Mysore
18
broken clouds

Social Media

ಬುಧವಾರ, 14 ಜನವರಿ 2026
Light
Dark

ರಾಗಿ ಬೆಳೆಯನ್ನೂ ಆವರಿಸಿದ ಗಂಧಿಬಗ್ ಕೀಟ; ರೈತರಿಗೆ ಸಂಕಷ್ಟ

ಆನಂದ್ ಹೊಸೂರು
ಹೊಸೂರು: ಭತ್ತದ ಬೆಳೆಯನ್ನು ತಿಂದು ಹಾಳು ಮಾಡುತ್ತಿದ್ದ ಗಂಧಿಬಗ್ ಕಾಟ ಇದೀಗ ರಾಗಿಯನ್ನೂ ಆವರಿಸಿದ್ದು ರೈತರು ಕಂಗಾಲಾಗಿದ್ದಾರೆ.

ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಹೋಬಳಿಯ ಹೊಸೂರು ಸುತ್ತಮುತ್ತಲೂ ಬೆಳೆದಿರುವ ರಾಗಿ ಬೆಳೆಯಲ್ಲಿ ಗಂಧಿಬಗ್ ಕಾಟವು ಹೆಚ್ಚಾಗುತ್ತಿದ್ದು, ಈ ಕೀಟ ಈ ಹಿಂದೆ ಭತ್ತದ ಬೆಳೆಯನ್ನು ಹಾಳುಮಾಡುತ್ತಿತ್ತು. ಭತ್ತದ ಕಾಳುಗಳು ಹಾಲು ತುಂಬುವ ಸಮಯದಲ್ಲಿ ಕಾಳುಗಳ ಮೇಲೆ ಕುಳಿತು ರಸ ಹೀರಿ ಕಾಳುಗಟ್ಟದೆ ಜೊಳ್ಳಾಗುತ್ತಿತ್ತು.

ಅದೇ ರೀತಿ ಇದೀಗ ರಾಗಿಯ ತೆನೆಯ ಮೇಲೆ ಕುಳಿತು ಕಾಳುಗಳ ರಸ ಹೀರುತ್ತಿದೆ. ಈ ಕೀಟವು ಕೆಲವೇ ಸಮಯದಲ್ಲಿ ತನ್ನ ಸಂತಾನೋತ್ಪತ್ತಿಯನ್ನು ಹೆಚ್ಚಿಸಿಕೊಂಡು ಇಡೀ ಬೆಳೆಯನ್ನೇ ಆವರಿಸುತ್ತಿದ್ದು ಕಾಳು ಗಟ್ಟಿಯಾಗುವ ಮುನ್ನವೇ ಜೊಳ್ಳಾಗಿ ಉದುರುತ್ತಿದ್ದು ಈ ಹೊಸ ಕೀಟಬಾಧೆಯಿಂದ ಕಾಳುಗಟ್ಟಿ ರೈತರ ಮನೆಯ ಚೀಲಗಳನ್ನು ತುಂಬುತ್ತಿದ್ದ ರಾಗಿ ಹಾಳಾಗುತ್ತಿದೆ. ಯಾವುದೇ ರೋಗರುಜಿನಗಳು ಬಾರದಂತಹ ಬೆಳೆಯಾದ ರಾಗಿ ಬೆಳೆಗೂ ಕೀಟಬಾಧೆ ಬಂದಿರುವುದು ಈ ಭಾಗದ ರೈತರಲ್ಲಿ ಆಶ್ಚರ್ಯ ತಂದಿದೆ. ಈ ಕೀಟವು ಭತ್ತದ ಬೆಳೆಯನ್ನು ಪ್ರಧಾನವಾಗಿ ಆಯ್ಕೆ ಮಾಡಿಕೊಳ್ಳುತ್ತದೆ.

ಭತ್ತದ ಕಟಾವು ಆರಂಭವಾಗಿರುವ ಕಾರಣ ಪರ್ಯಾಯ ಬೆಳೆಗಳನ್ನು ತನ್ನ ಆಶ್ರಯಕ್ಕಾಗಿ ಹುಡುಕಾಡುತ್ತದೆ. ಈ ಸಮಯದಲ್ಲಿ ಅಕ್ಕಪಕ್ಕದಲ್ಲೇ ಇರುವ ರಾಗಿಯಂತಹ ತೆನೆ ಕಟ್ಟುವ ಬೆಳೆಗಳಿಗೆ ಬರುವ ಸಂಭವವೂ ಇರುವುದರಿಂದ ಸೂಕ್ತ ಔಷಧೋಪಚಾರ ಮಾಡಿದರೆ ತಕ್ಷಣ ಕಡಿಮೆಯಾಗಲಿದೆ ಎಂದು ಮಂಡ್ಯ ವಿ. ಸಿ.ಫಾರಂನ ಕೃಷಿ ಕೀಟ ವಿಜ್ಞಾನಿ ಕಿತ್ತೂರು ಮಠ ತಿಳಿಸಿದ್ದಾರೆ.

ಗಂಧಿಬಗ್ ಕೀಟವು ಕೆಲವು ವರ್ಷಗಳಿಂದ ಭತ್ತದ ಬೆಳೆಯನ್ನು ಮಾತ್ರ ತಿನ್ನುತ್ತಿತ್ತು. ಆದರೆ ಇದೀಗ ಹೊಸದಾಗಿ ರಾಗಿ ಬೆಳೆಯನ್ನು ಹಾನಿ ಮಾಡುತ್ತಿದ್ದು, ತಕ್ಷಣ ರೈತರು ನಿರ್ಲಕ್ಷ್ಯ ಮಾಡದೆ ಸೂಕ್ತ ಔಷಧೋಪಚಾರ ಮಾಡಬೇಕು. ಇಲ್ಲವಾದರೆ ಕಾಳುಗಳು ಜೊಳ್ಳಾಗಿ ಉದುರಿ ಹೋಗುತ್ತವೆ. ಇದಕ್ಕಾಗಿ ಲ್ಯಾಂಬ್ದ ಸಾಯ್ ಹಾಲೋಥ್ರಿನ್ ೦. ೫ ಮಿಲಿ ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಣೆ ಮಾಡಿದರೆ ಕೀಟಬಾಧೆ ಕಡಿಮೆಯಾಗಲಿದೆ. -ಪ್ರಸನ್ನ ದಿವಾನ್, ಕೃಷಿ ಅಧಿಕಾರಿ, ಚುಂಚನಕಟ್ಟೆ

 

Tags:
error: Content is protected !!