ಭೂಮಿಕಾ
ಕೆಲಬಾರಿ ಅನಿರೀಕ್ಷಿತ ತಿರುವುಗಳು ನಮ್ಮ ಬದುಕಿನ ಗತಿಯನ್ನೇ ಬದಲಿಸಿ ಬಿಡುತ್ತವೆ. ಏನೋ ಮಾಡಬೇಕು ಎಂದುಕೊಂಡವರು ಇನ್ನೇನೋ ಮಾಡುತ್ತಾ ಜೀವನ ಕಟ್ಟಿಕೊಂಡಿರುತ್ತಾರೆ. ಅಂತಹವರಲ್ಲಿ ಒಬ್ಬರು ೬೬ ವರ್ಷ ಪ್ರಾಯದ ಸುನಂದಾ.
ಮೈಸೂರಿನ ವಿ.ವಿ.ಪುರಂ ಪಕ್ಕದಲ್ಲಿ ಸಣ್ಣದೊಂದು ಉಪಾಹಾರ ಮಂದಿರವನ್ನು ನಡೆಸುತ್ತಿದ್ದಾರೆ ಸುನಂದಾ. ಇವರು ಕಳೆದ ೨೩ ವರ್ಷ ಗಳಿಂದಲೂ ಪುಟ್ಟ ಹೋಟೆಲ್ ನಡೆಸುತ್ತಿದ್ದು, ಬದುಕಿನಲ್ಲಿ ಎದುರಾದ ಅನಿರೀಕ್ಷಿತ ತಿರುವುಗಳು ಗೃಹಿಣಿಯಾಗಿದ್ದ ಇವರನ್ನು ಹೋಟೆಲ್ ವ್ಯಾಪಾರಕ್ಕೆ ಕಾಲಿಡುವಂತೆ ಮಾಡಿತು.
ಸುನಂದಾರವರ ಪತಿ ಉಪಾಹಾರ ಮಂದಿರವನ್ನು ನಡೆಸುತ್ತಿದ್ದರು. ಆದರೆ ಅವರು ಅಕಾಲಿಕವಾಗಿ ನಿಧನರಾದಾಗ, ಬದುಕಿನ ಬಂಡಿ ಹೊರಬೇಕಾದ ಜವಾಬ್ದಾರಿ ಸುನಂದಾರ ಬೆನ್ನಿಗೆ ಬಿತ್ತು. ಮನೆಯ ಜವಾಬ್ದಾರಿಯ ಜತೆ ಜತೆಗೆ ಮಗನ ಓದು, ಹಣಕಾಸು ತೊಂದರೆಗಳೆಲ್ಲವನ್ನೂ ನಿಭಾಯಿಸುವುದೇ ಇವರಿಗೆ ದೊಡ್ಡ ಸವಾಲಾಗಿ ಹೋಯಿತು. ಮುಂದೇನು ಮಾಡಬೇಕು ಎಂದು ದಿಕ್ಕು ತೋಚದ ಸ್ಥಿತಿಯಲ್ಲಿದ್ದ ಅವರ ಮುಂದಿದ್ದ ದಾರಿಯೇ ಪತಿ ನಡೆಸುತ್ತಿದ್ದ ಉಪಾಹಾರ ಮಂದಿರವನ್ನು ಮುನ್ನಡೆಸಿಕೊಂಡು ಹೋಗುವುದು.ಕುಟುಂಬದ ಜವಾಬ್ದಾರಿ ಹಾಗೂ ಸ್ನೇಹಿತರ ಒತ್ತಾಸೆಯಂತೆ ಈ ಉಪಾಹಾರ ಮಂದಿರವನ್ನು ಮುನ್ನಡೆಸಲು ಸುನಂದಾ ಮುಂದಾದರು.
ಮೊದಲಿನಿಂದಲೂ ಸುನಂದಾರ ಈ ಸಣ್ಣ ಹೋಟೆಲ್‌ನಲ್ಲಿ ಟೀ, ಕಾಫಿ, ಇಡ್ಲಿ, ವಡೆ, ರೈಸ್ ಬಾತ್, ಬಜ್ಜಿ, ಮಧ್ಯಾಹ್ನದ ಊಟದ ವ್ಯವಸ್ಥೆ ಇದೆ. ಮನೆಯ ಊಟದಂತಿರುವ ಇವರ ಹೋಟೆಲ್ ಗಳಿಗೆ ಅವರದ್ದೇ ಆದ ಗ್ರಾಹಕರೂ ಇದ್ದಾರೆ. ಹೇಗೋ ಈ ಸಣ್ಣ ಹೋಟೆಲ್ ಸುನಂದಾ ಅವರಿಗೆ ಬದುಕು ನೀಡಿದ್ದು, ನೆಮ್ಮದಿಯಿಂದ ಜೀವನ ಸಾಗುತ್ತಿದ್ದಾರೆ.
ಬೆಳಿಗ್ಗೆ ಐದೂವರೆಯಿಂದ ರಾತ್ರಿ ಎಂಟು ಗಂಟೆಯವರೆಗೂ ಈ ಉಪಾಹಾರ ಮಂದಿರ ತೆರೆದಿ ರುತ್ತದೆ. ಸುನಂದಾ ಅವರ ಸಹಾಯಕ್ಕೆ ಮಗನೂ ಆಸರೆಯಾಗಿದ್ದಾರೆ. ‘ಬದುಕು ಸಾಗಿಸಬೇಕೆಂಬ ಒಂದೇ ಕನಸಿನಿಂದ ಹೋಟೆಲ್ ಕೆಲಸಕ್ಕೆ ಬಂದೆ. ಈಗಲೂ ಇದನ್ನೇ ನಂಬಿದ್ದೇನೆ. ನೆಮ್ಮದಿಯಿಂದ ಜೀವನ ಸಾಗ್ತಿದೆ’ ಎನ್ನುತ್ತಾರೆ ಸುನಂದಾ.
ಸುನಂದಾ ಅವರೇನು ಈ ಹೋಟೆಲ್ ಆರಂಭಿಸಿ ಲಾಭಗಳಿಸಿಲ್ಲ. ಜೀವನದ ಬಂಡಿ ಓಡಬೇಕು, ತಮ್ಮ ಕುಟುಂಬಕ್ಕೊಂದು ಆಸರೆಯಾಗಬೇಕು ಎಂದು ಆರಂಭಿಸಿದ ಕಾಯಕ. ಇದು ಲಾಭಕ್ಕಿಂತ ಬದುಕು ಕಟ್ಟಿಕೊಳ್ಳುವುದು ಮುಖ್ಯ ಎಂಬ ಸುನಂದಾ ಅವರ ಕಾಯಕ ತತ್ವದೊಳಗೆ ಜೀವನ ಸೂತ್ರವಿದೆ.





