ಪುನೀತ್ ರಾಜಕುಮಾರ್ ಅಭಿನಯದಲ್ಲಿ ದಿನಕರ್ ತೂಗುದೀಪವೊಂದು ಚಿತ್ರವೊಂದನ್ನು ನಿರ್ದೇಶಿಸಬೇಕಿತ್ತು. ಜಯಣ್ಣ ಫಿಲಂಸ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸಬೇಕಿತ್ತು. ಈ ಚಿತ್ರದ ಘೋಷಣೆ ಸಹ ಆಗಿತ್ತು. ಆದರೆ, ಅಷ್ಟರಲ್ಲಿ ಪುನೀತ್ ರಾಜಕುಮಾರ್ ನಿಧನರಾದ್ದರಿಂದ, ಚಿತ್ರ ರದ್ದಾಯಿತು. ಈಗ ದಿನಕರ್, ವಿರಾಟ್ ಅಭಿನಯದಲ್ಲಿ ‘ರಾಯಲ್’ ಎಂಬ ಚಿತ್ರವನ್ನು ನಿರ್ದೇಶಿಸಿದ್ದು, ಈ ಚಿತ್ರವು ಜನವರಿ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ದಿನಕರ್ ನಿರ್ದೇಶನದ ಚಿತ್ರವೊಂದು ಸುಮಾರು ಆರು ವರ್ಷಗಳ ನಂತರ ಬಿಡುಗಡೆಯಾಗುತ್ತಿದೆ. 2018ರಲ್ಲಿ ದಿನಕರ್ ತೂಗುದೀಪ ನಿರ್ದೇಶನದ ‘ಲೈಫ್ ಜೊತೆಗೆ ಒಂದ್ ಸೆಲ್ಫಿ’ ಚಿತ್ರ ಬಿಡುಗಡೆಯಾಗಿತ್ತು. ಪ್ರಜ್ವಲ್ ದೇವರಾಜ್, ಹರಿಪ್ರಿಯಾ, ಪ್ರೇಮ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು.
ಆ ನಂತರ ದಿನಕರ್, ಪುನೀತ್ ರಾಜಕುಮಾರ್ ಅಭಿನಯದಲ್ಲಿ ಚಿತ್ರ ನಿರ್ದೇಶಿಸಬೇಕಿತ್ತು. ಆದರೆ, ಅದು ರದ್ದಾಯಿತು. ಈ ಮಧ್ಯೆ, ಜಯಣ್ಣ ಫಿಲಂಸ್ ಬಳಿ ನಟ ವಿರಾಟ್ ಹಾಗೂ ದಿನಕರ್ ತೂಗುದೀಪ ಇಬ್ಬರ ಕಾಲ್‍ಶೀಟ್ ಇತ್ತು. ಹಾಗಾಗಿ, ಈ ಮೂವರು ಸೇರಿ ‘ರಾಯಲ್’ ಚಿತ್ರವನ್ನು ರೂಪಿಸಿದ್ದಾರೆ. ಚಿತ್ರದ ಚಿತ್ರೀಕರಣ ಎರಡೂವರೆ ವರ್ಷಗಳ ಹಿಂದೆಯೇ ಪ್ರಾರಂಭಾಗಿದ್ದು, ಈಗ ಕೊನೆಗೂ ಸಂಪೂರ್ಣವಾಗಿದೆ.
‘ರಾಯಲ್’ ಚಿತ್ರದಲ್ಲಿ ವಿರಾಟ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎ.ಪಿ. ಅರ್ಜುನ್ ನಿರ್ದೇಶದ ‘ಕಿಸ್’ ಮೂಲಕ ಚಿತ್ರರಂಗಕ್ಕೆ ಬಂದ ವಿರಾಟ್‍ಗಿದು ಎರಡನೇ ಚಿತ್ರ. ವಿರಾಟ್ ಜೊತೆಗೆ ಜಯಣ್ಣ ಮೂರು ಚಿತ್ರಗಳನ್ನು ನಿರ್ಮಿಸುತ್ತಿರುವ ಸುದ್ದಿ ಇದ್ದು, ಈ ಪೈಕಿ ‘ರಾಯಲ್’ ಮೊದಲ ಚಿತ್ರವಾಗಿದೆ. ಮುಂದಿನ ದಿನಗಳಲ್ಲಿ ಇನ್ನೆರಡು ಚಿತ್ರಗಳು ಬರುವ ಸಾಧ್ಯತೆ ಇದೆ.
ವಿರಾಟ್‍ಗೆ ನಾಯಕಿಯಾಗಿ ಸಂಜನಾ ಆನಂದ್ ಕಾಣಿಸಿಕೊಳ್ಳುತ್ತಿದ್ದು, ಮಿಕ್ಕಂತೆ ರಘು ಮುಖರ್ಜಿ, ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಮತ್ತು ಸಂಕೇತ್ ಅವರ ಛಾಯಾಗ್ರಹಣವಿದೆ.
2006ರಲ್ಲಿ ‘ಜೊತೆ ಜೊತೆಯಲಿ’ ಮೂಲಕ ನಿರ್ದೇಶಕರಾದ ದಿನಕರ್ ಕಳೆದ 18 ವರ್ಷಗಲ್ಲಿ ನಿರ್ದೇಶಿಸಿದ್ದು ಕೇವಲ ಐದು ಚಿತ್ರಗಳು. ಈ ಪೈಕಿ ನಾಲ್ಕು ಚಿತ್ರಗಳು ಬಿಡುಗಡೆಯಾಗಿದ್ದು, ಅವರ ಐದನೇ ಚಿತ್ರ ಜನವರಿ 24ಕ್ಕೆ ಬಿಡುಗಡೆಯಾಗಲಿದೆ.