Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ರಾಜಕೀಯ ವಲಯದಲ್ಲಿ ಕೋಲಾಹಲವೆಬ್ಬಿಸಿದ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಆಮಿಷ ಆರೋಪ

ಬೆಂಗಳೂರು ಡೈರಿ
ಆರ್.ಟಿ.ವಿಠಲಮೂರ್ತಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಆರೋಪ ರಾಜಕೀಯ ವಲಯಗಳಲ್ಲಿ ಕೋಲಾಹಲವನ್ನೆಬ್ಬಿಸಿದೆ. ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ನಾಯಕರು ನಮ್ಮ ಪಕ್ಷದ ಶಾಸಕರ ಖರೀದಿಗೆ ಮುಂದಾಗಿದ್ದಾರೆ. ಇದಕ್ಕಾಗಿ ತಲಾ ಐವತ್ತು ಕೋಟಿ ರೂಪಾಯಿಗಳ ಆಮಿಷವೊಡ್ಡಿದ್ದಾರೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರೋಪ.

ಅಂದ ಹಾಗೆ ಶಾಸಕರನ್ನು ಖರೀದಿ ಮಾಡಲು ಐವತ್ತು ಕೋಟಿ ರೂಪಾಯಿಗಳ ಆಮಿಷ ಒಡ್ಡಲಾಗುತ್ತಿದೆ ಎಂಬ ಸಿದ್ದರಾಮಯ್ಯ ಅವರ ಆರೋಪ ರಾಜಕೀಯ ವಲಯಕ್ಕೆ ಹೊಸತೇನಲ್ಲ. ಏಕೆಂದರೆ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಹಲವು ತಿಂಗಳುಗಳ ಹಿಂದೆ ಇದೇ ಆರೋಪ ಮಾಡಿದ್ದರು.

ಕುತೂಹಲದ ಸಂಗತಿ ಎಂದರೆ ತಮ್ಮ ಆರೋಪವನ್ನು ಪುಷ್ಟಿಕರಿಸಲು ಬೇಕಾದ ಸಾಕ್ಷ್ಯಗಳನ್ನು ಆ ಶಾಸಕರು ನೀಡಿರಲಿಲ್ಲ. ಆದರೆ ಅವರು ಆರೋಪ ಮಾಡಿದ ಕಾಲದಲ್ಲಿ ಸರ್ಕಾರ ಉರುಳಿಸಲು ತಂತ್ರ ನಡೆಯುತ್ತಿದೆ ಅಂತ ಬೇರೆ ಪಕ್ಷಗಳ ನಾಯಕರೂಖಾಸಗಿ ಮಾತುಕತೆಯಲ್ಲಿ ಪಿಸುಗುಟ್ಟುತ್ತಿದ್ದರು. ಅವರ ಪಿಸುಗುಟ್ಟುವಿಕೆಯ ಒಟ್ಟಾರೆ ಸಾರಾಂಶವೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜಂಟಿ ನೇತೃತ್ವ ವಹಿಸಿದ್ದಾರೆ ಎಂಬುದು.

ಅಂದ ಹಾಗೆ ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ- ಜಾ.ದಳಮೈತ್ರಿಕೂಟತಲೆಎತ್ತಿನಿಲ್ಲಲು ಮೂಲಕಾರಣರಾದವರು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಗೆದ್ದು ವಿಜೃಂಭಿಸಿದಾಗ ಪ್ರಧಾನಿ ನರೇಂದ್ರ ಮೋದಿ ಕೂಡ ಕಂಗಾಲಾಗಿದ್ದರು. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಪಕ್ಷ ಅನುಭವಿಸಿದ ಹೀನಾಯ ಸೋಲಿನಿಂದ ಕೆರಳಿದ್ದ ಅವರು ರಾಜ್ಯ ಬಿಜೆಪಿಯ ನಾಯಕರ ಜತೆ ಮಾತನಾಡುವುದನ್ನೂ ನಿಲ್ಲಿಸಿಬಿಟ್ಟಿದ್ದರು. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮನ್ನು ಪ್ರಚಾರಕ್ಕೆಂದು ಕರೆಸಿ ಅಲೆಸಿದ್ದ ರಾಜ್ಯದ ನಾಯಕರು ಅದನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ವಿಫಲರಾದ ರೀತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನೋವಾಗಿ ಕಾಡಿಸಿದ್ದು ಅಸಹಜವೇನೂ ಅಲ್ಲ.

ಇದೇ ಕಾರಣಕ್ಕಾಗಿ ರಾಜ್ಯ ಬಿಜೆಪಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಬಗ್ಗೆ ನಿರಾಸಕ್ತಿ ತೋರಿಸಿದ್ದ ಮೋದಿ ಕರ್ನಾಟಕದಲ್ಲಿ ಪಕ್ಷ ತಲೆ ಎತ್ತುವುದು ಕಷ್ಟ ಎಂದು ಭಾವಿಸಿದ್ದರಂತೆ. ಇಂತಹಕಾಲದಲ್ಲಿ ಪ್ರಧಾನಿನರೇಂದ್ರ ಮೋದಿ ಅವರ ಬಳಿ ಮಾತನಾಡುವ ಶಕ್ತಿಯೇ ರಾಜ್ಯದ ಬಿಜೆಪಿ ನಾಯಕರಿಗೆ ಇರಲಿಲ್ಲ. ಆದರೆ ಇಂತಹ ಕಾಲಘಟ್ಟದಲ್ಲಿ ಕರ್ನಾಟಕದ ರಾಜಕೀಯ ಸ್ವರೂಪವನ್ನು ಹೇಗೆ ಬದಲಿಸಬಹುದು ಎಂದು ಮೋದಿ ಹಾಗೂ ಅಮಿತ್ ಷಾ ಜೋಡಿಗೆ ಮನದಟ್ಟು ಮಾಡಿಕೊಟ್ಟವರು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್. ಅವರು ಈ ನಾಯಕರಿಗೆ ವರದಿಯೊಂದನ್ನು ನೀಡಿ, ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತಿರಬಹುದು. ಆದರೆ ಅದಕ್ಕಾಗಿ ನಿರಾಶರಾಗಬೇಕಾಗಿಲ್ಲ. ಯಾಕೆಂದರೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪಡೆದ ಒಟ್ಟು ಮತಗಳೇನಿವೆ ಅದಕ್ಕೆ ಹೋಲಿಸಿದರೆ ಬಿಜೆಪಿ ಹಾಗೂ ಜಾ.ದಳ ಪಕ್ಷಗಳು ಸೇರಿ ಪಡೆದ ಮತಗಳ ಸಂಖ್ಯೆ ಜಾಸ್ತಿ ಎಂದು ಪ್ರಮೋದ್ ಸಾವಂತ್ ಬೆಟ್ಟು ಮಾಡಿತೋರಿಸಿದ್ದರು.

ಅರ್ಥಾತ್, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜಾ.ದಳ ಮೈತ್ರಿಕೂಟ ಮೇಲೆದ್ದು ನಿಂತರೆ ಕಾಂಗ್ರೆಸ್ ಪಕ್ಷವನ್ನು ಸೋಲಿಸಬಹುದು ಎಂಬುದು ಅವರ ಮಾತಾಗಿತ್ತು. ಪರಿಣಾಮ ಪ್ರಮೋದ್ ಸಾವಂತ್ ಅವರ ಮಧ್ಯಸ್ಥಿಕೆಯಲ್ಲಿ ಬಿಜೆಪಿ ಹಾಗೂ ಜಾ.ದಳ ನಡುವೆ ಮೈತ್ರಿ ಸಾಧಿತವೂ ಆಯಿತು ಮತ್ತು ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿಕೂಟ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳಲ್ಲಿ ಗೆಲುವು ಗಳಿಸಲು ಸಾಧ್ಯವಾಯಿತು.

ಯಾವಾಗ ಈ ಬೆಳವಣಿಗೆ ನಡೆಯಿತೋ ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವನ್ನು ಅಲುಗಾಡಿಸುವ ಒಂದು ಪ್ರಯತ್ನಕ್ಕೆ ಪ್ರಮೋದ್ ಸಾವಂತ್ ಮತ್ತು ದೇವೇಂದ್ರ ಫಡ್ನವೀಸ್ ತಯಾರಿ ಆರಂಭಿಸಿದ್ದರು. ಮೂಲಗಳ ಪ್ರಕಾರ, ಲೋಕಸಭಾ ಚುನಾವಣೆ ನಡೆಯುವ ಕಾಲಕ್ಕೆ ರಾಜ್ಯ ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಸೆಳೆಯುವ ಪ್ರಯತ್ನ ಚಾಲ್ತಿಯಲ್ಲಿತ್ತು ಮತ್ತು ಮೂವತ್ತು ಮಂದಿ ಶಾಸಕರು ಪ್ರಮೋದ್ ಸಾವಂತ್ ಮತ್ತು ಫಡ್ನವೀಸ್ ಅವರ ಜತೆ ಸಂಪರ್ಕದಲ್ಲಿದ್ದರು. ಆದರೆ ದಿನ ಕಳೆದಂತೆ ಪ್ರಮೋದ್ ಸಾವಂತ್ ಮತ್ತು ದೇವೇಂದ್ರ ಫಡ್ನವೀಸ್ ಅವರ ಪ್ರಯತ್ನ ಕಡಿಮೆಯಾಗುತ್ತಾ ಹೋಯಿತು. ಇದಕ್ಕಿದ್ದ ಕಾರಣವೆಂದರೆ ವಸ್ತುಸ್ಥಿತಿ. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರವನ್ನು ಉರುಳಿಸಲು ನಲವತ್ತಕ್ಕೂ ಹೆಚ್ಚು ಶಾಸಕರು ಬೇಕಿದ್ದರೆ, ಸರ್ಕಾರವನ್ನು ಉರುಳಿಸಿ ಪರ್ಯಾಯ ಸರ್ಕಾರ ರಚಿಸಲು ಎಂಬತ್ತೊಂಭತ್ತು ಮಂದಿ ಶಾಸಕರ ಅಗತ್ಯವಿತ್ತು. ಆದರೆ ಪ್ರಮೋದ್ ಸಾವಂತ್ ಮತ್ತು ದೇವೇಂದ್ರ ಫಡ್ನವೀಸ್ ಅವರ ಜತೆ ಕೈ ಜೋಡಿಸಲು ಸಜ್ಜಾಗಿದ್ದ ಶಾಸಕರು, ಪರ್ಯಾಯ ಸರ್ಕಾರ ರಚನೆಗೆ ಬೆಂಬಲ ನೀಡಲು ತಯಾರಿದ್ದರೆ ವಿನಾ ಅದನ್ನು ಬೀಳಿಸುವ ಆ ಮೂಲಕ ಮಧ್ಯಂತರ ವಿಧಾನಸಭಾ ಚುನಾವಣೆಗೆ ಹೋಗುವ ಉತ್ಸುಕತೆ ತೋರಿಸಿರಲಿಲ್ಲ. ಈಗ ಗೆದ್ದು ಬಂದಿರುವುದೇ ದೊಡ್ಡ ಸಾಹಸ. ಹೀಗಿರುವಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಧ್ಯಂತರ ಚುನಾವಣೆ ಎದುರಿಸುವುದು ಕಷ್ಟ ಎಂಬುದು ಬಹುತೇಕ ಶಾಸಕರ ಮಾತಾಗಿತ್ತು. ಆದರೆ ಈ ಶಾಸಕರ ಅಭಿಪ್ರಾಯದಂತೆ ಕಾಂಗ್ರೆಸ್ ಶಾಸಕರನ್ನು ಸಾಮೂಹಿಕ ವಲಸೆ ಮಾಡಿಸುವುದು ಕಷ್ಟ ಎಂಬುದು ಸಾವಂತ್ ಮತ್ತು ಫಡ್ನವೀಸ್ ಇಬ್ಬರಿಗೂ ಅರ್ಥವಾಯಿತು.

ಹೀಗಾಗಿ ಅವರು, ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ ಪರ್ಯಾಯ ಸರ್ಕಾರ ರಚಿಸುವುದು ಕಷ್ಟ ಹೀಗಾಗಿ ಸರ್ಕಾರವನ್ನು ಉರುಳಿಸಲು ಪ್ರಯತ್ನ ಮಾಡಬಹುದಷ್ಟೇ ಎಂದು ಬಿಜೆಪಿ ವರಿಷ್ಠರಿಗೆ ವರದಿ ನೀಡಿದ್ದರು. ಅರ್ಥಾತ್, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಗರಣದ ಬಲೆಗೆ ಸಿಲುಕಿಸಿ ಕೆಳಗಿಳಿಸಿದರೆ ಕಾಂಗ್ರೆಸ್‌ ಸರ್ಕಾರ ತಾನೇ ದುರ್ಬಲವಾಗುತ್ತದೆ. ನಂತರ ಯಾರೇ ಮುಖ್ಯಮಂತ್ರಿ ಹುದ್ದೆಯ ಮೇಲೆ ಕುಳಿತರೂ ಅವರನ್ನು ಕೆಳಗಿಳಿಸಿ, ಆ ಮೂಲಕ ಮಧ್ಯಂತರ ಚುನಾವಣೆಗೆ ಪೂರಕವಾಗಿ ವಾತಾವರಣ ನಿರ್ಮಿಸಬಹುದು ಎಂಬುದು ಅವರ ತೀರ್ಮಾನವಾಗಿತ್ತು.

ವಸ್ತುಸ್ಥಿತಿ ಎಂದರೆ ಈಗ ಜಾರಿಯಲ್ಲಿರುವುದು ಇದೇ ತೀರ್ಮಾನ ಅಂದರೆ ಸರ್ಕಾರ ಉರುಳಿಸಲು ಅಗತ್ಯವಾದ ಶಾಸಕರನ್ನು ಹೊರಗೆಳೆಯ ಬೇಕು ಎಂಬುದು ಸಾವಂತ್ ಮತ್ತು ಫಡವೀಸ್ ಅವರ ತಂತ್ರ. ಆದರೆ ದಿನ ಕಳೆದಂತೆ ಈ ತಂತ್ರವೂ ದುಬಾರಿಯಾಗುತ್ತಿದೆ ಏಕೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿದ ಮೇಲೆ ಪರ್ಯಾಯ ಸರ್ಕಾರ ರಚಿಸಲು ಸಾಧ್ಯ ವಾಗದಿದ್ದರೆ ತಮ್ಮ ಗತಿಯೇನು? ಎಂಬುದು ಹಲವು ಶಾಸಕರ ಯೋಚನೆ.
ಹೀಗಾಗಿ ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರು ರಾಜೀನಾಮೆ ನೀಡುವ ಪ್ರಸ್ತಾವನೆಗೆ ತಿರುಗೇಟು ಹೊಡೆದಿದ್ದಾರೆ. ಆದರೆ ಅವರು ತಿರುಗೇಟು ಹೊಡೆದರು ಎಂದು ಸಿದ್ದರಾಮಯ್ಯ ಸುಮ್ಮನಿರಲು ಸಾಧ್ಯವಿಲ್ಲವಲ್ಲ ಹೀಗಾಗಿ ಅವರು ತಮ್ಮ ಪಕ್ಷದ ಶಾಸಕರನ್ನು ಖರೀದಿಸುವ ಯತ್ನವಾಗುತ್ತಿದೆ. ಇದಕ್ಕಾಗಿ ಐವತ್ತು ಕೋಟಿ ರೂಪಾಯಿಗಳ ಆಮಿಷ ಒಡ್ಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹೀಗೆ ಅವರು ಮಾತನಾಡುತ್ತಿರುವ ಕಾಲ ಹೇಗಿದೆ ಎಂದರೆ ಬಿಜೆಪಿ ನಾಯಕರಿಗೆ ಕೈ ಪಾಳೆಯವನ್ನು ಅಲುಗಾಡಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಶಾಸಕರಿಗೆ ಐವತ್ತು ಕೋಟಿ ರೂಪಾಯಿಗಳ ಆಮಿಷ ಒಡ್ಡಲಾಗುತ್ತಿದೆ ಎಂಬ ಸಿದ್ದರಾಮಯ್ಯ ಅವರ ಆರೋಪ ಮಾತ್ರ ದೊಡ್ಡದಾಗಿ ಕಾಣುತ್ತಾ ಹೋಗುತ್ತಿದೆ. ಪರಿಣಾಮ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಸಾಧ್ಯತೆ ದಿನದಿಂದ ದಿನಕ್ಕೆ ಕ್ಷೀಣವಾಗುತ್ತಿದೆ. ಆ ದೃಷ್ಟಿಯಿಂದ ಸಿದ್ದರಾಮಯ್ಯ ಅವರು ಮಾಡಿದ ಆರೋಪ ಸರ್ಕಾರದ ಪಾಲಿಗೆ ಟಾನಿಕ್ಸನಂತೆ ಪರಿಣಮಿಸಿದೆ. ಮುಂದೇನು ಕತೆಯೋ?

ವಸ್ತುಸ್ಥಿತಿ ಎಂದರೆ ಈಗ ಜಾರಿಯಲ್ಲಿರು ವುದು ಇದೇ ತೀರ್ಮಾನ, ಅಂದರೆ ಸರ್ಕಾರ ಉರುಳಿಸಲು ಅಗತ್ಯವಾದ ಶಾಸಕರನ್ನು ಹೊರಗೆಳೆಯಬೇಕು ಎಂಬುದು ಸಾವಂತ್ ಮತ್ತು ಫಡ್ನವೀಸ್ ಅವರ ತಂತ್ರ. ಆದರೆ ದಿನ ಕಳೆದಂತೆ ಈ ತಂತ್ರವೂ ದುಬಾರಿಯಾಗುತ್ತಿದೆ. ಏಕೆಂದರೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಿದ ಮೇಲೆ ಪರ್ಯಾಯ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ ತಮ್ಮ ಗತಿಯೇನು? ಎಂಬುದು ಹಲವು ಶಾಸಕರ ಯೋಚನೆ.

 

Tags: