Mysore
23
mist

Social Media

ಶುಕ್ರವಾರ, 02 ಜನವರಿ 2026
Light
Dark

ಮೇಕೆ ಸಾಕಿ ಆನಂದವಾಗಿರಿ

ರಮೇಶ್ ಪಿ. ರಂಗಸಮುದ್ರ

ಮೇಕೆಗಳನ್ನು ಬಡವರ ಪಾಲಿನ ಆಕಳು ಎಂದೇ ಕರೆಯಲಾಗುತ್ತದೆ. ಮೇಕೆ ಸಾಕಾಣಿಕೆ ಎಂಬುದು ನಂಬಲರ್ಹವಾದ ಉಪ ಕಸುಬಾಗಿದ್ದು, ಕೃಷಿ ಯೊಂದಿಗೆ ಮೇಕೆ ಸಾಕಾಣಿಕೆಯು ರೈತರಿಗೆ ಆರ್ಥಿಕ ಆಶಾಕಿರಣವಾಗಿ ಗುರುತಿಸಿಕೊಂಡಿದೆ.

ನಮ್ಮ ದೇಶದಲ್ಲಿ 34 ಮೇಕೆ ತಳಿಗಳನ್ನು ಗುರುತಿಸಲಾಗಿದ್ದು, ಕರ್ನಾಟಕದಲ್ಲಿಯೇ 3 ಬಗೆಯ ಮೇಕೆ ತಳಿಗಳಿವೆ (ಬಿದ್ರಿ, ನಂದಿ ದುರ್ಗ, ಮುಡುಕುತೊರೆ ತಳಿ). ಪ್ರತಿ ವರ್ಷ 25 ಲಕ್ಷಕ್ಕೂ ಅಧಿಕ ಮೇಕೆಗಳನ್ನು ಮಾಂಸಕ್ಕಾಗಿ ಬಳಸಲಾಗುತ್ತದೆ.

ಕುರಿ ಮತ್ತು ಮೇಕೆಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಇವುಗಳಿಗೆ ರೋಗಗಳು ತಗುಲುವುದು ತುಂಬಾ ಕಡಿಮೆ. ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆಯಂತೆ ಮೇಕೆಗಳು ವೈವಿಧ್ಯಮಯ ಸೊಪ್ಪುಗಳನ್ನು ಮೇಯುವುದರಿಂದ ಇವುಗಳ ಆರೋಗ್ಯ ಮಟ್ಟ ಚೆನ್ನಾಗಿರುತ್ತದೆ. ಜತೆಗೆ ಬರ ನಿರೋಧಕ ಶಕ್ತಿಯೂ ಇರುವುದರಿಂದ ಎಂತಹ ಹವಾಮಾನವೇ ಇದ್ದರೂ ಬದುಕಬಲ್ಲ ಸಾಮರ್ಥ್ಯ ಹೊಂದಿವೆ.

1) ಸಾಕಾಣಿಕೆಯ ವಿಶೇಷತೆ ನಿರ್ಗತಿಕರು ಹಾಗೂ ಭೂಮಿ ಇಲ್ಲದ ಕೃಷಿ ಕಾರ್ಮಿಕರು ಅತಿ ಕಡಿಮೆ ಹಣ ಹೂಡಿಕೆ ಮಾಡಿ 2 ಆಡು, 1 ಹೋತದಿಂದ ಸಾಕಾಣಿಕೆ ಯನ್ನು ಆರಂಭಿಸಬಹುದು. 4-5 ತಿಂಗಳು ವಯಸ್ಸಿನ ಆಡು ಮತ್ತು ಹೋತದ ಮರಿಗಳನ್ನು 2 ಆಡಿಗೆ 8000, ಒಂದು ಹೋತಕ್ಕೆ 5000 ರೂನಂತೆ ಕೊಂಡು ಸಾಕಾಣಿಕೆ ಪ್ರಾರಂಭಿಸಬಹುದು.

2) ಮೊದಲ ಸಲ 8-10 ತಿಂಗಳಿಗೆ ಆಡು ಗರ್ಭ ಧರಿಸಿ 1-2 ಮರಿಗಳಿಗೆ ಜನ್ಮ ನೀಡುತ್ತದೆ. 2 ಮರಿಗಳು ನಾಲ್ಕು ಮರಿಗಳಿಗೆ ಜನ್ಮ ನೀಡಿದರೆ 2ನೇ ಸೂಲಿನಲ್ಲಿ 6-8 ತಿಂಗಳಿಗೆ 2 ಆಡುಗಳು 6 ಮರಿಗಳನ್ನು ಹಾಕುತ್ತವೆ. 2 ವರ್ಷಕ್ಕೆ 3 ಆಡುಗಳು 10 ಮರಿಗಳನ್ನು ಹಾಕುತ್ತವೆ. ಆಡಿನ ಸಂಖ್ಯೆ ದ್ವಿಗುಣ- ತ್ರಿಗುಣವಾಗಿ ಉತ್ತಮ ಆದಾಯ ಗಳಿಸಬಹುದು.

3) ಆಡಿನ ಹಾಲು ಔಷಧೀಯ ಗುಣಗಳನ್ನು ಹೊಂದಿದ್ದು, ಒಂದು ಲೀ. ಮೇಕೆ ಹಾಲು 100-150 ರೂ.ಗಳಿಗೆ ಮಾರಾಟವಾಗುತ್ತದೆ.

4) ಕೃಷಿ ಭೂಮಿ ಇಲ್ಲದವರು, ಕೂಲಿ ಕಾರ್ಮಿಕರು ಬೆಳಿಗ್ಗೆಯಿಂದ ಸಂಜೆವರೆಗೆ ರಸ್ತೆ ಬದಿಯ ಹಾಗೂ ಬೇಲಿಗಳಲ್ಲಿ ಮೇಯಿಸಿ ಮೇಕೆಗಳ ಹೊಟ್ಟೆ ತುಂಬಿಸಬಹುದು.

5) ಮೇಕೆಗಳು ಮಿಂಚಿನ ರೋಮಗಳನ್ನು ಹೊಂದಿರುವ ಕಾರಣ ಸ್ನಾನ ಮಾಡಿಸದಿದ್ದರೂ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತವೆ.

6) 20 ಮೇಕೆಗಳಿಗೆ ಒಂದು ಗಂಡು (ಹೋತ) ಸಾಕಾಗುತ್ತದೆ. 2 ವರ್ಷಕ್ಕೆ 90 ಮೇಕೆಗಳ ಮಂದೆಯೇ ಆಗುತ್ತದೆ.

7) ಪ್ರತಿ ಆರು ತಿಂಗಳಿಗೊಮ್ಮೆ ಹೋತಗಳನ್ನು ಮಾರಿ ಕುಟುಂಬದ ಆರ್ಥಿಕ ಸಂಕಷ್ಟವನ್ನು ನಿವಾರಿಸಿಕೊಳ್ಳಬಹುದು.

8) ಒಂದು ಬುಟ್ಟಿ ಆಡಿನ ಹಿಕ್ಕೆ ಹೊಬ್ಬರವು ಒಂದು ಗಾಡಿ ಹಸುವಿನ ಗೊಬ್ಬರಕ್ಕೆ ಸಮನಾಗಿದ್ದು, ಹಣ್ಣು, ತರಕಾರಿ, ಹೂ ಬೆಳೆಯಲ್ಲಿ ಗೊಬ್ಬರವಾಗಿ ಬಳಸುವುದರಿಂದ ಸಸ್ಯಗಳಿಗೆ ಬೇಕಾದ ಎಲ್ಲಾ ಪೋಷಕಾಂಶಗಳು ಒದಗಿಸಿ ಇಳುವರಿಯೂ ಹೆಚ್ಚಾಗುತ್ತದೆ. ಒಂದು ಬುಟ್ಟಿ ಆಡಿನ ಗೊಬ್ಬರಕ್ಕೆ 100 ರೂಗಳಿಗಿಂತ ಹೆಚ್ಚಿನ ಬೆಲೆ ಇದೆ.

ಮೇಕೆಗಳ ಆಹಾರ ಪದ್ಧತಿ:
ಮೇಕೆಗಳು ನೈಸರ್ಗಿಕವಾಗಿ ಎತ್ತರದಲ್ಲಿರುವ ಎಲ್ಲ ಬಗೆಯ ಸೊಪ್ಪುಗಳನ್ನು ಮತ್ತು ಹೆಚ್ಚಿನ ನಾರುಯುಕ್ತ ಪದಾರ್ಥಗಳನ್ನು ಇಷ್ಟಪಟ್ಟು ತಿನ್ನುತ್ತವೆ. ನೆಲದ ಮೇಲಿನ ಹುಲ್ಲು ಕಳೆಗಳನ್ನು ಮೇಯುವುದು ಶೇ.10ರಷ್ಟು ಮಾತ್ರ. ಕೊಟ್ಟಿಗೆ ಪದ್ಧತಿಯಲ್ಲಿ ಸಾಕಾಣಿಕೆ ಮಾಡಿದಾಗ ಹಸಿ ಹುಲ್ಲು, ಮರ-ಗಿಡಗಳ ಕಡ್ಡಿ ಸಮೇತ ಸೊಪ್ಪುಗಳು, ರಸ ಮೇವು ನೀಡಬಹುದು.

ವೈವಿಧ್ಯಮಯ ಸೊಪ್ಪುಗಳನ್ನು ಸಣ್ಣ ಸಣ್ಣ ರೆಂಬೆ-ಕೊಂಬೆಗಳ ಸಮೇತ ಪೂರೈಸಬೇಕು. ಅಲ್ಲದೆ ಉತ್ತಮ ಮಟ್ಟದ ಮಾಂಸದ ಇಳುವರಿಗಾಗಿ ಕಾಳು ಸಮೇತವಿರುವ ಹುರುಳಿ ತಳ್ಳು ಹಾಗೂ ಮುಸುಕಿನ ಜೋಳದ ಹಸಿ, ಒಣ ಮಿಶ್ರಣವನ್ನು ಕೊಡಬೇಕು. ಸಾಮಾನ್ಯವಾಗಿ ಗರ್ಭ ಕಟ್ಟುವ ಕಾಲ ಮಾರ್ಚ್-ಏಪ್ರಿಲ್ ಮತ್ತು ಜುಲೈ-ಆಗಸ್ಟ್, ಮರಿ ಹಾಕುವ ಕಾಲ ಆಗಸ್ಟ್- ಸೆಪ್ಟೆಂಬರ್ ಮತ್ತು ಡಿಸೆಂಬರ್-ಜನವರಿ ಇದನ್ನು ಅರಿತು ಕೈತಿಂಡಿ, ಮಿಶ್ರಣ ತಿಂಡಿ ನೀಡಬೇಕು.

ತಳಿಗಳ ಆಯ್ಕೆ:
ಕರ್ನಾಟಕದ ಮಾಂಸ ಪ್ರಿಯರಿಗೆ ಉತ್ತರ ಭಾರತದ ಜಮಾ ಪಾರಿ, ಬೀಟಲ್, ಶಿರೋಹಿ, ಮಲಬಾರಿ, ಹುಸ್ಮಾನಾಬಾದಿ ತಳಿಯ ಮೇಕೆಗಳು ಉತ್ತಮ ಮಾಂಸದ ಇಳುವರಿ ನೀಡಿದರೂ ಅವು ಇಷ್ಟವಾಗುವುದಿಲ್ಲ. ಆದ್ದರಿಂದ ಸ್ಥಳೀಯ ತಳಿಯ ಮೇಕೆ ಮಾಂಸವನ್ನೇ ಇಷ್ಟಪಡುತ್ತಾರೆ. ನಮ್ಮ ಕರ್ನಾಟಕದ ಮೇಕೆ ತಳಿಗಳು ಸಾಮಾನ್ಯವಾಗಿ 12-15 ಕೆ.ಜಿ. ಮಾಂಸವನ್ನು ನೀಡುತ್ತವೆ. ಮಹಾ ರಾಷ್ಟ್ರದ ಉಸ್ಮಾನಾಬಾದಿ ಹೋತದೊಂದಿಗೆ ತಳಿ ಸಂಪರ್ಕ ಪಡೆದು ಮೇಕೆಗಳ ಗುಣಮಟ್ಟ ಹೆಚ್ಚಿಸಿಕೊಂಡು ಆದಾಯ ಗಳಿಸಬಹುದು.

ಆಹಾರ ಪದಾರ್ಥಗಳು:
ಮೆಕ್ಕೆ ಜೋಳ- 25 ಕೆ.ಜಿ, ಗೋಧಿ ಬೂಸ, ಕಡ್ಲೆಹೊಟ್ಟು 32 ಕೆ.ಜಿ., ಶೇಂಗಾ ಹಿಂಡಿ 15 ಕೆ.ಜಿ., ಕಾಕಂಬಿ ಅಥವಾ ಬೆಲ್ಲ 5 ಕೆ.ಜಿ., ದ್ವಿದಳ ಧಾನ್ಯ-ಹುರುಳಿ ಅಥವಾ ಹಸಿರುಕಾಳು 25 ಕೆ.ಜಿ. ಅಡುಗೆ ಉಪ್ಪು 1 ಕೆ.ಜಿ., ಲವಣ ಮಿಶ್ರಣ 2 ಕೆ.ಜಿ. ಕಚ್ಚಾ ಸಾರಜನಕ 14-15, ಇವುಗಳನ್ನು ಮಿಶ್ರಣ ಮಾಡಿ ಮೇಕೆ ತೂಕದ ಶೇ.1ರಷ್ಟನ್ನು ಪ್ರತಿನಿತ್ಯ ರಾತ್ರಿ ಸಮಯ ಮೇಕೆಗಳಿಗೆ ನೀಡಬೇಕು.

 

 

Tags:
error: Content is protected !!