ಮೈಸೂರಿನ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ವಾರಾಂತ್ಯ ರಜೆಯ ಪ್ರವಾಸಕ್ಕೆಂದು ಮಂಗಳೂರಿಗೆ ತೆರಳಿದ್ದ ವೇಳೆ ತಾವು ತಂಗಿದ್ದ ಉಳ್ಳಾಲ ಸಮೀಪದ ವಾಸ್ಕೊ ರೆಸಾರ್ಟ್ ಈಜುಕೊಳದಲ್ಲಿ ಆಟವಾಡಲು ಹೋಗಿ ಈಜುಬಾರದೆ ಮುಳುಗಿ ಸಾವನ್ನಪ್ಪಿರುವುದು ಬೇಸರದ ಸಂಗತಿ.
ರೆಸಾರ್ಟ್ ನ ಈಜುಕೊಳದಲ್ಲಿ ಯಾವುದೇ ಸುರಕ್ಷತಾ ಪರಿಕರಗಳಿಲ್ಲದಿರುವುದು ಹಾಗೂ ರೆಸಾರ್ಟ್‌ನ ಯಾವ ಸಿಬ್ಬಂದಿಯೂ ಈಜುಕೊಳದ ಸಮೀಪ ಇಲ್ಲದಿರುವುದು ಇವರ ಸಾವಿಗೆ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.
ನೀರಿನಲ್ಲಿ ಮುಳುಗುವ ವೇಳೆ ಈ ಯುವತಿಯರು ಸಹಾಯಕ್ಕಾಗಿ ಕೂಗಿಕೊಂಡರೂ ರೆಸಾರ್ಟ್‌ನ ಯಾವ ಸಿಬ್ಬಂದಿಯೂ ನೆರವಿಗೆ ಬಾರದಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾವಿಗೆ ರೆಸಾರ್ಟ್‌ನಲ್ಲಿರುವ ಲೋಪಗಳೇ ಕಾರಣ ಎಂದು ಮಂಗಳೂರು ಪೊಲೀಸ್ ಆಯುಕ್ತರು ಹೇಳಿರುವುದಾಗಿ ವರದಿಯಾಗಿದೆ.
ಈಗಾಗಲೇ ಪೊಲೀಸರು ತನಿಖೆ ಆರಂಭಿಸಿದ್ದು, ತನಿಖೆ ವೇಳೆ ರೆಸಾರ್ಟ್, ಮಾಲೀಕರು ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಸದ್ಯ ರೆಸಾರ್ಟ್‌ಗೆ ಬೀಗ ಹಾಕಲಾಗಿದ್ದು, ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅನಧಿಕೃತ ರೆಸಾರ್ಟ್‌ಗಳ ಹಾವಳಿ ಮಂಗಳೂರಿನಲ್ಲಿ ಮಾತ್ರವಲ್ಲದೆ ಎಲ್ಲ ಕಡೆಗಳಲ್ಲಿಯೂ ತಲೆ ಎತ್ತುತ್ತಿದ್ದು, ಇವುಗಳ ಬಗ್ಗೆ ಆಯಾ ಜಿಲ್ಲಾಡಳಿತ ಗಮನಹರಿಸಿ ಅನಧಿಕೃತ ರೆಸಾರ್ಟ್ ಗಳನ್ನು ತೆರವು ಮಾಡಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಬೇಕು.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.