Mysore
27
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಮಡಿಕೇರಿ: ಪ್ರವಾಸಿಗರಿಗೆ ಲಭ್ಯವಾಗದ ಕೂರ್ಗ್ ವಿಲೇಜ್

ಪ್ರವಾಸೋದ್ಯಮ ಇಲಾಖೆಯಿಂದ ೯೮.೫೦ P ರೂ. ವೆಚ್ಚದಲ್ಲಿ ಅಭಿವೃದ್ಧಿ; ಮಾಹಿತಿ ಕೊರತೆಯಿಂದ ಪಾಳುಬಿದ್ದ ಪ್ರವಾಸಿ ತಾಣ

ಮಡಿಕೇರಿ: ನಗರದ ಹೃದಯ ಭಾಗದಲ್ಲಿರುವ ಕೂರ್ಗ್ ವಿಲೇಜ್‌ನ ಕಾಮಗಾರಿ ಪೂರ್ಣಗೊಂಡು ೪ ವರ್ಷಗಳು ಕಳೆದರೂ ಸಾರ್ವಜನಿಕರು ಹಾಗೂ ಪ್ರವಾಸಿಗರ ಬಳಕೆಗೆ ಲಭ್ಯವಾಗಿಲ್ಲ.

ಮಡಿಕೇರಿಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ರಾಜಾಸೀಟ್‌ಗೆ ಹೊಂದಿಕೊಂಡಂತೆ ಇರುವ ಸ್ಥಳದಲ್ಲಿ ನಿರ್ಮಾಣವಾಗಿರುವ ಕೂರ್ಗ್ ವಿಜೇಜ್ ಪ್ರವಾಸಿ ಯೋಜನೆ ೨೦೧೯ರಲ್ಲಿ ಆರಂಭವಾಗಿದ್ದು, ೨೦೨೦ಕ್ಕೆ ಯೋಜನೆಯ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಈ ಸ್ಥಳವನ್ನು ಬಳಕೆಗೆ ನೀಡಲು ತೋಟಗಾರಿಕೆ ಇಲಾಖೆ ಸಿದ್ಧವಿದ್ದರೂ ಪ್ರವಾಸಿಗರು ಭೇಟಿ ನೀಡುತ್ತಿಲ್ಲ ಎಂಬ ತಲೆನೋವು ಕಾಡುತ್ತಿದೆ.

ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಅನೀಸ್ ಕಣ್ಮಣಿ ಜಾಯ್ ಅವರ ಕಾಳಜಿಯೊಂದಿಗೆ ಕೂರ್ಗ್ ವಿಲೇಜ್ ರೂಪುಗೊಂಡಿದ್ದು, ಈ ಯೋಜನೆಯನ್ವಯ ಕೆಲವು ಅಂಗಡಿ ಮಳಿಗೆಗಳನ್ನು ನಿರ್ಮಿಸಿ ಮಳಿಗೆಗಳಲ್ಲಿ ಕೊಡಗಿನ ಗೃಹ ಕೈಗಾರಿಕೆ ತಯಾರಿಕಾ ವಸ್ತುಗಳನ್ನು ಕೈಗೆಟುಕುವ ದರದಲ್ಲಿ ಮಾರಾಟ ಮಾಡುವ ಉzಶ ಹೊಂದಲಾಗಿತ್ತು. ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನು ಆಕರ್ಷಿಸುವ ದಿಸೆಯಲ್ಲಿ ಕೂರ್ಗ್ ವಿಲೇಜ್ ರೂಪುಗೊಂಡಿತ್ತು.

ರಾಜಾಸೀಟ್‌ಗೆ ಆಗಮಿಸುವ ಪ್ರವಾಸಿಗರು ಕೂರ್ಗ್ ವಿಲೇಜ್‌ಗೂ ಭೇಟಿ ನೀಡಬಹುದು ಎಂಬ ಆಶಯವೂ ಇತ್ತು. ಆದರೆ, ರಾಜಾಸೀಟ್ ಗೆ ಭೇಟಿ ನೀಡಿದ ಪ್ರವಾಸಿಗರು ಮಾಹಿತಿ ಕೊರತೆಯಿಂದ ರಾಜಾಸೀಟ್ ಸುತ್ತಿ ಅತ್ತಕಡೆಯಿಂದಲೇ ಹಿಂದಿರುಗುತ್ತಿದ್ದಾರೆ.

ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಯಿಂದ ೯೮.೫೦ ಲಕ್ಷ ರೂ. ವೆಚ್ಚದಲ್ಲಿ ಕೂರ್ಗ್ ವಿಲೇಜ್ ನಿರ್ಮಾಣಗೊಂಡಿದೆ. ಸುಮಾರು ಒಂದು ಎಕರೆ ಪ್ರದೇಶದಲ್ಲಿ ಯೋಜನೆ ತಲೆ ಎತ್ತಿದ್ದು, ಕೊಡಗು ನಿರ್ಮಿತಿ ಕೇಂದ್ರ ಕಾಮಗಾರಿ ನಿರ್ವಹಿಸಿತ್ತು. ಜಿಲ್ಲಾಡಳಿತದ ಪರಿಕಲ್ಪನೆಯಂತೆ ಉತ್ತಮವಾಗಿ ಪ್ರವಾಸಿತಾಣ ರೂಪುಗೊಂಡಿದೆ. ಇದೇ ರೀತಿ ಪಾಳು ಬಿಟ್ಟರೆ ಲಕ್ಷಾಂತರ ರೂ. ವ್ಯಯವಾಗಲಿದೆ. ಆದ್ದರಿಂದ ಇದನ್ನು ಶೀಘ್ರವಾಗಿ ಪ್ರವಾಸಿಗರ ಬಳಕೆ ಲಭ್ಯವಾಗುವಂತೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಕೂರ್ಗ್ ವಿಲೇಜ್‌ನಲ್ಲಿರುವ ೧೫ ಮಳಿಗೆ ಗಳನ್ನು ಈ ಹಿಂದೆ ಹಂಚಿಕೆ ಮಾಡಲಾಗಿತ್ತು. ತೋಟಗಾರಿಕಾ ಇಲಾಖೆಗೆ ೪, ಪ್ರವಾಸೋದ್ಯಮ ಇಲಾಖೆಗೆ ೧, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ೩, ತಾಲ್ಲೂಕು ಪಂಚಾಯಿತಿಗೆ ೨, ಗಿರಿಜನ ಕಲ್ಯಾಣ ಇಲಾಖೆಗೆ ೨, ಖಾದಿ ಹಾಗೂ ಗ್ರಾಮೋದ್ಯೋಗ ಇಲಾಖೆಗೆ ೧, ಕಾಫಿ ಮಂಡಳಿ ಹಾಗೂ ನಗರಸಭೆಗೆ ತಲಾ ಒಂದೊಂದು ಮಳಿಗೆಯನ್ನು ನೀಡಲಾಗಿತ್ತು. ತೋಟಗಾ ರಿಕೆ ಇಲಾಖೆಯಡಿ ಮಳಿಗೆಗಳು ನಿರ್ವಹಿಸಲ್ಪಡುತ್ತಿದ್ದವು. ಆದರೆ, ಆರಂಭಗೊಂಡ ಕೆಲವೇ ದಿನಗಳಲ್ಲಿ ಪ್ರವಾಸಿಗರು ಭೇಟಿ ನೀಡದ ಪರಿಣಾಮ ಮಳಿಗೆಗಳನ್ನು ಮುಚ್ಚಲಾಗಿದೆ. ಅಲ್ಲದೇ, ಹೂ ಕುಂಡಗಳು ಒಡೆದು ಹಾಳಾಗಿವೆ. ಕೂರ್ಗ್ ವಿಲೇಜ ಆವರಣದಲ್ಲಿ ಆಕರ್ಷಣೆಯ ನೀರಿನ ಕೊಳವೊಂದಿದ್ದು, ಕೊಳದ ಸುತ್ತಲೂ ಕಬ್ಬಿಣದ ಗ್ರಿಲ್ ಅಳವಡಿಸಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಕಲ್ಲು ಹಾಸು ಹಾಕಲಾಗಿದೆ. ರಾಜಾಸೀಟ್ ಹಾಗೂ ನೆಹರು ಮಂಟಪಕ್ಕೆ ಭೇಟಿ ನೀಡುವ ಪ್ರವಾಸಿಗರು ಕೂರ್ಗ್ ವಿಲೇಜ್‌ಗೆ ಬಂದರೆ ಸುಂದರ ಪರಿಸರದಲ್ಲಿ ವಿಹರಿಸಿ ಒಂದೇ ಸೂರಿನಡಿ ತಮಗೆ ಇಷ್ಟವಾದ ವಸ್ತುಗಳನ್ನು ಖರೀದಿಸಲು ಅವಕಾಶವಿತ್ತು. ಕೊಡಗಿನ ಗೃಹೋಪಯೋಗಿ ವಸ್ತುಗಳ ತಯಾರಿಕೆಯಲ್ಲಿ ತೊಡಗಿರುವ ಮಹಿಳೆಯ ರಿಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗುತ್ತಿತ್ತು. ಕೂರ್ಗ್ ವಿಲೇಜ್‌ಗೆ ಉತ್ತಮ ಪ್ರಚಾರ ನೀಡಿ, ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಆಗಿಲ್ಲ. ಕಾಫಿ ಉತ್ಸವ ಮತ್ತು ಜೇನು ಹಬ್ಬ ಇಂತಹ ಸಂದರ್ಭದಲ್ಲಿ ಕೂರ್ಗ್ ವಿಲೇಜ್ ಅನ್ನು ಬಳಸಿಕೊಳ್ಳಲು ಅವಕಾಶವಿತ್ತು. ಇಂದು ಆ ಕಾರ್ಯಕ್ರಮಗಳು ರಾಜಾಸೀಟಿಗಷ್ಟೇ ಸೀಮಿತವಾಗಿವೆ.

ಏನೇನು ಇದೆ?

ಈ ಸ್ಥಳದಲ್ಲಿರುವ ವಿಶಾಲ ತೆರೆದ ಬಾವಿಯ ಸುತ್ತ ಅಲ್ಲಲ್ಲಿ ಪುಟ್ಟ ಮಳಿಗೆಗಳು ತಲೆಯೆತ್ತಿವೆ. ಪ್ರವಾಸಿಗರಿಗೆ ಕೊಡಗಿನ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಮಾರಾಟ ವಸ್ತುಗಳು ಲಭಿಸಲಿವೆ. ವಾಯುವಿಹಾರದೊಂದಿಗೆ ಕಲ್ಲು ಬೆಂಚುಗಳಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಈ ಪ್ರದೇಶದಲ್ಲಿ ಸುರಕ್ಷತೆ ದೃಷ್ಟಿಯಿಂದ ಬ್ಯಾರಿಕೇಡ್ ಅಳವಡಿಕೆ, ಕಾಲುದಾರಿ ವ್ಯವಸ್ಥೆ, ಮೆಟ್ಟಿಲುಗಳು, ರೈಲಿಂಗ್ಸ್ ಇತ್ಯಾದಿ ಕಾಮಗಾರಿ ನಡೆದಿದೆ.

” ರಾಜಾಸೀಟ್ ಎದುರಿನ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕೂರ್ಗ್ ವಿಲೇಜ ಕಟ್ಟಡ ಇಂದು ಯಾರಿಗೂ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದೆ. ಪ್ರವಾಸಿಗರನ್ನು ಗಮನದಲ್ಲಿಟ್ಟು ತೋಟಗಾರಿಕೆ ಇಲಾಖೆ ನಿರ್ಮಿಸಿದ ಮಳಿಗೆಗಳು ಉದ್ಘಾಟನೆ ಬಳಿಕ ಪ್ರಚಾರದ ಕೊರತೆಯಿಂದಾಗಿ ಬೀಗ ಬಿದ್ದಿದ್ದು, ಮೌನಕ್ಕೆ ಜಾರಿದೆ. ಇದರಿಂದಾಗಿ ಸಾರ್ವಜನಿಕರ ಹಣವನ್ನು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಈ ತಾಣಕ್ಕೆ ಮತ್ತೆ ಜೀವ ಕಳೆ ತುಂಬುವ ಕೆಲಸ ಮಾಡಬೇಕಾಗಿದೆ.”

-ಜೆ.ರವಿಗೌಡ, ಅಧ್ಯಕ್ಷರು, ಕೊಡಗು ಹಿತರಕ್ಷಣಾ ವೇದಿಕೆ

” ಕೂರ್ಗ್ ವಿಲೇಜ್ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಪ್ರವಾಸಿಗರು ಭೇಟಿ ನೀಡದ ಪರಿಣಾಮ ಕೂರ್ಗ್ ವಿಲೇಜ್ ಮಳಿಗೆಗಳಲ್ಲಿ ವ್ಯಾಪಾರವಿಲ್ಲ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಬಾರದೆ ಮುಚ್ಚಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ರಾಜಾಸೀಟ್‌ಗೆ ಬರುವ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ.”

-ಯೋಗೇಶ್, ಉಪ ನಿರ್ದೇಶಕರು, ತೋಟಗಾರಿಕಾ ಇಲಾಖೆ 

Tags:
error: Content is protected !!