ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಇಲಾಖೆಗಳಲ್ಲಿನ ಸರ್ಕಾರಿ ನೌಕರರ ನಿವೃತ್ತಿಯ ವಯಸ್ಸನ್ನು 60ರಿಂದ 62 ವರ್ಷಕ್ಕೆ ಏರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂಬುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿದ್ದು, ಈ ಸುದ್ದಿ ಸಾಮಾಜಿಕ ಜಾಲಕಾಣಗಳಲ್ಲಿಯೂ ವೈರಲ್ ಆಗಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಾಗಲಿ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಅನುಮಾನಗಳಿಗೆ ಎಡಮಾಡಿಕೊಟ್ಟಿದೆ. ಈಗಲೇ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದು, ಉದ್ಯೋಗಕ್ಕಾಗಿ ಯುವಸಮೂಹ ಅಲೆದಾಡುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಿವೃತ್ತಿಯ ವಯಸ್ಸನ್ನೂ ಹೆಚ್ಚಿಸಿದರೆ ನಿರುದ್ಯೋಗ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ” ಎಂಬುದು ಯುವಸಮೂಹದ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಾರೆ ಇದು ಸುಳ್ಳು ಸುದ್ದಿಯೋ, ಸತ್ಯವೋ ತಿಳಿಯದು. ವಿತ್ತ ಸಚಿವರಂತೂ ಈ ಹಿಂದೆಯೇ ನಿವೃತ್ತಿಯ ವಯಸ್ಸು ಹೆಚ್ಚಿಸುವ ಯಾವುದೇ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿಲ್ಲ ಎಂದಿದ್ದಾರೆ. ಆದರೂ ಇಂತಹ ಸುದ್ದಿಗಳು ಪ್ರಸಾರವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಯುವ ಸಮೂಹವನ್ನು ದಾರಿ ತಪ್ಪಿಸುತ್ತಿದೆ. ಆದ್ದರಿಂದ ಇಂತಹ ಸುಳ್ಳು ಸುದ್ದಿಗಳಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕಿದೆ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.