Mysore
21
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಬಿಜೆಪಿಗೆ ಆತಂಕ ತಂದ ಶಾ ಅಂತರಾಳದ ಮಾತು

‘ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಈಗ ಒಂದು ಫ್ಯಾಶನ್ ಆಗಿಬಿಟ್ಟಿದೆ. ಹೀಗೆ ಹೇಳುವವರು ಭಗವಂತನ ಹೆಸರನ್ನಾದರೂ ಇಷ್ಟು ಬಾರಿ ಸ್ಮರಿಸಿದ್ದರೆ ಅವರಿಗೆ ಏಳು ಜನ್ಮದಲ್ಲಿಯೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು’ (ಅಭಿ ಏಕ್ ಫ್ಯಾಷನ್ ಹೋ ಗಯಾ ಹೈ ಅಂಬೇಡ್ಕರ್ ಅಂಬೇಡ್ಕರ್. ಇತ್ನಾ ನಾಮ್ ಅಗರ್ ಭಗವಾನ್ ಕಾ ಲೇತೆ ತೊ ಸಾಥ್ ಜನ್ಮ ತಕ್ ಸ್ವರ್ಗ ಮಿಲ್ ಜಾತಾ). ದಲಿತರಲ್ಲದವರು ಈ ಹೇಳಿಕೆಯನ್ನು ಸಹಜವಾಗಿ ತೆಗೆದುಕೊಳ್ಳುತ್ತಾರೆ. ಹೌದು ಅಮಿತ್ ಶಾ ಅವರ ಮಾತಿನಲ್ಲಿ ನಿಜವಿದೆ ಎಂದು ನಂಬುತ್ತಾರೆ.

ಜಾತಿ ತಾರತಮ್ಯ ಮತ್ತು ಅಸ್ಪ ಶ್ಯತೆಯಿಂದ ತಮ್ಮನ್ನು ಸಾವಿರಾರು ವರ್ಷಗಳಿಂದ ಮನುಷ್ಯರಂತೆ ಕಾಣದೆ ಅವಮಾನಿಸಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿಕೊಂಡು ಬಂದ ಸಮಾಜದಲ್ಲಿ ತಮ್ಮ ಕಣ್ಣು ತೆರೆಸಿ ಎಲ್ಲರಂತೆ ತಾವು ಸಮಾಜದಲ್ಲಿ ಸಮಾನರು ಎಂದು ಮನುಷ್ಯರನ್ನಾಗಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗೆಗೆ ಇಂತಹ ಲಘುವಾದ ಮಾತುಗಳು ಕೇಂದ್ರ ಸರ್ಕಾರದ ಪ್ರಭಾವಿ ಸಚಿವರ ಬಾಯಿಂದ ಬಂದಾಗ ದಲಿತರಲ್ಲಿ ಏನನ್ನಿಸಬಹುದು?

ದಲಿತರಲ್ಲಿ ಹಿಂಸಾಪ್ರವೃತ್ತಿ ಇದ್ದಿದ್ದರೆ ದೇಶದಲ್ಲಿ ಇಷ್ಟು ಹೊತ್ತಿಗೆ ಏನಾಗುತ್ತಿತ್ತು ಎನ್ನುವುದನ್ನು ಊಹಿಸಲೂ ಅಸಾಧ್ಯ. ಆದರೆ ಸಾವಿರಾರು ವರ್ಷಗಳಿಂದ ಸಹನೆಯಿಂದಲೇ ದಬ್ಬಾಳಿಕೆ ಮತ್ತು ದೌರ್ಜನ್ಯವನ್ನು ಸಹಿಸಿಕೊಂಡು ಬಂದ ದಲಿತ ವರ್ಗ ಅಲ್ಲಲ್ಲಿ ಪ್ರತಿಭಟನೆ ಮಾಡಿ ತಮ್ಮ ಮಹಾನಾಯಕನ ಬಗೆಗೆ ಆಡಿದ ಹಗುರವಾದ ಮಾತಿಗೆ ಪ್ರತಿಕ್ರಿಯಿಸಿದ್ದಾರೆ ಅಷ್ಟೆ. ಆದರೆ ಚುನಾವಣಾ ವ್ಯವಸ್ಥೆಯಲ್ಲಿ ತಮಗೆ ದೊರೆತಿರುವ ಮತದಾನದ ಹಕ್ಕು ಚಲಾಯಿಸುವ ದಿನ ಬಂದಾಗ ಅವರು ತಮಗಾಗಿರುವ ಕಹಿ ಘಟನೆಗೆ ಉತ್ತರ ನೀಡುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಟ್ಟರೆ ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ಪ್ರಭಾವಿ ಸಚಿವರಾಗಿರುವ ಅಮಿತ್ ಶಾ, ಕಾಂಗ್ರೆಸ್ಸಿಗರನ್ನು ಉದ್ದೇಶಿಸಿ ಹೇಳಿದರೋ ಅಥವಾ ಇಡೀ ದೇಶದಲ್ಲಿನ ಜನರನ್ನು ಗಮನದಲ್ಲಿಟ್ಟುಕೊಂಡು ಹೇಳಿದರೋ ಎನ್ನುವುದು ವಾದಕ್ಕಷ್ಟೆ ಬೇಕು. ವಾಸ್ತವವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಬಗೆಗೆ ಅವರಿಗಿರುವ ಸಹಜವಾದ ಅಸಹನೆಯನ್ನು ಹೊರಹಾಕಿರುವುದನ್ನು ಮಾತ್ರ ತಳ್ಳಿಹಾಕಲು ಸಾಧ್ಯವಿಲ್ಲ. ಇಂತಹ ಭಾವನೆ ಕೇವಲ ಶಾ ಅವರಲ್ಲಿ ಮಾತ್ರ ಇಲ್ಲ, ಬಹುತೇಕ ಮಂದಿಯ ಭಾವನೆಯೂ ಇದೇ ಆಗಿದೆ ಎನ್ನುವುದೇ ಸತ್ಯ. ಅಂಬೇಡ್ಕರ್ ಅವರ ವಿಚಾರವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕೆಂತಲೂ ಇಲ್ಲ. ಸಮಾಜವನ್ನು ನೋಡುವ ದೃಷ್ಟಿಕೋನ ಮತ್ತು ಅವರವರ ವೈಚಾರಿಕತೆ ಹಾಗೂ ನಂಬಿಕೆಯನ್ನು ಅವಲಂಬಿಸಿದೆ.

ದೇಶವು ಡಾ. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚಿತಗೊಂಡ ಸಂವಿಧಾನವನ್ನು ಒಪ್ಪಿಕೊಂಡು ೭೫ ವರ್ಷಗಳಾದ ನೆನಪಿಗೆ ಸಂಸತ್ ನಲ್ಲಿ ನಡೆದ ಎರಡು ದಿನಗಳ ವಿಶೇಷ ಚರ್ಚೆ ಸಂಬಂಧ ರಾಜ್ಯಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ತಮ್ಮ ಇಡೀ ಭಾಷಣದ ಬಹುತೇಕ ಭಾಗವನ್ನು ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸರ್ಕಾರ ಡಾ. ಅಂಬೇಡ್ಕರ್ ಅವರಿಗೆ ಅವಮಾನ ಮಾಡುತ್ತಲೇ ಬಂದಿತೆಂದು ಪಟ್ಟಿ ಮಾಡುತ್ತಿದ್ದರು. ಕಾಂಗ್ರೆಸ್ ಪಂಡಿತ್ ಜವಾಹರ್ ಲಾಲ್ ನೆಹರೂ ಕಾಲದಿಂದ ಇಂದಿರಾ ಗಾಂಽ ಮತ್ತು ರಾಜೀವ್ ಗಾಂಽ ಆಳ್ವಿಕೆಯವರೆಗೆ ಅಂಬೇಡ್ಕರ್ ಅವರಿಗೆ ಹೇಗೆ ಮೋಸ ಮಾಡಿತು ಎಂದು ಈಗಿನ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುವ ಉದ್ದೇಶ ಅವರ ಭಾಷಣದಲ್ಲಿ ಪ್ರಮುಖವಾಗಿ ಇತ್ತೆನ್ನುವುದು ನಿಜ. ಸಂವಿಧಾನ ರಚನಾ ಸಭೆಗೆ ಮತ್ತು ೧೯೫೨ರ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಲು ಕಾಂಗ್ರೆಸ್ ನಡೆಸಿದ ಸಂಚು, ನೆಹರೂ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದಾಗ ತಂದ ಹಿಂದೂ ಕೋಡ್ ಮಸೂದೆಗೆ ಒಪ್ಪಿಗೆ ದೊರೆಯದಂತೆ ಮಾಡಿದ ಕಾರಣ ಮಂತ್ರಿ ಸ್ಥಾನಕ್ಕೆ ನೀಡಬೇಕಾದ ರಾಜೀನಾಮೆ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಿಧನರಾದಾಗ ದೆಹಲಿಯಲ್ಲಿ ಅವರ ಅಂತ್ಯಕ್ರಿಯೆಗೆ ಜಾಗ ನೀಡದ ಸಂಗತಿ, ತನ್ನ ಅಽಕಾರಾವಽಯಲ್ಲಿ ಡಾ. ಅಂಬೇಡ್ಕರ್ ಅವರ ಸೇವೆಯನ್ನು ನಗಣ್ಯ ಮಾಡಿ ಭಾರತ ರತ್ನ ನೀಡದೇ ಅವರಿಗೆ ಮೋಸ ಮಾಡಿದ್ದನ್ನು ಅಮಿತ್ ಶಾ ತಮ್ಮ ಭಾಷಣದಲ್ಲಿ ಹೇಳುತ್ತಾ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಆದರೂ ಕಾಂಗ್ರೆಸ್ ಪಕ್ಷವು ಈ ಸತ್ಯವನ್ನು ಮುಚ್ಚಿಟ್ಟು ತಾನು ದಲಿತರ ಏಳಿಗೆಗಾಗಿ ಶ್ರಮಿಸುತ್ತಿರುವ ಪಕ್ಷ ಎಂದು ಆ ವರ್ಗವನ್ನು ಮೋಸ ಮಾಡುತ್ತಲೇ ಬಂದಿದೆ ಎಂದು ಟೀಕೆ ಮಾಡಿದರು. ಹಿಂದಿನ ಜನಸಂಘವಾಗಲಿ, ಅದರ ಮುಂದುವರಿದ ಪಕ್ಷವಾದ ಭಾರತೀಯ ಜನತಾ ಪಕ್ಷವಾಗಲಿ ಡಾ. ಅಂಬೇಡ್ಕರ್ ಅವರನ್ನು ಗೌರವಿಸುತ್ತಾ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಬಾಬಾ ಸಾಹೇಬರ ಹೆಸರನ್ನು ಅಜರಾಮಗೊಳಿಸಲು ಅವರ ಐದು ಸ್ಮಾರಕಗಳನ್ನು ‘ಪಂಚತೀರ್ಥ’ ಎನ್ನುವ ಹೆಸರಿನಲ್ಲಿ ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದರು. ನಂತರ ತಮ್ಮ ವಿರುದ್ಧ ಭುಗಿಲೆದ್ದ ಘಟನೆಗಳಿಗೆ ತುರ್ತು ಪತ್ರಿಕಾಗೋಷ್ಠಿ ಕರೆದು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದು ವಿಶೇಷ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೇ ಸರಸಂಚಾಲಕ ಎಂ. ಎಸ್. ಗೋಲ್ವಾಲ್ಕರ್ ಅವರಿಂದ ಹಿಡಿದು ಹಲವು ಸಂಘ ಪರಿವಾರದವರೆಗೆ ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಭಾರತೀಯತೆ ಮತ್ತು ಹಿಂದೂ ಸಂಸ್ಕೃತಿಯ ವಾಸನೆ ಇಲ್ಲ. ಅದು ವಿದೇಶಿ ವಿಚಾರಗಳನ್ನು ಒಳಗೊಂಡ ಸಂವಿಧಾನ ಎನ್ನುವ ಟೀಕೆ ಮುಂದುವರಿದೇ ಇದೆ.

೧೯೯೮ರಲ್ಲಿ ಕೇಂದ್ರದಲ್ಲಿ ಅಽಕಾರಕ್ಕೆ ಬಂದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದ ವೇಳೆ ಸಂವಿಧಾನ ಜಾರಿಗೆ ಬಂದು ಐವತ್ತು ವರ್ಷಗಳಾಗಿತ್ತು. ಈ ಐವತ್ತು ವರ್ಷಗಳ ಆಡಳಿತಾವಽಯಲ್ಲಿ ನಮ್ಮ ಸಂವಿಧಾನ ಎಷ್ಟು ಪರಿಣಾಮಕಾರಿಯಾಗಿ ಯಶಸ್ವಿಯಾಗಿದೆ ಎಂದು ನೋಡುವ ಕಾಲವಿದು. ಹಾಗಾಗಿ ಸಂವಿಧಾನವನ್ನು ಪರಾಮರ್ಶಿಸುವ ಯೋಜನೆಯನ್ನು ಕೈಗೆತ್ತಿಕೊಂಡರು. ಆಗಲೇ ದಲಿತ ವರ್ಗದಲ್ಲಿ ಮತ್ತು ಪರಿಶಿಷ್ಟ ಜಾತಿಯ ಸಂಸದರಲ್ಲಿ ಈ ಸರ್ಕಾರ ಸಂವಿಧಾನ ಬದಲಿಸುವ ಪ್ರಕ್ರಿಯೆಗೆ ಕೈ ಹಾಕಿದೆ ಎನ್ನುವ ಬಲವಾದ ಶಂಕೆ ಉಂಟಾಯಿತು. ಪಕ್ಷಾತೀತವಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಸದರ ವೇದಿಕೆ ತನಗಿರುವ ಅನುಮಾನವನ್ನು ಪ್ರಧಾನಿ ವಾಜಪೇಯಿ ಅವರಲ್ಲಿ ವ್ಯಕ್ತಪಡಿಸಿತು. ಆದರೂ ವಾಜಪೇಯಿ ಅವರು ಅಂದು ಆಗಷ್ಟೇ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದ ಎಂ. ಎನ್. ವೆಂಕಟಾಚಲಯ್ಯ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ಪರಾಮರ್ಶೆ ಆಯೋಗವನ್ನೂ ರಚಿಸಿದರು. ಎರಡು ವರ್ಷಗಳಲ್ಲಿ ನ್ಯಾ. ವೆಂಕಟಾಚಲಯ್ಯ ಅವರ ಆಯೋಗವು ವರದಿಯನ್ನೂ ನೀಡಿತು. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಸದರ ವೇದಿಕೆಯ ಬಲವಾದ ವಿರೋಧ ಮತ್ತು ದೇಶದಾದ್ಯಂತ ದಲಿತ ವರ್ಗದಿಂದ ಎದುರಾದ ಪ್ರತಿಭಟನೆಯಿಂದ ವಾಜಪೇಯಿ ಅವರು ಈ ವರದಿಯನ್ನು ಸಂಪುಟದ ಸಭೆಯ ಚರ್ಚೆಗೂ ತರಲಾಗದೆ ಕೊನೆಗೆ ಅದು ಪ್ರಧಾನಿ ಮತ್ತು ಕಾನೂನು ಸಚಿವಾಲಯದಲ್ಲಿ ದೂಳು ತಿನ್ನುವಂತೆ ಆದದ್ದು ಇತಿಹಾಸ.

ಕಳೆದ ಹತ್ತು ವರ್ಷಗಳಲ್ಲಿ ಫೀನಿಕ್ಸ್ ಹಕ್ಕಿಯಂತೆ ಮತ್ತೆ ಅಽಕಾರಕ್ಕೆ ಬಂದ ನಂತರ ‘ನಾವು ಅಽಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು’ ಎನ್ನುವ ಬಹಿರಂಗ ಹೇಳಿಕೆ ಕೆಲವು ಬಿಜೆಪಿ ಸಂಸದರು ಮತ್ತು ಸಂಘ ಪರಿವಾರದ ನಾಯಕರ ಬಾಯಲ್ಲಿ ಆಗಾಗ್ಗೆ ಕೇಳಿ ಬಂತು. ಇವರ ಹೇಳಿಕೆಯನ್ನು ಕುರಿತು ಪ್ರಧಾನಿಯಾಗಲಿ ಅಥವಾ ಪಕ್ಷದ ನಾಯಕರಾಗಲಿ ಸ್ಪಷ್ಟನೆ ನೀಡಲಿಲ್ಲ. ಬದಲಾಗಿ ಜಾಣಮೌನವಹಿಸಿದ್ದು ದಲಿತ ವರ್ಗಗಳಲ್ಲಿರುವ ಅನುಮಾನ ಮತ್ತಷ್ಟು ಗಟ್ಟಿಯಾಗುತ್ತಾ ಬಂದಿತು. ತಮ್ಮನ್ನು ಸಮಾನರನ್ನಾಗಿ ನೋಡುವ ಸಂವಿಧಾನ ಹೋಗಿ ಜಾತಿ ಮತ್ತು ಅಸ್ಪ ಶ್ಯತೆ ಆಚರಣೆಯ ಸನಾತನ ಧರ್ಮದ ಸಂವಿಧಾನ ಬಿಜೆಪಿ ಆಡಳಿತದಲ್ಲಿ ಬರಬಹುದೆನ್ನುವ ಆತಂಕ ಈಗಲೂ ದಲಿತ ವರ್ಗವನ್ನು ಕಾಡುತ್ತಿದೆ.

ದಲಿತರಿಗಾಗಿ ಅಷ್ಟಿಷ್ಟು ಕಾರ್ಯಕ್ರಮಗಳನ್ನು ಘೋಷಣೆ ಮಾಡಿಕೊಂಡು ಬಂದ ಮತ್ತು ಸಂವಿಧಾನದ ವಿರುದ್ಧ ಎಂದೂ ಮಾತನಾಡದ ಕಾಂಗ್ರೆಸ್ ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತ ದಲಿತರ ಪರ ತಾನಿದ್ದೇನೆ ಎನ್ನುವ ನಂಬಿಕೆಯನ್ನು ಇಂದಿರಾ ಗಾಂಽ ಅವರ ಕಾಲದಿಂದ ಇಂದಿನವರೆಗೂ ಕಾಪಾಡಿಕೊಂಡು ಬರುವ ಮೂಲಕ ದಲಿತರನ್ನು ತನ್ನ ವೋಟ್ ಬ್ಯಾಂಕ್ ಆಗಿ ಮಾಡಿಕೊಂಡು ಬಂದಿದೆ. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗೆಗೆ ನಡೆದುಕೊಂಡ ಮತ್ತು ಅವರಿಗೆ ಮೋಸ ಮಾಡಿದ ಐತಿಹಾಸಿಕ ಸಂಗತಿಗಳಿಗೆ ಈಗಿನ ಕಾಂಗ್ರೆಸ್ ಪಕ್ಷವಾಗಲಿ ಅಥವಾ ನಾಯಕರಾಗಲಿ ಕಾರಣರಲ್ಲದಿದ್ದರೂ ಅದರ ಕಹಿ ಘಟನೆಗಳಿಗೆ ಕಾಂಗ್ರೆಸ್ ಉತ್ತರ ಕೊಡುವ ಧೈರ್ಯ ಮಾಡುವುದೇ ಎನ್ನುವ ಪ್ರಶ್ನೆ ಆ ಪಕ್ಷವನ್ನು ನಿರಂತರವಾಗಿ ಕಾಡುತ್ತಲೇ ಇರುತ್ತದೆ.

ಇದೆಲ್ಲದರ ಜೊತೆಗೆ ಮತ್ತೊಂದು ವಾಸ್ತವವನ್ನು ಗಮನಿಸಬೇಕಿದೆ. ೧೯೫೨ರಿಂದ ಎಪ್ಪತ್ತರ ದಶಕದ ಕೊನೆಯವರೆಗೂ ಉತ್ತರ ಭಾರತದ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ದಕ್ಷಿಣದ ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಭೂ ಮಾಲೀಕ ಬಲಿಷ್ಠ ಜಾತಿಗಳು ಚುನಾವಣೆಗಳಲ್ಲಿ ದಲಿತ ವರ್ಗದ ಜನರು ಮತಗಟ್ಟೆಗಳಿಗೆ ಕಾಲಿಡದಂತೆ, ಮತಚಲಾಯಿಸದಂತೆ ತಡೆಗಟ್ಟುವುದು ಮತ್ತು ಒಂದು ವೇಳೆ ಅವರು ಮತಚಲಾಯಿಸಿದ್ದರೂ ಮತಪೆಟ್ಟಿಗೆಗಳನ್ನೇ ಅಪಹರಿಸುವುದು ಈ ರಾಜ್ಯಗಳಲ್ಲಿ ನಿರಂತರವಾಗಿ ನಡೆದು ಬಂದಿತು. ಆದರೆ ಎಂಬತ್ತರ ದಶಕದ ಟಿ. ಎನ್. ಶೇಷನ್ ಮುಖ್ಯ ಚುನಾವಣಾ ಕಮಿಷನರ್ ಆಗಿ ನೇಮಕಗೊಂಡ ಮೇಲೆ ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆ ತಂದರು. ದಲಿತ ವರ್ಗದ ಜನರಿಗೆ ಮುಕ್ತವಾಗಿ ತಮ್ಮ ಮತಚಲಾಯಿಸುವ ಅವಕಾಶ ದೊರೆಯಿತು. ಆಗ ದಲಿತರಿಗೆ ದೊರೆತ ಮತದಾನದ ಹಕ್ಕು ಅವರ ಮತಗಳಿಗೆ ಒಂದು ಮೌಲ್ಯವನ್ನು ತಂದುಕೊಟ್ಟಿತು. ಆ ನಂತರ ದಲಿತರ ಮತಗಳ ಮೇಲೆ ಎಲ್ಲ ರಾಜಕೀಯ ಪಕ್ಷಗಳು ವಿಶೇಷವಾಗಿ ಕಾಂಗ್ರೆಸ್ ಕಣ್ಣಿಟ್ಟಿತು. ಕೇಂದ್ರದ ಮಟ್ಟದಲ್ಲಿ ಒಂದು ಸರ್ಕಾರದ ರಚನೆಯಲ್ಲಿ ದಲಿತ ವರ್ಗದ ಮತವನ್ನು ಯಾವುದೇ ರಾಜಕೀಯ ಪಕ್ಷಗಳು ಕಡೆಗಣಿಸಲು ಸಾಧ್ಯವಿಲ್ಲ ಎನ್ನುವ ವಾತಾವರಣ ಉಂಟಾಗಿದ್ದು, ದೇಶದ ರಾಜಕಾರಣದಲ್ಲಿ ದಲಿತ ವರ್ಗದ ಪಾತ್ರ ನಿರ್ಣಾಯಕವಾದುದನ್ನು ಕಡೆಗಣಿಸುವಂತಿಲ್ಲ.

ಹಾಗಾಗಿ ತಮ್ಮನ್ನು ರಕ್ಷಿಸುವ ಸಂವಿಧಾನ ರಕ್ಷಣೆಗೆ ದಲಿತ ವರ್ಗ ಪಣತೊಟ್ಟು ನಿಂತಿದೆ. ನಾವು ಸಂವಿಧಾನ ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎನ್ನುವ ಬಲವಾದ ನಂಬಿಕೆ ದಲಿತರದು.

 

Tags: