ಇವರ ಹೆಸರು ಮೋಹನ್ ಕುಮಾರ್. ಮೈಸೂರಿನ ದೇವರಾಜ ಅರಸು ರಸ್ತೆಯ ಪಕ್ಕದಲ್ಲಿರುವ ಸಂಬಂಧಿಕರ ಐಸ್‌ಕ್ರೀಮ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಹಕರು ಅದು, ಇದು ಎಂದು ಅಂದಾಜಿಸುತ್ತಿದ್ದರೆ, ಅವರಿಗೆ ಯಾವ ತರಹದ್ದು ಐಸ್‌ಕ್ರೀಮ್ ಇಷ್ಟವೆಂದು ಕೇಳಿ ಸೂಕ್ತವಾದದ್ದನ್ನು ಆರಿಸಿಕೊಡುತ್ತಾರೆ.
ಬದುಕಿರುವಷ್ಟು ದಿನ ಸುಮ್ಮನೆ ಕೂತು, ಸಮಯ ವ್ಯರ್ಥ ಮಾಡಬಾರದು ಎಂದು ಬುದ್ಧಿ ಹೇಳುವ ಮೋಹನ್ ಕುಮಾರ್ ಅವರು ಕಷ್ಟಕ್ಕೆ ಎದೆಗುಂದದೆ ಮುನ್ನುಗ್ಗುತ್ತಿರಬೇಕು ಎಂದು ಜೀವನ ಪಾಠವನ್ನೂ ಹೇಳುತ್ತಾರೆ.
ಇವರ ತಂದೆ ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದರು. ಹತ್ತನೇ ತರಗತಿ ಓದು ಮುಗಿಯುತ್ತಿದ್ದಂತೆ ಅಂಗಡಿಗೆ ಸೇರಿದರು. ಈಗಿವರಿಗೆ 65 ವರ್ಷ. ವ್ಯಾಪಾರ ಎಂದ ಮೇಲೆ ಲಾಭ, ನಷ್ಟ ಇದ್ದೇ ಇರುತ್ತದೆ ಎನ್ನುವ ಮೋಹನ್ ಕುಮಾರ್ ತಮ್ಮ ಪ್ರಾವಿಷನ್ ಅಂಗಡಿ ನಡೆಸಲು ಸಾಧ್ಯವಾಗುತ್ತಿಲ್ಲವೆಂದು ಐದು ವರ್ಷಗಳ ಈಚೆಗೆ ಮುಚ್ಚಿದ್ದಾರೆ. ಆದರೆ ಚಿಕ್ಕಂದಿನಿಂದ ದುಡಿದ ದೇಹ, ಕೆಲಸವಿಲ್ಲದೆ ಸುಮ್ಮನೆ ಕೂರ ಲಾಗಲಿಲ್ಲ. ಐಸ್‌ಕ್ರೀಮ್ ಅಂಗಡಿಯ ಮೇಲುಸ್ತುವಾರಿಕೆ ನೋಡಿ ಕೊಳ್ಳುವುದಾ ದರೂ ಸರಿ ಎಂದು ಕೆಲಸ ಮಾಡುತ್ತಲೇ ತಮ್ಮ ವಿಶ್ರಾಂತಿಯನ್ನು ಕಂಡುಕೊಳ್ಳುತ್ತಿ ದ್ದಾರೆ. ಜನರ ಜೊತೆ ಬೆರೆಯುವುದೇ ತಮಗೆ ಖುಷಿ ಎನ್ನುತ್ತಾರೆ ಮೋಹನ್ ಕುಮಾರ್ ಅವರು.