Mysore
26
broken clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಕಾಂಗ್ರೆಸ್‌ ಸರ್ಕಾರ ಸುಳ್ಳುಗಳಿಂದಲೇ ನಾಶವಾಗಲಿದೆ: ಬಿಜೆಪಿ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಸುಳ್ಳುಗಳ ಪರದೆ ಕುಸಿಯುತ್ತಲಿದ್ದು, ಮುಂದೊಂದು ದಿನ ಸುಳ್ಳಿಗಳಿಂದಲೇ ಸಂಪೂರ್ಣ ನಾಶವಾಗಲಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪಕ್ಷ ವಾಗ್ದಾಳಿ ನಡೆಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮವಾದ ತಮ್ಮ ಎಕ್ಸ್‌ ಖಾತೆಯಲ್ಲಿ ಬಿಜೆಪಿಯೂ ಪೋಸ್ಟ್‌ ಮಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ತನ್ನ ರಾಜಕೀಯ‌ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್‌ ಸರ್ಕಾರ ಬಳಸಿಕೊಂಡಿತ್ತು. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಡಿಗೆ – ಕೃಷ್ಣೆಯ ಕಡೆಗೆ ಎಂಬ ಪಾದಯಾತ್ರೆ ಹಮ್ಮಿಕೊಂಡು ಜನರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು. ಜಾಹೀರಾತುಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರು ಮಾತ್ರ ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಅಕ್ಷರಶಃ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಕಿಡಿಕಾರಿದೆ.

ಅಂದು ಕೃಷ್ಣೆಯ ಕಡೆಗೆ – ನಮ್ಮ ನಡಿಗೆ‌ ಹೋರಾಟ ಕೈಗೊಂಡು ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸಲು ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದ್ದರು. ಅಂದರೆ ಅವರ ಪ್ರಕಾರ ಐದು ವರ್ಷದಲ್ಲಿ ಐವತ್ತು ಸಾವಿರ ಕೋಟಿ ನೀಡುವ ವಾಗ್ದಾನವದು. ಕೃಷ್ಣಾ ಮೇಲ್ದಂಡೆಗೆ ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ಅಸಾಧ್ಯ ಎಂದು ಪತ್ರಿಕೆಗಳು ಅಂದೇ ಬರೆದಿದ್ದವು. ಆದರೆ ಕೂಡಲಸಂಗಮದಲ್ಲಿ ನಿಂತು ಭಾಷಣ ಮಾಡುವಾಗ ಸಿದ್ದರಾಮಯ್ಯ ಅವರು ಮಾಧ್ಯಮಗಳನ್ನೇ ತರಾಟೆಗೆ ತೆಗೆದುಕೊಂಡು ಅನುದಾನ ನೀಡಲು ಸಾಧ್ಯವಿದೆ ಎಂದಿದ್ದರು‌. ಆದರೆ, ಅಧಿಕಾರಕ್ಕೆ ಬಂದ ಬಳಿಕ ಕೃಷ್ಣೆಯನ್ನೇ ಮರೆತಿದ್ದಾರೆ ಎಂದು ಟೀಕಿಸಿದೆ.

ನಾವು ಅಧಿಕಾರಕ್ಕೆ ಬಂದರೆ ಪ್ರತೀ ವರ್ಷ ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟು ಐದು ವರ್ಷಗಳಲ್ಲಿ 50 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಕೂಡಲ ಸಂಗಮನಾಥನ ಮೇಲೆ ಆಣೆ ಪ್ರಮಾಣ ಮಾಡಿ ಕಾಯಿಕಟ್ಟಿ ಕಾಂಗ್ರೆಸ್ ನಾಯಕರು ಪ್ರಮಾಣ ಮಾಡಿದ್ದರು. ಅಲ್ಲದೇ ಇಳಕಲ್ ನಗರಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಸಹ ಕೃಷ್ಣೆಗಾಗಿ 50 ಸಾವಿರ ಕೋಟಿ ವ್ಯಯ ಮಾಡುವ ಬದ್ಧತೆ ಪ್ರಕಟಿಸಿದ್ದರು. ಆದರೆ ಇಂದು ಅಧಿಕಾರ ಸಿಗುತ್ತಿದ್ದಂತೆ ಯೂಟರ್ನ್ ಹೊಡೆದಿದ್ದಾರೆ ಎಂದು ಆರೋಪಿಸಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ 50 ಸಾವಿರ ಕೋಟಿ ನೀಡುವುದಾಗಿ ಹೇಳಿದ್ದೆವು. ಕೃಷ್ಣಾ ಯೋಜನೆಯೊಂದಕ್ಕೆ ಹೇಳಿದ್ದಲ್ಲ ಎಂದು ತಮ್ಮ ಹೇಳಿಕೆಯನ್ನೇ ಸಿದ್ದರಾಮಯ್ಯ ತಿರುಚಿದ್ದರು. ನುಡಿದಂತೆ ನಡೆದಿದ್ದೇವೆ ಎನ್ನುವುದು ಕಾಂಗ್ರೆಸ್ಸಿನ ಟ್ಯಾಗ್‌ ಲೈನ್‌ ಅಷ್ಟೇ ಬಿಟ್ಟರೆ ಅಲ್ಲಿ ನಿಜಾಂಶ ಇಲ್ಲವೇ ಇಲ್ಲ. ಗ್ಯಾರಂಟಿ ಯೋಜನೆಗಳಲ್ಲೂ ಷರತ್ತುಗಳನ್ನು ಹಾಕಿ ಯೋಜನೆಗಳನ್ನು ಸೀಮಿತಗೊಳಿಸಿ ನುಡಿದಂತೆ ನಡೆದಿದ್ದೇವೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Tags:
error: Content is protected !!