Mysore
17
few clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಬಡ ಮಕ್ಕಳ ಪ್ರವೇಶ ಕಡಿತಕ್ಕೆ ಮುಂದಾದ ವಿವಿ

ಮೈಸೂರು ವಿವಿ ಅಕಾಡೆಮಿ ಕೌನ್ಸಿಲ್‌ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ವಿದ್ಯಾರ್ಥಿಗಳ ತೀವ್ರ ವಿರೋಧ

ಕೆ.ಬಿ.ರಮೇಶನಾಯಕ

ಮೈಸೂರು: ಬಡ, ದಲಿತ, ಹಿಂದುಳಿದ ವರ್ಗಗಳ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆಂದು ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರವೇಶ ಕಲ್ಪಿಸಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೆ ಮತ್ತೊಂದೆಡೆ ಬಡ ಮಕ್ಕಳು ಹೆಚ್ಚಿನದಾಗಿ
ಪ್ರವೇಶಾತಿ ಪಡೆಯುವ ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವ ಹಣಾ ಕಾಲೇಜಿನ ಸೀಟು ಹೆಚ್ಚಳಕ್ಕೆ ಮಿತಿ ಹೇರಲು ಮುಂದಾಗಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಖಾಸಗಿ ಮತ್ತು ಹೊರ ವಲಯದ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಯಾಗುತ್ತಿರು ವುದನ್ನು ಮುಂದಿಟ್ಟುಕೊಂಡು ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರವೇಶಾತಿ ಹೆಚ್ಚಳಕ್ಕೆ ಕಡಿವಾಣ ಹಾಕುವುದಕ್ಕೆ ಹೊರಟಿರುವ ಕ್ರಮದ ವಿರುದ್ಧ ಈಗ ವಿದ್ಯಾರ್ಥಿ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಬಿಕಾಂ, ಬಿಬಿಎಂ ಕೋರ್ಸ್‌ಗಳಿಗೆ ಭಾರೀ ಬೇಡಿಕೆ ಉಂಟಾಗಿರುವ ಕಾರಣ ಸರ್ಕಾರದ ಅನು
ಮೋದನೆ ಪಡೆದು ಪ್ರವೇಶಾತಿ ಮಾಡಿಕೊಳ್ಳ ಲಾಗಿತ್ತು. ಆದರೆ, ಈಗ ಅದಕ್ಕೆ ಒಪ್ಪಿಗೆ ಕೊಡಬೇಕಾದ ಮೈಸೂರು ವಿವಿಯು ಮಿತಿ ಹೇರಲು ಹೊರಟಿದೆ. ಇದರಿಂದಾಗಿ ಮುಂದಿನ ವರ್ಷ ಪ್ರವೇಶಾತಿ ಪಡೆ ದುಕೊಳ್ಳುವುದಕ್ಕೆ ತೀವ್ರ ಪೈಪೋಟಿ ಉಂಟಾಗುವ ಸನ್ನಿವೇಶ ನಿರ್ಮಾಣವಾಗಿದೆ.

ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಮಹಾರಾಣಿ ಕಲಾ ಕಾಲೇಜು ಕಟ್ಟಡದಲ್ಲಿ ನಡೆಯುತ್ತಿದ್ದ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜನ್ನು ಬೇರ್ಪಡಿಸಲಾಗಿತ್ತು. ನಂತರ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಪಡುವಾರಹಳ್ಳಿಯಲ್ಲಿ ೧೨೫ ಕೋಟಿ ರೂ. ವೆಚ್ಚದಲ್ಲಿ ಮೂರು ಅಂತಸ್ತಿನ ಕಾಲೇಜು ಕಟ್ಟಡ ಮತ್ತು ೫೦ ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿನಿಲಯವನ್ನು ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡಿದ್ದರಿಂದ ನೂತನ ವಾಗಿ ನಿರ್ಮಿಸಿದ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು. ನಂತರ, ಈ ಕಾಲೇಜಿನಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಿಸಿ ಪ್ರವೇಶಾತಿ ಕಲ್ಪಿಸಲಾಯಿತು. ಅದರಂತೆ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿಗಳು
ಪ್ರವೇಶ ಪಡೆಯುತ್ತಿದ್ದರು.

ವರ್ಷದಿಂದ ವರ್ಷಕ್ಕೆ ಪ್ರವೇಶ ಪಡೆಯುವವರ ಪ್ರಮಾಣವೂ ಹೆಚ್ಚಾಗುತ್ತಿದ್ದು, ಈಗ ೪,೦೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪಿಜಿ ಕೋರ್ಸ್‌ನಲ್ಲಿ ಪರಿಶಿಷ್ಟ ಜಾತಿ-೧,೦೦೭, ಪರಿಶಿಷ್ಟ ಪಂಗಡ-೩೩೨, ಹಿಂದುಳಿದ ವರ್ಗಗಳು-೨,೨೩೫, ಸಾಮಾನ್ಯ-೩೮, ಯುಜಿ ಕೋರ್ಸ್‌ನಲ್ಲಿ ಪರಿಶಿಷ್ಟ ಜಾತಿ-೧೩೮, ಎಸ್‌ಟಿ-೪೮, ಹಿಂದುಳಿದ ವರ್ಗಗಳು-೨೭೧, ಸಾಮಾನ್ಯ ವರ್ಗದ ಓರ್ವ ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರದ ಶುಲ್ಕ ೫ ಸಾವಿರ ರೂ.ವಿದ್ದರೆ, ಖಾಸಗಿ ಕಾಲೇಜುಗಳಲ್ಲಿ ಬಿಕಾಂ ಪ್ರವೇಶಾತಿ ಪಡೆಯಲು ಶುಲ್ಕವೇ ೪೦ ಸಾವಿರ ರೂ. ದಾಟಿರುತ್ತದೆ. ಹೀಗಾಗಿಯೇ, ಈ ಕಾಲೇಜಿನಲ್ಲಿ ಸೀಟು ಪಡೆಯುವುದಕ್ಕೆ
ದೊಡ್ಡ ಒತ್ತಡ ಉಂಟಾಗಿರುವುದನ್ನು ಪ್ರವೇಶಾತಿ ಹೊತ್ತಿನಲ್ಲಿ ಗಮನಿಸಬಹುದಾಗಿದೆ.

ಸರ್ಕಾರದಿಂದಲೇ ಅನುಮತಿ: ಕಳೆದ ಹತ್ತು ವರ್ಷಗಳ ಬೇಡಿಕೆಯನ್ನು ನೋಡಿಕೊಂಡು ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ೧,೧೦೦ ಸೀಟುಗಳ ಪ್ರವೇಶಕ್ಕೆ ಅನುಮೋದನೆ ನೀಡಿದೆ. ಬಿ.ಕಾಂ ಕೋರ್ಸ್‌ನ ಪ್ರಥಮ ವರ್ಷಕ್ಕೆ ಹಾಲಿ ಶಾಶ್ವತ ಸಂಯೋಜನೆ ೨೪೦, ತಾತ್ಕಾಲಿಕ ಸಂಯೋಜನೆ ೪೫೦ ಸೀಟುಗಳ ಜೊತೆಗೆ ೨೦೨೪-೨೫ನೇ ಸಾಲಿನಲ್ಲಿ ೪೧೦ ವಿದ್ಯಾರ್ಥಿಗಳನ್ನು ಹೆಚ್ಚುವರಿಯಾಗಿ ದಾಖಲಾತಿ ಮಾಡಿ ಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಸೀಟುಗಳ ಪ್ರವೇಶಕ್ಕೆ ಕಾಲೇಜು ಶಿಕ್ಷಣ ಇಲಾಖೆಯ ಮೂಲಕ ಸಲ್ಲಿಸಿದ್ದ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಹೀಗಿದ್ದರೂ ಮೈಸೂರು ವಿವಿ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಇದಕ್ಕೆ ಅಪಸ್ವರ ತೆಗೆದು ಮಿತಿ ಹೇರುವಂತೆ ನಿರ್ಧಾರ ಮಾಡಿರುವುದು ಸರ್ಕಾರದ ಆಶಯದ ನಡೆಯ ವಿರುದ್ಧವಾಗಿದೆ ಎಂದು ಹೇಳಲಾಗಿದೆ.

ಕಾಲೇಜಿನ ಪ್ರಸ್ತಾಪಕ್ಕೆ ಕಾಲೇಜು ಶಿಕ್ಷಣ ಮಂಡಳಿ ಅನುಮೋದನೆ ನೀಡಿರುವ ಜತೆಗೆ ಮೈಸೂರು ವಿವಿ ಯಿಂದಲೂ ಒಪ್ಪಿಗೆ ಸಿಕ್ಕಿದೆ. ಆದರೆ, ಸಂಯೋಜನೆಗೆ ಒಳಪಟ್ಟಿರುವ ಕಾರಣಕ್ಕಾಗಿ ಕಾಲೇಜಿನ ಪ್ರವೇಶಾತಿಯನ್ನು ಶೇ.೧೦ರಿಂದ ೧೫ಕ್ಕೆ ಹೆಚ್ಚಳಕ್ಕೆ ಅವಕಾಶ ಕೊಡಬೇಕೇ ಹೊರತು ಶೇ.೧೦೦ರಷ್ಟು ಏರಿಕೆಗೆ ಅವಕಾಶ ಕೊಡಬಾರ ದೆಂದು ಹೇಳಿರುವ ವಿಚಾರವೇ ಈಗ ನುಂಗಲಾರದ ಬಿಸಿ ತುಪ್ಪವಾಗಿದೆ.

ಮೂರು ವರ್ಷಗಳಿಂದ ಖುಷಿ ಮತ್ತು ಹೆಮ್ಮೆಯಿಂದ ವ್ಯಾಸಂಗ ಮಾಡುತ್ತಿದ್ದೇವೆ. ವಿವಿ ಸಭೆಯಲ್ಲಿ ಕಾಲೇಜಿನಲ್ಲಿ ಯಾವುದೇ
ಸೌಲಭ್ಯವಿಲ್ಲ ಎಂದು ಪ್ರಸ್ತಾಪಿಸಿರುವುದು ಬೇಸರ ತಂದಿದೆ. ಈ ನಿರ್ಧಾರ ಕೈಬಿಡದಿದ್ದರೆ ಹೋರಾಟಕ್ಕಿಳಿಯ ಬೇಕಾಗುತ್ತದೆ.
-ಎನ್.ಲಿಖಿತ, ಅಧ್ಯಕ್ಷರು, ವಿದ್ಯಾರ್ಥಿ ಸಂಘ, ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಮೈಸೂರು.

ಈ ಕಾಲೇಜಿಗೆ ಅರ್ಜಿ ಹಾಕುವ ಎಲ್ಲರಿಗೂ ಪ್ರವೇಶ ಸಿಗಬೇಕೇ ಹೊರತು ಮಿತಿ ಹೇರಬಾರದು. ಹುಣಸೂರು ಭಾಗದಿಂದ ಬರುವ
ನಮಗೆ ತುಂಬಾ ಅನುಕೂಲವಾ ಗಿದೆ. ಖಾಸಗಿ ಕಾಲೇಜಿನಲ್ಲಿ ಪ್ರವೇಶಕ್ಕೆ ಹೋದಾಗ ೭೫ ಸಾವಿರ ರೂ. ಕೇಳಿದರು. ಇಲ್ಲಿ
೫ ಸಾವಿರ ರೂ.ಗೆ ಪ್ರವೇಶ ದೊರೆಯಿತು. –ಸಿಂಧುರಾಣಿ, ವಿದ್ಯಾರ್ಥಿನಿ.

ಮಹಾರಾಣಿ ಕಾಲೇಜಿನಲ್ಲಿ ಪ್ರವೇಶ ನೀಡಲು ನಿರ್ಬಂಧ ಹೇರಿಲ್ಲ. ಸರ್ಕಾರದ ಆದೇಶದ ಪ್ರಕಾರ ಸೀಟು ಕೊಡಬೇಕೇ ಹೊರತು ಮಿತಿ ಹೇರುವಂತಿಲ್ಲ. ಆದರೆ, ಮೂಲ ಸೌಕರ್ಯಗಳನ್ನು ನೋಡಿಕೊಂಡು ಪ್ರವೇಶ ಕಲ್ಪಿಸಲು ಮಿತಿ ಹೇರಬೇಕಿದೆ.
-ವಿಜಯಲಕ್ಷ್ಮೀ, ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ.

Tags:
error: Content is protected !!