ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರ ಮುಖ್ಯ ಮಂತ್ರಿಗಳ ಕ್ಷೇತ್ರವಾಗಿದ್ದು, ಅತ್ಯಂತ ಹೆಚ್ಚಿನ ಕಾಳಜಿ ವಹಿಸಿ ಬಂದಿರುವ ಅನುದಾನವನ್ನು ನಿಗದಿತ ಅವಧಿಯಲ್ಲಿ ಬಳಕೆ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡಬೇಕು ಎಂದು ವಿಧಾನಸಭಾ ಪರಿಷತ್ ಶಾಸಕರಾದ ಡಾ ಯತೀಂದ್ರ ಸಿದ್ದರಾಮಯ್ಯ ಸೂಚನೆ ನೀಡಿದರು.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿ ಹಾಗೂ ಪಿಡಿಒಗಳ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ 2 ತಿಂಗಳ ಹಿಂದೆ ಮುಖ್ಯ ಮಂತ್ರಿಗಳು ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 502 ಕೋಟಿ ಅನುದಾನದಲ್ಲಿ ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದ್ದು ಸದರಿ ಕಾಮಗಾರಿಗಳನ್ನು ನಿಗದಿತ ಅವಧಿ ಒಳಗೆ ಪೂರ್ಣಗೊಳಿಸಬೇಕೆಂದು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯಿಂದ ಒಟ್ಟಾರೆ ರೂ.21.60 ಕೋಟಿಯಷ್ಟು ಕಾಮಗಾರಿಗಳು ವರುಣ ಕ್ಷೇತ್ರದಲ್ಲಿ ಪ್ರಗತಿಯಲ್ಲಿದ್ದು ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಪೂರ್ಣಗಳಿಸಬೇಕು. ಗ್ರಾಮೀಣ ಕುಡಿಯುವ ನೀರು ಯೋಜನೆಯಿಂದ ತಾಂಡವಪುರ ಹಾಗೂ 31 ಗ್ರಾಮ ಸೇರಿದಂತೆ ಒಟ್ಟು ರೂ.123.30 ಕೋಟಿ ಅನುದಾನದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಗುಣಮಟ್ಟದಲ್ಲಿ ಪೂರ್ಣಗೊಳಿಸಲು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಕಾರ್ಯಕ್ರಮಗಳು ಸೇರಿದಂತೆ 35 ಇಲಾಖೆಗಳ ಪ್ರಗತಿ ವರದಿಗಳನ್ನು ಪರಿಶೀಲಿಸಿ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವರುಣ ಕ್ಷೇತ್ರದ 35 ಗ್ರಾಮ ಪಂಚಾಯತ್ PDO ಗಳಿಗೆ ವಸತಿ ಯೋಜನೆ, ನರೇಗಾ, ಕಂದಾಯ ವಸೂಲಿ ಹಾಗೂ ಇತರೆ ಯೋಜನೆಗಳ ಬಗ್ಗೆ ನಿಗದಿ ಪಡಿಸಿರುವ ಗುರಿಗೆ ಸಾಧನೆ ಮಾಡಿ ಪ್ರಗತಿ ಸಾಧಿಸಲು ತಿಳಿಸಿದರು.
ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಮುಖ್ಯ ಮಂತ್ರಿ+ಗಳ ವಿಶೇಷಾಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹಾಜರಿದ್ದರು.