Mysore
30
few clouds

Social Media

ಗುರುವಾರ, 15 ಜನವರಿ 2026
Light
Dark

ಓದುಗರ ಪತ್ರ: ನೌಕರರಿಗೆ ವಿಶ್ರಾಂತಿ ಬೇಡವೇ?

ಮುಂಬೈನಲ್ಲಿ ನಡೆದ ಸಿಎನ್‌ ಬಿಸಿ ಜಾಗತಿಕ ನಾಯಕತ್ವ ಶೃಂಗ ಸಭೆಯಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ, ಎನ್.ಆರ್.ನಾರಾಯಣಮೂರ್ತಿಯವರು ಭಾಗವಹಿಸಿ, ‘ಸಾಫ್ಟ್‌ವೇರ್ ಕಂಪೆನಿಗಳ ಉದ್ಯೋಗಿಗಳು ದೇಶದ ಹಿತಕ್ಕಾಗಿ ವಾರಕ್ಕೆ 70 ಗಂಟೆಗಳ ಕಾಲ ದುಡಿಯಬೇಕು. ಪ್ರಧಾನಿ ಮೋದಿಯವರು ವಾರಕ್ಕೆ 100 ಗಂಟೆಗಳ ಕಾಲ ಕೆಲಸ ಮಾಡುತ್ತಿಲ್ಲವೇ’ ಎಂದು ಹೇಳಿರುವುದಾಗಿ ವರದಿಯಾಗಿದೆ. ಇದು ನಾರಾಯಣ ಮೂರ್ತಿಯವರ ವೈಯಕ್ತಿಕ ಅಭಿಪ್ರಾಯವನ್ನೇ ಈ ಹಿಂದೆಯೂ ಇವರು ಇಂತಹದೊಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಐಟಿ-ಬಿಟಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ವಾರಂತ್ಯದ ರಜೆ ಬಿಟ್ಟರೆ ಉಳಿದ 5 ದಿನಗಳೂ ಅವರು ಒತ್ತಡದಲ್ಲಿಯೇ ಕೆಲಸ ಮಾಡಬೇಕು. ಹೀಗಿರುವಾಗ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಎಂದರೆ ಅವರು ಕನಿಷ್ಠ ದಿನಕ್ಕೆ 14 ಗಂಟೆಗಳ ಕಾಲ ದುಡಿಯಬೇಕು. ಇದು ಸಾಧ್ಯವೇ? ಬೆಂಗಳೂರು, ಮುಂಬೈ, ದಿಲ್ಲಿ, ಕೊಲ್ಕತ್ತಾದಂತಹ ನಗರಗಳಲ್ಲಿ ಉದ್ಯೋಗಿಗಳು ತಮ್ಮ ಮನೆಗಳಿಂದ ಕೆಲಸ ಮಾಡುವ ಸ್ಥಳಗಳಿಗೆ ತೆರಳಲು ಕಷ್ಟ. ಒಂದೆರಡು ಗಂಟೆಗಳಾದರೂ ಬೇಕು. ಹೀಗಿರುವಾಗ ಅವರು ಪ್ರಯಾಣದಲ್ಲಿಯೇ 4 ಗಂಟೆಗಳನ್ನು ಕಳೆಯುತ್ತಾರೆ. ಉಳಿದ 20 ಗಂಟೆಗಳಲ್ಲಿ 14 ಗಂಟೆಗಳ ಕಾಲ ಅವರು ಕೆಲಸ ಮಾಡಿದರೆ, ಅವರ ಆರೋಗ್ಯದ ಸ್ಥಿತಿ ಏನಾಗಬಹುದು? ಅವರಿಗೂ ಒಂದು ಕುಟುಂಬವಿರುವುದಿಲ್ಲವೇ? ಆ ಕುಟುಂಬಕ್ಕೂ ಅವರು ಸಮಯ ನೀಡಬೇಕು. ಅಮೆರಿಕ, ರಷ್ಯಾ, ಜಪಾನ್, ಜರ್ಮನಿಗಳಲ್ಲಿ ಉದ್ಯೋಗಿಗಳಿಗೆ ವಾರದಲ್ಲಿ 48 ಗಂಟೆಗಳ ಕೆಲಸದ ಬದಲು 36 ಗಂಟೆಗಳಿಗೆ ಇಳಿಕೆ ಮಾಡಲಾಗಿದೆ. ಇದರ ಅರಿವಿದ್ದರೂ ನಾರಾಯಣಮೂರ್ತಿ ಯವರು ಇಂತಹ ಹೇಳಿಕೆ ಕೊಡುವುದು ಸರಿಯಲ್ಲ. ವಿಶ್ವ ಆರೋಗ್ಯ ಸಂಸ್ಥೆಯೇ ಒಬ್ಬ ವ್ಯಕ್ತಿ ದಿನಕ್ಕೆ 8 ಗಂಟೆಗಳ ಕಾಲ ದುಡಿಯಬೇಕು ಎಂದಿದೆ. ನಾರಾಯಣ ಮೂರ್ತಿಯವರು ಹೇಳುವಂತೆ ದಿನಕ್ಕೆ 70 ಗಂಟೆಗಳ ಕಾಲ ದುಡಿಯಬೇಕು ಎಂದರೆ ಅದು ನೌಕರರ ಮೇಲೆ ದಬ್ಬಾಳಿಕೆ ಮಾಡಿದಂತಾಗುತ್ತದೆ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.

Tags:
error: Content is protected !!