Mysore
27
broken clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಫೆಂಗಲ್‌ ಎಫೆಕ್ಟ್: ‌7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ: ಮನೆಯಲ್ಲೇ ಉಳಿದ ಕೂಲಿ ಕೆಲಸಗಾರರು 

ಗಿರೀಶ್ ಹುಣಸೂರು

ಮೈಸೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ನಿರ್ಮಾಣವಾಗಿರುವ ಫೆಂಗಲ್ ಚಂಡಮಾರುತದ ಪ್ರಭಾವ ಕೇವಲ ತಮಿಳುನಾಡು, ಪಾಂಡಿಚೇರಿ ಮಾತ್ರವಲ್ಲದೆ ಕರ್ನಾಟಕದ ಮೇಲೂ ಉಂಟಾಗಿದೆ.

ಇದರಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾನು ವಾರ ಸಂಜೆಯಿಂದಲೇ ಬಿಟ್ಟೂ ಬಿಡದಂತೆ ಧಾರಾಕಾರ ಮಳೆ ಯಾಗಿದ್ದು, ಮಂಗಳವಾರವು ಮಳೆ ಮುಂದುವರಿಯುವ ಸಾಧ್ಯತೆ ಇದೆ.

ಸೋಮವಾರ ಮುಂಜಾನೆ ೪ ಗಂಟೆ ಸುಮಾರಿಗೆ ಫೆಂಗಲ್ ಚಂಡಮಾರುತ ಉತ್ತರ ತಮಿಳು ನಾಡು ಮತ್ತು ಪಾಂಡಿಚೇರಿ ಕರಾವಳಿಯನ್ನು ದಾಟಿದ್ದು, ಇದರ ಪ್ರಭಾವದಿಂದಾಗಿ ಮೈಸೂರು, ಚಾಮರಾಜ ನಗರ, ಮಂಡ್ಯ ಹಾಗೂ ಕೊಡಗು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.

ಯಲ್ಲೋ ಅಲರ್ಟ್: ಡಿ.೩ರಂದು ಬೆಳಿಗ್ಗೆ ೮ ಗಂಟೆವರೆಗಿನ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಫೆಂಗಲ್‌ ಚಂಡ ಮಾರುತದ ಪ್ರಭಾವದಿಂದಾಗಿ ದಕ್ಷಿಣ ಒಳನಾಡು ಪ್ರದೇಶದ ಚಾಮರಾಜ ನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು ಈ ಏಳು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಮುಂದಿನ ೨೪ ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಗಳ ಬಹುತೇಕ ಭಾಗಗಳಲ್ಲಿ ಮಂಗಳವಾರ ಮಧ್ಯಾಹ್ನದ ನಂತರ ಉತ್ತಮ ಮಳೆಯ ಮುನ್ಸೂಚನೆ ಇದೆ. ಸಣ್ಣ ಪ್ರಮಾಣದ ಗುಡುಗಿನ ಸಾಧ್ಯತೆಯೂ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಸ್ವಲ್ಪ ಕಡಿಮೆ ಇರಬಹುದು. ಆದರೆ, ಮಳೆ ನಿರಂತರವಾಗಿ ಮುಂದುವರಿಯುವ ಲಕ್ಷಣಗಳಿವೆ.

ರಾಜ್ಯದ ಉತ್ತರ ಒಳನಾಡು ಭಾಗಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದ್ದು, ಹಾವೇರಿ, ಧಾರವಾಡ ಮತ್ತು ಬೆಳಗಾವಿ, ಉತ್ತರ ಕನ್ನಡ ಜಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಮಳೆ ಜೋರಾಗುವ ಸಾಧ್ಯತೆಗಳಿದ್ದು, ಡಿ.೪ರವರೆಗೆ ಬಿಸಿಲು, ಮೋಡ ಹಾಗೂ ಒಂದೆರಡು ಕಡೆಗಳಲ್ಲಿ ತುಂತುರು ಮಳೆ ಮುಂದುವರಿಯಲಿದೆ.

ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಒಳನಾಡಿನ ಭಾಗಗಳಲ್ಲಿ ಡಿ.೩ರವರೆಗೆ ಮಳೆಯ ಮುನ್ಸೂಚನೆ ಇದೆ. ನಂತರ ಬಿಸಿಲಿನ ವಾತಾವರಣದ ಸಾಧ್ಯತೆ ಇದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ತಾಂತ್ರಿಕ ಅಧಿಕಾರಿ ಡಾ.ಜಿ.ವಿ.ಸುಮಂತ್ ಕುಮಾರ್ ತಿಳಿಸಿದ್ದಾರೆ.

ಮಳೆಗೆ ಮಲೆನಾಡಾದ ಮೈಸೂರು!

ಮೈಸೂರು: ಫೆಂಗಲ್ ಚಂಡಮಾರುತದ ಪರಿಣಾಮದಿಂದಾಗಿ ಭಾನುವಾರ ಸಂಜೆಯಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬಯಲು ಸೀಮೆಯ ಹಳೇ ಮೈಸೂರು ಭಾಗದ ಜಿಲ್ಲೆಗಳು ಮಲೆನಾಡಿನಂತಾಯಿತು.

ವಾರಾಂತ್ಯ ರಜೆಯ ಕಾರಣಕ್ಕೆ ಕುಟುಂಬ ಸಮೇತ ಮನೆಯಿಂದ ಹೊರ ಹೋಗಿ ಸುತ್ತಾಡಿ ಬರುವ ಯೋಜನೆ ಹಾಕಿಕೊಂಡಿದ್ದವರಿಗೆ ಮಳೆ ತಣ್ಣೀರೆರಚಿ ಬೆಚ್ಚನೆ ಉಡುಪು ಧರಿಸಿ, ಮನೆಯಲ್ಲೇ ಕುರುಕಲು ತಿಂಡಿಯ ಮೊರೆ ಹೋಗುವಂತೆ ಮಾಡಿದರೆ, ಸೋಮವಾರ ಮುಂಜಾನೆಯಿಂದ ಧಾರಾಕಾರವಾ ಗಿ ಸುರಿದ ಮಳೆಯ ಪರಿಣಾಮ ನಗರದ ಜನತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು.

ರಜೆ ಗೊಂದಲ: ಭಾರೀ ಮಳೆಯ ಪರಿಣಾಮ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲಾಡಳಿತ ಅಂಗನವಾಡಿಯಿಂದ ದ್ವಿತೀಯ ಪಿಯುಸಿವರೆಗಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಸೋಮವಾರ ಬೆಳಿಗ್ಗೆ ೭.೩೦ರ ಸುಮಾರಿಗೆ ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ ಅವರು ಆದೇಶ ಹೊರಡಿಸಿದರಾದರೂ ಅಷ್ಟೊತ್ತಿಗಾಗಲೇ ಬಹುತೇಕ ಮಕ್ಕಳು ಸಿದ್ಧರಾಗಿ ಶಾಲಾ- ಕಾಲೇಜು ವಾಹನ, ಆಟೋಗಳಲ್ಲಿ ಹೊರಟಿದ್ದರು. ಹೀಗಾಗಿ ವಿದ್ಯಾರ್ಥಿಗಳು ಬೀಗ ಜಡಿದ ಶಾಲಾ- ಕಾಲೇಜುಗಳನ್ನು ಕಂಡು ಮನೆಗೆ ಹಿಂತಿರುಗುವಂತಾದರೆ, ಕಾಲ್ನಡಿಗೆಯಲ್ಲೇ ಶಾಲೆಗೆ ಬಂದಿದ್ದ ಮಕ್ಕಳು ರಜೆ ಎಂದು ತಿಳಿಯದೆ ಶಾಲೆಯ ಮುಂದೆ ಬಹು ಹೊತ್ತು ನಿಂತು ಮನೆಗೆ ಹಿಂತಿರುಗುವಂತಾಯಿತು. ಹುಣಸೂರು ಬಿಇಒ ಗೊಂದಲ: ಹುಣಸೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವಾಟ್ಯಾಪ್ ಗ್ರೂಪ್‌ನಲ್ಲಿ ಮಳೆ ಬಂದಲ್ಲಿ ಜಿಲ್ಲಾಧಿಕಾರಿಗಳ ರಜೆ ಆದೇಶ ಪಾಲಿಸುವಂತೆ ಶಾಲೆಗಳಿಗೆ ನೀಡಿದ ಸೂಚನೆಯಿಂದಾಗಿ ಗೊಂದಲ ಏರ್ಪಟ್ಟಿತ್ತು.

ಇದರಿಂದಾಗಿ ಹುಣಸೂರು ತಾಲ್ಲೂಕಿನ ಶಾಲೆಗಳ ಮುಖ್ಯಸ್ಥರು ಯಾರ ಆದೇಶ ಪಾಲಿಸುವುದು ಎಂಬ ಗೊಂದಲಕ್ಕೆ ಸಿಲುಕಿ, ಮಳೆಯ ನಡುವೆಯೇ ಶಾಲೆಗಳಿಗೆ ತೆರಳುವಂತಾಯಿತು.

ಮಳೆ ಆರ್ಭಟ: ಸೋಮವಾರ ಬೆಳಿಗ್ಗೆ ೧೧ಗಂಟೆವರೆಗೂ ಮಳೆ ಧಾರಾಕಾರವಾಗಿ ಸುರಿದ ಪರಿಣಾಮ ಸರ್ಕಾರಿ ನೌಕರರು, ಕಾರ್ಮಿಕರು ಸೇರಿದಂತೆ ದೈನಂದಿನ ಕೆಲಸ-ಕಾರ್ಯಗಳಿಗೆ ತೆರಳುವ ಮಂದಿ ದಿಕ್ಕುಗಾಣದೆ ಪರಿತಪಿಸುವಂತಾಯಿತು.

” ಫೆಂಗಲ್‌ ಚಂಡಮಾರುತವು ದುರ್ಬಲಗೊಂಡಿದ್ದು, ತಿರುಗುವಿಕೆಯ ಪ್ರಮಾಣದಲ್ಲಿದೆ. ಡಿ.೩ರಂದು ಮುಂಜನೆ ೨ ಗಂಟೆ ಸುಮಾರಿಗೆ ಕರ್ನಾಟಕದ ಮಂಗಳೂರು ಹಾಗೂ ಕೇರಳದ ನೀಲೇಶ್ವರ ಮಧ್ಯೆ ಅರಬ್ಬಿ ಸಮುದ್ರಕ್ಕೆ ಪ್ರವೇಶಿಸುವ ಸಾಧ್ಯತೆಗಳಿವೆ.”

ಡಾ.ಜಿ.ವಿ.ಸುಮಂತ್ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ

ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ

” ಮಳೆಯಾದರೇನೂ ಬಿಸಿಲಾದರೇನೂ ನಮ್ಮ ಕೆಲಸ ಕಾರ್ಯಗಳು ನಿರಂತರವಾಗಿ ಸಾಗುತ್ತಿರುತ್ತವೆ. ಅದಕ್ಕೆ ಯಾವುದೇ ಅಡೆತಡೆಗಳಿರುವುದಿಲ್ಲ ಎಂಬುದಕ್ಕೆ ಮೈಸೂರಿನ ಜನರು ಸಾಕ್ಷಿಯಾದರು. ಫೆಂಗಲ್‌  ಚಂಡಮಾರುತದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ವ್ಯಕ್ತಿಯೊಬ್ಬರು ಸೈಕಲ್‌ನಲ್ಲಿ ತೆರಳಿದರೆ, ವಿದ್ಯಾರ್ಥಿಗಳು ಕಾಲೇಜಿನತ್ತ ಸಾಗಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಯಿತು” .

ತಗ್ಗಿದ ಫೆಂಗಲ್ ಚಂಡಮಾರುತದ ಪ್ರಭಾವ

ಬಂಗಾಳ ಕೊಲ್ಲಿಯಿಂದ ಇಂದು ಅರಬ್ಬಿ ಸಮುದ್ರ ಸೇರುವ ಚಂಡಮಾರುತ

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇಂದು ಉತ್ತಮ ಮಳೆ ಸಾಧ್ಯತೆ

Tags:
error: Content is protected !!