ಬೆಳಗಾವಿ: ಬ್ರಿಟಿಷರ ಕಾಲದಲ್ಲಿ ಕೊಡಗು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ 9 ಕಂಪನಿಗಳಿಗೆ ಗುತ್ತಿಗೆ ನೀಡಿದ್ದ ಅರಣ್ಯ ಭೂಮಿಯನ್ನು ವಶಕ್ಕೆ ಪಡೆಯಲು ಸರ್ಕಾರ ಮುಂದಾಗಿದೆ.
ಒಟ್ಟು 5,150 ಎಕರೆ ಅರಣ್ಯ ಭೂಮಿಯನ್ನು ಮರು ವಶಕ್ಕೆ ಪಡೆಯಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಸಚಿವರು, ಕೊಡಗು, ಚಾಮರಾಜನಗದರಲ್ಲಿ ಒಟ್ಟು 5150 ಎಕರೆ ಜಮೀನನ್ನು ಗುತ್ತಿಗೆ ನೀಡಲಾಗಿದೆ ಎಂದು ವಿವರಣೆ ನೀಡಿದರು.
ಯಾವ ಕಂಪನಿಗಳು ಕೂಡ ಹಲವು ದಶಕಗಳಿಂದ ಗುತ್ತಿಗೆ ಹಣವನ್ನು ಪಾವತಿಸಿಲ್ಲ. ಈ 9 ಕಂಪನಿಗಳಿಂದ ಇಲಾಖೆಗೆ ಬಡ್ಡಿ ಮತ್ತು ದಂಡ ಸೇರಿದಂತೆ ಒಟ್ಟು 1492.18 ಕೋಟಿ ರೂ ಬರಬೇಕಿದೆ ಎಂದು ತಿಳಿಸಿದರು.
ನಾನು ಸಚಿವನಾದ ಬಳಿಕ ಗುತ್ತಿಗೆ ಅರಣ್ಯ ಭೂಮಿಯ ಮರು ವಶಕ್ಕೆ ಪಡೆಯಲು ಐದು ಜನ ಸದಸ್ಯರ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಪಡೆಯು ಅಡ್ವೊಕೇಟ್ ಜನರಲ್ ಅವರೊಂದಿಗೆ ಸಮಾಲೋಚನೆ ನಡೆಸಿ ದಾಖಲೆಗಳನ್ನು ಒಗ್ಗೂಡಿಸಿ ಭೂಮಿ ಮರಳಿ ಪಡೆಯಲು ಪ್ರಯತ್ನ ಮಾಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.