ಬಿ. ಟಿ. ಮೋಹನ್ ಕುಮಾರ್
ಮಂಡ್ಯ: ಕಬ್ಬು ಬೆಳೆಯಲ್ಲಿ ಉತ್ಪಾದಕತೆ ಹೆಚ್ಚಿಸಲು ಕೃಷಿ ಇಲಾಖೆ ಆಸಕ್ತಿ ವಹಿಸಿದ್ದು, ಅದರಲ್ಲೂ ಕೂಳೆ ಕಬ್ಬು ಬೆಳೆಯಲ್ಲಿ ರೈತರು ಹೇಗೆ ಹೆಚ್ಚು ಇಳುವರಿ ಪಡೆಯಬಹುದು ಎಂಬ ಬಗ್ಗೆ ರೈತರಿಗೆ ಸಲಹೆಗಳನ್ನು ನೀಡುತ್ತಿದೆ. ಇದಕ್ಕಾಗಿ ತಜ್ಞರ ತಂಡವನ್ನು ಕೃಷಿ ಭೂಮಿಗಳಿಗೆ ಕರೆದೊಯ್ದು ರೈತರಿಗೆ ಕೃಷಿ ಪದ್ಧತಿ ಬದಲಾವಣೆ ಮತ್ತು ತಾಂತ್ರಿಕತೆಗಳ ಅಳವಡಿಕೆಗೆ ಸಲಹೆಗಳನ್ನು ಕೊಡುತ್ತಿದೆ.
ಪ್ರಾರಂಭಿಕ ಪ್ರಯತ್ನವಾಗಿ ವಿ. ಸಿ. ಫಾರ್ಮ್ ವಲಯ ಕೃಷಿ ಸಂಶೋಧನಾ ಕೇಂದ್ರದ ಸಮೀಪದ ಗೊರವಾಲೆ, ಸಂಪಹಳ್ಳಿ ಹಾಗೂ ಸುತ್ತಮುತ್ತಲ ಹಳ್ಳಿಗಳಿಗೆ ತೆರಳಿ ರೈತರಿಗೆ ಸಲಹೆ-ಸೂಚನೆಗಳನ್ನು ನೀಡಿದೆ. ಜೊತೆಗೆ, ಸ್ಥಳದಲ್ಲೇ ರೈತರ ಮನವೊಲಿಸಿ, ಕೂಳೆ ಕಬ್ಬು ಬೆಳೆಯ ಪಟಗಳ ಅಂತರವನ್ನು ಹೆಚ್ಚಿಸುವಲ್ಲಿ ಅಽಕಾರಿಗಳು ಸಫಲರಾಗಿದ್ದಾರೆ. ಅಂತಹ ರೈತರಿಗೆ ಉಚಿತವಾಗಿ ಸೂಕ್ಷಾಣು ಜೀವಿಗಳ ಮಿಶ್ರಣವನ್ನು ವಿತರಿಸಿ ಪ್ರೇರೇಪಿಸಲಾಗುತ್ತಿದೆ.
ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ. ಸಿ. ಅಶೋಕ್, ವಿ. ಸಿ. ಫಾರ್ಮ್ ವಲಯ ಕೃಷಿ ಸಂಶೋಧನಾ ಕೇಂದ್ರದ ಕಬ್ಬು ಬೇಸಾಯ ಶಾಸ್ತ್ರಜ್ಞ ಡಾ. ಕೆ. ವಿ. ಕೇಶವಯ್ಯ ಹಾಗೂ ವಿ. ಸಿ. ಫಾರ್ಮ್ ಕೃಷಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ. ಆಶಾ ಅವರನ್ನೊಳಗೊಂಡ ತಂಡವು ಕಳೆದೆರಡು ದಿನಗಳಿಂದ ರೈತರನ್ನು ಅವರ ಜಮೀನುಗಳಲ್ಲೇ ಭೇಟಿಯಾಗಿ ಕಬ್ಬು ಪಟಗಳ ಅಂತರ ಹೆಚ್ಚಿಸುವಂತೆ ಮನವೊಲಿಸುತ್ತಿದೆ.
ಬಿತ್ತನೆ ಕಬ್ಬು ಆಯ್ಕೆ ವೇಳೆ ೮ರಿಂದ ೯ ತಿಂಗಳ ಅವಽಯ ತನು ಕಬ್ಬನ್ನೇ ಆಯ್ಕೆ ಮಾಡಿಕೊಳ್ಳಬೇಕು. ಮುಖ್ಯವಾಗಿ ಕೂಳೆ ಕಬ್ಬು ಬೆಳೆಯಲ್ಲಿ ರೈತರು ಅಳವಡಿಸಬೇಕಿ ರುವ ಪ್ರಮುಖ ಉತ್ಪಾದನಾ ತಾಂತ್ರಿಕತೆಗಳ ಅಳವಡಿಕೆ, ಪಟಗಳ ನಡುವಿನ ಅಂತರವನ್ನು ಎರಡೂವರೆ ಅಡಿಯಿಂದ ೪ರಿಂದ ೫ ಅಡಿಗೆ ಹೆಚ್ಚಿಸುವುದು, ತರಗು ನಿರ್ವಹಣೆ, ಕೂಳೆ ಕೊಚ್ಚುವಿಕೆ, ಮಗ್ಗಲು ಕೊರೆಯುವುದು, ಪೋಷಕಾಂಶಗಳ ನಿರ್ವಹಣೆ, ಪಿಗ್ಗುಳಿ ನೆಡುವ ಕ್ರಮ… ಹೀಗೆ ಹಲವು ಮಾಹಿತಿಗಳನ್ನು ನೀಡುತ್ತಿದೆ.
ಕೃಷಿ ವಿಜ್ಞಾನಿಗಳ ಸಲಹೆಗಳೇನು?
ಮಂಡ್ಯ ಜಿಲ್ಲೆಯಲ್ಲಿ ೨. ೫-೩ ಅಡಿ ಅಂತರದಲ್ಲಿ ಕಬ್ಬು ನೆಡುವುದು ವಾಡಿಕೆಯಾಗಿದೆ. ಇದರಿಂದ ತೆಂಡೆಗಳು (ದಸಿ) ಸಾವನ್ನಪ್ಪಿ, ಕಬ್ಬಿನ ಜಲ್ಲೆಗಳ ಸಂಖ್ಯೆ ಮತ್ತು ತೂಕ ಕಡಿಮೆಯಾಗುತ್ತದೆ. ಇದರಿಂದ ಕಬ್ಬು ಇಳುವರಿಯೂ ಕುಸಿಯುತ್ತಿದೆ. ಇದರಿಂದ ಪಾರಾಗಲು ತನು ಕಬ್ಬು ಕಟಾವಾದ ನಂತರ ಕೂಳೆ ಕಬ್ಬಿನಲ್ಲಿ ಪಟ ಬಿಟ್ಟು ಪಟವನ್ನು ತೆಗೆಯಬೇಕು. ಪಟಗಳ ನಡುವಿನ ಅಂತರ ೪. ೫ರಿಂದ ೫ ಅಡಿ ಇರಬೇಕು.
ತರಗನ್ನು ವ್ಯವಸ್ಥಿತವಾಗಿ ಕೂಳೆ ಬೆಳೆಯ ಮಣ್ಣಿಗೆ ಸೇರಿಸಿದಲ್ಲಿ, ಮಣ್ಣಿನ ಸಾವಯವ ಪದಾರ್ಥ, ಪೋಷಕಾಂಶಗಳ ಮಟ್ಟ ಹೆಚ್ಚಾಗುತ್ತದೆ. ಎರಡು ಸಾಲಿನ ಮಧ್ಯೆ ತರಗನ್ನು ಹರಡಿ(ಸಾಲು ಬಿಟ್ಟು ಸಾಲು) ಎಕರೆಗೆ ೧೫ ಕೆ. ಜಿ. ಯೂರಿಯಾ, ೨೦ ಕೆ. ಜಿ. ಸೂಪರ್ ಪಾಸ್ಛೇಟ್ ಗೊಬ್ಬರ, ನಂತರ ೨. ೦-೨. ೫ ಕೆ. ಜಿ. ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಸೆಗಣಿಯೊಂದಿಗೆ ಮಿಶ್ರಣ ಮಾಡಿ ತರಗಿನ ಮೇಲೆ ಹಾಕಬೇಕು. ಇದರಿಂದ ತರಗು ಬೇಗನೆ ಕಳಿಯಲು ಸಹಕಾರಿಯಾಗಿ, ಮಣ್ಣಿನಲ್ಲಿ ತೇವಾಂಶವಿರುತ್ತದೆ. ಕಳೆಯೂ ನಿಯಂತ್ರಣಕ್ಕೆ ಬರುತ್ತದೆ.
ಕಬ್ಬು ಕಟಾವಾದ ನಂತರ ಉಳಿದಿರುವ ಉದ್ದ ಕೂಳೆಯನ್ನು ಹರಿತವಾದ ಕುಡುಗೋಲಿನಿಂದ ಒಂದೇ ಹೊಡೆತಕ್ಕೆ ನೆಲಸಮಕ್ಕೆ ಕತ್ತರಿಸಬೇಕು. ಇದರಿಂದ ಒಂದೇ ಸಮನಾಗಿ ಮೊಳಕೆ ಒಡೆಯು ವುದಲ್ಲದೇ, ಮೊಳಕೆ ಪ್ರಮಾಣವು ಕೂಡ ಗಣನೀಯವಾಗಿ ಹೆಚ್ಚಾಗುತ್ತದೆ. ಕೂಳೆ ಕೊಚ್ಚುವುದು ಕೂಳೆ ಬೆಳೆ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಕೂಳೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಬಹಳ ಮುಖ್ಯ. ಪ್ರತಿ ಎಕರೆಗೆ ೧೦ ಟನ್ ಕೊಟ್ಟಿಗೆ ಗೊಬ್ಬರ ಒದಗಿಸಬೇಕು. ಜತೆಗೆ, ಸಾರಜನಕ (೧೦೦ಕೆ. ಜಿ. ), ರಂಜಕ(೪೦ಕೆ. ಜಿ. ), ಪೊಟ್ಯಾಷ್(೫೦ ಕೆ. ಜಿ. ) ರಸಗೊಬ್ಬರವನ್ನು ನೇರ ಅಥವಾ ಕಾಂಪ್ಲೆಕ್ಸ್ ರಸಗೊಬ್ಬರಗಳ ಮುಖಾಂತರ ಒದಗಿಸಬೇಕಾಗುತ್ತದೆ. ಕೂಳೆ ಬಿಟ್ಟ ಒಂದು ತಿಂಗಳಲ್ಲಿ ಶೇ. ೩೦ರಷ್ಟು ಸಾರಜನಕ, ಪೂರ್ಣ ಪ್ರಮಾಣದ ರಂಜಕ, ಪೊಟ್ಯಾಷ್‌ನ್ನು ಸಾಲಿನಲ್ಲಿ ಒದಗಿಸಬೇಕು.
ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ವಾರ್ಷಿಕ ಅಂದಾಜು ೩೮ರಿಂದ ೪೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ೨-೩ ಕೂಳೆ ಕಬ್ಬು ಬೆಳೆ ಬೆಳೆಯುವುದು ವಾಡಿಕೆಯಲ್ಲಿದೆ. ವಿ. ಸಿ. ಫಾರ್ಮ್ ವಲಯ ಕೃಷಿ ಸಂಶೋಧನಾ ಕೇಂದ್ರವೇ ಬಿಡುಗಡೆ ಮಾಡಿರುವ ವಿ. ಸಿ. ಎಫ್. -೦೫೧೭ (ಬಾಹುಬಲಿ) ತಳಿಯು ಶೇ. ೯೦ಕ್ಕಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ಆವರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಕಬ್ಬಿನ ಉತ್ಪಾದಕತೆಯು ಕುಂಠಿತಗೊಂಡಿದ್ದು, ಪ್ರತಿ ಎಕರೆಗೆ ೪೦ ಮೆಟ್ರಿಕ್ ಟನ್‌ಗಿಂತ ಕಡಿಮೆ ಇಳುವರಿ ಬರುತ್ತಿದೆ. ಇದರಿಂದ ರೈತರಿಗೆ ಆರ್ಥಿಕವಾಗಿ ನಷ್ಟವಾಗುತ್ತಿದೆ. ಕೂಳೆ ಬೆಳೆಯಲ್ಲಿ ಕೆಲವು ತಾಂತ್ರಿಕತೆಗಳನ್ನು ರೈತರು ಅಳವಡಿಸಿಕೊಂಡಲ್ಲಿ ಪ್ರತಿ ಎಕರೆಗೆ ೬೦-೭೦ ಟನ್ ಇಳುವರಿ ಪಡೆದು, ಆರ್ಥಿಕವಾಗಿ ಸಬಲರಾಗಬಹುದು. ಕಬ್ಬಿನ ಗುಣಮಟ್ಟ ಉತ್ತಮಗೊಂಡು ಅಽಕ ಸಕ್ಕರೆ/ಬೆಲ್ಲದ ಇಳುವರಿ ನಿರೀಕ್ಷಿಸಬಹುದು. – ವಿ. ಎಸ್. ಅಶೋಕ್, ಜಂಟಿ ಕೃಷಿ ನಿರ್ದೇಶಕ
ಜಿಲ್ಲೆಯಲ್ಲಿ ಶೇ. ೫೦ರಷ್ಟು ಕೂಳೆ ಕಬ್ಬು ಬೆಳೆಯಿದೆ. ಆದರೆ, ರೈತರು ಸರಿಯಾಗಿ ಬೆಳೆ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ಉತ್ಪಾದಕತೆ ಕಡಿಮೆಯಾಗಿದೆ. ಪಟಗಳ ಅಂತರ ಕಡಿಮೆ ಇರುವುದರಿಂದ ಒತ್ತಡ ಹೆಚ್ಚಾಗಿ ತೆಂಡೆಗಳು ಸಾಯುತ್ತವೆ. ಇದರಿಂದ ಇಳುವರಿ ಕಡಿಮೆಯಾಗುತ್ತದೆ. ಹೀಗಾಗಿ ಕಬ್ಬಿನ ಪಟಗಳ ಅಂತರ ಕನಿಷ್ಠ ೪. ೫ರಿಂದ ೫ ಅಡಿ ಇರಬೇಕು. ಇದರಿಂದ ತೆಂಡೆ ಸಾಯುವುದು ಕಡಿಮೆಯಾಗಿ, ಕಬ್ಬಿನ ಗಾತ್ರ ಮತ್ತು ಉದ್ದ ಹೆಚ್ಚಾಗುತ್ತದೆ. ಇದರಿಂದ ೭೦ ರಿಂದ ೮೦ ಟನ್ ಇಳುವರಿ ಪಡೆಯಬಹುದು.
– ಕೆ. ವಿ. ಕೇಶವಯ್ಯ, ಕಬ್ಬು ಬೇಸಾಯಶಾಸ್ತ್ರಜ್ಞರು, ವಲಯ ಕೃಷಿ ಸಂಶೋಧನಾ ಕೇಂದ್ರ, ವಿ. ಸಿ. ಫಾರ್ಮ್, ಮಂಡ್ಯ ತಾ.