Mysore
27
few clouds

Social Media

ಬುಧವಾರ, 14 ಜನವರಿ 2026
Light
Dark

ಸೋತು ಗೆದ್ದ ಸೌಮ್ಯ ಸ್ವಭಾವದ ಜಯಣ್ಣ

ದಲಿತ ರಾಜಕಾರಣದ ಕೊಂಡಿಯಾಗಿದ್ದ ಮಾಜಿ ಶಾಸಕ

ಪ್ರೊ.ಮಹದೇವ ಶಂಕನಪುರ

ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರ ಈವರೆಗೆ ಹಲವು ವಿಭಿನ್ನ, ವಿಶಿಷ್ಟ ವ್ಯಕ್ತಿತ್ವದ ವಿಧಾನಸಭಾ ಸದಸ್ಯರನ್ನು ಕೊಟ್ಟಿರುವ ಕ್ಷೇತ್ರ. ಸ್ವಾತಂತ್ರ್ಯ ನಂತರ ಈವರೆಗೆ ಈ ಕ್ಷೇತ್ರದಿಂದ ಆಯ್ಕೆಯಾದವರು ತಮ್ಮ ತಮ್ಮ ಮಿತಿಯೊಳಗೆ ಜನತೆಗೆ, ಕ್ಷೇತ್ರಕ್ಕೆ ಕೊಡುಗೆ ನೀಡುತ್ತ ಜನಮಾನಸದಲ್ಲಿ ಉಳಿದಿದ್ದಾರೆ. ಎಸ್.ಜಯಣ್ಣ ಆ ಸಾಲಿನಲ್ಲಿ ತಮ್ಮದೇ ಕಾರ್ಯ ಶೈಲಿಯಿಂದ ಜನಮಾನಸದಲ್ಲಿ ಸ್ಥಾನ ಪಡೆದರು.

ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರ ಈವರೆಗೂ ಮೀಸಲು ಕ್ಷೇತ್ರವಾಗಿದೆ. ಈ ಕ್ಷೇತ್ರ ಪ್ರತಿನಿಧಿಸುವವರಿಗೆ ಅವರದೇ ಆದ ವರ್ಚಸ್ಸುಗಳಿದ್ದವು. ಜಯಣ್ಣ ಅವರಿಗೂ ಹಾಗೇ. ಈ ಕ್ಷೇತ್ರದಲ್ಲಿ ದಲಿತರು, ದಲಿತೇತರರೆಲ್ಲರೂ ಕೈಹಿಡಿಯುವ ವ್ಯಕ್ತಿತ್ವ, ಪ್ರಭಾವಗಳನ್ನು ಇಲ್ಲಿನ ಅಭ್ಯರ್ಥಿಗಳು ಹೊಂದಿರಬೇಕು. ಜಯಣ್ಣ ಈ ಹಾದಿಯಲ್ಲಿ ತಣ್ಣಗೆ ಯಶಸ್ವಿಯಾದ ರಾಜಕಾರಣಿಯಾಗಿದ್ದರು.

ಜಯಣ್ಣ ಅವರು ೧೯೯೪ ಮತ್ತು ೨೦೧೩ರಲ್ಲಿ ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರವನ್ನು ಒಮ್ಮೆ ಜನತಾದಳದಿಂದ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಪ್ರತಿನಿಧಿಸಿದ್ದರು. ಬಹುತೇಕ ಕ್ಷೇತ್ರದಾದ್ಯಂತ ಅಹಿಂದ ಮತ್ತು ಇತರೆ ಸಮುದಾಯಗಳ ಜನ ಬೆಂಬಲ ಪಡೆದಿದ್ದರು. ಬಹುಪಾಲು ಜಯಣ್ಣ ಅವರ ಸೌಮ್ಯ ಸ್ವಭಾವ, ಯಾರಿಗೂ ತೊಂದರೆ ಕೊಡದ ವ್ಯಕ್ತಿತ್ವದಿಂದ ಮನ್ನಿಸುವ ಗುಣಗಳಿಂದ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದರು ಎಂಬ ಅಭಿಪ್ರಾಯ ಚಾಲ್ತಿಯಲ್ಲಿದೆ. ಮೀಸಲು ಕ್ಷೇತ್ರದ ಅಭ್ಯರ್ಥಿಗಳಿಗೆ ಇಂತಹ ಸ್ವಭಾವ ಅಥವಾ ಅಪ್ರೊಚ್ ಅನಿವಾರ್ಯ ಎಂಬಂತೆ ಜಯಣ್ಣ ತಮ್ಮದೇ ರಾಜಕೀಯ ಮಾರ್ಗವನ್ನು ಕಂಡುಕೊಂಡಿದ್ದರು.

ಹಳೇ ಮೈಸೂರು ಸೀಮೆಯಲ್ಲಿ ಚಾಮರಾಜನಗರ ಅವಿಭಜಿತ ಪ್ರದೇಶದಲ್ಲಿ ರಾಜಕಾರಣ ಮಾಡಿದ ಜಯಣ್ಣರವರು, ಬಿ.ರಾಚಯ್ಯ, ವಿ.ಶ್ರೀನಿವಾಸ ಪ್ರಸಾದ್, ಸಿದ್ದರಾಮಯ್ಯರಂತಹ ಪ್ರಭಾವಿ ಹಿರಿಯ ರಾಜಕಾರಣಿಗಳ ಒಡನಾಟದಲ್ಲಿ ಬೆಳೆದು ಬಂದವರು. ಜಯಣ್ಣ ಮೂಲತಃ ಮಾಂಬಳ್ಳಿ ಗ್ರಾಮದ ಸಣ್ಣಯ್ಯ ಮತ್ತು ಪುಟ್ಟನಂಜಮ್ಮ ದಂಪತಿಯ ಹಿರಿಯ ಮಗ. ೪ ಜನ ತಮ್ಮಂದಿರು, ಇಬ್ಬರು ತಂಗಿಯರು. ಆದರೂ, ಅವರ ತಾಯಿ ಊರಾದ ಸಿದ್ದಯ್ಯನಪುರ ಇವರ ಸ್ವಂತ ಊರಾಗಿಯೇ ಇತ್ತು.

ಮಾಂಬಳ್ಳಿ, ಸಿದ್ದಯ್ಯನಪುರಗಳಲ್ಲಿ ಅವರ ಜೀವನ ಕುರಿತಾದ ಅಸ್ಮಿತೆಗಳಿವೆ. ಎಂ.ಎ. ಪದವಿ ಪಡೆದಿದ್ದ ಇವರು ಸರ್ಕಾರಿ ಅಥವಾ ಖಾಸಗಿ ಉದ್ಯೋಗಿಯಾಗಲು ಯೋಚಿಸಲಿಲ್ಲ. ವಿದ್ಯಾರ್ಥಿ ಆಗಿರುವಾಗ, ಶಿಕ್ಷಣ ಮುಗಿಸಿದ ನಂತರ ಬೂಸಾ ಚಳವಳಿ ಹಾಗೂ ನಂತರದ ದಲಿತ ಚಳವಳಿಯ ಪ್ರೇರಣೆಗೆ ಒಳಗಾದ ಇವರ ಆದ್ಯತೆಗಳೇ ಬದಲಾದವು. ಕೌಟುಂಬಿಕ ಭಾರ, ತಮ್ಮ ಬದುಕಿನ ನಿರ್ವಹಣೆ ಹಾಗೂ ಸಮುದಾಯದ ಸೇವೆಯಂತಹ ಜವಾಬ್ದಾರಿಗಳನ್ನು ತೂಗಿಸುವುದು ಅವರ ಬದುಕನ್ನು ಇನ್ನೊಂದು ಮಗ್ಗುಲಿಗೆ ಬದಲಿಸಿತು. ಹಾಗಾಗಿ ಮದುವೆಯಾಗದೆ ಉಳಿಯುವಂತಾಯಿತು.

ಆರಂಭದಲ್ಲಿ ಜಯಣ್ಣ ಸಮುದಾಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಡೆಸುತ್ತಿದ್ದರು. ಉಳುವವನೇ ಭೂಮಿ ಒಡೆಯ ಎಂಬ ಕಾಯ್ದೆ ಬಂದಾಗ ತಮ್ಮ ಊರು ಮತ್ತು ತಿಳಿದವರಿಗೆಲ್ಲ ಅದು ದಕ್ಕುವಂತೆ ಕೆಲಸ ಮಾಡುವ ಮೂಲಕ ಜನಸೇವೆ ಆರಂಭಿಸಿದರು. ಒಂದು ಕಾಲಕ್ಕೆ ರಾಜಕೀಯ ಕ್ಷೇತ್ರದಲ್ಲಿ ಜಯಣ್ಣರ ಬಗ್ಗೆ ಅನುಕಂಪದ ಜನಾಭಿಪ್ರಾಯಗಳು ಜನಜನಿತವಾಗಿದ್ದವು. ಜಯಣ್ಣ ತುಂಬ ಸರಳ ವ್ಯಕ್ತಿ, ರಾಜಕಾರಣದಲ್ಲಿ ನೆಲೆ ಕಾಣಲಾಗದೆ, ಬಿಡಲೂ ಆಗದೆ ಕಷ್ಟದಲ್ಲಿದ್ದರು.  ಊಟ, ತಿಂಡಿಗೂ ಸಮಸ್ಯೆ, ಲಾಡ್ಜ್‌ಗಳಲ್ಲಿ, ಐಬಿಗಳಲ್ಲಿ ಮಲಗುತ್ತ ಸ್ನೇಹಿತರನ್ನು ಆಶ್ರಯಿಸಿ ರಾಜಕೀಯ ಅಸ್ತಿತ್ವಕ್ಕೆ ಹೆಣಗುತ್ತಿದ್ದರು. ಅವರಿಗೆ ಒಂದು ಅವಕಾಶ ಕೊಡಬೇಕು. ಹೀಗೆಲ್ಲ ಕ್ಷೇತ್ರದ ಜನರಲ್ಲಿ ಮತ್ತು ರಾಜಕೀಯ ಪಕ್ಷ ಮತ್ತು ರಾಜಕಾರಣಿಗಳಲ್ಲಿ ಅವರ ಬಗ್ಗೆ ಅನುಕಂಪವಿತ್ತು. ಜಯಣ್ಣರ ಆರಂಭದ ದಿನಗಳು ಹೀಗೆಯೇ ಇದ್ದವು.

ಮೈಸೂರು, ಚಾಮರಾಜನಗರ ಪರಿಸರದ ಮೀಸಲು ಕ್ಷೇತ್ರಗಳ ಅಭ್ಯರ್ಥಿಗಳಲ್ಲಿ ಜಯಣ್ಣ ಸೋತು ಗೆದ್ದವರು. ಅವರು ಅದೃಷ್ಟವಂತರೂ ಹೌದು, ಹಾಗೆಯೇ ದುರದೃಷ್ಟವಂತರೂ ಹೌದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾಗಿದ್ದು, ಸ್ವತಃ ಸಿದ್ದರಾಮಯ್ಯ ಅವರೇ ಹೇಳಿಕೊಂಡಿರುವಂತೆ ನಂಬಿಕಸ್ಥರಾಗಿದ್ದೇ ಜಯಣ್ಣರ ದೊಡ್ಡ ಪ್ಲಸ್ ಪಾಯಿಂಟ್. ವಿದ್ಯಾರ್ಥಿ ದಿಸೆಯಿಂದ ಹಿಡಿದು ೨ ಬಾರಿ ಶಾಸಕರಾಗಿ ಸಿದ್ದರಾಮಯ್ಯರ ಕಟ್ಟಾ ಬೆಂಬಲಿಗರಾಗಿದ್ದು, ಅವರಿಗೆ ಎಲ್ಲವೂ ಸಿಗುವಂತಹ ಅವಕಾಶ ದಕ್ಕಿತ್ತು. ಅವರ ಅಽಕಾರದ ಅವಽಯಲ್ಲಿ ಸಾಕಷ್ಟು ಅನುದಾನ ಪಡೆಯುತ್ತಿದ್ದರು. ಕಳೆದ ಚುನಾವಣೆಯಲ್ಲಿ ಟಿಕೆಟ್ ಬಿಟ್ಟುಕೊಟ್ಟ ಕಾರಣಕ್ಕಾಗಿ ಸಚಿವ ಸಂಪುಟ ದರ್ಜೆಯ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನದ ಅಧಿಕಾರವೂ ದೊರೆತ್ತಿತ್ತು. ಅವರು ಸಚಿವರಿಗೆ ಸಮನಾದ ಸ್ಥಾನದಲ್ಲಿದ್ದು ಕಾಲವಾದವರು, ಸಕಲ ಸರ್ಕಾರಿ ಗೌರವ ವಂದನೆ ಪಡೆದ ಯೋಗ ಅವರ ಪಾಲಿಗಿದೆ. ಹಾಗಾಗಿ ಒಂದು ಕಡೆ ಅದೃಷ್ಟವಂತರಾದರೆ ಮತ್ತೊಂದು ಕಡೆ ಪೂರ್ಣ ಅಽಕಾರವನ್ನು, ಹೊಸ ಮನೆ ವಾಸವನ್ನು ಅನುಭವಿಸಲಾಗದ ದುರದೃಷ್ಟವಂತರೂ ಕೂಡ.

ಜಯಣ್ಣ ಕೊಳ್ಳೇಗಾಲ ಕ್ಷೇತ್ರದಲ್ಲಿ ತಮ್ಮದೇ ರಾಜಕೀಯ ಛಾಪನ್ನು ಮೂಡಿಸಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದವರು. ಉಪ ವಿಭಾಗ ಆಸ್ಪತ್ರೆ, ಮಿನಿ ವಿಧಾನ ಸೌಧ, ಬಸ್ ನಿಲ್ದಾಣ, ದ್ವಿಪಥ ರಸ್ತೆ, ಜೆಎಸ್‌ಎಸ್ ಕಾಲೇಜು ಸೇತುವೆ, ಅಂಬೇಡ್ಕರ್ ವೃತ್ತ ಘೋಷಣೆಯಂತಹ ಯೋಜನೆಗಳ ಮೂಲಕ ಇವರು ಕ್ಷೇತ್ರದಲ್ಲಿ ನೆನಪಿನಲ್ಲಿ ಉಳಿಯುತ್ತಾರೆ ಎಂಬ ಅಭಿಪ್ರಾಯವಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಟೇಪ್ ಕತ್ತರಿಸುವ ಹಾಗೂ ನಾಮಫಲಕ ಅನಾವರಣ ಮಾಡಿಸುವ ಮೂಲಕ ಒಂದು ರೀತಿ ತಮ್ಮ ಹೊಸ ಮನೆ ಗೃಹ ಪ್ರವೇಶ ಮಾಡಿಸಿದ ತೃಪ್ತಿ ಮತ್ತು ಸಂತೋಷ ಜಯಣ್ಣ ಅವರಿಗೆ ಇತ್ತು. ಸಿದ್ದರಾಮಯ್ಯ ಅವರು ಆಗ ಒಂದು ಮಾತು ಹೇಳಿದ್ದರು. ‘ಬುದ್ಧ ಮೂರ್ತಿ ಕೂರಿಸಿ ಪೂಜಿಸುವುದಷ್ಟೇ ಅಲ್ಲ ಜಯಣ್ಣ ಬುದ್ಧ ಮತಕ್ಕೆ ಸೇರಬೇಕು’ ಎಂದು ಹೇಳಿದ್ದರು. ಜಯಣ್ಣ ತಮ್ಮಇತ್ತೀಚಿನ ದಿನಗಳಲ್ಲಿ ಬೌದ್ದಧರ್ಮದ ಬಗ್ಗೆ ಒಲವು ಹೊಂದಿದ್ದರು. ಅವರ ಆಪ್ತರಾದ ಕೆಂಪನಪಾಳ್ಯ ಉದಯ ಶಂಕರ್ ಹೇಳುವಂತೆ ಜಯಣ್ಣರಿಗೆ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಹಾಗೂ ಕೊಳ್ಳೇಗಾಲದಲ್ಲಿ ಒಂದು ಬೌದ್ಧ ವಿಹಾರ ನಿರ್ಮಿಸುವ ಕನಸಿತ್ತು. ಪ್ರಾಥಮಿಕ ಶಿಕ್ಷಣ ನೀಡುವ ಮೂಲಕ ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಬೌದ್ಧ ಸಂಸ್ಕೃತಿಯನ್ನು ಹೇಳುತ್ತ ಬೌದ್ಧ ಧಮ್ಮವನ್ನು ಬೆಳೆಸಬೇಕೆಂಬುದು ಜಯಣ್ಣರ ನಿಲುವಾಗಿತ್ತು ಎನ್ನಲಾಗಿದೆ. ದಲಿತರ ಆರ್ಥಿಕ ಸಬಲೀಕರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನವನ್ನು ಬಳಸಿಕೊಂಡು ಸಹಕಾರ ಸಂಘಗಳನ್ನು ಸ್ಥಾಪಿಸಬೇಕು ಎಂಬ ಹೇಳುತ್ತಿದ್ದರು.

ಮೀಸಲು ಕ್ಷೇತ್ರದ ದಲಿತ ರಾಜಕಾರಣಕ್ಕೆ ಬೇಕಾದಂತೆ ಜಯಣ್ಣ ತಮ್ಮನ್ನು ರೂಪಿಸಿಕೊಂಡು ರಾಜಕಾರಣದಲ್ಲಿ ಸಫಲತೆ ಕಂಡವರು. ಮಾಂಬಳ್ಳಿಯವರೇ ಆದ ಸಿದ್ದಮಾದಯ್ಯ, ಕೆಸ್ತೂರಿನ ಬಿ.ಬಸವಯ್ಯ ಹಾಗೂ ಬಿ.ರಾಚಯ್ಯ ಅವರಂತಹ ಹಿರಿಯ ದಲಿತ ರಾಜಕಾರಣದ ಕೊಂಡಿಯಂತೆ ಜಯಣ್ಣ ಕಾಣುತ್ತಾರೆ. ದಲಿತ ಸಾಹಿತ್ಯ ಮತ್ತು ಚಳವಳಿಯ ಪ್ರಮುಖರ ಒಡನಾಟ ಇವರಿಗಿತ್ತು. ದೇವನೂರ ಮಹಾದೇವ, ಡಾ.ಸಿದ್ದಲಿಂಗಯ್ಯ, ಬಸವರಾಜು ದೇವನೂರು, ಡಾ.ಎಸ್.ತುಕಾರಾಂ, ಬೌದ್ಧ ಗುರು ಮನೋರಖ್ಖಿತ ಬಂತೇಜಿ ಮೊದಲಾದವರ ಸಖ್ಯದಲ್ಲಿದ್ದರು.

ವಿದ್ಯಾರ್ಥಿ ದಿಸೆಯಿಂದ ಹಿಡಿದು ೨ ಬಾರಿ ಶಾಸಕರಾಗಿ ಸಿದ್ದರಾಮಯ್ಯರ ಕಟ್ಟಾ ಬೆಂಬಲಿಗರಾಗಿದ್ದು, ಅವರಿಗೆ ಎಲ್ಲವೂ ಸಿಗುವಂತಹ ಅವಕಾಶ ದಕ್ಕಿತ್ತು. ಅವರ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅನುದಾನ ಪಡೆಯುತ್ತಿದ್ದರು. ಕಳೆದ ಚುನಾವಣೆಯಲ್ಲಿ ಟಿಕೆಟ್ ಬಿಟ್ಟುಕೊಟ್ಟ ಕಾರಣಕ್ಕಾಗಿ ಸಚಿವ ಸಂಪುಟ ದರ್ಜೆಯ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನದ ಅಧಿಕಾರವೂ ದೊರೆತಿತ್ತು. ಅವರು ಸಚಿವರಿಗೆ ಸಮನಾದ ಸ್ಥಾನದಲ್ಲಿದ್ದು ಕಾಲವಾದವರು, ಸಕಲ ಸರ್ಕಾರಿ ಗೌರವ ವಂದನೆ ಪಡೆದ ಯೋಗ ಅವರ ಪಾಲಿಗಿದೆ.

Tags:
error: Content is protected !!