ಕೆ.ಬಿ.ರಮೇಶನಾಯಕ
ಪ್ರತಿನಿತ್ಯ ಇ-ಮೇಲ್ ಮೂಲಕವೇ ದಾಖಲೆ ಒದಗಿಸಲು ಸೂಚನೆ
ಒಂದರ ಮೇಲೊಂದು ತನಿಖಾ ಸಂಸ್ಥೆಗಳ ಒತ್ತಡಕ್ಕೆ ಸುಸ್ತಾಗಿರುವ ಸಿಬ್ಬಂದಿ
ಮೈಸೂರು: ರಾಜಕೀಯವಾಗಿ ಸದ್ದು ಮಾಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 50:50 ಅನುದಾನ ದಲ್ಲಿ ನಿವೇಶನಗಳ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಏಕಕಾಲದಲ್ಲಿ ಮೂರು ತನಿಖಾ ಸಂಸ್ಥೆಗಳು ತನಿಖೆ ನಡೆಸು ತಿದ್ದು, ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಪ್ರತಿನಿತ್ಯ ಕೇಳುತ್ತಿರುವ ದಾಖಲೆಗಳನ್ನು ಒದಗಿಸುವಲ್ಲಿ ಮುಡಾ ಅಧಿಕಾರಿಗಳು ಹೈರಾಣಾಗುವ ಜತೆಗೆ ವಿಚಾರಣೆಯ ಭಯದಲ್ಲೇ ಕಾರ್ಯ ನಿರ್ವಹಿಸುವಂತಾಗಿದೆ.
ಒಂದರ ಮೇಲೊಂದರಂತೆ ತನಿಖಾ ಸಂಸ್ಥೆಗಳು ದಾಖಲೆ ಗಳನ್ನು ಒದಗಿಸುವಂತೆ ನೀಡುತ್ತಿರುವ ಸೂಚನೆಯಿಂದ ಅಧಿಕಾರಿಗಳು ಕಚೇರಿ ಕೆಲಸ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾರೋ ಮಾಡಿದ ತಪ್ಪಿಗೆ ನಾವು ಸಿಕ್ಕಿಕೊಂಡು ನರಳಾಡುತ್ತಿದ್ದೇವೆಂದು ಕೆಲವು ಅಧಿಕಾರಿಗಳು ಒಳಗೊಳಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ವಿಜಯನಗರ ಬಡಾವಣೆಯಲ್ಲಿ ಹಂಚಿಕೆಯಾದ 14 ನಿವೇಶನಗಳ ಮಂಜೂರಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲ ಯದ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಎರಡು ದಿನಗಳ ಕಾಲ ಮುಡಾ ಕಚೇರಿಯಲ್ಲಿ ಕಡತಗಳನ್ನು ಪರಿಶೀಲಿಸಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿ ಬೆಂಗಳೂರಿಗೆ ಹಿಂತಿರುಗಿದ ಮೇಲೆ ತನಿಖೆ ಮುಂದುವರಿಸಿದ್ದಾರೆ.
ಪ್ರತಿನಿತ್ಯ ಬೆಂಗಳೂರಿನ ಕಚೇರಿಯಿಂದ ಮುಡಾ ಕಚೇರಿಗೆ ಇ-ಮೇಲ್ ಮೂಲಕವೇ ದಾಖಲೆಗಳನ್ನು ಕೊಡುವಂತೆ ಕೇಳುತ್ತಿದ್ದಾರೆ. ದೂರವಾಣಿ ಕರೆ, ವಾಟ್ಸಾಪ್ ಮೆಸೇಜ್ ಮಾಡದೆ ಪ್ರತಿಯೊಂದನ್ನೂ ಇ-ಮೇಲ್ ಮೂಲಕವೇ ಲಿಖಿತವಾಗಿ ಕೇಳುತ್ತಿರುವುದರಿಂದ ಅಧಿಕಾರಿಗಳು ಇದಕ್ಕೆ ಸ್ಪಂದಿಸಬೇಕಿದೆ. ಭೂ ಸ್ವಾಧೀನ, ಭೂ ಸ್ವಾಧೀನ ಪ್ರಕ್ರಿಯೆ ಕೈಬಿಟ್ಟಿದ್ದು, ಖಾತೆ ಮಾಡಿಕೊಟ್ಟ ವರ್ಷ, ನಿವೇಶನ ಮಂಜೂರಾತಿಗೆ ಸಂಬಂಧಿಸಿ ದಂತೆ ಹಲವಾರು ದಾಖಲೆಗಳನ್ನು ಪಡೆದಿರುವ ಅಧಿಕಾರಿಗಳು ಇದಕ್ಕೆ ಪೂರಕವಾಗಿ ದಾಖಲೆಗಳನ್ನು ಕೇಳುತ್ತಲೇ ಇದ್ದಾರೆ. ಹೀಗಾಗಿ, ಕಚೇರಿಗೆ ಬಂದ ತಕ್ಷಣ ಇಡಿ ಕಚೇರಿಯಿಂದ ಬರುವ ಇ-ಮೇಲ್‌ನ್ನು ನೋಡಿ ಆಯುಕ್ತರು, ಕಾರ್ಯದರ್ಶಿ ಗಮನಕ್ಕೆ ತಂದು ಅದನ್ನು ತಂದು ಸ್ಯಾನ್ ಮಾಡಿ ಇ-ಮೇಲ್ ಮಾಡುವುದು ಅಥವಾ ಬೆಂಗಳೂರಿಗೆ ನೇರವಾಗಿ ಕಳುಹಿಸುವ ಕೆಲಸವೇ ಆಗಿದೆ.
ಮತ್ತೊಂದೆಡೆ ಲೋಕಾಯುಕ್ತ ಅಧಿಕಾರಿಗಳು ಕೂಡ ತನಿಖೆ ನಡೆಸುತ್ತಿದ್ದು, ಈಗಾಗಲೇ ಲೋಕಾಯುಕ್ತ ಕಚೇರಿ ಕೇಳಿದ್ದ ದಾಖಲೆಗಳಿಗೆ ಒಂದು ಸಾವಿರ ಪುಟಗಳನ್ನು ಸಂಗ್ರಹಿಸಿ ಕೊಡ ಲಾಗಿದೆ. ಅದರಲ್ಲೂ ಮುಖ್ಯಮಂತ್ರಿ ಪತ್ನಿ ಅವರ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜೆರಾಕ್ಸ್ ಮಾಡಿಕೊಡಲಾಗಿದೆ. ಲೋಕಾಯುಕ್ತ ಕಚೇರಿಯಿಂದಲೂ ತನಿಖಾಧಿಕಾರಿಗಳ ಪರ ವಾಗಿ ಬರುವ ಸಿಬ್ಬಂದಿ ಮಾಹಿತಿ ಕಲೆ ಹಾಕುತ್ತಲೇ ಜೆರಾಕ್ಸ್ ಪ್ರತಿ ಯನ್ನು ಪಡೆದುಕೊಳ್ಳುತ್ತಿದ್ದಾರೆ. ಸಿಬ್ಬಂದಿ ಜೆರಾಕ್ಸ್ ಮಾಡಿ ಕೊಡುವುದರಲ್ಲೇ ಸುಸ್ತಾಗಿ ಹೋಗುತ್ತಿದ್ದಾರೆ.
1 ಲಕ್ಷ ಜೆರಾಕ್ಸ್ ಪ್ರತಿ:
ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ಕೂಡ ಬೆಂಗಳೂರಿನಲ್ಲಿ ಕಚೇರಿ ತೆರೆದು ವಿಚಾರಣೆ ನಡೆಸುತ್ತಿದ್ದು, 2006ರಿಂದ 2024ರವರೆಗೆ ಮುಡಾದಲ್ಲಿ ನಡೆದಿರುವ ಪ್ರತಿ ಯೊಂದು ನಿರ್ಣಯ, ತೀರ್ಮಾನಗಳು, 50:50 ನಿವೇಶನ ಹಂಚಿಕೆ, ಬದಲಿ ನಿವೇಶನ ಹಂಚಿಕೆ, ಸಿಎ ನಿವೇಶನ ಹಂಚಿಕೆ, ಭೂ ಪರಿಹಾರ ಕುರಿತಾಗಿ ನಡೆದಿರುವ ಎಲ್ಲಾ ಕಡತಗಳ ಜೆರಾಕ್ಸ್‌ಗಳನ್ನು ಕಳುಹಿಸಲಾಗಿದೆ. ಆಯೋಗಕ್ಕೆ ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಪ್ರತಿಗಳನ್ನು ಕೊಡಲಾಗಿದೆ. 18 ವರ್ಷಗಳ ದಾಖಲೆಗಳ ಪ್ರತಿಯನ್ನು ಮಾಡಿಕೊಡಲಾಗುತ್ತಿದ್ದು, ಈ ಕೆಲಸಕ್ಕಾಗಿಯೇ ಮೂವರು ನಿಯೋಜನೆಗೊಂಡಿದ್ದಾರೆ.