ಮಂಡ್ಯ: ಕೇಂದ್ರ ಸರ್ಕಾರದಿಂದ ಅತ್ಯುತ್ತಮ ಗ್ರಾಮ ಪಂಚಾಯಿತಿಗಳಿಗೆ ಕೊಡಮಾಡುವ ೨೦೨೩-೨೪ನೇ ಸಾಲಿನ ಜಿಲ್ಲಾ ಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಆಯ್ಕೆಯಲ್ಲಿ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿಗೆ ಅನ್ಯಾಯವಾಗಿದೆ ಎಂದು ಗ್ರಾ.ಪಂ ಸದಸ್ಯ, ವಕೀಲ ಮಧುಸೂದನ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದರಿ ಪುರಸ್ಕಾರಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ೧೩೪ ಪ್ರಶ್ನಾವಳಿಗಳ ಮೂಲಕ ಗ್ರಾ.ಪಂಗಳಿಗೆ ಅಂಕಗಳನ್ನು ನೀಡಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುವುದು, ಈ ಅಂತಿಮ ಪಟ್ಟಿಯಲ್ಲಿ ಹೆಮ್ಮನಹಳ್ಳಿ, ಭಾರತೀನಗರ, ಮತ್ತು ಕದಲೂರು ಗ್ರಾ.ಪಂಗಳ ಹೆಸರುಗಳಿದ್ದು, ನಮಗಿಂತ ಕಡಿಮೆ ಅಂಕ ಪಡೆದ ಭಾರತೀನಗರ ಗ್ರಾ.ಪಂ ಆಯ್ಕೆ ಮಾಡಿದ್ದಾರೆ ಎಂದು ದೂರಿದರು.
ಈ ಆಯ್ಕೆಯ ವಿರುದ್ಧ ಜಿ.ಪಂ ಸಿಇಓ ಮತ್ತು ಪಂಚಾಯಿತ್‌ರಾಜ್ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳು ಹಾಗೂ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಿದ್ದು, ಜಿ.ಪಂ ಸಿಇಓ ಅವರು ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಓಗಳ ಜೊತೆ ನವೆಂಬರ್ ೩ರಂದು ಜಿ.ಪಂ ನಲ್ಲಿ ಸಭೆ ನಡೆಸಲಾಗಿದ್ದು ಹೆಮ್ಮನಹಳ್ಳಿ, ಭಾರತೀನಗರ ಗ್ರಾ.ಪಂಗಳ ಅಂಕಗಳನ್ನು ಪರಿಶೀಲನೆ ನಡೆಸಲಾಗಿದ್ದು, ಹೆಮ್ಮನಹಳ್ಳಿ ಗ್ರಾ.ಪಂಗೆ ೨೧ ಹೆಚ್ಚು ಅಂಕಗಳು ಲಭಿಸಿರುವುದು ದೃಢಪಟ್ಟಿದೆ ಎಂದರು.
ಭಾರತೀನಗರ ಗ್ರಾ.ಪಂಗೆ ಅಂಕ ದೊರೆಯದ ಹಲವು ಭಾಗಗಳಿಗೆ ೨ ದಿನಗಳಲ್ಲಿ ಕೃತಕ ದಾಖಲಾತಿ ಸೃಷ್ಠಿಸಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದು, ಇದು ಮೇಲಧಿಕಾರಿಗಳ ಮಟ್ಟದಲ್ಲಿ ನಡೆದಿರುವ ವಂಚನೆಯು ಅಕ್ರಮವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಅಧಿಕಾರಿ ಮಟ್ಟದಲ್ಲಿ ಅನ್ಯಾಯವಾಗಿದ್ದು, ಈ ಸಂಬಂಧ ಅಧಿಕಾರಿಗಳು ನ್ಯಾಯ ದೊರಕಿಸಿಕೊಡದೇ ಹೋದಲ್ಲಿ ನ್ಯಾಯಾಲಯದ ಮೆಟ್ಟಿಲು ಏರುವುದಾಗಿ ಇದೇ ಸಂದರ್ಭದಲ್ಲಿ ಎಚ್ಚರಿಸಿದರು.
ಗೋಷ್ಠಿಯಲ್ಲಿ ಹೆಮ್ಮನಹಳ್ಳಿ ಗ್ರಾ.ಪಂ ಅಧ್ಯಕ್ಷೆ ವೀಣಾ, ಸದಸ್ಯ್ಯ ಕಮಲಾಕ್ಷಿ, ಹೆಚ್.ಸಿ.ಉಮೇಶ್, ನಾಗೇಶ್, ಹೆಚ್.ಕೆ.ನಂದೀಶ್‌ಗೌಡ ಇದ್ದರು.





