• ಸಿಂಧುವಳ್ಳಿ ಸುಧೀರ
ಪ್ರಾಚೀನದಿಂದ ಆಧುನಿಕ ಕವಿವರೇಣ್ಯರ ಕಾವ್ಯ ರಸಧಾರೆ ಪ್ರತಿಗಳು ಲಭ್ಯ
ಮೈಸೂರು ವಿವಿಯ ಕುವೆಂಪು ಅಧ್ಯಯನ ಸಂಸ್ಥೆಯಲ್ಲಿ ಭಂಡಾರ
ಗೆದ್ದಲು ಹುಳುಗಳಿಂದ ಹಸ್ತಪ್ರತಿಗಳು ಹಾಳಾಗುವ ಆತಂಕ
ಸಂರಕ್ಷಣೆಗೆ ಮೈಸೂರು ವಿಶ್ವವಿದ್ಯಾನಿಲಯ ಕಟಿಬದ್ಧ
ಮೈಸೂರು: 10ನೇ ಶತಮಾನದ ರನ್ನ ಕವಿ ರಚಿಸಿದ ಕಾವ್ಯದ ಸೊಬಗು, 16ನೇ ಶತಮಾನದ ಪಂಚಬಾಣ ಕವಿಯ ಪದ್ಯಗಳ ರಮ್ಯತೆ, 18ನೇ ಶತಮಾನದ ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ ಕವಿತೆಯ ಸೊಗಸು… ಇವುಗಳೂ ಸೇರಿದಂತೆ ಹಲವು ಶತಮಾನಗಳಲ್ಲಿ ಕವಿವರೇಣ್ಯರು ಹರಿಸಿದ ಕಾವ್ಯದ ರಸಧಾರೆ ಇಂದಿಗೂ ತಾಳೆಗರಿಗಳಲ್ಲಿ ಜೀವಂತವಾಗಿದೆ! ಅವು ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಉಸಿರಾಡುತ್ತಿವೆ!
ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿರುವ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಹಿಂದಿನ ಕಾಲದಿಂದ ಆಧುನಿಕ ಕಾಲದವರೆಗಿನ ಕನ್ನಡದ ಅನೇಕ ಕವಿಗಳ ಸಹಸ್ರಾರು ಹಸ್ತಪ್ರತಿಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಇಡಲಾಗಿದೆ.
2,482 ತಾಳೆಗರಿ ಹಸ್ತಪ್ರತಿಗಳು, 621 ದೊಡ್ಡ ಗಾತ್ರದ ಕಾಗದದ ಹಸ್ತಪ್ರತಿಗಳು, 821 ಚಿಕ್ಕ ಗಾತ್ರದ ಕಾಗದದ ಹಸ್ತಪ್ರತಿಗಳು, 36 ಕಡತಗಳು, 1,186 ಮೈಕ್ರೋ ಫಿಲ್ಮ್ ಹಸ್ತಪ್ರತಿಗಳನ್ನು ಸಂಗ್ರಹಿಸಿ ಇಡಲಾಗಿದೆ.
ರನ್ನ ಕವಿಯ ‘ಗದಾಯುದ್ಧ’ ಅತ್ಯಂತ ಹಳೆಯ ಹಸ್ತಪ್ರತಿಯಾಗಿದೆ. ಗದಾಯುದ್ಧ ಕಾವ್ಯದ ಪೂರ್ಣ ಹಸ್ತಪ್ರತಿ ಅಧ್ಯಯನ ಸಂಸ್ಥೆಯಲ್ಲಿ ಮಾತ್ರ ಲಭ್ಯವಿದ್ದು, ರಾಜ್ಯದ ಇತರೆ ಯಾವುದೇ ಸಂಸ್ಥೆಯಲ್ಲಿಯೂ ಇಲ್ಲ. ಪ್ರಸ್ತುತ ಲಭ್ಯವಿರುವ ಗದಾಯುದ್ಧ ಹಸ್ತಪ್ರತಿಯು ಕ್ರಿ.ಶ.1342ರಲ್ಲಿ ಲಭ್ಯವಾಗಿದೆ.
ಪಂಚಬಾಣ ಕವಿ 1614 ರಲ್ಲಿ ರಚಿಸಿರುವ ‘ಭುಜಬಲಿ ಚರಿತೆ’ ಕೃತಿಯ ಹಸ್ತಪ್ರತಿಯೂ ಸಂಸ್ಥೆಯಲ್ಲಿ ಲಭ್ಯವಿದ್ದು, ಅವರ ಸ್ವಹಸ್ತಾಕ್ಷರ ಕೃತಿಯಾಗಿದೆ.
ಮಠಮಾನ್ಯಗಳು ಮತ್ತು ಶಾನುಭೋಗರ ಮನೆಗಳಲ್ಲಿ ಲೆಕ್ಕ ಬರೆಯಲು ಬಳಸುತ್ತಿದ್ದ ಕಡತಗಳೂ ಇವೆ. ಈ ಕಡತಗಳನ್ನು ಹುಣಸೆ ಬೀಜವನ್ನು ರುಬ್ಬಿ ‘ಕೋರ’ ಬಟ್ಟೆಯ ಮೇಲೆ ಲೇಪಿಸಿ ಅದರ ಮೇಲೆ ಮಸಿಯನ್ನು ಹಾಕಿ ಕಡತಗಳನ್ನು ತಯಾರಿಸುತ್ತಿದ್ದರು. ಈ ಕಡತಗಳ ಮೇಲೆ ಬಳಪದ ಕಡ್ಡಿಯನ್ನು ಬಳಸಿ ಲೆಕ್ಕವನ್ನು ಬರೆಯುತ್ತಿದ್ದರು.
ಸಂರಕ್ಷಣೆ ವಿಧಾನ:
ಸಂಗ್ರಹಿಸಿದ ಹಸ್ತಪ್ರತಿಗಳನ್ನು ಪರಿಶೀಲಿಸಿ ಧೂಳು ಒರೆಸಿ ನೀಲಗಿರಿ ಎಣ್ಣೆ, ಹೊಂಗೆ ಎಣ್ಣೆ, ಬೇವಿನ ಎಣ್ಣೆ, ಪಚ್ಚೆ ಕರ್ಪೂರವನ್ನು ಮಿಶ್ರಣ ಮಾಡಿ ಕಾಯಿಸಿ, ಆರಿಸಿ ತಾಳೆ ಗರಿಗಳಿಗೆ ಪ್ರಮಾಣಾನುಸಾರವಾಗಿ ಲೇಪಿಸಲಾಗುತ್ತದೆ. ಹೀಗೆ ಲೇಪಿಸಿದ ಹಸ್ತಪ್ರತಿಗಳನ್ನು ಪ್ರಧೂಮನ ಕಪಾಟಿನಲ್ಲಿ ಜೋಡಿಸಿ ಇಡಲಾಗುತ್ತದೆ. ಪ್ರಧೂಮನ ಕಪಾಟಿನ ಕೆಳಗಡೆ ಒಂದು ಬಟ್ಟಲನ್ನು ಅಳವಡಿಸಿ ಅದಕ್ಕೆ ಥೈಮಲ್ ಅನ್ನು ಹಾಕಿಲಾಗುತ್ತದೆ. ಥೈಮಲ್ ಇರುವ ಬಟ್ಟಲಿನ ಕೆಳಗೆ ವಿದ್ಯುತ್ ಬಲ್ಬನ್ನು ಅಳವಡಿಸಲಾಗಿದೆ. ಬಲ್ಲಿನ ಶಾಖಕ್ಕೆ ಥೈಮಲ್ ಕರಗಿ ಅದರಿಂದ ಹೊಮ್ಮುವ ಧೂಮದಿಂದಾಗಿ ತಾಳೆ ಗರಿಯಲ್ಲಿರುವ ಸೂಕ್ಷ್ಮಾಣು ಕೀಟಗಳು ಸಾಯುತ್ತವೆ. ಜೊತೆಗೆ ತಾಳೆಗರಿಗಳು ನಾರಿನಂತಾಗಿ ಬಾಳಿಕೆ ಬರುತ್ತವೆ.
5 ಬಗೆಯಲ್ಲಿ ಹಸ್ತ ಪ್ರತಿಗಳ ಸಂರಕ್ಷಣೆ:
• ಅತ್ಯಂತ ವೈಜ್ಞಾನಿಕವಾಗಿ ಹವಾ ನಿಯಂತ್ರಿತ ಕೊಠಡಿಯಲ್ಲಿ ಸಂರಕ್ಷಿಸಬೇಕು
• ಹಸ್ತಪ್ರತಿಗಳನ್ನು ಡಿಜಿಟಲೈಜೇಷನ್ ಮಾಡಬೇಕು
• ಹಳೆಯ ಹಸ್ತಪ್ರತಿಗಳಲ್ಲಿರುವ ಲಿಪಿಯ ಮಾದರಿಯ ಅನುಸಾರವಾಗಿಯೇ ಹೊಸದಾಗಿ ತಾಳೆಗರಿಯಲ್ಲಿ ಬರೆಯಿಸುವುದು
• ಹಸ್ತ ಪ್ರತಿಗಳಲ್ಲಿ ಬರೆಯಲಾಗಿರುವ ಕಾವ್ಯ ಸಂಪತ್ತನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದು
• ಹಸ್ತಪ್ರತಿ ವಿಭಾಗವನ್ನು ಒಂದು ಅಧ್ಯಯನ ವಿಭಾಗವಾಗಿ ರೂಪಿಸಬೇಕು
ರಕ್ಷಣೆ ದೊಡ್ಡ ಸವಾಲು:
ಡಾ.ಬಿ.ಓ.ಗಂಗಾಧರಪ್ಪ, ಎನ್.ಶ್ವೇತಾ ಅವರು ಹಸ್ತಪ್ರತಿ ವಿಭಾಗದ ಸಂಶೋಧನಾ ಸಹಾಯಕರಾಗಿ ಹಸ್ತಪ್ರತಿಗಳನ್ನು ಸಂಪಾದಿಸಿ ಪ್ರಕಟಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಈ ಭಂಡಾರದ ನಿರ್ವಹಣೆಯ ಜವಾಬ್ದಾರಿಯು ಪರಿಚಾಲಕರಾದ ಪಿ.ರೂಪ ಅವರದ್ದಾಗಿದೆ. ಇವುಗಳನ್ನು ಜಾಗರೂಕತೆಯಿಂದ ಸಂರಕ್ಷಿಸಿಟ್ಟಿದ್ದರೂ ಗೆದ್ದಲು ಹುಳುಗಳು, ವಿವಿಧ ಕೀಟಗಳು ದಾಳಿ ನಡೆಸುತ್ತಿವೆ. ಹಾಗಾಗಿ ಹಸ್ತಪ್ರತಿಗಳ ರಕ್ಷಣೆಯೇ ದೊಡ್ಡ ಸವಾಲಾಗಿದೆ.
ʼʼವಿದೇಶಿ ಅಧ್ಯಯನಕಾರರು, ಸಾಹಿತ್ಯ ವಿದ್ಯಾರ್ಥಿಗಳು ಮತ್ತು ಸಂಶೋಧಕರು, ಇತರೆ ಸಾಹಿತ್ಯಾಸಕ್ತರು ಹಸ್ತಪ್ರತಿ ಭಂಡಾರಕ್ಕೆ ಭೇಟಿ ನೀಡಿ ಹಸ್ತಪ್ರತಿಗಳ ಸದುಪಯೋಗ ಪಡೆದುಕೊಂಡಿದ್ದಾರೆ.ʼʼ
ಡಾ.ಎಚ್.ಗೌರಮ್ಮ, ಉಪ ನಿರ್ದೇಶಕರು
(ಪ್ರಭಾರ), ಹಸ್ತಪ್ರತಿ ವಿಭಾಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ.
ಸಂರಕ್ಷಣೆಗೆ ಬದ್ಧ:
‘ಹಸ್ತಪ್ರತಿಗಳ ಸಂರಕ್ಷಣೆಗೆ ಬದ್ಧರಾಗಿದ್ದೇವೆ. ಅವುಗಳಿಗೆ ಪರಿಹಾರಗಳೇನು ಎಂಬುದನ್ನು ತಿಳಿಸಿದರೆ ಪರಿಹರಿಸಲು ಸಿದ್ಧರಿದ್ದೇವೆ. ಹಸ್ತಪ್ರತಿಗಳು ಉಳಿಯಬೇಕಾದರೆ ಡಿಜಿಟಲೀಕರಣ ಒಂದೇ ಮಾರ್ಗ. ಹಸ್ತಪ್ರತಿಗಳ ಡಿಜಿಟಲೀಕರಣಕ್ಕೆ ಮಿಥಿಕ್ ಸೊಸೈಟಿ ಮುಂದೆ ಬಂದಿದೆʼ.
# ಪ್ರೊ.ಎನ್.ಕೆ.ಲೋಕನಾಥ್, ಕುಲಪತಿ, ಮೈಸೂರು ವಿಶ್ವವಿದ್ಯಾನಿಲಯ.
ಡಿಜಿಟಲೀಕರಣ ಆಗಬೇಕು:
ʼʼಹಸ್ತಪ್ರತಿಗಳು ಮುಂದಿನ ತಲೆಮಾರಿಗೂ ಉಳಿಯಬೇಕಾದರೆ ಸರ್ಕಾರ ಹಸ್ತಪ್ರತಿಗಳನ್ನು ಡಿಜಿಟಲೀಕರಣ ಮಾಡಬೇಕು. ಸಂಸ್ಥೆಯಲ್ಲಿರುವ ಹಸ್ತಪ್ರತಿಗಳನ್ನು ಡಿಜಿಟಲೀಕರಣ ಮಾಡಲು ಮತ್ತು ಪುಸ್ತಕ ರೂಪಕ್ಕೆ ತರಲು ಖಾಸಗಿ ಸಂಸ್ಥೆಗಳು ಕೂಡ ಮುಂದೆ ಬಂದಿವೆ. ಆದರೆ ಹಸ್ತಪ್ರತಿಗಳು ಸರ್ಕಾರದ ಆಸ್ತಿಯಾಗಿರುವುದರಿಂದ ಸರ್ಕಾರವೇ ಡಿಜಿಟಲೀಕರಣಗೊಳಿಸುವುದು ಸೂಕ್ತ.ʼʼ
• ಪ್ರೊ.ಎನ್.ಕೆ.ಲೋಲಾಕ್ಷಿ, ನಿರ್ದೇಶಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ.
ʼʼಹಸ್ತಪ್ರತಿಗಳನ್ನು ವೀಕ್ಷಿಸಲು ತುಂಬಾ ಖುಷಿಯಾಗುತ್ತದೆ. ಹಸ್ತಪ್ರತಿಗಳು ನಮ್ಮ ನಾಡಿನ ಅಮೂಲ್ಯ ಸಂಪತ್ತು. ಆದ್ದರಿಂದ ಹಸ್ತಪ್ರತಿಗಳನ್ನು ವೈಜ್ಞಾನಿಕವಾಗಿ ರಕ್ಷಿಸಬೇಕಿದೆ.ʼʼ
ಕೆ.ಜಿ. ಪ್ರಜ್ವಲ್ ಕುಮಾರ್, ದ್ವಿತೀಯ ಎಂ.ಎ.,
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ರಿ, ಮೈಸೂರು ವಿವಿ.
ʼʼಸಂಸ್ಥೆಯಲ್ಲಿ ಹಸ್ತಪ್ರತಿಗಳನ್ನು ನೋಡಲು ಎಲ್ಲ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಿದ್ದಾರೆ. ಹಸ್ತಪ್ರತಿ ವೀಕ್ಷಣೆಗೆ ಬೇರೆ ಕಾಲೇಜಿನಿಂದ ಬರುವ ವಿದ್ಯಾರ್ಥಿಗಳಿಗೂ ಅವಕಾಶ ಮಾಡಿಕೊಡುತ್ತಾರೆ. ಅಲ್ಲದೇ ಹಸ್ತಪ್ರತಿ ವಿಭಾಗದ ಸಿಬ್ಬಂದಿಗಳು ಪ್ರತಿದಿನ ಹಸ್ತಪ್ರತಿಗಳನ್ನು ಪರಿಶೀಲಿಸಿ ಧೂಳು ಮತ್ತಿತರ ಯಾವುದೇ ಸಮಸ್ಯೆಗಳು ಆಗದ ರೀತಿಯಲ್ಲಿ ಜೋಪಾನ ಮಾಡುತ್ತಾರೆ.ʼʼ
• ಎ.ಕೆ.ತೇಜಸ್, ದ್ವಿತೀಯ ಎಂ.ಎ., ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ರಿ, ಮೈಸೂರು ವಿವಿ.
ಮುಮ್ಮಡಿಯವರದ್ದೇ ಬೃಹತ್ ಹಸ್ತಪ್ರತಿ:
ಮೈಸೂರು ಸಂಸ್ಥಾನದ ರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ೧೮೫೦ರಲ್ಲಿ ರಚಿಸಿರುವ ʼʼಶ್ರೀಕೃಷ್ಣ ಕಥಾ ಸಾರ ಸಂಗ್ರಹʼʼ ಅಧ್ಯಯನ ಸಂಸ್ಥೆಯಲ್ಲಿ ಇರುವ ಅತ್ಯಂತ ದೊಡ್ಡ ಹಸ್ತಪ್ರತಿಯಾದರೆ ʼʼಹಲ್ಲಿ ಬಿದ್ದ ಶಕುನ” ಸಂಸ್ಥೆಯಲ್ಲಿ ಸಂಗ್ರಹವಾಗಿರುವ ಅತ್ಯಂತ ಚಿಕ್ಕ ಹಸ್ತಪ್ರತಿಯಾಗಿದೆ.