Mysore
19
overcast clouds

Social Media

ಶನಿವಾರ, 10 ಜನವರಿ 2026
Light
Dark

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೊಬ್ಬ ʻಮಿಕ್ಕ ಬಣ್ಣದ ಹಕ್ಕಿʼ

ಒಂದೇ ಬಣ್ಣದ ಹಕ್ಕಿಗಳು ಒಟ್ಟಿಗೆ ಹಿಂಡು ಸೇರುತ್ತವೆ ಎನ್ನುವ ಮಾತಿದೆ. ಮಿಕ್ಕವು? ನಿನ್ನೆ ಗೋವಾದಲ್ಲಿ ಸಂಪನ್ನವಾದ ಭಾರತದ ೫೫ನೇ ಅಂತಾ ರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಡೆದ ಘಟನಾವಳಿಗಳು ಮತ್ತು ಬೆಳವಣಿಗೆ ಈ ಮಾತನ್ನು ನೆನಪಿಸಿತು. ಅಲ್ಲೊಂದು ಕನ್ನಡ ಚಿತ್ರ ಸ್ಪರ್ಧೆಯಲ್ಲಿತ್ತು. ಇದೇ ಮೊದಲ ಬಾರಿಗೆ ಆರಂಭವಾದ, ಹೊಸ ನಿರ್ದೇಶಕರನ್ನು ಉತ್ತೇಜಿಸಲು ಆರಂಭವಾದ ಸ್ಪರ್ಧೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೊಚ್ಚಲ ಚಿತ್ರ ನಿರ್ದೇಶಕರಿಗೆ ಒಂದು ಸ್ಪರ್ಧೆ ಇದೆ. ಈ ವರ್ಷದಿಂದ, ಅದರ ಜೊತೆಯಲ್ಲಿ, ಭಾರತಕ್ಕೆ ಮಾತ್ರ ಸೀಮಿತವಾಗಿ, ಚೊಚ್ಚಲ ನಿರ್ದೇಶಕರಿಗೆ ಪ್ರಶಸ್ತಿ ಸ್ಥಾಪನೆಯಾಗಿದೆ. ಅಂತಿಮವಾಗಿ ಐದು ಚಿತ್ರಗಳನ್ನು ಈ ಸ್ಪರ್ಧೆಗೆ ಆಯ್ಕೆ ಮಾಡಿದ್ದು, ಅದರಲ್ಲಿ ಒಂದು ಕನ್ನಡ ಚಿತ್ರ ಕೂಡ ಇದೆ. ಭಾರತೀಯ ಪನೋರಮಾ ವಿಭಾಗದಲ್ಲಿ ಆಯ್ಕೆ ನಿರೀಕ್ಷಿಸಿದ್ದ ಈ ಚಿತ್ರ ಅಲ್ಲಿ ಆಯ್ಕೆಯಾಗಿರಲಿಲ್ಲ. ಆದರೆ ಹೊಸ ನಿರ್ದೇಶಕರ ಸ್ಪರ್ಧೆಯ ವಿಭಾ ಗಕ್ಕೆ ಆಯ್ಕೆಯಾಗಿದೆ! ಚಿತ್ರದ ಹೆಸರು ‘ಮಿಕ್ಕ ಬಣ್ಣದ ಹಕ್ಕಿ’.

ಚಿತ್ರೋತ್ಸವದಲ್ಲಿ ಈ ಹಿಂದೆ ಹೇಳಿದಂತೆ, ಹಿಂದಿ ಚಿತ್ರರಂಗದ್ದೇ ಆರ್ಭಟ. ಹೆಸರಿಗಷ್ಟೇ ಇತರ ಭಾರತೀಯ ಭಾಷೆಗಳ ಮಂದಿ, ಚಿತ್ರಗಳಿದ್ದರೂ, ಹಿಂದಿ ಚಿತ್ರರಂಗದ ಮಂದಿಯನ್ನು ಅಲ್ಲಿ ಮೆರೆಸುತ್ತಾರೆ ಎನ್ನುವುದು ಬಹಿರಂಗ ಗುಟ್ಟು.

ಒಂದಿಲ್ಲ ಒಂದು ವಿಭಾಗದಲ್ಲಿ ಸೇರಿಸಿಯೋ, ಇಲ್ಲವೇ ಅವಕಾಶಗಳನ್ನು ನೀಡುವುದರ ಮೂಲಕವೋ ಮುಂಬೈ ಮಂದಿಯನ್ನು ಮೆರೆಸಲಾಗುತ್ತಿದೆ ಎನ್ನುವ ಆರೋಪದಲ್ಲಿ ಹುರುಳಿಲ್ಲದೆ ಇಲ್ಲ. ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗ ಬಹಳ ಮಹತ್ವದ್ದು. ಆಯಾ ವರ್ಷ ಇಲ್ಲಿ ತಯಾರಾಗುವ ಅತಿಶ್ರೇಷ್ಠ ಚಿತ್ರಗಳನ್ನು ಆಯ್ಕೆ ಮಾಡಿ ವಿಶ್ವ ಸಿನಿಮಾಗಳ ಜೊತೆ ಪ್ರದರ್ಶನ ಮಾಡುವ ವ್ಯವಸ್ಥೆ. ಅವುಗಳಲ್ಲಿ ಭಾರತದ ಬಹುತೇಕ ಭಾಷೆಗಳ ಚಿತ್ರಗಳಿರುತ್ತವೆ.

ಪನೋರಮಾ ಚಿತ್ರಗಳ ಪ್ರದರ್ಶನದ ವೇಳಾಪಟ್ಟಿ ಬಹಳಷ್ಟು ಮಂದಿಗೆ ಅಚ್ಚರಿ ತಂದಿದೆ. ಈ ವಿಭಾಗದಲ್ಲಿ ಮರಾಠಿ ಭಾಷೆಯ ಮೂರು ಚಿತ್ರಗಳಿದ್ದವು. ರಾವ್‌ಬಹದ್ದೂರ್, ಘರತ್ ಗಣಪತಿ ಮತ್ತು ಜಿಪ್ಸಿ. ಈ ಮೂರೂ ಚಿತ್ರಗಳಿಗೆ ಒಂದೊಂದೇ ಪ್ರದರ್ಶನಗಳ ಅವಕಾಶ! ಕನ್ನಡದ ಕೆರೆಬೇಟೆಯ ಎರಡು ಮತ್ತು ವೆಂಕ್ಯಾ ಒಂದು ಪ್ರದರ್ಶನದಲ್ಲಿ ತೃಪ್ತಿಪಡಬೇಕಾಯಿತು. ಮಲಯಾಳದ ಆಡುಜೀವಿತಂ, ಬಂಗಾಲಿಯ ಆಮರ್ ಬಾಸ್, ಅಸ್ಸಾಮಿ ಭಾಷೆಯ ಜೂಯಿ ಫೂಲ್, ಗೆಲೋ ಭಾಷೆಯ ಕಾರ್ಕೇನ್, ಗುಜರಾಥಿ ಭಾಷೆಯ ಕಾರ್ಖನು ಚಿತ್ರಗಳು ಒಂದೊಂದೇ ಪ್ರದರ್ಶನದಿಂದ ಸಮಾಧಾನ ಪಡಬೇಕಾಯಿತು. ಹಿಂದಿ ಭಾಷೆಯ ಚಿತ್ರಗಳಲ್ಲಿ ವಿಧು ವಿನೋದ್ ಛೋಪ್ರಾ ನಿರ್ದೇಶನದ ಟ್ವೆಲ್ತ್ ಫೈಲ್ ಚಿತ್ರಕ್ಕೆ ನಾಲ್ಕು ಪ್ರದರ್ಶನಗಳ ಅವಕಾಶವಿತ್ತು! ಮಾತ್ರವಲ್ಲ ಅವರದೊಂದು ಮಾಸ್ಟರ್ ಕ್ಲಾಸ್ ಕೂಡ ಇತ್ತು!

ಸುಭಾಷ್ ಘಾಯ್ ಅವರು ವರ್ಷಗಳ ಹಿಂದೆ ತಮ್ಮ ಸಂಸ್ಥೆಯ ಮೂಲಕ ನಿರ್ಮಿಸಿ, ನಿರ್ದೇಶಿಸಿದ್ದ ‘ಗಾಂಧಿ ಎ ಪರ್ಸ್ಪೆಕ್ಟಿವ್’, ೪೦ ನಿಮಿಷಗಳ ಚಿತ್ರದ ಎರಡು ಪ್ರದರ್ಶನಗಳು, ಜೊತೆಗೆ ಬೇರೊಂದು ವಿಷಯದ ಕುರಿತಂತೆ ಅವರ ಮಾಸ್ಟರ್‌ಕ್ಲಾಸ್ ಇತ್ತು. ಇದು ಒಂದೆರಡು ಉದಾಹರಣೆ ಮಾತ್ರ. ಬಹುತೇಕ, ಹಿಂದಿ ಚಿತ್ರರಂಗದ ಮಂದಿಗೆ ಎಲ್ಲ ಕಡೆ ಕೆಂಪುಹಾಸಿನ ಸ್ವಾಗತವಿತ್ತು.

ಈ ಬಾರಿ ಚಿತ್ರೋತ್ಸವವನ್ನು ಉದ್ಯಮಕ್ಕೆ ಬಿಟ್ಟುಕೊಟ್ಟಿದ್ದೇವೆ ಎಂದು ಹೇಳುವುದರ ಹಿಂದೆ ಇದ್ದದ್ದು ಒಂದೇ. ಚಿತ್ರೋತ್ಸವ ನಿರ್ದೇಶಕರಾಗಿ ಶೇಖರ್ ಕಪೂರ್ ಅವರನ್ನು ನೇಮಿಸಿದ್ದು. ಅವರು ಕೂಡ ಭಾರತೀಯ ಚಿತ್ರರಂಗ ಎಂದರೆ ಹಿಂದಿ ಚಿತ್ರರಂಗ ಎನ್ನುವ ಭಾವದಿಂದ ಹೊರಬಂದಂತಿರಲಿಲ್ಲ. ಇನ್ನು ಪತ್ರಿಕಾಗೋಷ್ಠಿಗಳೋ ಅಲ್ಲೂ ಅಷ್ಟೇ. ಹೊರದೇಶದಿಂದ ಬಂದ ಅತಿಥಿಗಳ ಪತ್ರಿಕಾಗೋಷ್ಠಿಗಳನ್ನು ಹೊರತುಪಡಿಸಿದರೆ, ಹೆಚ್ಚಿನ ಸಂದರ್ಭಗಳಲ್ಲಿ ಹಿಂದಿಯದೇ ಸಾಮ್ರಾಜ್ಯ ಇತ್ತು. ಹಿಂದಿಯೇತರ ಭಾಷೆಗಳ ಮಂದಿಯೂ ಹಿಂದಿಯ ಮೊರೆಹೋಗುತ್ತಿದ್ದ ಪ್ರಸಂಗವೂ ಇತ್ತು. ಅದಕ್ಕೆ ಅಪವಾದ ಈ ಮಿಕ್ಕ ಬಣ್ಣದ ಹಕ್ಕಿ.

ಮೊನ್ನೆ ಬುಧವಾರ ಅವರ ಪತ್ರಿಕಾಗೋಷ್ಠಿ ಇತ್ತು. ನಿನ್ನೆ ಅವರ ಚಿತ್ರ ಪ್ರದರ್ಶನ. ಸಮಾರೋಪ ಸಮಾರಂಭದಲ್ಲಿ ಮೊದಲ ಚಿತ್ರದ ನಿರ್ದೇಶಕ ನಿಗಿರುವ ಮೊದಲ ಪ್ರಶಸ್ತಿಯನ್ನು ಪಡೆಯುವ ಮೊದಲಿಗ ಯಾರು ಎನ್ನುವುದು ತಿಳಿಯುತ್ತದೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಮನೋಹರ್ ಉದ್ದಕ್ಕೂ ಕನ್ನಡದಲ್ಲಿ ಮಾತನಾಡಿದರು. ಈಗ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿರುವ ಮನೋಹರ್ ಚಿತ್ರರಂಗಕ್ಕೆ ಹೊಸಬರೇನೂ ಅಲ್ಲ. ಪೃಥ್ವಿ ಕೊಣನೂರು ಅವರ ‘ರೈಲ್ವೆ ಚಿಲ್ಡ್ರನ್’ ಚಿತ್ರದ ಬಾಲನಟರಲ್ಲಿ ಒಬ್ಬರಾಗಿ ಕಾಣಿಸಿಕೊಂಡವರು. ತಮ್ಮ ಅಭಿನಯಕ್ಕೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದವರು.

ಅವರು ನಟಿಸಿದ ‘ರೈಲ್ವೆ ಚಿಲ್ಡ್ರನ್’ ಚಿತ್ರ ಆಗ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿತ್ತು. ಚಿತ್ರೋತ್ಸವದಲ್ಲಿ ಹದಿನೆಂಟು ವರ್ಷ ಪೂರ್ತಿಯಾಗದವರು ಪಾಲ್ಗೊಳ್ಳುವಂತಿಲ್ಲ; ಆದ್ದರಿಂದ ಆಗ ಹದಿಮೂರು ವರ್ಷ ಪ್ರಾಯದ ಮನೋಹರ್ ಚಿತ್ರೋತ್ಸವದಲ್ಲಿ ಪಾಲ್ಗೊಂಡಿರಲಿಲ್ಲವಂತೆ. ಆಗಲೇ ನಾನು ಈ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದು ಕನಸಿದ್ದ ಮನೋಹರ್ ಈಗ ಅದನ್ನು ಈಡೇರಿಸಿಕೊಂಡದ್ದನ್ನು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಮೊದಲ ಚಿತ್ರದ ನಂತರ, ಮನೋಹರ್, ತಮ್ಮ ನಿರ್ದೇಶಕರ ಮುಂದಿನ ಚಿತ್ರಗಳ ಚಿತ್ರೀಕರಣದ ವೇಳೆ ಅವರ ಸಹಾಯಕರಾಗಿ ಕೆಲಸ ಮಾಡಿ ಅನುಭವ ಪಡೆದುಕೊಂಡರು. ‘ಹದಿನೇಳೆಂಟು’ ಚಿತ್ರ, ನನಗೆ ನಿರ್ದೇಶನದ ತುಡಿತವನ್ನು ಹೆಚ್ಚಿಸಿತು ಎನ್ನುತ್ತಾರೆ ಮನೋಹರ್.

‘ಮಿಕ್ಕ ಬಣ್ಣದ ಹಕ್ಕಿ’ ಚಿತ್ರ ಹನ್ನೆರಡು ವರ್ಷ ಪ್ರಾಯದ ಬಾಲೆ ಸೋನಿಯಾ ಬರೆದ ಅನುಭವ ಕಥಾನಕದ ದೃಶ್ಯರೂಪ. ಬಹಳ ಬಡಕುಟುಂಬದ ಈಕೆ ತೊನ್ನು ರೋಗ ಬಾಽತೆ. ಮನೆಯಲ್ಲಿ ಕುಡುಕ ತಂದೆಯ ಹಿಂಸೆ. ಸುತ್ತಮುತ್ತಲಿನವರು, ಶಾಲೆಯ ಸಹಪಾಠಿಗಳ ನಡುವೆ ಆಕೆಯ ಅನುಭವವನ್ನು ಅಕ್ಷರ ರೂಪಕ್ಕೆ ಇಳಿಸಿದರೆ, ಮನೋಹರ ಮತ್ತೆ ದೃಶ್ಯಕ್ಕಿಳಿಸುತ್ತಾರೆ.

ತಮ್ಮ ಚಿತ್ರದ ಪಾತ್ರಕ್ಕಾಗಿ ತೊನ್ನು ಇರುವ ಬಾಲಕಿಯ ಹುಡುಕಾಟದಲ್ಲಿ ಮನೋಹರ್‌ಗೆ ಜಯಶ್ರೀ ಅನಾಥಾಶ್ರಮವೊಂದರಲ್ಲಿ ಸಿಗುತ್ತಾಳೆ. ಆಕೆಯ ಅನುಭವವೂ, ಸೋನಿಯಾ ಅನುಭವಕ್ಕಿಂತ ಭಿನ್ನವಲ್ಲ, ಹಾಗಾಗಿ ನೈಜ ಅಭಿನಯ ತೆಗೆಸುವುದು ಕಷ್ಟವೇನೂ ಆಗಲಿಲ್ಲ ಎನ್ನುತ್ತಾರೆ ಮನೋಹರ್. ಶಾಂಘಾಯಿ ಚಿತ್ರೋತ್ಸವದ ನ್ಯೂ ಕರೆಂಟ್ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದ ‘ಮಿಕ್ಕ ಬಣ್ಣದ ಹಕ್ಕಿ’ ಚಿತ್ರದ ಅಭಿನಯಕ್ಕಾಗಿ ಜಯಶ್ರೀ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆಯುತ್ತಾರೆ.

ಚಿತ್ರ ನಿರ್ದೇಶನ ಸುಲಭವಾಗಲು ತಮ್ಮ ಅನುಭವವೂ ಕಾರಣ ಎನ್ನುತ್ತಾರೆ ಮನೋಹರ್. ಸೋನಿಯಾಳಂತೆ ತಾವು ಕೂಡ ಕಡುಬಡತನದಿಂದ ಬಂದವರು. ಕುಡುಕ ಅಪ್ಪ. ಜಯಶ್ರೀ ಅವರಿಗೆ ಇಪ್ಪತ್ತು ದಿನಗಳ ತಾಲೀಮು ಮಾಡಿಸಿ ಚಿತ್ರೀಕರಣ ಪ್ರಾರಂಭಿಸಿದೆ ಎನ್ನುವ ಮನೋಹರ್‌ಗೆ, ಬೇರೆ ದೇಶದಲ್ಲಿ ಚಿತ್ರ ಪ್ರದರ್ಶನ ಆಗುವುದಾಗಲಿ, ಪ್ರಶಸ್ತಿ ಪಡೆಯುವುದಾಗಲಿ ರೋಮಾಂಚನ ಉಂಟುಮಾಡುವುದಿಲ್ಲವಂತೆ. ಇಲ್ಲಿ, ನಮ್ಮ ನೆಲದಲ್ಲಿ ಪ್ರದರ್ಶನ ಕಾಣುತ್ತಿರುವುದೇ ನಿಜವಾಗಿಯೂ ಖುಷಿಯಂತೆ.

ಪತ್ರಿಕಾಗೋಷ್ಠಿಯ ಮೊದಲು, ಚಿತ್ರದ ಕುರಿತಂತೆ ತಮ್ಮ ಅನುಭವ ಮತ್ತು ವಿವರಗಳನ್ನು ಕನ್ನಡದಲ್ಲೇ ಹೇಳಿದ ಮನೋಹರ್, ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೂ ಕನ್ನಡದಲ್ಲೇ ಉತ್ತರಿಸಿದರು. ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹಿಂದೆಂದೂ ಯಾವ ಅತಿಥಿಯೂ ಕನ್ನಡದಲ್ಲೇ ಮಾತ ನಾಡಿದ, ಉತ್ತರಿಸಿದ ಉದಾಹರಣೆ ಇಲ್ಲ. ಸಾಮಾನ್ಯವಾಗಿ ಪ್ರಶ್ನೆಗಳು ಇಂಗ್ಲಿಷ್ ಅಥವಾ ಹಿಂದಿಯಲ್ಲಿರುತ್ತವೆ. ವೇದಿಕೆಯಲ್ಲಿದ್ದವರೂ ಅದೇ ಭಾಷೆಯಲ್ಲಿ ಉತ್ತರಿಸುತ್ತಾರೆ. ಆದರೆ ಮನೋಹರ್ ಪ್ರಶ್ನೆಗಳಿಗೆ ಉತ್ತರ ನೀಡಿದ್ದೆಲ್ಲ ಕನ್ನಡದಲ್ಲೇ. ಆ ಕಾರಣದಿಂದಲೇ ತಮ್ಮ ಚಿತ್ರದ ಹೆಸರಿನ ಹಾಗೆ ಮನೋಹರ್ ಉಳಿದ ಅತಿಥಿಗಳಿಗಿಂತ ಭಿನ್ನವಾಗಿ ಹೀಗೆ ಅಲ್ಲಿ ತಮ್ಮನ್ನು ಪರಿಚಯಿಸಿ ಕೊಂಡದ್ದಂತೂ ಹೌದು. ಅಲ್ಲಿ ಅವರಿಗೆ ಕನ್ನಡದಲ್ಲೂ ಪ್ರಶ್ನೆಗಳಿದ್ದವೆನ್ನಿ.

ಇಂತಹದೊಂದು ಬೆಳವಣಿಗೆ ಹಿಂದಿಯ ಹಾಗೆಯೇ ಇತರ ಭಾರತೀಯ ಭಾಷೆಗಳೂ ಅಷ್ಟೇ ಮಹತ್ವದವು, ಎಲ್ಲವೂ ರಾಷ್ಟ್ರೀಯ ಭಾಷೆಗಳೇ ಎನ್ನುವುದರ ಹಿನ್ನೆಲೆಯಲ್ಲಿ ಮುಖ್ಯ.

 

Tags:
error: Content is protected !!