ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯದಿಂದ ಗಬ್ಬುನಾರುತ್ತಿರುವ ಶೌಚಾಲಯ
ಮಂಜು ಕೋಟಿ
ಎಚ್.ಡಿ.ಕೋಟೆ: ತಾಲ್ಲೂಕು ಆಡಳಿತ ಭವನದ ಒಂದನೇ ಮಹಡಿಯಲ್ಲಿರುವ ವಿವಿಧ ಇಲಾಖೆಗಳ 12 ಶಾಖೆಗಳ ಕಚೇರಿ ಸಮೀಪದಲ್ಲಿ ಕಸದ ರಾಶಿ ಮತ್ತು ಶೌಚಾಲಯಗಳು ಒಂದು ವಾರದಿಂದ ಗಬ್ಬುನಾರುತ್ತಿದ್ದು, ಅಧಿಕಾರಿಗಳು ಮತ್ತು ನೌಕರರು ಕಂಡು ಕಾಣದಂತೆ ಇದ್ದಾರೆ.
ಪಟ್ಟಣದ ಆಡಳಿತ ಭವನದಲ್ಲಿರುವ ಸರ್ವೆ, ಆಹಾರ, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಭೂ ಮಾಪನ ಶಾಖೆಯ ಅಧೀಕ್ಷಕರು, ತಾಂತ್ರಿಕ ವಿಭಾಗ, ಪೋಡಿ ಶಾಖೆ, ಅಭಿಲೇಖಾಲಯ ಮೋಜಣಿ ವಿಭಾಗದ ಬಳಿ ಇರುವ ಪುರುಷರ ಮತ್ತು ಮಹಿಳೆಯರ ಶೌಚಾಲಯದ ಪಕ್ಕದ ಖಾಲಿ ಜಾಗದಲ್ಲಿ ಕಸದ ರಾಶಿಯನ್ನು ಗುಡ್ಡೆ ಹಾಕಿದ್ದಾರೆ. ಅಲ್ಲದೆ ಈ ಶೌಚಾಲಯಗಳಲ್ಲಿ ನೀರು ಇಲ್ಲದೆ ದುರ್ವಾಸನೆ ಬೀರುತ್ತಿದೆ. ಭವನದ ಈ ಮಹಡಿಯಲ್ಲಿ ಕೆಲಸ ನಿರ್ವಹಿಸುವ ಕಚೇರಿಗಳು ಮತ್ತು ಶಾಖೆಗಳಿಗೆ ಪ್ರತಿನಿತ್ಯ ರೈತರು, ಸಾರ್ವಜನಿಕರು ಭೇಟಿ ನೀಡುತ್ತಾರೆ. ಈ ವೇಳೆ ಕಸದ ರಾಶಿ ಹಾಗೂ ಶೌಚಾಲಯದ ಅಶುಚಿತ್ವ ನೋಡಿ ಮುಜುಗರ ಪಡುವಂತಾಗಿದೆ. ಹೀಗಿದ್ದರೂ ಅಧಿಕಾರಿಗಳು ಮತ್ತು ನೌಕರರು ಇತ್ತ ಗಮನಹರಿಸಿ ಸ್ವಚ್ಛತಾ ಕಾರ್ಯ ಮಾಡಿಸಲು ಮುಂದಾಗಿಲ್ಲ. ಇದರಿಂದ ಸಾರ್ವಜನಿಕರು, ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿ, ಸಿಬ್ಬಂದಿ ವರ್ಗದವರು ಈ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ. ಆದ್ದರಿಂದ ಶಾಸಕರು ಇತ್ತ ಗಮನಹರಿಸಿ ಆಡಳಿತ ಭವನದ ಸೌಂದರ್ಯ ಮತ್ತು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿ, ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
“ಎಚ್.ಡಿ.ಕೋಟೆ ತಾಲ್ಲೂಕು ಆಡಳಿತ ಭವನದ ಮೊದಲನೇ ಮಹಡಿಯಲ್ಲಿರುವ ಇಲಾಖೆಯವರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿಬೇಕು. ಇದನ್ನು ನಿರ್ಲಕ್ಷಿಸುವವರಿಗೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳುತ್ತೇನೆ”
– ಶ್ರೀನಿವಾಸ್, ತಹಸಿಲ್ದಾರ್