Mysore
21
mist

Social Media

ಸೋಮವಾರ, 23 ಡಿಸೆಂಬರ್ 2024
Light
Dark

ನೆನಪಿನ ತಳಹದಿ ಮೇಲೆ ಕನಸಿನ ಕಟ್ಟಡ

ಯುವರಾಣಿಯರಿಗೆ ಸಂಭ್ರಮ; ಮಹಾರಾಣಿಯರಿಗೆ ವಿಷಾದದ ಭಾವ
# ಸಾಲೋಮನ್

ಮೈಸೂರು: ನೂರಾರು ವರ್ಷಗಳಿಂದಲೂ ಹೆಣ್ಣುಮಕ್ಕಳಿಗೆ ಶೈಕ್ಷಣಿಕ ಜವಾಬ್ದಾರಿ ಹಾಗೂ ಗೌರವ ತಂದುಕೊಟ್ಟು ಭವಿಷ್ಯ ರೂಪಿಸಿಕೊಳ್ಳಲು ಜ್ಞಾನಾರ್ಜನೆ ನೀಡಿದ ದೇಗುಲ ಮಹಾರಾಣಿ ಕಾಲೇಜು, ಈಗಲೂ ಈ ಕಾಲೇಜಿಗೆ ತನ್ನದೇ ಆದ ಶಕ್ತಿ ಇದೆ. ಹೆಣ್ಣುಮಕ್ಕಳು ಸ್ವಾವಲಂಬನೆಯ ಬದುಕು ರೂಪಿಸಿಕೊಳ್ಳಲು ಇಲ್ಲೊಂದು ಕಿಚ್ಚು ಹಚ್ಚಲ್ಪಡುತ್ತದೆ.

ಇಂಥ ದೊಡ್ಡ ಹೆಸರು ಮಾಡಿರುವ ಮಹಾರಾಣಿ ಕಾಲೇಜು ಕಟ್ಟಡ ಸೂಕ್ತ ನಿರ್ವಹಣೆಯಿಲ್ಲದೆ ಹಾಳಾಗಿದ್ದು, ಹಳೆಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿ ಬೇಸರವನ್ನುಂಟು ಮಾಡಿದೆ. ಕಟ್ಟಡ ದುರಸ್ತಿ ಮಾಡಲಾರದಷ್ಟು ಕಟ್ಟಡ ಹಾಳಾಗಿದ್ದರಿಂದ ಕಟ್ಟಡ ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಲೇಬೇಕಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನ ಶತಮಾನದ ಕಾಲೇಜಿಗೆ ಈ ಸ್ಥಿತಿ ಬಂದಿದ್ದು, ಅದನ್ನು ನೂತನವಾಗಿಯೇ ಮಾಡಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಸರ್ಕಾರ 170 ಕೋಟಿ ರೂ. ಮಂಜೂರು ಮಾಡಿ ಕಾಲೇಜು ಹಾಗೂ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ಅದರಲ್ಲಿ 116 ಕೋಟಿ ರೂ, ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಹಾಗೂ 54 ಕೋಟಿ ರೂ ಮಹಾರಾಣಿ ವಿಜ್ಞಾನ ಕಾಲೇಜು ನಿರ್ಮಾಣಕ್ಕೆಂದು ನಿಗದಿ ಮಾಡಲಾಗಿದೆ.

ಸ್ಟಾರ್’ ಇನ್ಫೋಟೆಕ್ ಏಜೆನ್ಸಿಗೆ ಗುತ್ತಿಗೆ: ಕರ್ನಾಟಕ ಬೋರ್ಡ್ ಕಟ್ಟಡ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಗುತ್ತಿಗೆಯನ್ನು ಸ್ಟಾರ್ – ಇನ್ಫೋಟೆಕ್ ಏಜೆನ್ಸಿಗೆ ನೀಡಲಾಗಿದೆ. ಕಾಲೇಜು ಮತ್ತು ವಿದ್ಯಾರ್ಥಿನಿಲಯದಲ್ಲಿರುವ ವಿದ್ಯಾರ್ಥಿನಿ ಯರನ್ನು ಬೇರೆಡೆಗೆ ಸ್ಥಳಾಂತರಿಸಿದ ಕೂಡಲೇ ಕಾಮಗಾರಿ ಆರಂಭವಾಗುತ್ತದೆ.

ಈ ಸಂಬಂಧ ‘ಆಂದೋಲನಕ್ಕೆ ಮಾಹಿತಿ ನೀಡಿದ ಕೆಎಚ್‌ಬಿ ಕಾರ್ಯಪಾಲಕ ಅಭಿಯಂತರ ಜಗದೀಶ್ ಅವರು, ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತೇವೆ. ಒಪ್ಪಂದದ ಪ್ರಕಾರ 1 ತಿಂಗಳಲ್ಲಿ ಎರಡೂ ಕಟ್ಟಡಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ.

ಹವಾಮಾನ ವೈಪರಿತ್ಯಗಳು ಇಲ್ಲದೆ ಹೋದಲ್ಲಿ 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ. ಈ ಯೋಜನ ಮೈಸೂರಿನ ಕರ್ನಾಟಕ ಗೃಹ ಮಂಡಳಿಗೆ ದೊಡ್ಡ ಸವಾಲಾಗಿದೆ ಎಂದರು.

ವಿದ್ಯಾರ್ಥಿನಿಲಯದ ಕಟ್ಟಡ ನಿರ್ಮಾಣಕ್ಕೆ ನೀಡಿರುವ 116 ಕೋಟಿ ರೂ. ಅನುದಾನದಲ್ಲಿ ಹಾಸ್ಟೆಲ್ ಕಟ್ಟಡ ಮಾತ್ರವಲ್ಲ, ಪ್ರತೀ ಕೊಠಡಿಯಲ್ಲಿ ಮಂಚ, ಟೇಬಲ್, ಕುರ್ಚಿ, ವಾರ್ಡ್‌ರೋಬ್ ಹಾಗೂ ರಿಸೆಪ್ಷನ್, ಲಾಂಚ್‌ನ ಫರ್ನೀಚರ್‌ಗಳನ್ನು ಒದಗಿಸಲಾಗುತ್ತಿದೆ. ಒಟ್ಟಾರೆ ಗುಣಮಟ್ಟದ ಕಾಮಗಾರಿಯೊಂದಿಗೆ ಸುಸಜ್ಜಿತ ಹಾಸ್ಟೆಲ್ ಕೂಡ ಇದಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಳೆಯ ನೆನಪು ಮಾಸಿಹೋಗುತ್ತದೆ ಎಂಬ ಬೇಸರ:
ಇಲ್ಲಿನ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಅನೇಕರು ಮೈಸೂರು, ಬೆಂಗಳೂರು, ಹಾಸನ, ಚಿತ್ರದುರ್ಗ ಅಲ್ಲದೆ ಬೇರೆ ಬೇರೆ ರಾಜ್ಯಗಳಲ್ಲೂ ಉದ್ಯೋಗಿಗಳಾಗಿದ್ದಾರೆ. ಉತ್ತಮ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. ಮೈಸೂರಿಗೆ ಬಂದಾಗ ತಮ್ಮ ಕಾಲೇಜಿನ ಮುಂದೆ ಹೋಗುವುದೇ ಒಂದು ಸಂಭ್ರಮ ಎನ್ನುತ್ತಾರೆ. ಆದರೆ ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡ ಶಿಥಿಲಗೊಂಡಿದ್ದು, ಸರ್ಕಾರ ಹಳೆ ಕಟ್ಟಡ ತೆರವು ಮಾಡಿ ನೂತನ ಕಟ್ಟಡ ನಿರ್ಮಿಸಲು ಮುಂದಾಗಿರುವುದು ಹಲವಾರು ಹಳೆಯ ವಿದ್ಯಾರ್ಥಿಗಳಲ್ಲಿ ಬೇಸರ ಮೂಡಿಸಿದೆ. ಕಟ್ಟಡ ನಿರ್ವಹಣೆ ಮಾಡದಿರುವ ಬಗ್ಗೆ ಬೇಸರ ವ್ಯಕ್ತ ಪಡಿಸುವ ಕೆಲವರು, ಹಳೆ ಕಟ್ಟಡ ಒಡೆದು ಎಷ್ಟೇ ಹೈಟೆಕ್ ಆಗಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿದರೂ ಹಳೆಯ ಕಟ್ಟಡದ ಹಾಗೆ ಇರುವುದಿಲ್ಲ. ನಮಗೆಲ್ಲ ಹೊಸ ಕಟ್ಟಡ ನಿರ್ಮಾಣದ ಬಗ್ಗೆ ಒಲವಿಲ್ಲ, ಹೊಸ ಕಟ್ಟಡ ನಿರ್ಮಾಣವಾದರೆ “ನಮ್ಮ ಕಾಲೇಜು’ ಎನ್ನುವ ಅಭಿಮಾನ ಇಲ್ಲವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಕನಸು ಕಟ್ಟಿದ ಕಾಲೇಜು ಕಟ್ಟಡ ಇನ್ನು ನೆನಪು ಮಾತ್ರ: ಭಾವನೆಗಳನ್ನು ಹೊತ್ತ ಮಹಾರಾಣಿಯರ ನೋವು-ನಲಿವು
ಗುಣಮಟ್ಟದ ಕಾಮಗಾರಿಗೆ ಕೆಎಚ್‌ ಬಿ ಒತ್ತು; ಸ್ಟಾರ್ ಇನ್ಫೋಟೆಕ್‌ ಏಜೆನ್ಸಿಗೆ ಕಟ್ಟಡ ಗುತ್ತಿಗೆ

ಗುಣಮಟ್ಟದ ಕಾಮಗಾರಿ ನಮ್ಮ ಜವಾಬ್ದಾರಿ:
ಮಹಾರಾಣಿ ಕಾಲೇಜು ಮತ್ತು ಹಾಸ್ಟೆಲ್‌ ಕಟ್ಟಡ ನಿರ್ಮಾಣದ ಗುಣಮಟ್ಟ ಕಾಯ್ದುಕೊಳ್ಳುವುದು ನಮ್ಮ ಜವಾಬ್ದಾರಿ. ಇದರಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಕಟ್ಟಡ ಖಾಲಿ ಮಾಡಿಕೊಡಲು ಕೇಳಿಕೊಂಡಿದ್ದೇವೆ. ನಮಗೆ ಕಟ್ಟಡ ಹಸ್ತಾಂತರ ಮಾಡಿದ ಕೂಡಲೇ ಕಾಮಗಾರಿ ಆರಂಭಿಸುತ್ತೇವೆ. ಕಾಲೇಜಿನ ಹೊಸ ಕಟ್ಟಡ ಹಾಗೂ ಮುಂಭಾಗದ ಪಾರಂಪರಿಕ ಕಟ್ಟಡದ ದುರಸ್ತಿಯನ್ನು ಮಾಡಲಾಗುತ್ತದೆ.
ಜಗದೀಶ್‌ ಇಇ, ಕೆಎಚ್‌ಬಿ, ಮೈಸೂರು

ವಿದ್ಯಾರ್ಥಿನಿಯರ ಹೋರಾಟಕ್ಕೆ ಸಿಕ್ಕ ಸ್ಪಂದನೆ:
ಮಹಾರಾಣಿ ಕಾಲೇಜು ಹಾಸ್ಟೆಲ್‌ನ ವಿದ್ಯಾರ್ಥಿನಿಯರ ಬಹಳ ದಿನಗಳ ಹೋರಾಟಕ್ಕೆ ಸರ್ಕಾರ ಸ್ಪಂದಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಸಂತೋಷದ ವಿಷಯ. ಈ ಬಗ್ಗೆ ಪತ್ರಿಕೆಯಲ್ಲಿ ಓದಿ ಸಾಕಷ್ಟು ವಿಷಯ ತಿಳಿದುಕೊಂಡಿದ್ದೇವೆ. ಕಲಾ ಕಾಲೇಜು ಹಾಸ್ಟೆಲ್ ಬಿಲ್ಡಿಂಗ್ ತುಂಬಾ ಹಾಳಾಗಿತ್ತು. ಹೇಗೂ ಸರ್ಕಾರ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಮುಂದೆ ಬರುವ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ. ಅದರಲ್ಲೂ ಗ್ರಾಮೀಣ ಭಾಗದವರಿಗೆ ಈ ಹಾಸ್ಟೆಲ್ ಹೆಚ್ಚು ಉಪಯುಕ್ತವಾಗುತ್ತದೆ.
-ಸಹನಾ, ತೃತೀಯ ಬಿಎ

ಸಹಕಾರ ನೀಡಲು ವಿದ್ಯಾರ್ಥಿನಿಯರು ಸಿದ್ದ:
ಕಲಾ ಕಾಲೇಜಿನ ಕಟ್ಟಡ ಹಳೆಯದಾಗಿದ್ದು ಬಹಳ ಆತಂಕ ಹುಟ್ಟಿಸುತ್ತದೆ. ಆದರೆ ಹಾಸ್ಟೆಲ್‌ ನಲ್ಲಿ ಊಟ-ತಿಂಡಿ ಇದರ ಮೂಲ ಸೌಕರ್ಯಗಳ ವ್ಯವಸ್ಥೆ ಚೆನ್ನಾಗಿದೆ, ವಾರ್ಡನ್ ಮಂಜುನಾಥ್‌ ಅವರು ಎಲ್ಲ ಅನುಕೂಲವನ್ನೂ ಮಾಡಿಕೊಡುತ್ತಾರೆ. ವಿದ್ಯಾರ್ಥಿನಿಯರಿಗೆ ಪರೀಕ್ಷೆಗಳು ಆರಂಭವಾಗಿದೆ. ಈ ನಡುವೆ ಹಾಸ್ಟೆಲ್ ಅನ್ನು ಬೇರೆಡೆಗೆ ಸ್ಥಳಾಂತರಿಸಲು ಸರ್ಕಾರ ಮುಂದಾಗಿದ್ದು, ವಿದ್ಯಾರ್ಥಿನಿಯರು ಇದಕ್ಕೆ ಸಹಕಾರ ನೀಡಲು ಸಿದ್ಧರಾಗಿದ್ದಾರೆ. ಯಾವುದೇ ಅಡ್ಡಿ ಇಲ್ಲದೆ ಕಟ್ಟಡ ಶೀಘ್ರವಾಗಿ ನಿರ್ಮಾಣವಾಗಲಿ, ವಿದ್ಯಾರ್ಥಿನಿಯರಿಗೆ ಉತ್ತಮ ಸವಲತ್ತು ಸಿಗಲಿ.
-ಸುಪ್ರಿತಾ, ದ್ವಿತೀಯ ಬಿಎ

ಆಂದೋಲನ ವರದಿ ಸಂತೋಷ ತಂದಿದೆ:
ವಿದ್ಯಾರ್ಥಿನಿಯರ ಹಿತ ದೃಷ್ಟಿಯಿಂದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣದ ಬಗ್ಗೆ ಆಂದೋಲನ ದಿನಪತ್ರಿಕೆ ವಿಸ್ತೃತವಾಗಿ ವರದಿ ಮಾಡಿರುವುದು ಸಂತೋಷ ತಂದಿದೆ. ಪ್ರಸ್ತುತ ಹಾಸ್ಟೆಲ್ ವಿದ್ಯಾರ್ಥಿಗಳನ್ನು ದೀನ್ ದಯಾಳ್‌ ವಿದ್ಯಾರ್ಥಿನಿಲಯಕ್ಕೆ ಸ್ಥಳಾಂತರಿಸುತ್ತಿರುವುದು ವಿದ್ಯಾರ್ಥಿನಿಯರಿಗೆ ಅನುಕೂಲವಾಗಿದೆ. ಸರ್ಕಾರ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಖುಷಿ ತಂದಿದೆ.
ವಿದ್ಯಾರ್ಥಿನಿಯರು, ಸ್ಥಳೀಯ ಶಾಸಕರು, ಅಧಿಕಾರಿಗಳು ಹಾಗೂ ಪ್ರಾಂಶುಪಾಲರು ಈ ಬಗ್ಗೆ ಮುತುವರ್ಜಿ ವಹಿಸುತ್ತಿದ್ದು, ಮುಂದೆ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿಗಳಿಗೆ ಹೈಟೆಕ್ ಹಾಸ್ಟೆಲ್ ಸಿದ್ಧವಾಗುತ್ತಿರುವುದರಿಂದ ನಮಗೂ ಸಂತೋಷವಾಗಿದೆ.
ಪಲ್ಲವಿ, ಪ್ರಥಮ ಬಿಎ

ಇಂದಿನವರಿಗೆ ಸಂಭ್ರಮ; ಹಳೆಯ ವಿದ್ಯಾರ್ಥಿಗಳಿಗೆ ಬೇಸರ: ನಾನು ಓದಿದ ಕಾಲೇಜು ಕಟ್ಟಡ ತೆರವಾಗುತ್ತಿದೆ ಎನ್ನುವ ವಿಚಾರ ಮನ್ನಸ್ಸಿಗೆ ಬೇಸರ ತಂದಿದೆ. ಹೊಸ ಕಟ್ಟಡ ಎಷ್ಟೇ ಆಧುನಿಕವಾಗಿದ್ದರೂ, ನಮ್ಮ ಕಾಲೇಜು ಎಂದುಕೊಳ್ಳಲು ಆಗುವುದಿಲ್ಲ. ಕಾಲೇಜಿನ ಮುಂದೆ ಹೋಗುವಾಗಲೆಲ್ಲ ನಮ್ಮ ಕಾಲೇಜು ಎಂಬ ಅಭಿಮಾನ ಇರುತ್ತಿತ್ತು. ಈಗ ಆ ಭಾವನೆಯೇ ಸತ್ತಂತಾಗುತ್ತದೆ. ಇಂದಿನ ಮಕ್ಕಳಿಗೆ ಕಾಲೇಜು ಕಟ್ಟಡ ಹೊಸದಾಗಿ ನಿರ್ಮಾಣ ಆಗುವುದು ಸಂಭ್ರಮದ ವಿಷಯ ಆಗಿದೆ. ಆದರೆ ನಮ್ಮಂತ ಹಳೆ ವಿದ್ಯಾರ್ಥಿಗಳಿಗೆ ಬೇಸರ ಆಗುತ್ತಿದೆ. ಸಂಬಂಧಪಟ್ಟವರು ಸರಿಯಾಗಿ ನಿರ್ವಹಣೆ ಮಾಡಿದ್ದರೆ. ಅಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಹಳೆ ವಿದ್ಯಾರ್ಥಿಗಳಿಗೆ ಇಷ್ಟು ಬೇಸರ ಆಗುತ್ತಿರಲಿಲ್ಲ.

ಮಲ್ಲಮ್ಮ ಹಳೆಯ ವಿದ್ಯಾರ್ಥಿನಿ, ಮೈಸೂರು

Tags: