Mysore
15
clear sky

Social Media

ಬುಧವಾರ, 24 ಡಿಸೆಂಬರ್ 2025
Light
Dark

ಕೋಟೆ: ಮಕ್ಕಳ ಬಿಸಿಯೂಟದ ಗೋಧಿಗೆ ಬೆಂಕಿ

ಸಮರ್ಪಕವಾಗಿ ಬಳಸಿಕೊಳ್ಳದೆ ಹುಳು ಹಿಡಿದಿದ್ದ ಗೋಧಿ; ಮುಖ್ಯ ಶಿಕ್ಷಕರು, ಅಡುಗೆ ಸಿಬ್ಬಂದಿ ವಿರುದ್ಧ ಆಕ್ರೋಶ

ಮಂಜು ಕೋಟೆ

ಎಚ್.ಡಿ.ಕೋಟೆ: ಸರ್ಕಾರಿ ಶಾಲೆಯ ಮಕ್ಕಳ ವಿದ್ಯಾರ್ಥಿಗಳಿಗೆ ಬಿಸಿ ಊಟಕ್ಕಾಗಿ ಸರಬರಾಜು ಮಾಡಿದ್ದ ಗೋಧಿಯನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳದೆ ಹುಳು ಬಂದಿದ್ದ 4-5 ಗೋಧಿ ಮೂಟೆಗಳನ್ನು ಶಾಲೆಯ ಹಿಂಭಾಗದಲ್ಲಿ ಅಡುಗೆ ಸಿಬ್ಬಂದಿ ಮತ್ತು ಮುಖ್ಯ ಶಿಕ್ಷಕರು ಸುಟ್ಟು ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತಾಲ್ಲೂಕಿನ ಅಂತರಸಂತೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಈ ಸರ್ಕಾರಿ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 200ಕ್ಕೂ ಹೆಚ್ಚು ಬಡ ಮಕ್ಕಳು ಓದುತ್ತಿದ್ದು, ಇವರ ಊಟಕ್ಕಾಗಿ ಸರ್ಕಾರ ಪ್ರತಿ ತಿಂಗಳು ಸಾವಿರಾರು ರೂ. ಖರ್ಚು ಮಾಡಿ ಆಹಾರ ಪದಾರ್ಥಗಳನ್ನು ಪೂರೈಸುತ್ತಿದೆ. ಅದರೆ ಈ ಶಾಲೆಯ ಮುಖ್ಯಶಿಕ್ಷಕರು ಮತ್ತು ಅಡುಗೆಯವರ ಬೇಜವಾಬ್ದಾರಿತನ ಮತ್ತು ಪರಸ್ಪರ ಮುಸುಕಿನ ಗುದ್ದಾಟದಿಂದಾಗಿ ಮಕ್ಕಳಿಗೆ ಸಿಗಬೇಕಾಗಿದ್ದ ಪೌಷ್ಠಿಕಾಂಶದ ಆಹಾರ ಪದಾರ್ಥಗಳು ಹಾಳಾಗಿ ಹೋಗಿವೆ.

ಈ ಶಾಲೆಗೆ ವಿತರಿಸಲಾಗಿದ್ದ ಗೋಧಿಯಿಂದ ಮಕ್ಕಳಿಗೆ ಉಪ್ಪಿಟ್ಟು ಮಾಡಿಕೊಡದೇ ಹಾಗೆಯೇ ಶೇಖರಣೆ ಮಾಡಿ ಇಟ್ಟಿದ್ದರಿಂದ ಗೋಧಿಯಲ್ಲಿ ಹುಳುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ವಾರ ಶಾಲೆ ಹಿಂಭಾಗದಲ್ಲಿ 4-5 ಗೋಧಿ ಮೂಟೆಗಳನ್ನು ಸುಟ್ಟು ಹಾಕಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆ ಕೆಲವರು ಅದರ ವಿಡಿಯೋ ಚಿತ್ರೀಕರಣ ಮಾಡಿ ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳಿಗೆ ಕಳಿಸಿದ್ದರು. ನಂತರ ಬಿಆರ್‌ಸಿ ಮತ್ತು ಸಿಆರ್‌ಪಿಗಳಾದ ಪ್ರಕಾಶ ಮತು ಕೃಷ್ಣಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಗೋಧೀಯನ್ನು ಸುಟ್ಟು ಹಾಕಿರುವುದನ್ನು ಪರಿಶೀಲಿಸಿ ತಪ್ಪಿತಸ್ಥರಿಗೆ ಎಚ್ಚರಿಕೆ ನೀಡಿ ಹೋಗಿದ್ದಾರೆ.

ಬಿಸಿ ಊಟದ ವಿಚಾರವಾಗಿ ತಾಲ್ಲೂಕಿನ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆಗಿಂದಾಗ್ಗೆ ಅಡುಗೆಯವರು ಮತ್ತು ಶಿಕ್ಷಕರ ನಿರ್ಲಕ್ಷ್ಯದಿಂದ ಒಂದಲ್ಲಾ ಒಂದು ಅಧ್ವಾನ ನಡೆಯುತ್ತಲೇ ಇರುತ್ತದೆ. ಈಗಲಾದರೂ ಬಡ ಮಕ್ಕಳಿಗೆ ಸಿಗಬೇಕಾಗಿದ್ದ ಬಿಸಿ ಊಟದ ವಿಚಾರದಲ್ಲಿ ಬೇಜವಾಬ್ದಾರಿ ವಹಿಸುವ ಯಾವುದೇ ಶಿಕ್ಷಕರು, ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸುವುದು ತಪ್ಪಬಹುದು ಮತ್ತು ಸರ್ಕಾರದ ಸೌಲಭ್ಯ ಮಕ್ಕಳಿಗೆ ತಲುಪುತ್ತದೆ ಎನ್ನುವುದು ಸಾರ್ವಜನಿಕರ ಅನಿಸಿಕೆಯಾಗಿದೆ.

“ಅಂತರಸಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಗೋಧಿ ಮೂಟೆಗಳನ್ನು ಸುಟ್ಟು ಹಾಕಿರುವ ವಿಚಾರವಾಗಿ ನಮ್ಮ ಅಧಿಕಾರಿಗಳು ಪರಿಶೀಲಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಡಿಡಿಪಿಐ ಅವರಿಗೆ ವರದಿ ಕಳುಹಿಸಲಾಗಿದೆ. ವರದಿ ಬಂದ ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.”
– ಕಾಂತರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಡಿ.ಕೋಟೆ

Tags:
error: Content is protected !!