Mysore
21
mist

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಹಿರಿಯರಿಂದ ಕಲಿಯಲು ಹಲವು ವಿಷಯಗಳಿವೆ

• ಸೌಮ್ಯ ಕೋಠಿ, ಮೈಸೂರು

ಹಳೆಯ ಬೇರು ಹೊಸ ಚಿಗುರು ಸೇರಿದರೆ ಮರ ಸೊಬಗು ಎಂಬಂತೆ ಮರವನ್ನು ಎಷ್ಟೇ ಬಾರಿ ಕತ್ತರಿಸಿದರೂ ಬೇರು ಹೊಸ ಹೊಸ ಚಿಗುರಿಗೆ ಅವಕಾಶ ಕೊಡುತ್ತಲೇ ಇರುತ್ತದೆ. ಬೇರು ಗಟ್ಟಿಯಾಗಿದ್ದರೆ ಮರ ಎಷ್ಟು ಬಾರಿಯಾದರೂ ಚಿಗುರಿ ಮತ್ತೇ ಮತ್ತೇ ಬಲಿಷ್ಠವಾಗಿ ಸೊಬಗಿನೊಂದಿಗೆ ನಿಲ್ಲುತ್ತದೆ.

ಇದು ಕುಟುಂಬದಲ್ಲಿಯೂ ಅಷ್ಟೇ. ಹಿರಿಯರ ಮಾರ್ಗದರ್ಶನವಿದ್ದರೆ ಕಿರಿಯರು ಬದುಕು ರೂಪಿಸಿ ಕೊಳ್ಳಲು ಸಾಧ್ಯವಾಗುತ್ತದೆ. ಹಬ್ಬ ಹರಿದಿನ ಗಳಿರಲಿ, ಆಚರಣೆಗಳಿರಲಿ ಅದರ ಹಿಂದಿನ ಕಾರಣಗಳು, ಆಚರಿಸುವ ವಿಧಾನ, ವೈಜ್ಞಾನಿಕ ಹಿನ್ನೆಲೆಗಳನ್ನು ಹೊಸ ಪೀಳಿಗೆಗೆ ಪರಿಚಯಿಸುವವರು ನಮ್ಮ ಹಿರಿಯರು. ಅವುಗಳನ್ನು ಪಾಲಿಸಿದಾಗಲೇ ನಮ್ಮ ಜೀವನ ಮೌಲ್ಯಯುತವಾಗಿರಲು ಸಾಧ್ಯ.

ಈಗ ಹಬ್ಬಗಳ ಆಚರಣೆಯ ವೈಖರಿಯೇ ಬದಲಾಗಿದೆ. ದೀಪಾವಳಿಯಲ್ಲಿ ಎಣ್ಣೆ ಸ್ನಾನ ಮಾಡುವುದು, ಜಾನುವಾರಗಳ ಕಿಚ್ಚು ಹಾಯಿಸುವುದು ಹೀಗೆ ವಿವಿಧ ಹಬ್ಬಗಳಲ್ಲಿ ಅನುಸರಿಸುವ ವಿವಿಧ ಕ್ರಮಗಳು ಕಣ್ಮರೆಯಾಗಿ ಕೇವಲ ಗ್ರಾಮೀಣ ಭಾಗಗಳಿಗೆ ಮಾತ್ರ ಸೀಮಿತವೇನೋ ಎಂಬಂತಾಗಿವೆ. ಅದರ ಲ್ಲಿಯೂ ಹಬ್ಬದ ದಿನಗಳಲ್ಲಿ ತಯಾರಾಗುತ್ತಿದ್ದ ಖಾದ್ಯ ಗಳೂ ಈಗ ರುಚಿಸಲು ಸಿಗುವುದು ಅತೀ ಅಪರೂಪ.

ಹಬ್ಬಗಳು ಬಂತೆಂದರೆ ಒಂದು ವಾರದ ಮುಂಚೆಯೇ ತಯಾರಿಗಳು ಚುರುಕಾಗುತ್ತಿದ್ದವು. ಅಜ್ಜಿ ಕುಳಿತು ಹೇಳಲು, ಅಮ್ಮ ಅದನೆಲ್ಲ ಪಾಲಿಸುತ್ತ ನಮ್ಮ ಸಾಂಪ್ರದಾಯಿಕ ಅಡುಗೆಗಳ ತಯಾರಿ ಮಾಡಿಕೊಳ್ಳುತ್ತಿದ್ದರು. ಗಣಪತಿ ಹಬ್ಬಕ್ಕೆ ಕರಜಿಕಾಯಿ ಹೇಗೆ ಮಾಡಬೇಕು? ದೀಪಾವಳಿಯ ಕಜ್ಜಾಯ ತಯಾರಿಸುವುದು ಹೇಗೆ? ಹಬ್ಬಗಳನ್ನು ಮಾಡುವ ಉದ್ದೇಶವೇನು? ಇದರ ಲಾಭವೇನು? ಎಂಬುದಕ್ಕೆಲ್ಲ ಅಜ್ಜಿ ಉದಾಹರಣೆ ಸಹಿತ ಹೇಳುತ್ತಿದ್ದ ಕಥೆಗಳಲ್ಲಿ ಒಂದಿಷ್ಟು ವಿಜ್ಞಾನವೂ ಅಡಗಿತ್ತು.

ಬದುಕಿನ ಪಾಠದ ಜತೆ ಸಂಸ್ಕಾರ ಕಲಿಸುತ್ತಿದ್ದ ಹಿರಿಯರು ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ಕಲಿಸುವ ಗುರುಗಳಾಗಿದ್ದಾರೆ. ಈಗ ಕಾಲ ಬದಲಾಗಿದೆ. ತಲೆಮಾರಿನ ಅಂತರವಿರುವವರು ಒಟ್ಟಿಗೆ ಸಿಗುವುದೇ ಅಪರೂಪವಾಗಿದೆ. ಹಬ್ಬದ ತಯಾರಿಯೂ ಇಲ್ಲ. ಆಚರಣೆಯೂ ಅರ್ಥಬದ್ಧವಾಗಿಲ್ಲ. ಹಬ್ಬದ ತಿನಿಸುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತರಿಸಿ ತಿನ್ನುವ ಕಾಲವಿದು. ಏಕೆ ಹೀಗಾಯಿತು? ಹಬ್ಬಗಳೇಕೆ ಮಂಕಾದವು? ಆಚರಣೆಯಲ್ಲಿ ಸಂಭ್ರಮವಿಲ್ಲ ಏಕೆ? ದೀಪಾವಳಿ ಎಂದರೆ ಪಟಾಕಿ ಸಿಡಿಸುವುದು, ಗಣೇಶನ ಹಬ್ಬ ಎಂದರೆ ಗಣೇಶನ ಮೂರ್ತಿ ಕೂರಿಸಿ, ವಿಸರ್ಜಿಸುವುದು ಮಾತ್ರವೇ? ಅದಕ್ಕೂ ಮಿಗಿಲಾಗಿ ಪ್ರತಿ ಹಬ್ಬದ ಆಚರಣೆಯಲ್ಲಿಯೂ ಸಾಕಷ್ಟು ಹಿನ್ನೆಲೆಗಳಿವೆ. ಅವುಗಳನೆಲ್ಲ ಕಲಿಸಲು ಹಿರಿಯರಿರಬೇಕು. ಹಿರಿಯರಿಲ್ಲದೆ ಯಾವುದೇ ಆಚರಣೆಗಳು ಪೂರ್ಣಗೊಳ್ಳುವುದಿಲ್ಲ. ಆಚರಣೆಗಳ ಮಹತ್ವ ನಮಗೆ ಆಗಲಿ ನಮ್ಮ ಮಕಳಿಗಾಗಲಿ ತಿಳಿಸಬೇಕು. ಆದರೆ ಈಗ ಆ ಸಂಸ್ಕಾರ ಕಲಿಸುವ ಹಿರಿಯರು ವೃದ್ಧಾಶ್ರಮಗಳನ್ನು ಸೇರುತ್ತಿದ್ದಾರೆ. ಅನಾದಿಕಾಲದಿಂದ ಬಂದ ಆಚರಣೆಗಳು ಹಂತ ಹಂತವಾಗಿ ತೆರೆಮರೆಗೆ ಸರಿಯುತ್ತಿವೆ.

ಜೀವನದ ಜಂಜಾಟದಲ್ಲಿ ಈಜಲಾಗದವರು ಭಾರ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಹಿರಿಯರನ್ನು ವೃದ್ಧಾಶ್ರಮಗಳಿಗೆ ತಂದು ಬಿಡುತ್ತಾರೆ. ವರ್ಷಕ್ಕೊಮ್ಮೆ ಹೋಗಿ ಮಾತನಾಡಿಸುವುದು, ಹಬ್ಬದ ದಿನಗಳಲ್ಲಿ ಅಲ್ಲಿಗೇ ಹೋಗಿ ಬಟ್ಟೆ, ಸಿಹಿ ಕೊಟ್ಟು ಬರುತ್ತಾರೆಯೇ ವಿನಾ ಅವರೊಂದಿಗೆ ಸಮಯ ಹಂಚಿಕೊಳ್ಳುವುದಿಲ್ಲ. ಜೀವನದ ಅನುಭವದ ಪಾಠ ಕೇಳುವುದಿಲ್ಲ. ಈಗಾದಾಗ ಈಗಿನ ಪೀಳಿಗೆಯ ಮಕ್ಕಳು ಆಚರಣೆಗಳ ಮಹತ್ವವನ್ನು ಕಲಿಯುವುದಾದರೂ ಹೇಗೆ? ಇತ್ತೀಚೆಗೆ ಹೊಸ ಸಂಸ್ಕೃತಿಯೊಂದು ಹೆಚ್ಚಾಗಿದೆ. ಹಿಂದೆ ಕೂಡು ಕುಟುಂಬದಲ್ಲಿರುತ್ತಿದ್ದವರು ವಿಭಾಗವಾಗುತ್ತಿದ್ದರು. ಈಗಂತೂ ಮಕ್ಕಳನ್ನೂ ಹಾಸ್ಟೆಲ್‌ಗಳಿಗೆ ಸೇರಿಸಿ ಕುಟುಂಬ ಗಾತ್ರ ಮತ್ತಷ್ಟು ಚಿಕ್ಕದಾಗುವಂತೆ ಮಾಡಿಕೊಂಡಿ ದ್ದಾರೆ. ಹೀಗಾದರೆ ಮಕ್ಕಳಿಗೆ ಬದುಕಿನ ಪಾಠಗಳು ಸಿಗುವುದಾ ದರೂ ಎಲ್ಲಿ? ಅವಿಭಕ್ತ ಕುಟುಂಬಗಳು ವಿಭಕ್ತವಾ ದಾಗಲೇ ಬಹುತೇಕ ಆಚರಣೆಗಳು ಕಣ್ಮರೆಯಾಗಿವೆ. ಈಗ ಕುಟುಂಬದಿಂದ ಮಕ್ಕಳೂ ದೂರಾದರೆ ಮುಂದಿನ ಪೀಳಿಗೆ ಹೇಗೆ ಸಂಸ್ಕಾರ ಕಲಿಯಲು ಸಾಧ್ಯ. ಹಳೆಯ ಬೇರು ಹೊಸ ಚಿಗುರು ಎಂಬುದು ಕುಟುಂಬಕ್ಕೂ ಅನ್ವಯವಾಗುವ ಒಂದು ನಾಣ್ಣುಡಿ. ಹಿರಿಯರ ಅನುಭವ ಕಿರಿಯರ ಬದುಕಿನ ದಾರಿದೀಪ.

 

Tags: