Mysore
26
scattered clouds

Social Media

ಗುರುವಾರ, 14 ನವೆಂಬರ್ 2024
Light
Dark

ಮಹಾರಾಷ್ಟ್ರ : ಬಿಜೆಪಿಗೆ ಪ್ರತಿಷ್ಠೆಯ ಚುನಾವಣೆ

ದೆಹಲಿ ಕಣ್ಣೋಟ, ಶಿವಾಜಿ ಗಣೇಶನ್‌

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಈ ವರ್ಷದ ಕೊನೆಯ ಚುನಾವಣೆ. ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ ಎರಡೂ ಮಹಾ ಮೈತ್ರಿಕೂಟಗಳ ನಡುವೆ ನೇರ ಹಣಾಹಣಿ ನಡೆಯಲಿದೆ. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರ ನಡುವಣ ಪ್ರತಿಷ್ಠೆಯ ಚುನಾವಣೆ. ಗ್ಯಾರಂಟಿಗಳ ಮಹಾ ಭರವಸೆಗಳ ಸುರಿಮಳೆ. ದೇಶದ ಮುಖ್ಯ ಆರ್ಥಿಕ ಸಂಪನ್ಮೂಲ ಒದಗಿಸುವ ರಾಜ್ಯದ ಆಡಳಿತ ಈಗ ಅಧಿಕಾರ ನಡೆಸುತ್ತಿರುವ ಬಿಜೆಪಿ ಮಹಾ ಮೈತ್ರಿಕೂಟದ ಕಡೆ ಒಲಿಯುತ್ತದೆಯೋ ಅಥವಾ ವಿಪಕ್ಷದಲ್ಲಿರುವ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದತ್ತ ವಾಲುತ್ತದೆಯೋ ಎನ್ನುವುದು ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಚುನಾವಣೆ ಇದು.

ಮಹಾರಾಷ್ಟ್ರದ ೨೮೮ ಸಂಖ್ಯಾಬಲದ ವಿಧಾನಸಭಾ ಚುನಾವಣೆಗೂ ಮುನ್ನ ಅಂದರೆ ನವೆಂಬರ್ ೧೩ರಂದು ಜಾರ್ಖಂಡ್ ವಿಧಾನಸಭೆಯ ೮೧ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜೊತೆಗೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿರುವ ಕೇರಳದ ವಯನಾಡು ಕ್ಷೇತ್ರ ಸೇರಿದಂತೆ ಮೂರು ಲೋಕಸಭಾ ಮತ್ತು ಕರ್ನಾಟಕದ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ಸೇರಿದಂತೆ ದೇಶದ ಹದಿನೈದು ರಾಜ್ಯಗಳ ೪೮ ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆ ನಡೆಯತ್ತಿರುವುದು ವಿಶೇಷ.

ಈ ಎಲ್ಲ ಚುನಾವಣೆಗಳನ್ನೂ ಮೀರಿದ್ದು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ. ಪ್ರಸ್ತುತ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟದ ಸರ್ಕಾರವಿದ್ದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗಿದ್ದರಿಂದ ಬಿಜೆಪಿ ನೇತೃತ್ವದ ಮೈತ್ರಿಕೂಟ ಆತಂಕದಲ್ಲಿಯೇ ಇದೆ. ಲೋಕಸಭೆಯ ೪೮ ಸ್ಥಾನಗಳ ಪೈಕಿ ೨೮ರಲ್ಲಿ ಸ್ಪಽಸಿದ್ದ ಬಿಜೆಪಿ ಜಯ ಗಳಿಸಿದ್ದು ಕೇವಲ ೯ ಸ್ಥಾನಗಳು ಮಾತ್ರ. ಮುಖ್ಯಮಂತ್ರಿ ಏಕನಾಥ್ ಶಿಂಧೆಯ ಶಿವಸೇನೆಯು ೧೫ರಲ್ಲಿ ಸ್ಪಽಸಿ ೭ರಲ್ಲಿ ಗೆಲುವು ಸಾಽಸಿತು. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯು ನಾಲ್ಕರಲ್ಲಿ ಕಣಕ್ಕಿಳಿದು ಗಳಿಸಿದ್ದು ಕೇವಲ ಒಂದು ಸ್ಥಾನ ಮಾತ್ರ. ಹಾಗಾಗಿ ವಿಧಾನಸಭೆ ಚುನಾವಣೆಯು ‘ಮಹಾಯುತಿ’ ಮಹಾ ಮೈತ್ರಿಕೂಟದಲ್ಲಿ ಸಹಜವಾಗಿಯೇ ಆತಂಕದ ಸ್ಥಿತಿ ಮನೆಮಾಡಿದೆ. ‘ಮಹಾಅಘಾಡಿ’ ಮೈತ್ರಿ ಕೂಟದಲ್ಲಿ ಕಾಂಗ್ರೆಸ್ ೨೮ ಕ್ಷೇತ್ರಗಳ ಪೈಕಿ ೧೩ ಕ್ಷೇತ್ರಗಳಲ್ಲಿ ಗೆಲುವು ಸಾಽಸುವ ಮೂಲಕ ಮಹಾರಾಷ್ಟ್ರದ ತನ್ನ ಮೈತ್ರಿಕೂಟದಲ್ಲಿ ಹೊಸ ಹುರುಪು ಉಂಟು ಮಾಡಿದೆ. ಉದ್ಧವ್ ಠಾಕ್ರೆಯ ಶಿವಸೇನೆಯು ೯ ಸ್ಥಾನಗಳನ್ನು ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ೧೦ ಸ್ಥಾನಗಳಲ್ಲಿ ಸ್ಪರ್ಧೆ ಎದುರಿಸಿ ೦೮ ಸ್ಥಾನಗಳನ್ನು ಪಡೆದುಕೊಂಡು ತನಗಿರುವ ಜನಶಕ್ತಿ ಯನ್ನು ಸಾಬೀತುಪಡಿಸಿತು.

ಅಚ್ಚರಿ ಎಂದರೆ ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲಾ ಪಕ್ಷಗಳಿಗಿಂತ ಹೆಚ್ಚು ಸ್ಥಾನಗಳನ್ನು ಗಳಿಸಿದರೂ ಅದರ ಮತ ಗಳಿಕೆ ಶೇ. ೧೬. ೯, ಬಿಜೆಪಿಯು ೯ ಸ್ಥಾನ ಗಳಿಸಿದರೂ ಮತಗಳಿಕೆಯ ಪ್ರಮಾಣವು ಶೇ. ೨೬. ೨ ರಷ್ಟಿದೆ. ಹೀಗಾಗಿ ಬಿಜೆಪಿಯು ತನಗಿರುವ ಮತದಾರರ ಸಂಖ್ಯಾಬಲದಿಂದ ಮತ್ತು ಕೇಂದ್ರದಲ್ಲಿಯೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವೇ ಇರುವುದರಿಂದ ಆನೆಬಲ ಬಂದಿರುವುದಾಗಿ ಆತ್ಮವಿಶ್ವಾಸದಿಂದ ಇದೆ. ಜೊತೆಗೆ ಹರಿಯಾಣದಂತೆ ಇಲ್ಲಿಯೂ ಆರ್‌ಎಸ್‌ಎಸ್ ತನ್ನದೇ ಆದ ಕಾರ್ಯಶೈಲಿಯಲ್ಲಿ ಮಹಾಯುತಿ ಪರವಾಗಿ ಚುನಾವಣಾ ಕಣಕ್ಕೆ ಇಳಿದಿರುವುದು ಬಿಜೆಪಿಗೆ ಬಲಬಂದಂತಾಗಿದೆ.

ಈ ಎಲ್ಲ ವಾಸ್ತವದ ನಡುವೆ ಎರಡೂ ಮೈತ್ರಿಕೂಟದಲ್ಲಿ ಸೀಟು ಹಂಚಿಕೆಯ ಗೊಂದಲ ಮುಗಿದಿದ್ದು, ಈಗ ಚುನಾವಣೆಯ ಅಖಾಡದಲ್ಲಿ ಶಕ್ತಿ ಪ್ರದರ್ಶನ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ. ಒಂದು ಕಡೆ ನಾಯಕತ್ವದ ವರ್ಚಸ್ಸು, ಗ್ಯಾರಂಟಿ ಭರವಸೆಗಳ ಗದ್ದಲ, ಮತ್ತೊಂದು ಕಡೆ ಭಾಷಣಕ್ಕಷ್ಟೇ ಸೀಮಿತವಾಗಿರುವ ನಂಬಿಕೆ, ಸಿದ್ಧಾಂತದ ಉಲ್ಲೇಖ, ಇನ್ನೊಂದು ಕಡೆ ಸ್ಥಳೀಯ ಸಮಸ್ಯೆಗಳನ್ನು ಮುಂದು ಮಾಡಿಕೊಂಡು ಚುನಾವಣಾ ಸಮರ ಸಮಬಲವಾಗಿ ನಡೆದಿದೆ.

ಒಟ್ಟು ೨೮೮ ಸ್ಥಾನಗಳ ಪೈಕಿ ಆಡಳಿತಾರೂಢ ಮಹಾಯುತಿ ಮೈತ್ರಿ ಕೂಟದಲ್ಲಿ ಬಿಜೆಪಿಯು ೧೪೮ ಕಡೆ ಸ್ಪಽಸಿದ್ದರೆ, ಏಕ್‌ನಾಥ್ ಶಿಂಧೆ ನೇತೃತ್ವದ ಶಿವಸೇನೆಯು ೮೦ ಕಡೆಗಳಲ್ಲಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯು ೫೩ ಕ್ಷೇತ್ರಗಳಲ್ಲಿ ಸ್ಪರ್ಧೆಗಳಿದಿವೆ. ಇತ್ತ ಕಾಂಗ್ರೆಸ್ ನೇತೃತ್ವದ ಮಹಾಅಘಾಡಿ ಮೈತ್ರಿಕೂಟದಲ್ಲಿ ಕಾಂಗ್ರೆಸ್ ೧೦೩ ಕ್ಷೇತ್ರಗಳಲ್ಲಿ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ೮೯, ಶರದ್ ಪವಾರ್ ನೇತೃತ್ವದ ಎನ್‌ಸಿಪಿಯು ೮೭ ಕ್ಷೇತ್ರಗಳಲ್ಲಿ ಚುನಾವಣಾ ಅಖಾಡಕ್ಕಿಳಿದಿವೆ. ಮಹಾಅಘಾಡಿಯು ಇನ್ನುಳಿದ ಆರು ಕ್ಷೇತ್ರಗಳನ್ನು ಇತರೆ ಸಣ್ಣ ಪುಟ್ಟ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ.

ಈ ಎರಡೂ ಬಣಗಳು ಚುನಾವಣೆಯಲ್ಲಿ ಗೆದ್ದರೆ ಯಾರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವುದಕ್ಕೆ ಸ್ಪಷ್ಟವಾಗಿ ಉತ್ತರ ಸಿಗುತ್ತಿಲ್ಲ. ಎರಡೂ ಮೈತ್ರಿಕೂಟಗಳು ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲದೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣಾ ಸಮರಕ್ಕಿಳಿದಿವೆ. ಮಹಾಯುತಿ ಮೈತ್ರಿಕೂಟದಲ್ಲಿ ೧೪೮ ಕಡೆ ಸ್ಪಽಸಿರುವ ಬಿಜೆಯ ಮೈತ್ರಿಕೂಟವು ಹೆಚ್ಚು ಸ್ಥಾನಗಳನ್ನು ಪಡೆದು ಅಽಕಾರಕ್ಕೆ ಬಂದರೆ ಸಹಜವಾಗಿ ಮುಖ್ಯಮಂತ್ರಿ ಸ್ಥಾನ ಬಿಜೆಪಿಯ ಪಾಲಾಗುವುದರಲ್ಲಿ ಯಾವ ಸಂಶಯವೂ ಇರಲಾರದು. ಒಮ್ಮೆ ಮುಖ್ಯಮಂತ್ರಿಯಾಗಿದ್ದು, ಶಿಂಧೆ ನೇತೃತ್ವದ ಆಡಳಿತದಲ್ಲಿ ಉಪಮುಖ್ಯಮಂತ್ರಿ ಆಗಿರುವ ದೇವೇಂದ್ರ ಫಡ್ನವೀಸ್ ಅವರಿಗೇ ಹೆಚ್ಚಿನ ಅವಕಾಶ ಇರುವುದಾಗಿ ಚುನಾವಣಾ ಲೆಕ್ಕಾಚಾರವಿದೆ. ಬಿಜೆಪಿಯು ಮತ್ತೆ ಶಿಂಧೆ ಅವರನ್ನಾಗಲಿ ಮತ್ತು ಅಜಿತ್ ಪವಾರ್ ಅವರನ್ನಾಗಲಿ ಮುಖ್ಯಮಂತ್ರಿ ಗಾದಿಗೆ ಕೂರಿಸುವ ಸಾಧ್ಯತೆ ಬಹುತೇಕ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದ ಬಹಿರಂಗ ಸತ್ಯ.

ಇತ್ತ ಕಾಂಗ್ರೆಸ್ ನೇತೃತ್ವದ ಮಹಾಅಘಾಡಿ ಮೈತ್ರಿಕೂಟ ಅಽಕಾರಕ್ಕೆ ಬಂದರೆ ಕಾಂಗ್ರೆಸ್‌ನಲ್ಲಿ ಹಳೆಯ ತಲೆಗಳಾದ ಪೃಥ್ವಿರಾಜ್ ಚವ್ಹಾಣ್ ಮತ್ತು ಈಗಿನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಳೆ ಮುಂತಾದವರು ಸರದಿ ಸಾಲಿನಲ್ಲಿದ್ದಾರೆ. ಆದರೆ ಈ ಮೈತ್ರಿಕೂಟ ಬಹುಮತ ಪಡೆದರೆ ತಾನೇ ಮುಖ್ಯಮಂತ್ರಿ ಸ್ಥಾನಕ್ಕೆ ಕೂರುವುದು ಎನ್ನುವ ವಿಶ್ವಾಸ ಶಿವಸೇನೆಯ ಉದ್ಧವ್ ಠಾಕ್ರೆಯ ಬಲವಾದ ನಂಬಿಕೆ. ನಾಯಕತ್ವದ ಗೊಂದಲ ಸೃಷ್ಟಿಯಾದರೆ ಪವಾರ್ ಅವರು ತಮ್ಮ ಪುತ್ರಿ ಲೋಕಸಭೆ ಸದಸ್ಯೆ ಸುಪ್ರಿಯಾ ಸುಳೆ ಅವರನ್ನು ಮುಖ್ಯಮಂತ್ರಿ ಗಾದಿಗೆ ಕೂರಿಸಲು ಮಾನಸಿಕವಾಗಿ ಸಿದ್ಧರಾಗಿರುವುದಾಗಿ ಹೇಳಲಾಗುತ್ತಿದೆ.

ಈ ಎಲ್ಲ ವಾಸ್ತವಗಳ ನಡುವೆ ಎರಡೂ ಮೈತ್ರಿ ಕೂಟಗಳು ಗ್ಯಾರಂಟಿ ಕಾರ್ಯಕ್ರಮಗಳನ್ನು ಪೈಪೋಟಿಗೆ ಬಿದ್ದವರಂತೆ ಪ್ರಕಟಿಸಿದ್ದಾರೆ. ಕರ್ನಾಟಕದ ಗ್ಯಾರಂಟಿ ಯೋಜನೆಗಳಿಂದ ಆ ರಾಜ್ಯವು ದಿವಾಳಿಯತ್ತ ನಡೆದಿದೆ ಎಂದು ಕಾಂಗ್ರೆಸ್ಸನ್ನು ಹಳಿಯಲು ಒಂದು ಸಣ್ಣ ಅವಕಾಶವನ್ನೂ ಬಿಡದ ಪ್ರಧಾನಿ ನರೇಂದ್ರ ಮೋದಿ ಅವರು, ಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ ಘೋಷಿಸಿರುವ ಹನ್ನೆರಡು ಗ್ಯಾರಂಟಿಗಳ ಬಗೆಗೆ ಬಾಯಿ ಬಿಡುತ್ತಿಲ್ಲ. ಅಘಾಡಿ ಮೈತ್ರಿ ಕೂಟದ ಪರವಾಗಿ ಈಗಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಽ, ಮಹಿಳೆಯರಿಗೆ ತಿಂಗಳಿಗೆ ಮೂರು ಸಾವಿರ, ಉಚಿತ ಬಸ್ ಪ್ರಯಾಣ, ರೈತರಿಗೆ ೩ ಲಕ್ಷ ರೂಪಾಯಿವರೆಗೆ ಸಾಲಮನ್ನಾ, ೨೫ ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆ ಮತ್ತು ಉಚಿತ ಔಷಧೋಪಚಾರ, ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ತಿಂಗಳಿಗೆ ೪ ಸಾವಿರ ಸ್ಟೆ ಫಂಡ್, ಶೇ. ೫೦ರಷ್ಟು ಮೀಸಲಾತಿ ಮಿತಿಯನ್ನು ರದ್ದುಗೊಳಿಸುವುದು ಮತ್ತು ಜಾತಿಗಣತಿ ನಡೆಸುವ ಘೋಷಣೆಯನ್ನು ಪ್ರಕಟಿಸಿದ್ದಾರೆ. ಕಳೆದ ವಾರ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಸಮ್ಮುಖದಲ್ಲಿಯೇ ರಾಹುಲ್ ಗಾಂಧಿ ಈ ಘೋಷಣೆಗಳು ಮಹಾಅಘಾಡಿಯ ಮೈತ್ರಿಕೂಟದ್ದು ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಗ್ಯಾರಂಟಿಗಳಿಗೆ ತಾನೇನು ಕಡಿಮೆ ಇಲ್ಲ ಎಂದು ಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ ಈಗಾಗಲೇ ಜಾರಿಗೆ ತಂದಿರುವ ಲಡಕಿ ಬೆಹನ್ ಯೋಜನೆಯಂತೆ ಬಡ ಮಹಿಳೆಗೆ ತಲಾ ೧,೫೦೦ ರೂ. ನೀಡುತ್ತಿದ್ದು ಅದನ್ನು ಮುಂದೆ ಅಧಿಕಾರಕ್ಕೆ ಬಂದಾಗ ೨,೧೦೦ ರೂ. ಗಳಿಗೆ ಏರಿಸುವ ಭರವಸೆ ನೀಡಿದ್ದಾರೆ. ಈ ಯೋಜನೆಯು ಈಗಾಗಲೇ ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಆಕರ್ಷಿಸಿರುವುದು ಮಹಾಯುತಿ ಮೈತ್ರಿ ಕೂಟಕ್ಕೆ ಹುಮ್ಮಸ್ಸು ತಂದಿದೆ. ಮರಾಠಿಗರಿಗೆ ಮೀಸಲಾತಿ ನೀಡಿಕೆ ಭರವಸೆ, ವರ್ಷಕ್ಕೆ ಮೂರು ಉಚಿತ ಅನಿಲ ಸಿಲಿಂಡರ್ ನೀಡಿಕೆ, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿಕೆ ಹೀಗೆ ಹನ್ನೆರಡು ಗ್ಯಾರಂಟಿ ಕಾರ್ಯಕ್ರಮಗಳ ಭರವಸೆ ನೀಡಿದ್ದಾರೆ. ಈ ಉಚಿತ ಯೋಜನೆಗಳು ಯಾವ ಮೈತ್ರಿಕೂಟದ ಕೈಹಿಡಿಯುತ್ತದೆ ಕಾದು ನೋಡಬೇಕು. ಆದರೆ ಈ ಎರಡೂ ಮೈತ್ರಿಕೂಟಕ್ಕಿರುವ ಮುಖ್ಯ ಸವಾಲು ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆ. ೨೦ರಂದು ಮತದಾನ ನಡೆದು, ೨೩ರಂದು ಮತ ಎಣಿಕೆ ನಡೆದು ೨೬ರ ಒಳಗೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ. ಒಂದು ವೇಳೆ ಅತಂತ್ರ ವಿಧಾನಸಭೆ ಪರಿಸ್ಥಿತಿ ಉಂಟಾದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗಾಗಲೇ ತಮ್ಮದೇ ಕಾರ್ಯತಂತ್ರವನ್ನು ಹೆಣೆದಿರುವುದಾಗಿ ವ್ಯಾಪಕವಾದ ಸುದ್ದಿ ಹರಡಿದೆ.

ಜಾರ್ಖಂಡ್ ಚುನಾವಣೆ: ಜಾರ್ಖಂಡ್ ವಿಧಾನಸಭೆಯ ೮೧ ಸ್ಥಾನಗಳಿಗೆ ನ. ೧೩ರಂದು ಮತದಾನ ನಡೆಯಲಿದೆ. ಈಗ ಆಡಳಿತ ನಡೆಸುತ್ತಿರುವ ಹೇಮಂತ್ ಸೊರೇನ್ ನೇತೃತ್ವದ ಜೆಎಂಎಂ ಆಡಳಿತವನ್ನು ಕೊನೆಗೊಳಿಸಿ ಬಿಜೆಪಿ ನೇತೃತ್ವದ ಸರ್ಕಾರ ರಚಿಸಬೇಕೆಂದು ಕೇಂದ್ರ ಸರ್ಕಾರ ಸಾಕಷ್ಟು ಕಸರತ್ತು ನಡೆಸಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಮನಿಲಾಂಡರಿಂಗ್ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗಲೂ ಜನತೆ ಜೆಎಂಎಂ ಪರವಾಗಿರುವಂತೆ ಅವರ ಪತ್ನಿ ಕಲ್ಪನಾ ಸೊರೇನ್ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು. ಗುಡ್ಡಗಾಡು ಮತ್ತು ಆದಿವಾಸಿಗಳೇ ಹೆಚ್ಚಿರುವ ಜಾರ್ಖಂಡ್ ರಾಜ್ಯ ತನ್ನದೇ ಆದ ವೈಶಿಷ್ಟ ವನ್ನು ಕಾಪಾಡಿಕೊಂಡು ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದಿಂದ ನುಸುಳುವಿಕೆ ಹೆಚ್ಚಿರುವುದನ್ನು ಬಿಜೆಪಿ ಗಂಭೀರವಾಗಿ ಚುನಾವಣೆ ವಿಷಯವನ್ನಾಗಿ ತೆಗೆದುಕೊಂಡಿದೆ.

 

Tags: