Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಕೆ: ಕೇಂದ್ರ ಸರ್ಕಾರ

ಬೆಳೆ ಋತುವಿಗೆ ಅನುಗುಣವಾಗಿ ರಾಜ್ಯಗಳಿಗೆ ಎಷ್ಟು ಪ್ರಮಾಣದಲ್ಲಿ ರಸಗೊಬ್ಬರ ಬೇಕಿದೆ ಎಂಬ ಬಗ್ಗೆ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು ಅಂದಾಜಿಸಿದ್ದು, ಇದಕ್ಕೆ ಅನುಗುಣವಾಗಿ ಬೇಡಿಕೆ ಪಟ್ಟಿ ಸ್ವೀಕರಿಸಲಾಗುತ್ತದೆ. ಬಳಿಕ ರಾಜ್ಯಗಳ ಮಾಸಿಕವಾರು ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಕೆಗೆ ಕ್ರಮವಹಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.

ಪ್ರತಿ ಬೆಳೆ ಋತು ಆರಂಭಕ್ಕೂ ಮುನ್ನವೇ ರಾಜ್ಯಗಳಿಂದ ತಿಂಗಳವಾರು ಬೇಡಿಕೆ ಪಟ್ಟಿಯನ್ನು ಸ್ವೀಕರಿಸಲಾಗುತ್ತದೆ. ಈ ಬೇಡಿಕೆಗೆ ಅನುಗುಣವಾಗಿ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ಪೂರೈಸಲಾಗುತ್ತದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವರಾದ ಅನುಪ್ರಿಯಾ ಪಟೇಲ್ ತಿಳಿಸಿದ್ದಾರೆ.

ದೇಶದಲ್ಲಿನ ರಸಗೊಬ್ಬರ ಉತ್ಪಾದನೆ ಮತ್ತು ಬೇಡಿಕೆ ನಡುವಿನ ಕೊರತೆಯ ಅಂತರವನ್ನು ಆಮದು ಮೂಲಕ ಸರಿದೂಗಿಸಲಾಗುತ್ತದೆ. ಕೊರೆತೆಯಾಗುವ ರಸಗೊಬ್ಬರವನ್ನು ಆಮದು ಮಾಡಿಕೊಳ್ಳಲಾಗುತ್ತದೆ.

ಬೆಳೆ ಋತುವಿನ ಆರಂಭಕ್ಕೂ ಮೊದಲೇ ಎಷ್ಟು ಪ್ರಮಾಣದಲ್ಲಿ ದೇಶೀಯವಾಗಿ ರಸಗೊಬ್ಬರ ಬೇಕಿದೆ ಎಂಬುದನ್ನು ಅಂತಿಮಗೊಳಿಸಲಾಗುತ್ತದೆ ಎಂದಿದ್ದಾರೆ. ಅಲ್ಲದೆ, ರಾಜ್ಯಗಳಿಗೆ ರವಾನಿಸಿದ ರಸಗೊಬ್ಬರವನ್ನು ಸಂಯೋಜಿತ ರಸಗೊಬ್ಬರ ಮಾನಿಟರಿಂಗ್ ಸಿಸ್ಟಂ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ.

Tags: