವಾಗಿ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್‌ಗೆ ಕರೆದುಕೊಂಡು ಬರಬಹುದಿತ್ತು. ರಾತ್ರಿಯೆಲ್ಲಾ ಸುತ್ತಿಸಬೇಕಾದ ಅವಶ್ಯಕತೆ ಏನಿತ್ತು? ಇದಕ್ಕೆಲ್ಲ ಯಾರು ಡೈರೆಕ್ಷನ್ ಕೊಟ್ಟವರು? ಬಿಜೆಪಿ ಸ್ನೇಹಿತರು ಸರಿಯಾದ ರೀತಿ ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡಿದರೆ ಅಧಿಕಾರಿಗಳೆಲ್ಲಾ ಸಸ್ಪೆಂಡ್ ಆಗುತ್ತಾರೆ. ಮಂತ್ರಿಯೊಬ್ಬರ ಚಿತಾವಣೆಯಿಂದ ಯಾವ ಅಧಿಕಾರಿಗಳು ಸಿ.ಟಿ.ರವಿಗೆ ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾರೆ ಅವರು ಅದರ ಪ್ರತಿಫಲ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಸೇಡಿನ ರಾಜಕೀಯ; ರಾಜ್ಯಕ್ಕೆ ಕೆಟ್ಟ ದಿನಗಳು ಕಾದಿವೆ!
ಸಚಿವ ಸತೀಶ್ ಜಾರಕಿಹೋಳಿ ಅವರು ಸಿ.ಟಿ.ರವಿ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿ ಎಂದು ಹೇಳಿದ್ದಾರೆ. ಇನ್ನೊಬ್ಬರು ಇನ್ನೊಂದು ಕಥೆ ಹೇಳುತ್ತಾರೆ. ಈ ರಾಜ್ಯದಲ್ಲಿ ಗೃಹ ಸಚಿವರು ಎನ್ನುವವರು ಇದ್ದಾರಾ? ಕಳೆದ ಆರೇಳು ತಿಂಗಳಿನಿಂದ ಹಲವಾರು ಪ್ರಕರಣಗಳು ಈ ರಾಜ್ಯದಲ್ಲಿ ನಡೆಯುತ್ತಿವೆ. ಕರ್ನಾಟಕಕ್ಕೆ ಭವಿಷ್ಯದಲ್ಲಿ ಅತ್ಯಂತ ಕೆಟ್ಟ ದಿನಗಳು ಕಾದಿವೆ. ರಾಜಕಾರಣದಲ್ಲಿ ವೈಷಮ್ಯ, ದ್ವೇಷ ಬೆಳೆಯಲು ಇವರು ಬೀಜ ಬಿತ್ತನೆ ಮಾಡಿದ್ದಾರೆ. ಮುಂದೆಯೂ ಸಹ ಇಂತಹುದೇ ಕೆಟ್ಟ ಪರಿಸ್ಥಿತಿ ಮುಂದುವರಿಯುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.

ರಾಜ್ಯದ ಪೊಲೀಸ್ ವ್ಯವಸ್ಥೆ ಇಡೀ ದೇಶಕ್ಕೆ ಮಾದರಿ ಆಗಿತ್ತು. ನಮ್ಮ ಪೂರ್ವಿಕರು ರಾಜ್ಯದಲ್ಲಿ ಉತ್ತಮ ವಾತಾವರಣ, ವ್ಯವಸ್ಥೆಯನ್ನು ರೂಪಿಸಿದ್ದರು. ಕರ್ನಾಟಕ ಪೊಲೀಸ್ ಎಂದರೆ ದೇಶದಲ್ಲಿಯೇ ಗೌರವ ಇತ್ತು. ದುರದೃಷ್ಟ ಎಂದರೆ, ಅದೆಲ್ಲವನ್ನೂ ಸರ್ವನಾಶ ಮಾಡಲು ಈ ಸರಕಾರ ಹೊರಟಿದೆ. ಪೊಲೀಸರ ಗೌರವವನ್ನು ಮಣ್ಣುಪಾಲು ಮಾಡುವ ನಿಟ್ಟಿನಲ್ಲಿ ಇವರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಪ್ರಕರಣವನ್ನು ಏನು ಮಾಡಿದಿರಿ? ಕಾಂಗ್ರೆಸ್ ನಾಯಕ ಗುರಪ್ಪ ನಾಯ್ಡ ಮೇಲೆ ಶಿಕ್ಷಕರೊಬ್ಬರು ದೂರು ಕೊಟ್ಟರಲ್ಲ, ಆ ದೂರು ಏನಾಯಿತು? ರಾಜ್ಯದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಾಜಕೀಯ ವಿರೋಧಿಗಳಿಗೆ ಹೇಗೆಲ್ಲಾ ಕಿರುಕುಳ ನೀಡಲಾಗುತ್ತಿದೆ ಎಂಬುದನ್ನು ನಾನು ಬಲ್ಲೆ. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ರಾಜಕಾರಣ ಯಾವ ರೀತಿ ಹೋಗಬಹುದು ಎನ್ನುವುದಕ್ಕೆ ಕಾಂಗ್ರೆಸ್ ನವರು ವೇದಿಕೆ ಸಿದ್ಧ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.

ನಾನು ಸಂಪೂರ್ಣವಾಗಿ ಪೊಲೀಸ್ ಇಲಾಖೆಗೆ ದೋಷ ಕೊಡಲು ಹೋಗುವುದಿಲ್ಲ. ಇವತ್ತು ಸರಕಾರದಲ್ಲಿರುವ ಮಂತ್ರಿಗಳು ಕೆಲವು ಆಯ್ದ ಪೊಲೀಸ್ ಅಧಿಕಾರಿಗಳಿಗೆ ಡೈರೆಕ್ಷನ್ ಕೊಡುವ ಮೂಲಕ ಇಲಾಖೆಯಲ್ಲಿ ಕಾನೂನು ಬಾಹಿರ ತೀರ್ಮಾನಗಳಾಗುತ್ತಿವೆ. ತಮಗೆ ಬೇಕಾದಂತೆ ಕೇಸ್‌ಗಳನ್ನು ಬುಕ್ ಮಾಡುತ್ತಿದ್ದಾರೆ. ಯಾವ ರೀತಿ ಅವರ ವಿರೋಧಿಗಳನ್ನು ಸದೆಬಡೆಯಬೇಕೆಂದು ಅಧಿಕಾರ ದುರುಪಯೋಗ, ಕಾನೂನಿನ ಉಲ್ಲಂಘನೆ ಎಂಬುದು ಸರಕಾರದಿಂದಲೇ ಆಗುತ್ತಿದೆ. ನಾನು ಈಗಷ್ಟೇ ದೇವಸ್ಥಾನದಲ್ಲಿ ಪೂಜೆ ಮಾಡಿ ಬಂದು ನಿಂತು ಹೇಳುತ್ತಿದ್ದೇನೆ, ಕಾಲವೇ ಇದಕ್ಕೆಲ್ಲ ಉತ್ತರ ಕೊಡುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಇದು ಅನಾಗರಿಕ ಸರಕಾರ!! ಹೆಚ್ಡಿಕೆ ಕಿಡಿ
ಕಲ್ಬುರ್ಗಿಯಲ್ಲಿ ಸಿಎಂ ಅವರು ಜಯದೇಶ ಆಸ್ಪತ್ರೆ ಉದ್ಘಾಟನೆ ಮಾಡಿದ್ದಾರೆ, ಆ ಆಸ್ಪತ್ರೆಗೆ ಏನಿದೆ ಅವರ ಕೊಡುಗೆ? ನಾನು ಸಿಎಂ ಆಗಿದ್ದಾಗ ಅದಕ್ಕೆ ಚಾಲನೆ ಕೊಟ್ಟಿದ್ದೆ. ನಂತರ ಬಂದ ಬಿಜೆಪಿ ಸರಕಾರ ₹128 ಕೋಟಿ ಹಣ ಬಿಡುಗಡೆ ಮಾಡಿತ್ತು. ಜಯದೇವ ಆಸ್ಪತ್ರೆಯಿಂದ ಡಾ.ಸಿ.ಎನ್.ಮಂಜುನಾಥ್ ಅವರು ₹40 ಕೋಟಿ ಸಂಗ್ರಹಿಸಿ ಹೂಡಿಕೆ ಮಾಡಿದ್ದರು. ಹಿಂದೆ ಕೆಲಸ ಮಾಡಿರುವವರನ್ನು ನೆನಪಿಸಿಕೊಳ್ಳುವಂತಹ ಕೃತಜ್ಞತೆ ಇಲ್ಲದಂತಹ ಅನಾಗರೀಕ ಸರಕಾರ ಇದು. ಇವರ ಕೊಡುಗೆ ಏನೂ ಇಲ್ಲ. ಈಗ ನೋಡಿದರೆ ನಿಮ್ಹಾನ್ಸ್ ಮಾಡ್ತಾರಂತೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಸದ್ಯಕ್ಕೆ ಇರುವ ಆಸ್ಪತ್ರೆಗಳನ್ನೇ ನೆಟ್ಟಗೆ ಇಟ್ಟುಕೊಂಡಿಲ್ಲ. ಉತ್ತರ ಕರ್ನಾಟಕದಲ್ಲಿ ಪ್ರತಿನಿತ್ಯ ಬಾಣಂತಿಯರು, ಮಕ್ಕಳ ಸರಣಿ ಸಾವು ಮುಂದುವರಿದೆ. ಬಹಳ ನೋವಾಗುತ್ತದೆ. ಇದನ್ನೆಲ್ಲಾ ತಡೆಯಲು ಏನು ಕ್ರಮ ತೆಗೆದುಕೊಂಡಿದ್ದೀರಿ. ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆ. ನೀವು ರಾಜ್ಯ ಕಟ್ಟುತ್ತೀರಾ? ಎಂದು ಅವರು ಅವರು ಹೇಳಿದರು.

 

Tags: