ಮೈಸೂರು:ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಸ್ಮರಿಸುವುದು ಬೆಳಕಿನ ಕಡೆ ನಡೆಯುವುದು ಎಂಬರ್ಥ ಎಂದು ಮಾನಸಗಂಗೋತ್ರಿಯ ಜೈನಶಾಸ್ತ್ರ ವಿಭಾಗದ ನಿರ್ದೇಶಕಿ ಪ್ರೊ.ಎಸ್.ಡಿ.ಶಶಿಕಲಾ ಅಭಿಪ್ರಾಯ ಪಟ್ಟರು.
ಶುಕ್ರವಾರ ಅರಿವು ಸಂಶೋಧನಾ ವಿದ್ಯಾರ್ಥಿ ವೇದಿಕೆ ವತಿಯಿಂದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಮಿತಿ ಕೊಠಡಿಯಲ್ಲಿ ಆಯೋಜಿಸಿದ್ದ “ಅಂಬೇಡ್ಕರ್ ಅವರ 68ನೇ ಪರಿನಿಬ್ಬಾಣ ದಿನ’ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಕಟ್ಟಿಕೊಟ್ಟ ಸಂವಿಧಾನದಿಂದ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಸಂವಿಧಾನದ ನ್ಯಾಯಯುತ ಜಾರಿ ಆಗಬೇಕಿದೆ. ಅಂಬೇಡ್ಕರ್ ಅವರ ಸೈದ್ದಾಂತಿಕ ನೆಲೆಯಲ್ಲಿ ಸಮಾಜ ಕಟ್ಟಬೇಕಿದೆ. ಬೌದ್ಧ ಧರ್ಮದ ಸತ್ಯ ಪಾಲನೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ವಿ, ದೀಪವನ್ನು ಹಚ್ಚುವ ಮೂಲಕ ಅಂಬೇಡ್ಕರ್ ಅವರನ್ನು ಮತ್ತೆ ಮತ್ತೆ ನಮ್ಮೊಳಗೆ ಬೆಳಕಾಗಿ ರೂಪಿಸಿಕೊಳ್ಳಬೇಕಿದೆ. ಅಂಬೇಡ್ಕರ್ ಅವರ ಸಂವಿಧಾನ ಭಾರತದ ಎಲ್ಲರಿಗಾಗಿ ಎಂಬುದನ್ನು ನೆನಪಿಸಿಕೊಳ್ಳಬೇಕಿದೆ. ಅಂಬೇಡ್ಕರ್ ಅವರು ತಮ್ಮ ಆರೋಗ್ಯಕ್ಕಿಂತ ದೇಶದ ಆರೋಗ್ಯ ಮುಖ್ಯವಾಗಿಸಿಕೊಂಡು, ದೇಶವನ್ನು ಕಟ್ಟಲು ತಮ್ಮ ಆರೋಗ್ಯವನ್ನು ನೀಡಿದರು. ಶರಣರ ಸಾವನ್ನು ಮರಣದಲ್ಲಿ ಕಾಣು ಎಂಬಂತೆ ನಾವು ಅಂಬೇಡ್ಕರ್ ಅವರ ನಿಬ್ಬಾಣವನ್ನು ಅರ್ಥ ಮಾಡಿಕೊಳ್ಳೋಣ ಎಂದು ಸಲಹೆ ನೀಡಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವ್ಯವಸ್ಥಾಪನಾ ಕಾರ್ಯಧಿಕಾರಿ ಹೇಮಲತಾ, ಕುವೆಂಪು ಕನ್ನಡ ವಿಭಾಗದ ಉಪನ್ಯಾಸಕ ಸಿಬ್ಬಂದಿಗಳಾದ ತಲಕಾಡು ನಾಗರಾಜು, ನಂಜುಂಡಸ್ವಾಮಿ, ಸುರೇಶ್, ಶೈಲಾಜ, ಮಂಜುನಾಥ್, ಪ್ರಸನ್ನ, ವಿಭಾಗ ಬೋಧಕೇತರ ಸಿಬ್ಬಂದಿಗಳಾದ ಮೂರ್ತಿ, ಪಿ.ಎಂ.ಕುಮಾರ್, ಯೋಗೀಶ್, ನಾಗಮಣಿ, ಸಂಶೋಧನಾ ವಿದ್ಯಾರ್ಥಿಗಳಾ ಮೇಘ, ದಿವ್ಯಾ, ಮಹದೇವಮ್ಮ, ತೀರ್ಥ ಪ್ರಸಾದ್, ಪ್ರಸಾದ್, ಪ್ರತಾಪ್, ನಟರಾಜು, ಹನುಮಂತಪ್ಪ, ದಿಲೀಪ್ ಹಾಗೂ ಸ್ನಾತಕೊತ್ತರ ವಿದ್ಯಾರ್ಥಿಗಳು ಹಾಜರಿದ್ದರು.