Mysore
23
scattered clouds

Social Media

ಶನಿವಾರ, 04 ಜನವರಿ 2025
Light
Dark

ಹೊಸ ಇತಿಹಾಸ ಬರೆದ ಕೈ

• ಆರ್.ಟಿ.ವಿಠ್ಠಲಮೂರ್ತಿ

ಮೈತ್ರಿಕೂಟದ ಅಶ್ವಮೇಧ ಕಟ್ಟಿ ಹಾಕಿದ ಕಾಂಗ್ರೆಸ್‌
ಸಿದ್ಧರಾಮಯ್ಯ ಸ್ಥಾನ ಗಟ್ಟಿಗೊಳಿಸಿದ ಫಲಿತಾಂಶ

“ಇನ್ನು ಮೂರು ಕ್ಷೇತ್ರಗಳ ಗೆಲುವಿನ ಮೂಲಕ ಕಾಂಗ್ರೆಸ್ ಪಕ್ಷದ ಶಾಸಕಾಂಗ ಬಳಿ 137ಕ್ಕೇರಿದ್ದು, ಆ ಮೂಲಕ ಆಪರೇಷನ್‌ ಕಮಲದಂತಹ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಂತಾಗಿದೆ.”

ಬೆಂಗಳೂರು: ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅದ್ದೂರಿ ಗೆಲುವು ಸಾಧಿಸಿದ್ದು, ಆ ಮೂಲಕ ಸಿಎಂ ಸಿದ್ದರಾಮಯ್ಯ ಸರ್ಕಾರ ಮತ್ತಷ್ಟು ಸುಭದ್ರವಾದಂತಾಗಿದೆ.

ಉಪಚುನಾವಣೆ ನಡೆದ ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಗಳಿಸುವ ಮೂಲಕ ಕಾಂಗ್ರೆಸ್ ಪಕ್ಷ ಒಕ್ಕಲಿಗ, ಆಹಿಂದ ಮತದಾರರ ಜತೆಗೆ ಲಿಂಗಾಯತ ಮತದಾರರ ವಿಶ್ವಾಸವನ್ನು ಗಳಿಸಿರುವುದು ಸ್ಪಷ್ಟವಾಗಿದೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಒಕ್ಕಲಿಗ ಮತ ಬ್ಯಾಂಕ್‌ ಪ್ರಬಲವಾಗಿದ್ದರೆ, ಸಂಡೂರು, ಶಿಗ್ಗಾಂವಿ ಕ್ಷೇತ್ರಗಳಲ್ಲಿ ಲಿಂಗಾಯತ ಮತ ಬ್ಯಾಂಕ್‌ ಬಲಿಷ್ಠವಾಗಿದೆ. ಹೀಗೆ ಒಕ್ಕಲಿಗ, ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಅಹಿಂದ ಮತಗಳನ್ನು ಕ್ರೋಢೀಕರಿಸುವಲ್ಲಿ ಸಫಲವಾದ ಕಾಂಗ್ರೆಸ್ ಹೊಸ ಇತಿಹಾಸವನ್ನು ಬರೆದಿದೆ.

ವಕ್ಫ್‌ ಆಸ್ತಿ ವಿವಾದ, ವಾಲ್ಮೀಕಿ ಅಭಿವೃದ್ಧಿ ಹಗರಣ ಸೇರಿದಂತೆ ಹಲವು ವಿವಾದಗಳಿಗೆ ಸಿಕ್ಕು ನಲುಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಯಾವ ಅಂಶಗಳೂ ಅಡ್ಡಿಯಾಗದೆ ಇರುವುದು ವಿಶೇಷ. ಇದೇ ರೀತಿ ಮುಂದಿನ ದಿನಗಳಲ್ಲಿ ತನಗೆ ಎದುರಾಳಿಯಾಗುವ ಕುರುಹು ತೋರಿಸಿದ್ದ ಬಿಜೆಪಿ -ಜಾ.ದಳ ಮೈತ್ರಿಕೂಟಕ್ಕೂ ಕಾಂಗ್ರೆಸ್ ಸಮರ್ಥ ಉತ್ತರವನ್ನು ನೀಡಿ ದಂತಾಗಿದೆ. ಅದೇ ರೀತಿ
ರಾಜ್ಯ

ಸರ್ಕಾರವನ್ನು ಅಲುಗಾಡಿಸುವ ಎದುರಾಳಿಗಳ ತಂತ್ರಕ್ಕೂ ತಿರುಗೇಟು ಹೊಡೆದಂತಾಗಿದ್ದು, ಆ ಮೂಲಕ ಸರ್ಕಾರ ಭದ್ರ ಎಂಬ ಸಂದೇಶವನ್ನು ರವಾನಿಸಿದಂತಾಗಿದೆ.

ಇದೇ ರೀತಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಅಹಿಂದ ಮತದಾರರನ್ನು ಕ್ರೋಢೀಕರಿಸುವ ವಿಷಯದಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು ಆ ಮೂಲಕ ಸಿದ್ದರಾಮಯ್ಯ ತಾವು ಶೋಷಿತ ವರ್ಗಗಳ ಚಾಂಪಿಯನ್ ಎಂಬುದನ್ನು ಅನುಮಾನಕ್ಕೆಡೆ ಇಲ್ಲದಂತೆ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಈ ಮಧ್ಯೆ ಪರ್ಯಾಯ ನಾಯಕತ್ವದ ಕನಸು ಕಾಣುತ್ತಿದ್ದ ಸ್ವಪಕ್ಷದ ನಾಯಕರಿಗೂ ಸಿದ್ದರಾಮಯ್ಯ ಖಡಕ್ ಸಂದೇಶ ರವಾನಿಸಿದ್ದು ಸರ್ಕಾರ ಭದ್ರವಾಗಿರಬೇಕು ಎಂದರೆ ನನ್ನ ನಾಯಕತ್ವ ಅನಿವಾರ್ಯ ಎಂದು ಪರೋಕ್ಷವಾಗಿ ಸಾರಿದಂತಾಗಿದೆ.

ಉಪಚುನಾವಣೆಯಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಕೈ ಹಿಡಿಯುವುದು ಸ್ಪಷ್ಟವಾಗಿದ್ದು, ಆ ಮೂಲಕ ಯೋಜನೆಗಳು ಮುಂದುವರಿಯುವುದು ಸ್ಪಷ್ಟವಾಗಿದೆ. ಅಂದ ಹಾಗೆ ಕಾಂಗ್ರೆಸ್‌ ಗೆಲುವು ಗಳಿಸಿದ ಶಿಗ್ಗಾಂವಿ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು, ಅದನ್ನು ಭೇದಿಸುವ ಮೂಲಕ ಕಾಂಗ್ರೆಸ ಪಕ್ಷ ಅಹಿಂದ ಶಕ್ತಿಯನ್ನು ಹಿಗ್ಗಿಸಿಕೊಂಡಂತಾಗಿದೆ.

ಚನ್ನಪಟ್ಟಣ ಕ್ಷೇತ್ರ ಕುಮಾರಸ್ವಾಮಿ ಮತ್ತು ಜಾ.ದಳದ ಭದ್ರಕೋಟೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳುವ ಮೂಲಕ ಒಕ್ಕಲಿಗ ಪಾಳೇಪಟ್ಟಿನಲ್ಲೂ ತನ್ನ ಕೈ ಮೇಲಾಗುತ್ತಿರುವ ಕುರುಹು ನೀಡಿದೆ.

ಒಟ್ಟಿನಲ್ಲಿ ಬಿಜೆಪಿ-ಜಾ.ದಳ ಮೈತ್ರಿಕೂಟದ ಅಶ್ವಮೇಧವನ್ನು ತಡೆಯುವ ನಿಟ್ಟಿನಲ್ಲಿ ತಾನು ಸಮರ್ಥ ಎಂಬುದನ್ನು ಕಾಂಗ್ರೆಸ್‌ ಪಕ್ಷ ಸಾಬೀತುಪಡಿಸಿದೆ.

Tags: