Mysore
26
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಮಂಡ್ಯ|ಸ್ಲಮ್ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆಗೆ ಕ್ರಮ: ಡಾ ಕುಮಾರ

ಮಂಡ್ಯ: ಇಲ್ಲಿನ ಆರ್.ಟಿ.ಓ ಕಚೇರಿ ಮುಂಭಾಗದ ಕಾಳಪ್ಪ ಬಡಾವಣೆಯಲ್ಲಿ 65 ವಸತಿ ರಹಿತ ನಿವಾಸಿಗಳಿಗೆ ಹಕ್ಕು ಪತ್ರ ತಯಾರಾಗಿದ್ದು,  ಮಂಡ್ಯ ಶಾಸಕರ ನೇತೃತ್ವದಲ್ಲಿ ಹಕ್ಕು ಪತ್ರವನ್ನು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಕುಮಾರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮಂಡ್ಯ ನಗರದ ಕೊಳಚೆ ಪ್ರದೇಶಗಳ ಸಮಸ್ಯೆಗಳ ಸಂಬಂಧ ಸಭೆ ನಡೆಸಿ ಅವರು ಮಾತನಾಡಿದರು.

ಹೊಸ ತಮಿಳು ಕಾಲೋನಿ ಸರ್ವೆ ನಂಬರ್ 3 ರಲ್ಲಿ 1 ಎಕರೆ 39 ಗುಂಟೆ ಘೋಷಿತ ಕೊಳಚೆ ಪ್ರದೇಶದಲ್ಲಿ 169 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ.  ಶೀಘ್ರವೆ ಫಲಾನುಭವಿಗಳ ಹೆಸರಿಗೆ ಖಾತೆ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹೊನ್ನಯ್ಯ ಬಡಾವಣೆಯಲ್ಲಿ 113 ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದು, ಫಲಾನುಭವಿಗಳ ಹೆಸರಿಗೆ ಖಾತೆಗಳನ್ನು ಮಾಡಲಾಗುತ್ತಿದೆ. ರೈಲ್ವೆ ಹಳಿ ಪಕ್ಕದ ಬೀದಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹಾಗೂ 16 ಮನೆಗಳಲ್ಲಿ ಶೌಚಾಲಯ ಇಲ್ಲದ ಕಾರಣ ಶೌಚಾಲಯವನ್ನು ನಿರ್ಮಿಸಲು ಪೈಪ್ ಲೈನ್ ಕಾಮಗಾರಿ ಮಾಡಲು ಈ ಹಿಂದೆ ತಿಳಿಸಲಾಗಿತ್ತು. ಸದರಿ ಕಾಮಗಾರಿಯು ಟೆಂಡರ್ ಹಂತದಲ್ಲಿದ್ದು, ಯಾವುದೇ ಟೆಂಡರ್ ಕಾಮಗಾರಿಯನ್ನು ವಿಳಂಬ ಮಾಡದೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಸಂತೆಮಾಳ ಪಕ್ಕದ ಸ್ಲಾಟರ್ ಹೌಸ್ ಘೋಷಿತ ಸ್ಲಮ್ ಜಾಗದ ಪಕ್ಕದಲ್ಲಿ ವಾಸ ಮಾಡುತ್ತಿದ್ದ ವಸತಿ ರಹಿತ 6 ಫಲಾನುಭವಿಗಳಿಗೆ ನಿವೇಶನ ನೀಡಲು ಫಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡಲು ನಗರಾಶ್ರಯ ಸಮಿತಿಯೊಂದಿಗೆ ಚರ್ಚಿಸಲಾಗುವುದು ಎಂದರು.

ಕಾಳಿಕಾಂಬ ದೇವಸ್ಥಾನದ ಹಿಂಭಾಗ ಕೊಳಚೆ ಪ್ರದೇಶದ ನಿವಾಸಿಗಳಿಗೆ ಅದೇ ಸ್ಥಳದಲ್ಲೇ 38 ಮನೆಗಳನ್ನು ಮಂಜೂರು ಮಾಡಲಾಗಿದೆ.  ಕೊಳಚೆ ಪ್ರದೇಶದಲ್ಲಿ ಮನೆಗಳ ನಿರ್ಮಾಣ ಕಾಮಗಾರಿಗೆ ತಡೆಯಾಜ್ಞೆ ಇದ್ದು ನ್ಯಾಯಾಲಯದ ಅಂತಿಮ ತೀರ್ಪಿನಂತೆ ಮುಂದಿನ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ ಹೆಚ್ ಎಲ್ ನಾಗರಾಜು, ಉಪ ವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ತಹಶಿಲ್ದಾರ್ ಶಿವಕುಮಾರ್ ಬಿರಾದಾರ, ಮದ್ದೂರು ತಹಶಿಲ್ದಾರ್ ಸ್ಮಿತಾ ರಾಮ್, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಕುಮಾರ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯ ಪಾಲಕ ಅಭಿಯಂತರ ಮಹಮ್ಮದ್ ಜಫ್ರುಲ್ಲಾ, ಸಹಾಯಕ ಕಾರ್ಯಪಾಲಕ ಅಭಿಯಂತರರುಗಳಾದ ಕುಮಾರ್ ಈಶ್ವರ, ನಾಗೇಂದ್ರ, ಮುಖಂಡ ಸಿದ್ಧರಾಜು ಸೇರಿದಂತೆ ಇನ್ನಿತರರಿದ್ದರು.

Tags:
error: Content is protected !!