Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಫುಟ್‌ಪಾತ್‌ಗಳಿಗೆ ಸಿಮೆಂಟ್ ಟೈಲ್ಸ್ ಬಳಕೆಯಿಂದ ಪರಿಸರಕ್ಕೆ ಹಾನಿ

ಮೈಸೂರು ಗ್ರಾಹಕರ ಪರಿಷತ್‌ ಸೇರಿದಂತೆ ಸಾರ್ವಜನಿಕರ ಆಕ್ರೋಶ
ವಾಸು ವಿ.ಹೊಂಗನೂರು

ಮೈಸೂರು: ನಗರದ ಫುಟ್‌ ಪಾತ್‌ಗಳಿಗೆ ಇಂಟರ್‌ಲಾಕ್ ಟೈಲ್ಸ್‌ ಗಳನ್ನು ಅಳವಡಿಸಿ ಸಿಮೆಂಟ್ ಹಾಕುತ್ತಿರುವುದರಿಂದ ಭೂಮಿಯಲ್ಲಿ ನೀರು ಇಂಗದೆ ಅಧಿಕ ಮಳೆ ಬಂದಾಗ ತಗ್ಗು ಪ್ರದೇಶಗಳಲ್ಲಿರುವ ನುಗ್ಗುತ್ತಿರುವುದು ಒಂದು ಸಮಸ್ಯೆಯಾದರೆ, ಮತ್ತೊಂದೆಡೆ ಪರಿಸರಕ್ಕೆ ಸಿಮೆಂಟ್ ಫುಟ್ ಪಾತ್‌ಗಳು ಮಾರಕವಾಗುತ್ತಿವೆ ಎಂದು ಮೈಸೂರು ಗ್ರಾಹಕರ ಪರಿಷತ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ನಗರದಲ್ಲಿ ಫುಟ್‌ಪಾತ್‌ಗಳಿಗೆ ಇಂಟರ್‌ಲಾಕ್ ಟೈಲ್ಸ್ ಅಳವಡಿಸುತ್ತಿದೆ. ಈ ಯೋಜನೆ ಪರಿಸರದ ಮೇಲೆ ಎಂಥ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಕಿಂಚಿತ್ತೂ ಅರಿವಿಲ್ಲದಿರುವುದು ಕಂಡು ಬಂದಿದೆ. ಬಿದ್ದ ಮಳೆ ನೀರು ಭೂಮಿಯಲ್ಲಿ ಇಂಗದೇ ಅಂತರ್ಜಲದ ಮಟ್ಟವೂ ಕುಸಿ ಯುವ ಸ್ಥಿತಿಯಲ್ಲಿವೆ. ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ಫುಟ್‌ಪಾತ್ ಹಾಗೂ ರಸ್ತೆಗಳಿಗೆ ಸಿಮೆಂಟ್ ಹಾಕುವ ಕಾಮಗಾರಿಯಿಂದಾಗಿ ಪರಿಸರ, ಪ್ರಾಣಿ ಪಕ್ಷಿಗಳಿಗೂ ಅಪಾಯ ಎದುರಾಗಿದೆ ಎಂದು ಪರಿಷತ್‌ನ ಮಾಜಿ ಅಧ್ಯಕ್ಷ ಭಾಮಿ ವಿ. ಶೆಣೈ ದೂರಿದ್ದಾರೆ.

ನಗರದ ಯಾದವಗಿರಿಯ ಚೆಲುವಾಂಬ ಉದ್ಯಾನ ಸೇರಿದಂತೆ ನಗರದ ಬಹುತೇಕ ಮುಖ್ಯ ರಸ್ತೆಗಳ ಫುಟ್‌ಪಾತ್‌ಗೆ ಇಂಟ‌ರ್ ಲಾಕ್ ಟೈಲ್ಸ್‌ಗಳನ್ನು ಬಳಸಿ ಸಿಮೆಂಟ್ ಹಾಕಲಾಗಿದೆ. ಇದರಿಂದಾಗಿ ಇಲ್ಲಿನ ಮರಗಿಡಗಳ ಬೆಳವಣಿಗೆ ಹಾಗೂ ಸುತ್ತಲ ಪರಿಸರಕ್ಕೆ ಹಾನಿಯುಂಟಾಗುತ್ತದೆ. ಮರಗಳ ಬೇರಿಗೆ ಉಸಿರಾಟದ ತೊಂದರೆ ಆಗುತ್ತದೆ. ಅಧಿಕಾರಿಗಳು ಈ ಬಗ್ಗೆ ಗಮನವೇ ಇಲ್ಲದವರಂತೆ ವರ್ತಿಸಿದ್ದಾರೆ ಎಂದು ತಿಳಿಸಿದರು.

ಈ ಹಿಂದೆಯೇ ಈ ಬಗ್ಗೆ ಪಾಲಿಕೆಗೆ ದೂರು ನೀಡಿದ್ದರೂ ಕ್ರಮ ಜರುಗಿಸಿಲ್ಲ. ಕಳೆದ ವಾರ ಬಿದ್ದ ಮಳೆಯಿಂದಾಗಿ ಯಾದವಗಿರಿ ಸಮೀಪದ ರಾಜರಾಜೇಶ್ವರಿನಗರದಲ್ಲಿಕೊಳಚೆನಿರ್ಮೂಲನ ಮಂಡಳಿ ನಿರ್ಮಿಸಿರುವ ಅಪಾರ್ಟ್‌ ಮೆಂಟ್‌ಗೆ ನೀರು ನುಗ್ಗಿ ಅನೇಕ ಕುಟುಂಬಗಳಿಗೆ ತೊಂದರೆ ಯಾಗಿದೆ. ಇದಕ್ಕೆ ಪಾಲಿಕೆಯ ಇಂಥ ಯೋಜನೆಗಳೇ ಕಾರಣ ಎಂದು ಮೈಗ್ರಾಪ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

ಮಣ್ಣಿನ ಸವಕಳಿ, ಬಿಸಿಲಿನ ತಾಪಮಾನ ಏರಿಕೆ ಜೊತೆಯಲ್ಲಿ ವಾತಾವರಣ ಕಲುಷಿತ ಗೊಳ್ಳುವ ಆತಂಕ ಎದುರಾಗಿದೆ. ಸಿಮೆಂಟ್ ಬಳಕೆ ಯೋಜನೆಗೆ ಬದಲಿಯಾಗಿ, ಕಲ್ಲು ಅಥವಾ ಇತರ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕು. ಪಾರ್ಕ್‌ಗಳ ಅಭಿವೃದ್ಧಿ ಹೆಸರಲ್ಲಿ ಸಿಮೆಂಟ್ ಇಟ್ಟಿಗೆ ಬಳಸುವುದು ಸೂಕ್ತ ಕ್ರಮವಲ್ಲ. ಜಲಮೂಲ ಸಂರಕ್ಷಣೆಗೆ ಒತ್ತು ನೀಡ ಬೇಕು. ಆದರೆ, ಸಿಮೆಂಟ್ ಇಟ್ಟಿಗೆ ಬಳಸಿ ಫುಟ್‌ ಪಾತ್ ನಿರ್ಮಾಣ ಮಾಡುತ್ತಿರುವ ಈ ನಿರ್ಧಾರ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಚೆಲುವಾಂಬ ಉದ್ಯಾನದ ಸುತ್ತಲೂ ಫುಟ್ ಪಾತ್‌ಗೆ ಇಂಟರ್ ಲಾಕ್ ಟೈಲ್ಸ್‌ಗಳನ್ನು ಹಾಕಿ ಸಿಮೆಂಟ್ ಬಳಸಿರುವುದರಿಂದ ಭೂಮಿಯಲ್ಲಿ ಒಂದು ಹನಿ ನೀರು ಇಂಗುತ್ತಿಲ್ಲ. ಇದರಿಂದ ಅಂತರ್ಜಲ ಕೂಡ ಕಡಿಮೆಯಾಗುತ್ತದೆ. ಬಿಸಿಲಿನ ತಾಪ ಏರಿಕೆಯಾಗುತ್ತದೆ. ಕಳೆದ ವರ್ಷ ಮೈಸೂರಿನಲ್ಲಿ ಅತಿ ಹೆಚ್ಚು ತಾಪಮಾನವಿತ್ತು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಪಾಲಿಕೆ ಕ್ರಮ ವಹಿಸಬೇಕಾಗಿತ್ತು.
ನೀಲಾಂಬಿಕ, ಯಾದವಗಿರಿ ನಿವಾಸಿ ಹಾಗೂ ಮೈಗ್ರಾಪ ಸದಸ್ಯೆ

Tags: