ಜಿ. ತಂಗಂ ಗೋಪಿನಾಥಂ
ಮೈಸೂರು: ಅನಾಥ ಶಿಶುಗಳ ರಕ್ಷಣೆಗೆ ಸಂಬಂಧಿಸಿದಂತೆ ಮಮತೆಯ ಮಡಿಲು ಎಂಬ ವಿಶೇಷ ಕಾರ್ಯ ಕ್ರಮವೊಂದನ್ನು ಇತ್ತೀಚೆಗೆ ಅನುಷ್ಠಾನಗೊಳಿಸಿದ್ದ ನಗರದ ಚೆಲುವಾಂಬ ಆಸ್ಪತ್ರೆಯು, ಇದೀಗ ರೋಗಿಗಳ ಉಸ್ತುವಾರಿ ಗಾಗಿ ಬರುವ ಕುಟುಂಬದ ಸದಸ್ಯರ ವಿಶ್ರಾಂತಿಗಾಗಿ ಸುಸಜ್ಜಿತ ಡಾರ್ಮೆಟರಿ (ಸಂದರ್ಶಕರ ತಂಗುದಾಣ) ನಿರ್ಮಿಸಿದ್ದು, ಅತಿ ಶೀಘ್ರದಲ್ಲೇ ಸೇವೆಗೆ ತೆರೆದುಕೊಳ್ಳಲಿದೆ.
ಮೈಸೂರಿನಲ್ಲಿ ವಿಶೇಷವಾಗಿ ತಾಯಿ ಮತ್ತು ಮಕ್ಕಳ ಆರೈಕೆಗಾಗಿಯೇ ಮೀಸಲಾಗಿರುವ ಚೆಲುವಾಂಬ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ದಾಖಲಾಗುವ ರೋಗಿ ಗಳೊಂದಿಗೆ ಬರುವ ಸಂಬಂಽಕರು ಹಗಲು ಮತ್ತು ರಾತ್ರಿ ವೇಳೆ ವಿರಮಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆಸ್ಪತ್ರೆಯ ಆವರಣದಲ್ಲಿ ಸುಸಜ್ಜಿತ ಡಾರ್ಮೆಟರಿ ಸಿದ್ಧವಾಗಿದೆ.
ಚೆಲುವಾಂಬ ಆಸ್ಪತ್ರೆ ಪಕ್ಕದಲ್ಲೇ ೬೨. ೫ ಲಕ್ಷ ರೂ. ವೆಚ್ಚದಲ್ಲಿ ಸಂದರ್ಶಕರ ತಂಗುದಾಣ ತಲೆ ಎತ್ತಿದ್ದು, ಸದ್ಯದಲ್ಲೇ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ರೋಗಿಗಳ ಬಂಧು ಗಳು ವಿರಮಿಸಲು ಸೂಕ್ತ ವ್ಯವಸ್ಥೆ ಇಲ್ಲದೇ ಉದ್ಯಾನದಲ್ಲಿ ಕಾಲ ಕಳೆಯಬೇಕಿದ್ದ ಸಂಕಷ್ಟ ದೂರಾಗಲಿದೆ.
ಚೆಲುವಾಂಬ ಆಸ್ಪತ್ರೆಗೆ ಗರ್ಭಿಣಿಯರು, ಮಕ್ಕಳನ್ನು ಒಳಗೊಂಡಂತೆ ನಿತ್ಯವೂ ೬೦ರಿಂದ ೭೦ ಮಂದಿ ಒಳ ರೋಗಿಗಳಾಗಿ ದಾಖಲಾಗುತ್ತಾರೆ. ೧೩೦ ಹಾಸಿಗೆಯ ಮಕ್ಕಳ ಆಸ್ಪತ್ರೆಯಲ್ಲಿ ಸದಾ ೧೫೦ ಮಂದಿ ಇರುತ್ತಾರೆ. ಗರ್ಭಿಣಿಯರು, ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಿಸಿ ಕೊಂಡವರ ಆರೈಕೆಗಾಗಿ ೨೯೦ ಹಾಸಿಗೆಗಳ ವ್ಯವಸ್ಥೆ ಇದೆ. ನಿತ್ಯ ೨೫-೩೦ ಹೆರಿಗೆಗಳಾಗುತ್ತವೆ. ಅಲ್ಲದೇ ೩೦೦ ರಿಂದ ೪೦೦ ಮಂದಿ ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಇಂತಹ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ಕಡೆಯವರು ವಿರಮಿಸಲು ಹಾಗೂ ರಾತ್ರಿ ವೇಳೆ ತಂಗಲು ವ್ಯವಸ್ಥೆ ಇಲ್ಲದೇ ಆಸ್ಪತ್ರೆ ಆವರಣದ ಉದ್ಯಾನವನ್ನು ಆಶ್ರಯಿಸಿದ್ದರು. ಇದನ್ನು ತಪ್ಪಿಸಲು ೬೨. ೫ ಲಕ್ಷ ರೂ. ವೆಚ್ಚದಲ್ಲಿ ಚೆಲುವಾಂಬ ಆಸ್ಪತ್ರೆಯ ಪಕ್ಕದಲ್ಲಿಯೇ ಸಂದರ್ಶಕರ ತಂಗುದಾಣ (ಡಾರ್ಮೆಟರಿ) ನಿರ್ಮಿಸಲಾಗಿದ್ದು, ಈಗಾಗಲೇ ಗುತ್ತಿಗೆದಾರರು ನೂತನ ಕಟ್ಟಡವನ್ನು ಆಸ್ಪತ್ರೆ ಸುಪರ್ದಿಗೆ ನೀಡಿದ್ದಾರೆ.
ಬಾಕಿ ಉಳಿದಿರುವ ಸಣ್ಣಪುಟ್ಟ ಅಂತಿಮ ಹಂತದ ಕೆಲಸಗಳನ್ನು ಮುಕ್ತಾಯಗೊಳಿಸಿ ಒಂದು ವಾರದಲ್ಲಿ ಸೇವೆ ಆರಂಭಿಸಲಾಗುವುದು ಎಂದು ಚೆಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಂದ್ರಕುಮಾರ್ ಅವರು ‘ಆಂದೋಲನ’ ಪತ್ರಿಕೆಗೆ ತಿಳಿಸಿದ್ದಾರೆ.
ಉಪ ಲೋಕಾಯುಕ್ತರ ಸೂಚನೆ ಮೇರೆಗೆ ಡಾರ್ಮೆಟರಿ ನಿರ್ಮಾಣ
ಕೆಲ ತಿಂಗಳ ಹಿಂದೆ ಚೆಲುವಾಂಬ ಆಸ್ಪತ್ರೆ ಮಕ್ಕಳ ವಿಭಾಗಕ್ಕೆ ಭೇಟಿ ನೀಡಿದ್ದ ಉಪ ಲೋಕಾಯುಕ್ತ ಕೆ.
ಎನ್. ಫಣೀಂದ್ರ ಅವರು ನಾನಾ ವಿಭಾಗಗಳ ಕಾರ್ಯ ವೈಖರಿ ಹಾಗೂ ವ್ಯವಸ್ಥೆಯನ್ನು ಪರಿಶೀಲಿಸಿದ್ದರು. ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿದ್ದ ರೋಗಿಗಳ ಬಂಧುಗಳು, ಆಸ್ಪತ್ರೆಯ ಮುಂಭಾಗ, ಆಸುಪಾಸಿನಲ್ಲಿರುವ ಉದ್ಯಾನದಲ್ಲಿ ಚಾಪೆ, ಬಟ್ಟೆಗಳನ್ನು ಹಾಸಿಕೊಂಡು ಮಲಗುವ ಪರಿಸ್ಥಿತಿಯನ್ನು ವಿವರಿಸಿದ್ದರು. ಈ ಕುರಿತು ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ತಾಣವನ್ನು ನಿರ್ಮಿಸುವ ಬಗ್ಗೆ ಕ್ರಮ ವಹಿಸಬೇಕೆಂದು ಆಸ್ಪತ್ರೆಯ ಡೀನ್ ಮತ್ತು ವೈದ್ಯಕೀಯ ಅಧೀಕ್ಷಕರಿಗೆ ಉಪ ಲೋಕಾಯುಕ್ತರು ಸೂಚನೆ ನೀಡಿದ್ದರು. ಅವರ ಸೂಚನೆ , ಸಲಹೆ ಪ್ರಕಾರ ಆಸ್ಪತ್ರೆಯ ಅಧಿಕಾರಿ ವರ್ಗದವರು ಡಾರ್ಮೆಟರಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಸೌಲಭ್ಯಗಳು
೫೦ ಪುರುಷ, ೫೦ ಮಹಿಳೆಯರಿಗೆ ಪ್ರತ್ಯೇಕ ಸ್ಥಳ, ಹಗಲು, ರಾತ್ರಿ ವೇಳೆ ವಾಸ್ತವ್ಯಕ್ಕೆ ಅವಕಾಶ, ಶುದ್ಧ ಕುಡಿಯುವ ನೀರು, ಸುಸಜ್ಜಿತ ಶೌಚಗೃಹ, ಸ್ನಾನಗೃಹ , ಕುಳಿತು ಕೊಳ್ಳಲು ಆಸನ, ಮನರಂಜನೆಗೆ ಟಿವಿ , ಸಿಸಿಟಿವಿ ಕ್ಯಾಮೆರಾ.
ಸೌಲಭ್ಯಗಳು ಪಾಸ್ ಪಡೆದವರಿಗೆ ಪ್ರವೇಶ. . .
ಆಸ್ಪತ್ರೆಗೆ ಒಳರೋಗಿಗಳಾಗಿ ದಾಖಲಾಗುತ್ತಿದ್ದಂತೆ ಅವರನ್ನು ನೋಡಿ ಕೊಳ್ಳುವವರಿಗೆ ಒಂದು ಪ್ರತ್ಯೇಕ ಪಾಸ್ ವಿತರಿಸಲಾಗುತ್ತದೆ. ಈ ಪಾಸ್ ಪಡೆದವರಿಗೆ ಮಾತ್ರ ಡಾರ್ಮೆಟರಿಗೆ ಪ್ರವೇಶ ನೀಡಲಾಗುವುದು. ಅಂತಹವರು ಈ ಕೊಠಡಿಯಲ್ಲಿರುವ ಸೌಲಭ್ಯಗಳನ್ನು ಪಡೆದುಕೊಂಡು ವಿರಮಿಸಬಹುದಾಗಿದೆ.
ಧ್ವನಿವರ್ಧಕ ಸೌಲಭ್ಯ ಹೆರಿಗೆ ಹಾಗೂ ಮಕ್ಕಳ ವಾರ್ಡ್‌ನಲ್ಲಿರುವ ರೋಗಿಗಳನ್ನು ನೋಡಿಕೊಳ್ಳುವ ಆರೋಗ್ಯ ಸಿಬ್ಬಂದಿ ಹೊಸದಾಗಿ ನಿರ್ಮಾಣವಾಗಿರುವ ಡಾರ್ಮೆಟರಿಯಲ್ಲಿ ವಿರಮಿಸುತ್ತಿರುವ ರೋಗಿಗಳ ಕಡೆಯವರನ್ನು ಕರೆಯಲು ವಿಶೇಷವಾಗಿ ಧ್ವನಿವರ್ಧಕವನ್ನು ಅಳವಡಿಸಲಾಗುತ್ತಿದೆ. ಇದರಿಂದ ಅಗತ್ಯಬಿzಗ ಸುಲಭವಾಗಿ ಸಂಪರ್ಕ ಸಾಽಸಬಹುದಾಗಿದೆ. ತನ್ಮೂಲಕ ಆರೋಗ್ಯ ಸಿಬ್ಬಂದಿ ಹಾಗೂ ರೋಗಿಗಳ ಕಡೆಯವರ ಅನವಶ್ಯ ಅಲೆದಾಟ ತಪ್ಪಲಿದೆ.
ರೋಗಿಗಳ ಜತೆ ಬರುವವರು ಶೌಚಗೃಹ, ಕುಡಿಯುವ ನೀರು, ಸ್ನಾನದ ವ್ಯವಸ್ಥೆ ಸಮಸ್ಯೆಯನ್ನು ಎದುರಿಸುತ್ತಿದ್ದರು. ಜತೆಗೆ ವಿರ ಮಿಸಲು ಸೂಕ್ತ ತಾಣವಿಲ್ಲದೆ ಉದ್ಯಾನದಲ್ಲೇ ಕಾಲ ಕಳೆದು ಪರಿತಪಿಸುವುದನ್ನು ಗಮನಿಸಿದ್ದೆವು. ಈಗ ಆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಡಾರ್ಮೆಟರಿಯನ್ನು ನಿರ್ಮಿಸಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಟಿವಿ ಮತ್ತು ಕಣ್ಗಾವಲಿಗೆ ಸಿಸಿಟಿವಿ ಅಳವಡಿಕೆಯ ಕಾರ್ಯವಷ್ಟೇ ಬಾಕಿ ಇದ್ದು, ಈ ಎಲ್ಲ ಕೆಲಸಗಳೂ ಆದ ನಂತರ ಶೀಘ್ರವೇ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು.
-ಡಾ. ರಾಜೇಂದ ಕುಮಾರ್, ವೈದ್ಯಕೀಯ ಅಧೀಕ್ಷಕರು, ಚೆಲುವಾಂಬ ಆಸ್ಪತ್ರೆ.





