Mysore
27
few clouds

Social Media

ಸೋಮವಾರ, 02 ಫೆಬ್ರವರಿ 2026
Light
Dark

ಪಂಚಮಸಾಲಿ ಶ್ರೀಗಳು, ಮುಖಂಡರ ಮೇಲೆ ಲಾಠಿ ಪ್ರಹಾರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಕಿಡಿ

ನವದೆಹಲಿ: ಬೆಳಗಾವಿಯಲ್ಲಿ ಸುವರ್ಣಸೌಧ ಬಳಿ ಪ್ರತಿಭಟನೆ ನಡೆಸಲು ಬಂದ ಪಂಚಮಸಾಲಿ ಸಮುದಾಯದ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ಹಾಗೂ ಮುಖಂಡರ ಮೇಲೆ ಲಾಠಿ ಪ್ರಹಾರ ನಡೆಸಿರುವುದಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಪಂಚಮಸಾಲಿ ಬಂಧುಗಳ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಅಡಾಲ್ಫ್ ಹಿಟ್ಲರ್ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ. ಸಂತರು, ಪಂಚಮಸಾಲಿ ಸಮುದಾಯ ಜಗದ್ಗುರುಗಳಾದ ಶ್ರೀ ಶ್ರೀ ಬಸವ ಮೃತ್ಯುಂಜಯ ಮಹಾಸ್ವಾಮೀಜಿಗಳನ್ನು ಅತ್ಯಂತ ಹೇಯವಾಗಿ ನಡೆಸಿಕೊಂಡಿರುವುದು ನನಗೆ ಅತೀವ ನೋವುಂಟು ಮಾಡಿದೆ. ಇದು ಶಿಲಾಯುಗ ಕಾಲದ ಮನಃಸ್ಥಿತಿಯ ಸರಕಾರ ಎಂದು ಕಿಡಿಕಾರಿದ್ದಾರೆ.

ತಮ್ಮ ಬೇಡಿಕೆಗಳ ಬಗ್ಗೆ ಪೂಜ್ಯ ಸ್ವಾಮೀಜಿ ಅವರು, ಸಮುದಾಯದ ಪ್ರಮುಖರು ನಿರಂತರವಾಗಿ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದ್ದರು. ಆದರೂ ಸರಕಾರ ಕಿವುಡಾಗಿತ್ತು. ನಿರ್ಲಕ್ಷ್ಯ ವಹಿಸಿತ್ತು. ಶಾಂತಿಯುತವಾಗಿ ಪ್ರತಿಭಟಿಸಲು ಬಂದ ಸ್ವಾಮೀಜಿಗಳು, ಸಮುದಾಯದ ನಾಯಕರು, ಜನತೆಯ ಮೇಲೆ ದಬ್ಬಾಳಿಕೆ ನಡೆಸಿ ಪೊಲೀಸ್ ವಶಕ್ಕೆ ತೆಗೆದುಕೊಂಡ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರವೇ ಶಾಂತಿ ಕದಡುವ ಪ್ರಯತ್ನ ಮಾಡಿದರೆ ಅದಕ್ಕೆ ಸರ್ಕಾರವೇ ಪೂರ್ಣ ಹೊಣೆ. ಕೂಡಲೇ ಪೂಜ್ಯ ಸ್ವಾಮೀಜಿ ಅವರ ಹಾಗೂ ಸಮುದಾಯದ ಕ್ಷಮೆ ಕೇಳಬೇಕು ಹಾಗೂ ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ತುರ್ತು ಕ್ರಮ ವಹಿಸಬೇಕು ಎಂದಿರುವ ಅವರು, ಸಿದ್ದರಾಮಯ್ಯ ಅವರನ್ನು ಸರ್ವಾಧಿಕಾರಿ ಎಂದು ಕರೆದು, ಸರ್ಕಾರವನ್ನು ತುಘಲಕ್ ಸರ್ಕಾರ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Tags:
error: Content is protected !!