Mysore
21
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮಹಾರಾಷ್ಟ್ರಕ್ಕೆ ಬಲಿಷ್ಠ ಸರ್ಕಾರದ ಮುನ್ನುಡಿ

ದೆಹಲಿ ಕಣ್ಣೋಟ
ಶಿವಾಜಿ ಗಣೇಶನ್‌

ಈ ವರ್ಷದ ಕೊನೆಯ ಮತ್ತು ತೀವ್ರ ಕುತೂಹಲ ಕೆರಳಿಸಿದ್ದ ದೇಶದ ‌ಎರಡನೇ ದೊಡ್ಡ ರಾಜ್ಯ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಹಾಗೂ 13 ರಾಜ್ಯಗಳ 46 ವಿಧಾನಸಭೆ ಉಪಚುನಾವಣೆ ಫಲಿತಾಂಶ ಸಹಜವಾಗಿಯೇ ಅಚ್ಚರಿ ಉಂಟುಮಾಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಸರ್ಕಾರ ಅಸ್ಥಿರದಿಂದ ಎರಡು ಮೈತ್ರಿ ಕೂಟದ ಆಡಳಿತ ವ್ಯವಸ್ಥೆಯು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವಂತಿತ್ತು, ಆದರೆ ಈ ಚುನಾವಣೆ ಅಂತಹ ಅನಿಶ್ಚಿತತೆಗೆ ತೆರೆ ಎಳೆದಿದೆ.

ಮಹಾರಾಷ್ಟ್ರವು ಮಹಾಯುತಿ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು ನೀಡಿದೆ. ಒಟ್ಟು 288 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತಕ್ಕೆ 140 ಸ್ಥಾನಗಳು ಬೇಕಿತ್ತು. ಆದರೆ ಈಗ ಈ ಮೈತ್ರಿಕೂಟಕ್ಕೆ 226 ಸ್ಥಾನಗಳನ್ನು ನೀಡುವ ಮೂಲಕ ಸುಭದ್ರ ಸರ್ಕಾರ ರಚನೆಗೆ ಮತದಾರ ಹಾದಿ ಮಾಡಿಕೊಟ್ಟಿರುವುದು ಒಳ್ಳೆಯ ಬೆಳವಣಿಗೆ.

ಇತ್ತ ಚಾರ್ಖಂಡ್ ರಾಜ್ಯದಲ್ಲಿ 81 ಕ್ಷೇತ್ರಗಳಿದ್ದು, ಜೆಎಂಎಂ ಮತ್ತು ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ 57 ಸ್ಥಾನಗಳನ್ನು ಪಡೆಯುವ ಮೂಲಕ ಈ ಚಿಕ್ಕ ರಾಜ್ಯದಲ್ಲಿ ಈ ಮೈತ್ರಿ ಕೂಟವು ಮುಖವನ್ನು ಉಳಿಸಿಕೊಂಡಿದೆ. ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟ ಕೇವಲ 23 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದು, ಇಂಡಿಯಾ ಮೈತ್ರಿಕೂಟದ ಸರ್ಕಾರ ರಚನೆಗೆ ಯಾವುದೇ ತೊಂದರೆ ಇಲ್ಲದಂತಾಗಿದೆ.

ಈ ಎರಡು ರಾಜ್ಯಗಳಲ್ಲಿ ಹಿಂದೆ ಇದ್ದ ಅಸ್ಥಿರ ಸರ್ಕಾರದ ಅನಿಶ್ಚಿತತೆ ಹೋಗಿ ಹೊಸ ಆಡಳಿತ ವ್ಯವಸ್ಥೆ ಸುಭದ್ರವಾಗುವ ಸ್ಪಷ್ಟತೆ ಕಂಡು ಬಂದಿದೆ. ಶಿಂಧೆ ಸರ್ಕಾರದಲ್ಲಿ ಮುಜುಗರದಿಂದಲೇ ‘ಉಪಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವಿಸ್ ನೂತನ ಸರ್ಕಾರದ ಮುಖ್ಯಮಂತ್ರಿ ಆಗುವ ಸಾಧ್ಯತೆಗಳು ಹೆಚ್ಚಿದೆ. ಏಕೆಂದರೆ ಬಿಜೆಪಿಯು ಹೆಚ್ಚು ಸ್ಥಾನಗಳನ್ನು ಪಡೆದಿರುವ ಜತೆಗೆ ಚುನಾವಣೆ ಪೂರ್ವದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಬಗೆಗೆ ಯಾವುದೇ ಒಪ್ಪಂದ ಆಗಿಲ್ಲದಿರುವುದು ಅವರಿಗೆ ವರದಾನವಾಗಲಿದೆ. ಚುನಾವಣೆ ಫಲಿತಾಂಶ ಬಂದ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಾಗಿ ಮೈತ್ರಿಕೂಟದ ನಾಯಕರು ಮತದಾರರಿಗೆ ಭರವಸೆ ನೀಡಿದ್ದರು. ಅಂತೆಯೇ ಮೈತ್ರಿಕೂಟವು ತಮ್ಮ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ ಮಾಡಿಕೊಳ್ಳದೆ ಚುನಾವಣೆ ಎದುರಿಸುವ ತೀರ್ಮಾನಕ್ಕೆ ಬಂದಿದ್ದವು, ಆದರೆ ಚುನಾವಣೆ ಹೂತ್ತಿನಲ್ಲಿ ಮಹಾಯುತಿ ಮತ್ತು ಮಹಾ ವಿಕಾಸ್‌ ಅಘಾಡಿ ನಡುವೆ ಜಿದ್ದಾ ಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಆದರೆ ಚುನಾವಣೆ ಫಲಿತಾಂಶವು ಮಹಾ ವಿಕಾಸ್ ಆಘಾಡಿಗೆ ತೀವ್ರ ನಿರಾಸೆ ಮತ್ತು ಮುಜುಗರ ಉಂಟು ಮಾಡಿದೆ. ಈ ಸೋಲಿನಿಂದ ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ರಾಷ್ಟ್ರವಾದಿ ಕಾಂಗ್ರೆಸ್‌ ಮತ್ತು ಉದ್ಧವ್ ಠಾಕ್ರೆಯ ಶಿವಸೇನೆಯು ಈಗ ಚೇತರಿಸಿಕೊಳ್ಳಲಿದೆ ಎನ್ನುವುದನ್ನು ನೋಡಲು ಇನ್ನಷ್ಟು ದಿನ ಕಾಯಬೇಕು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗಿಂತ ಹೆಚ್ಚು ಸ್ಥಾನಗಳನ್ನು ಅಂದರೆ 13 ಸ್ಥಾನಗಳನ್ನು ಪಡೆದಿದ್ದರಿಂದ ಈ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿಗೆ ಬಲವಾದ ಸ್ಪರ್ಧೆ ನೀಡುವ ವಿಶ್ವಾಸ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟಕ್ಕಿತ್ತು. ಆದರೆ ಆದದ್ದೇ ಬೇರೆ. ವಾಸ್ತವವಾಗಿ ಟಿಕೆಟ್ ಹಂಚಿಕೆಯಲ್ಲಿ ಎರಡು ಮೈತ್ರಿಕೂಟದಲ್ಲೂ ಅಲ್ಲಲ್ಲಿ ಗೊಂದಲ ಮತ್ತು ಅಸಮಾಧಾನವಿದ್ದರೂ ನೇರ ಮತ್ತು ತೀವ್ರ ಪೈಪೋಟಿ ನೀಡುವ ಲೆಕ್ಕಾಚಾರ ಈಗ ತಲೆಕೆಳಕಾಗಿದೆ. ಇದಕ್ಕೆ ಕಾರಣವೇನು ಎಂದು ಮಹಾ ವಿಕಾಸ್ ಆಘಾಡಿ ಮೈತ್ರಿ ಕೂಟ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮೈತ್ರಿ ಕೂಟ ಮತ್ತೆ ಗಟ್ಟಿಯಾಗಿ ಮುಂದುವರಿಯುವುದೇ ಅಥವಾ ತಮ್ಮ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಲು ಬೇರೆ ಬೇರೆ ಆಗಲಿವೇಯೇ ಎನ್ನುವ ಪ್ರಶ್ನೆ ಏಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಒಟ್ಟಿನಲ್ಲಿ ಅಸ್ತಿರ ಸರ್ಕಾರದಿಂದ ಒಂದು ಸ್ಥಿರವಾದ ಆಡಳಿತ ವ್ಯವಸ್ಥೆ ಬರುವುದು ಖಚಿತವಾದಂತಾದುದೇ ಈ ಚುನಾವಣೆಯಿಂದಾದ ಬೆಳವಣಿಗೆ.

ಜಾರ್ಖಂಡ್‌ನಲ್ಲಿಯೂ ‘ಇಂಡಿಯಾ’ ಮೈತ್ರಿಕೂಟದಿಂದ ಒಂದು ಸುಸ್ಥಿರ ಆಡಳಿತ ವ್ಯವಸ್ಥೆ ಬರುವಂತಾಗಿರುವುದು ಒಳ್ಳೆಯ ಬೆಳವಣಿಗೆ. ಇಲ್ಲಿ ಬಹುತೇಕ ಮಟ್ಟಿಗೆ ಈಗಿನ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಮತ್ತೆ ರಾಜ್ಯದ ಅಧಿಕಾರ ಹಿಡಿಯುವುದರಲ್ಲಿ ಯಾವ ಸಂಶಯವೂ ಇರಲಾರದು. ಅಂತು “ಇಂಡಿಯಾ’ ಮೈತ್ರಿ ಕೂಟವು ಜಾರ್ಖಂಡ್ ಗೆಲುವಿನಿಂದ ಸಮಾಧಾನ
ಪಟ್ಟುಕೊಳ್ಳುವಂತಾಗಿದೆ.

ಮೂರು ಲೋಕಸಭೆ ಉಪಚುನಾವಣೆಯಲ್ಲಿ ಕೇರಳದ ವಯನಾಡು ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ತಮ್ಮ ಅಣ್ಣ ರಾಹುಲ್ ಗಾಂಧಿ ಕಳೆದ ಲೋಕಸಭೆ ಚುನಾವಣೆಯಲ್ಲಿ 3.65 ಲಕ್ಷ ಮತಗಳಿಂದ ಗೆದ್ದಿದ್ದು ಪ್ರಿಯಾಂಕ ಈ ಗೆಲುವಿನ ಅಂತರವನ್ನು ನಾಲ್ಕು ಲಕ್ಷಕ್ಕೆ ಹೆಚ್ಚಿಸಿಕೊಂಡಿರುವುದು ಇವರ ಬಗೆಗೆ ವಯನಾಡಿನ ಮತದಾರರ ಒಲವು ಹೇಗಿದೆ ಎಂಬುದನ್ನು ಸಾಬೀತು ಪಡಿಸಿದೆ. ಪ್ರಿಯಾಂಕಾ ಗೆಲುವು ಲೋಕಸಭೆಯಲ್ಲಿ ಮತ್ತಷ್ಟು ಬಲವನ್ನು ತಂದುಕೊಡುವ ಸಾಧ್ಯತೆಯನ್ನು ನಿರಾಕರಿಸುವಂತಿಲ್ಲ. ಮೊದಲ ಬಾರಿ ಲೋಕಸಭ ಪ್ರವೇಶಿಸುತ್ತಿರುವಪ್ರಿಯಾಂಕಾ ತನ್ನ ಅಜ್ಜಿ ಇಂದಿರಾಗಾಂಧಿಯವರ ಪ್ರತಿರೂಪದಂತಿದ್ದು ಯಾವುದೇ ವಿಷಯದಲ್ಲಿ ನಷ್ಟವಾದ ಅಭಿಪ್ರಾಯ ನೀಡುವ ಮತ್ತು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುವುದು ಅವರ ಜನಪ್ರಿಯತೆಗೆ ಕಾರಣವಾಗಿದೆ.

ಮಹಾರಾಷ್ಟ್ರದ ನಾಂದೇಡ್ ಲೋಕಸಭೆ ಕ್ಷೇತ್ರ ಕಳೆದ ಬಾರಿ ಕಾಂಗ್ರೆಸ್‌ನ ವಸಂತರಾವ್ ಬಲವಂತರಾವ್ ಚವಾಣ್ ಪಾಲಾಗಿತ್ತು. ಅವರ ನಿಧನದಿಂದ ಈ ಸ್ಥಾನ ತೆರವಾಗಿತ್ತು. ಈ ಕ್ಷೇತ್ರ ಈಗ ಬಿಜೆಪಿಯ ಪಾಲಾಗಿರುವುದು ಮಹಾರಾಷ್ಟ್ರದ ಒಲವು ಮಹಾಯುತಿ ಕಡೆಗಿರುವುದನ್ನು ಸಾಬೀತುಪಡಿಸಿದೆ.

ಇನ್ನು ಹದಿಮೂರು ರಾಜ್ಯಗಳಲ್ಲಿ 46 ಕ್ಷೇತ್ರಗಳಲ್ಲಿ ನಡೆದಿರುವ ವಿಧಾನಸಭೆ ಉಪ ಚುನಾವಣೆಯಲ್ಲಿ ಮುಖ್ಯವಾಗಿ ಕರ್ನಾಟಕದ ಫಲಿತಾಂಶ ಬಿಜೆಪಿ ಮತ್ತು ಜನತಾದಳಕ್ಕೆ ಮುಖಭಂಗ ಉಂಟುಮಾಡಿದೆ. ನಿತ್ಯವೂ ಒಂದಲ್ಲ ಒಂದು ಆರೋಪಗಳನ್ನು ಮಾಡುತ್ತಾ ಬಂದ ಬಿಜೆಪಿಯ ಕಾರ್ಯವೈಖರಿಯನ್ನು ಮತದಾರ ಸ್ಪಷ್ಟವಾಗಿ ತಿರಸ್ಕರಿಸಿದ್ದಾನೆ. ಇತ್ತ ಪ್ರತಿಷ್ಠೆಯ ಕಣವಾಗಿದ್ದ ಚನ್ನಪಟ್ಟಣದಲ್ಲಿ ಕೇಂದ್ರದ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೂರನೇ ಚುನಾವಣೆಯಲ್ಲೂ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಮಂಡ್ಯ ಲೋಕಸಭೆ, ರಾಮನಗರ ವಿಧಾನಸಭೆಯಲ್ಲಿ ಸೋತಿದ್ದ ನಿಖಿಲ್‌ಗೆ ಸೋಲು ಬೆನ್ನಿಗಂಟಿದಂತಿದೆ.

ಹಾವೇರಿಯಿಂದ ಲೋಕಸಭೆಗೆ ಚುನಾಯಿತರಾಗಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರವನ್ನು ತೆರವು ಮಾಡಿದ್ದರು. ತಮ್ಮ ಮಗನನ್ನು ಉಪಚುನಾವಣೆಯಲ್ಲಿ ನಿಲ್ಲಿಸಿದ್ದ ಅವರು ಮತ್ತು ಬಿಜೆಪಿ ನಾಯಕರು ಶಿಗ್ಗಾಂವಿಯಲ್ಲಿ ಬಿಜೆಪಿ ಸುಲಭವಾಗಿ ಗೆಲ್ಲಲಿದೆ ಎನ್ನುವ ಆತ್ಮವಿಶ್ವಾಸವನ್ನು ಹೊಂದಿದ್ದರು.

ಶಿಗ್ಗಾಂವಿ ವಿಧಾನಸಭೆ ಚುನಾವಣೆಯಲ್ಲಿ ಕಳೆದ ನಾಲ್ಕು, ಕಾಂಗ್ರೆಸ್‌ ಮುಸ್ಲಿಮ್ ಅಭ್ಯರ್ಥಿಯನ್ನೇ ನಿಲ್ಲಿಸಿದ್ದರೂ ಸತತವಾಗಿ ಸೋಲು ಅನುಭವಿಸಿತ್ತು, ಆದರೂ ಕಾಂಗ್ರೆಸ್ ಮುಸ್ಲಿಮರ ಒತ್ತಾಯದಿಂದ ಕಳೆದ ಬಾರಿ ಸೋತಿದ್ದ ಮುಸ್ಲಿಮ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಿತ್ತು. ಈ ಬಾರಿ ಗೆಲುವು ಕಂಡಿರುವುದು ಕಾಂಗ್ರೆಸ್ಸಿಗೇ ಅಚ್ಚರಿ ಉಂಟು ಮಾಡಿದೆ. ಜನಾಭಿಪ್ರಾಯವೂ ಬಿಜೆಪಿಯ
ಬಸವರಾಜ ಬೊಮ್ಮಾಯಿಯ ಪುತ್ರನಿಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂದಿತ್ತು. ಆದರೆ ಕ್ಷೇತ್ರದ ಮತದಾರ ತನ್ನದೇ ಆದ ತೀರ್ಪನ್ನು ನೀಡಿ ಬಿಜೆಪಿಗೆ ಶಾಕ್ ನೀಡಿದ್ದಾನೆ.

ಇನ್ನು ಬಳ್ಳಾರಿಯ ಸಂಡೂರು ಕ್ಷೇತ್ರದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆಲುವ ಸಾಧಿಸಿದ ತುಕಾರಾಂ ಈ ಕ್ಷೇತ್ರವನ್ನು ತೆರವು ಮಾಡಿ ತಮ್ಮ ಪತ್ನಿಯನ್ನೇ ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿದ್ದರು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸುಲಭ ಎನ್ನುವ ಮತ್ತು ಕಾಂಗ್ರೆಸ್ಸಿಗೆ ಗೆಲುವು ಕಟ್ಟಿಟ್ಟ ಬುತ್ತಿ ಎನ್ನುವ ಮಾತು ಸಾರ್ವಜನಿಕವಾಗಿ ಮತ್ತು ಕಾಂಗ್ರೆಸ್ಸಿನಲ್ಲಿ ಇತ್ತು. ಜನಾರ್ಧನ ರೆಡ್ಡಿ ಅವರಿಗೆ ಗಣಿ ಹಗರಣದಲ್ಲಿ ಬಳ್ಳಾರಿಗೆ ಕಾಲಿಡದಂತೆ ರಾಜ್ಯ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ್ದರಿಂದ ರೆಡ್ಡಿ ಅವರಿಂದ ಬಿಜೆಪಿಗೆ ಹೆಚ್ಚಿನ ಬಲಬಂದಿರುವುದಾಗಿ ನಂಬಲಾಗಿತ್ತು, ಆದರೆ ಚುನಾವಣಾ ಫಲಿತಾಂಶ ಆ ನಂಬಿಕೆಯನ್ನು ಉಲ್ಟಾ ಮಾಡಿದೆ.

ಕರ್ನಾಟಕ ವಿಧಾನಸಭೆಯ ಮೂರೂ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ ಸರ್ಕಾರವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. 135 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಈಗ ಹೆಚ್ಚುವರಿಯಾಗಿ ಎರಡು ಕ್ಷೇತ್ರಗಳನ್ನು ವಿರೋಧಿ ಪಾಳೆಯದಿಂದ ಕಿತ್ತುಕೊಂಡಿದ್ದರಿಂದ ವಿಧಾನಸಭೆಯಲ್ಲಿ ಕಾಂಗ್ರೆಸ್ಸಿನ ಸಂಖ್ಯಾಬಲ ಹರಪನಹಳ್ಳಿ ಕ್ಷೇತ್ರದ ಪಕ್ಷೇತರ ಶಾಸಕಿಯ ಬೆಂಬಲ ಸೇರಿದಂತೆ 139ಕ್ಕೆ ಹೆಚ್ಚಿದಂತಾಗಲಿದೆ.

ಇನ್ನು ಮುಖ್ಯವಾಗಿ ಪಶ್ಚಿಮ ಬಂಗಾಳ ತೃಣ ಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಕದೃಷ್ಟಿ ಹೊಂದಿರುವ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಒಟ್ಟು ಆರು ಕ್ಷೇತ್ರಗಳಲ್ಲಿ ಮಮತಾ ಬ್ಯಾನರ್ಜಿ ಐದರಲ್ಲಿ ಗೆಲುವನ್ನಾಗಿಸಿಕೊಂಡಿದ್ದಾರೆ. ಬಿಜೆಪಿಯು ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸುವಷ್ಟೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಎನ್‌ಡಿಎಗೆ ಗೆಲುವು ತಂದ ಕೊಟ್ಟ ಮತ್ತೊಂದು ರಾಜ್ಯ ಎಂದರೆ ಬಿಹಾರ ಮತ್ತು ಉತ್ತರ ಪ್ರದೇಶ. ಕ್ರಮವಾಗಿ ಬಿಹಾರದಲ್ಲಿ ನಾಲ್ಕು ಮತ್ತು ಉತ್ತರ ಪ್ರದೇಶದಲ್ಲಿ ಐದು ಸ್ಥಾನಗಳು ಎನ್‌ಡಿಎ ಮೈತ್ರಿಕೂಟಕ್ಕೆ ಬಂದಿವೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಗೆ ಮೀರಿ ಬಿಜೆಪಿಯ ಮಹಾಯುತಿ ಮೈತ್ರಿಕೂಟವು ಗೆಲುವು ಸಾಧಿಸಿರುವುದು ಈ ಚುನಾವಣೆಯ ವಿಶೇಷ ಸಹಜವಾಗಿ ಉಪಚುನಾವಣೆಗಳಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಗೆಲುವು ಸಾಧ್ಯ ಎನ್ನುವ ಮಾತು ನಿಜವಾಗಿದ್ದರೂ ಕರ್ನಾಟಕದಲ್ಲಿ ಆ ಪರಿಸ್ಥಿತಿ ಮೇಲ್ನೋಟಕ್ಕೆ ಬಿಜೆಪಿ ಮತ್ತು ಜನತಾ ದಳದ ಅಬ್ಬರದ ಪ್ರಚಾರದಿಂದ ಕಾಂಗ್ರೆಸ್ಸಿಗೆ ಕಷ್ಟ ಎನಿಸುವಂತಿದ್ದ ಪರಿಸ್ಥಿತಿಯನ್ನು ಮತದಾರ ಉಲ್ಟಾ ಮಾಡುವ ಮೂಲಕ ಅಚ್ಚರಿಯ ಫಲಿತಾಂಶ ಬಂದಂತಾಗಿದೆ. ಈ ಅಚ್ಚರಿಯ ಫಲಿತಾಂಶದಿಂದ ಕಾಂಗ್ರೆಸ್ ಶಕ್ತಿ ಹೆಚ್ಚಿದಂತಾಗಿದೆ.

“ಹದಿಮೂರು ರಾಜ್ಯಗಳಲ್ಲಿ 48 ಕ್ಷೇತ್ರಗಳಲ್ಲಿ ನಡೆದಿರುವ ವಿಧಾನಸಭೆ ಉಪ ಚುನಾವಣೆಯಲ್ಲಿ ಮುಖ್ಯವಾಗಿ ಕರ್ನಾಟಕದ ಫಲಿತಾಂಶ ಬಿಜೆಪಿ ಮತ್ತು ಜನತಾದಳಕ್ಕೆ ಮುಖಭಂಗ ಉಂಟುಮಾಡಿದೆ. ಕಾಂಗ್ರೆಸ್ ವಿರುದ್ಧ ನಿತ್ಯವೂ ಒಂದಲ್ಲ ಒಂದು ಆರೋಪಗಳನ್ನು ಮಾಡುತ್ತಾ ಬಂದ ಬಿಜೆಪಿಯ ಕಾರ್ಯವೈಖರಿಯನ್ನು ಮತದಾರ ಸ್ಪಷ್ಟವಾಗಿ ತಿರಸ್ಕರಿಸಿದ್ದಾನೆ.”

Tags: