Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸಾಹಿತ್ಯ ಸಮ್ಮೇಳನ: ವಿದ್ಯಾರ್ಥಿಗಳು ಗೋಷ್ಠಿಗಳಲ್ಲಿ ಭಾಗವಹಿಸಲು ಜಿಲ್ಲಾಧಿಕಾರಿ ಕರೆ

ಮಂಡ್ಯ: 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 3 ದಶಕಗಳ ನಂತರ ಜಿಲ್ಲೆಯಲ್ಲಿ ನಡೆಯುತ್ತಿದೆ. ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು ಡಿಸೆಂಬರ್ 20, 21 ಹಾಗೂ 22 ರಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ತಿಳಿಸಿದರು.

ಅವರು ಇಂದು(ಡಿ.5) ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಮಾತನಾಡಿದರು.

ಡಿಸೆಂಬರ್ 20 ರಂದು ಬೆಳಿಗ್ಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳ ಕಲಾತಂಡಗಳು ಭಾಗವಹಿಸಲಿದೆ. ಇಲ್ಲಿ ಮಕ್ಕಳಿಗೆ ವಿವಿಧ ಕಲಾ ಪ್ರಕಾರಗಳನ್ನು ನೋಡುವ ಅವಕಾಶ ಸಿಗಲಿದೆ. ಈ ಅಪರೂಪ ಹಾಗೂ ಅವಿಸ್ಮರಣೀಯ ಅವಕಾಶವನ್ನು ವಿದ್ಯಾರ್ಥಿಗಳು ಕಳೆದುಕೊಳ್ಳಬಾರದು. ವಿದ್ಯಾರ್ಥಿಗಳನ್ನು ಶಿಕ್ಷಕರು ಕರೆತಂದು ಮೆರವಣಿಗೆ ಸಾಗುವ ಎರಡು ಬದಿಯಲ್ಲಿ ಕುಳಿತುಕೊಂಡು ವೀಕ್ಷಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದಕ್ಕೆ ಯೋಜನೆ ರೂಪಿಸಬೇಕು ಎಂದರು.

ಮೂರು ದಿನಗಳು ನಡೆಯುವ ಸಮ್ಮೇಳನದಲ್ಲಿ ಸಂಪನ್ಮೂಲ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹೆಸರಾಂತ ವ್ಯಕ್ತಿಗಳಿಂದ ಮೂರು ವೇದಿಕೆಗಳಲ್ಲಿ ಗೋಷ್ಠಗಳು ನಡೆಯಲಿದೆ. ಗೋಷ್ಠಿಗಳು ವಿದ್ಯಾರ್ಥಿಗಳಿಗೆ ಜ್ಞಾನದ ಭಂಡಾರ. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳವೇಕು. ಶುಕ್ರವಾರ ಮತ್ತು ಶನಿವಾರದ ಪಠ್ಯ ಚಟುವಟಿಕೆಗಳನ್ನು ಮುಂದಿನ ರಜೆ ದಿನಗಳೊಂದು ಸರಿದೂಗಿಸಿಕೊಳ್ಳಿ ಎಂದರು.

ಪ್ರತಿ ದಿನ ರಾತ್ರಿ 7 ಗಂಟೆಯಿಂದ ಸಾಂಸ್ಕೃತಿಕ ‌ಕಾರ್ಯಕ್ರಮಗಳು ಸಹ ಇರುತ್ತದೆ. ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಸಹ ಇರುತ್ತಣೆ. ಸಮ್ಮೇಳನದ ದಿನಗಳಂದು ಮಕ್ಕಳನ್ನು ಸುರಕ್ಷಿತವಾಗಿ ಕರೆತಂದು, ಕರೆದುಕೊಂಡು ಹೋಗುವ ಜವಾಬ್ದಾರಿ ಶಿಕ್ಷಕರ ಮೇಲೆ ಇರುತ್ತದೆ.

ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಮುಖ್ಯ ಆಕರ್ಷಣೆ ಎಂದರೆ ಪುಸ್ತಕ ಮಳಿಗೆಗಳು. ಮಕ್ಕಳನ್ನು ಕರೆ ತರುವ ಮೊದಲು ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸದ ಬಗ್ಗೆ ತಿಳಿಸಿ. ಇದರಿಂದ ಮಕ್ಕಳು ಪುಸ್ತಕಗಳನ್ನು ಖರೀದಿಸಿ ಓದುವ ಮನೋಭಾವನೆ ಬೆಳಸಿಕೊಳ್ಳುತ್ತಾರೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್  ಮಾತನಾಡಿ, ಮಂಡ್ಯ ಜಿಲ್ಲೆಯ ಜನರು ಪ್ರೀತಿ ವಿಶ್ವಾಸದಲ್ಲಿ ಮೇಲುಗೈ ಸಾಧಿಸಿದವರು. ಅತಿ ಹೆಚ್ಚು ಕನ್ನಡ ಮಾತನಾಡುವ ಜನರು ಮಂಡ್ಯದಲ್ಲಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮುಂದಿನ ಪೀಳಿಗೆಯವರಿಗೂ ಕೂಡ ಮಾರ್ಗದರ್ಶನವಾಗುವ ರೀತಿಯಲ್ಲಿ ಇರಬೇಕು. ಪ್ರತಿಯೊಬ್ಬರೂ ಕೂಡ ನಮ್ಮ ಮನೆಗಳ ಹಬ್ಬವೆನ್ನುವಂತೆ ಭಾಗವಹಿಸಬೇಕು ಎಂದು ತಿಳಿಸಿದರು.

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕರಾದ ಡಾ: ಮೀರಾ ಶಿವಲಿಂಗಯ್ಯ ಅವರು ಮಾತನಾಡಿ 87 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದಿನ ಪೀಳಿಗೆಗೆ ಒಂದು ಮಾರ್ಗ ದರ್ಶನವಾಗಿರಬೇಕು ಮತ್ತು ಪ್ರತಿಯೊಬ್ಬರ ಸವಿ ನೆನಪಿನಲ್ಲಿ ಉಳಿಯುತ್ತದೆ.

ಕನ್ನಡದ ಸೇವೆಗಾಗಿ ಶಿಕ್ಷಕರು ತಮ್ಮ ಒಂದು ದಿನದ ಸಂಬಳ ನೀಡುತ್ತಿರುವುದು ಸಂತಸದ ಸಂಗತಿ, ಕರ್ನಾಟಕದಲ್ಲಿ ಮೊದಲು ಕನ್ನಡ ಎಂ.ಎ ಪದವಿ ಪಡೆದ ರಾ.ನರಸಿಂಹ ಚಾರ್ಯ ಅವರು ಸಹ ಮಂಡ್ಯ ಜಿಲ್ಲೆಯವರು ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಸಾವಿರಾರು ಸಂಖ್ಯೆಯಲ್ಲಿ ನೀವೆಲ್ಲರೂ ಭಾಗವಹಿಸಿ ಸಮ್ಮೇಳನವನ್ನ ಯಶಸ್ವಿಗೊಳಿಸಬೇಕು ಎಂದರು. ವಿದ್ಯಾರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ ಪ್ರತಿಯೊಬ್ಬ ವಿದ್ಯಾರ್ಥಿಯು ಕೂಡ ಸಮ್ಮೇಳನದಲ್ಲಿ ಭಾಗವಹಿಸಿ ಎಂದು ಹೇಳಿದರು.

ಸಭೆಯಲ್ಲಿ ಮಂಡ್ಯ ಉಪ ವಿಭಾಗಾಧಿಕಾರಿ ಶಿವಮೂರ್ತಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹೆಚ್ ಶಿವರಾಮೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಚೆಲುವಯ್ಯ, ಸೇರಿದಂತೆ ಇನ್ನಿತರ ಶಾಲಾ ಮುಖ್ಯ ಶಿಕ್ಷಕರುಗಳು ಉಪಸ್ಥಿತರಿದ್ದರು.

Tags: