Mysore
21
broken clouds

Social Media

ಬುಧವಾರ, 14 ಜನವರಿ 2026
Light
Dark

ದೀಪಗಳೇ ಕಥೆ ಹೇಳುವ ‘ದೀಪಧಾರಿಣಿ’

ಅ.26 ಮತ್ತು 27ರ ಸಂಜೆ ಮಹಿಳಾ ಏಕವ್ಯಕ್ತಿ ರಂಗೋತ್ಸವ ಕಾರ್ಯಕ್ರಮ

ಹನಿ ಉತ್ತಪ್ಪ

ರಂಗಭೂಮಿ ಎಂಬುದು ಕಲೆ ಮತ್ತು ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ. ಇದು ಕಲಾವಿದರ ಮತ್ತು ಪ್ರೇಕ್ಷಕರ ನಡುವೆ ಜಾಲವನ್ನು ಹೆಣೆಯುವ ಮೂಲಕ, ಸಮಾಜವನ್ನು ಆಳವಾಗಿ ಪ್ರತಿಬಿಂಬಿಸುತ್ತದೆ. ವರ್ಷಗಳು ಉರುಳಿದಂತೆ ರಂಗಭೂಮಿ ನಶಿಸಿ ಹೋಗುತ್ತದೆ, ನಾಟಕ ನೋಡಲು ಜನ ಬರುವುದಿಲ್ಲ ಎಂಬ ಗೊಣಗಾಟದ ಮಧ್ಯೆಯೇ ರಂಗಭೂಮಿ ಹೊಸಹೊಸ ರೂಪಾಂತರದೊಂದಿಗೆ ಸಶಕ್ತವಾಗಿ ಮತ್ತಷ್ಟು ವಿನೂತನವಾಗಿ ಬೆಳೆಯುತ್ತಿದೆ.

ರಂಗಭೂಮಿ ಎಂದೂ ನಿಂತ ನೀರಾಗಲೇ ಇಲ್ಲ. ಸಮೃದ್ಧವಾಗಿ ಹಬ್ಬುತ್ತಾ, ಸಮಾಜ ಕಟ್ಟುತ್ತಲೇ ಹೋಯಿತು. ಇವತ್ತಿಗೂ ಬೆಂಗಳೂರಿನಿಂದ ಹಿಡಿದು ಸಾಂಸ್ಕೃತಿಕ ನಗರಿ ಮೈಸೂರು, ಧಾರವಾಡ, ಶಿವಮೊಗ್ಗ, ಹುಬ್ಬಳ್ಳಿಯಂತಹ ಮಹಾನಗರಗಳಲ್ಲಿ ಹವ್ಯಾಸಿ ರಂಗತಂಡಗಳು ತಲೆ ಎತ್ತುತ್ತಲೇ ಇವೆ. ವೃತ್ತಿ ರಂಗಭೂಮಿಯಿಂದ ಹಿಡಿದು ರಂಗಾಯಣದಂತಹ ಸ್ವಾಯತ್ತ ಸರ್ಕಾರಿ ಸಂಸ್ಥೆಗಳು ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಿವೆ. ವಯೋಮಿತಿಯ ಸವಾಲುಗಳಿಲ್ಲದೆ ಅತ್ಯಂತ ಯಶಸ್ವಿಯಾಗಿ ರಂಗಭೂಮಿಯಲ್ಲಿ ವಿಭಿನ್ನ ಪ್ರಯೋಗಗಳು ನಡೆಯುತ್ತಿವೆ.

ಇದೇ ಶನಿವಾರ ಮತ್ತು ಭಾನುವಾರ ಸಂಜೆ 7.00 ಗಂಟೆಗೆ, ಮೈಸೂರಿನ 18 ವರ್ಷದ ಹಳೆಯ ರಂಗ ತಂಡ ‘ರಂಗವಲ್ಲಿ’ಯವರು ಅಕ್ಟೋಬರ್ 26 ಮತ್ತು 27ರಂದು ಮಹಿಳಾ ಏಕವ್ಯಕ್ತಿ ರಂಗೋತ್ಸವವನ್ನು ಆಯೋಜಿಸಿದ್ದಾರೆ. ಮೊದಲ ದಿನ (ಅ.26)ದ ಪ್ರದರ್ಶನ, ಮೈಸೂರಿನ ಮಹಿಳಾ ಉದ್ಯಮಿ ಶ್ರೀವಿದ್ಯಾ ಕಾಮತ್‌ರವರ ‘ದೀಪಧಾರಿಣಿ’ ನಾಟಕ.

ದೀಪಗಳೆಂದರೆ ಹಾಗೆ, ಅದು, ಕತ್ತಲೆಯ ಅಸ್ತಿತ್ವವನ್ನು ನಿರಾಕರಿಸದೆ, ಜೀವ ಪರಿಸರವನ್ನು ಬೆಚ್ಚಗಿಡುವ ಇನ್ನೊಂದು ಜೀವ ವಿಸ್ಮಯ. ಎಷ್ಟೊಂದು ಕಣ್ಣುಗಳನ್ನ, ಎಷ್ಟೊಂದು ಉಸಿರುಗಳನ್ನ ಕಂಡಿರಬಹುದು ಅದು..!

ಕಂಡ ಕಥೆಗಳನ್ನೆಲ್ಲ, ದೀಪಗಳೇ ಹೇಳತೊಡಗಿದರೆ?!! ಈ ಬೆರಗಿನಲ್ಲಿ ಹುಟ್ಟಿಕೊಂಡಿದ್ದು, ‘ದೀಪಧಾರಿಣಿ’ ಎಂಬ ರಂಗಾಭಿವ್ಯಕ್ತಿ, ಮೇಣದ ಬತ್ತಿಯ ಉದ್ಯಮಿಯಾದ ಶ್ರೀವಿದ್ಯಾ ಅವರಿಗೆ, ಮೇಣದ ಬತ್ತಿಗಳೆಂದರೆ ಕೇವಲ ವ್ಯಾಪಾರವಲ್ಲ. ಅದೊಂದು ಕಲಾಭಿವ್ಯಕ್ತಿ ಕೂಡ. ಸಪ್ತಸಾಗರದಾಚೆಗೆ ಸುಗಂಧಿತ ಮೇಣದ ಬತ್ತಿಗಳನ್ನ ಮೈಸೂರಿನಲ್ಲೇ ತಯಾರಿಸಿ ಬೆಳಕಿನ ಕೃಷಿಯಲ್ಲಿ ತೊಡಗಿರುವ ಇವರಿಗೆ, ವ್ಯವಹಾರಿಕ ಯಶಸ್ಸಿಗೆ ಮೀರಿದ, ಮಾನವೀಯ ನಂಟುಗಳ ಸಂಪಾದನೆಯಾಗಿದೆ. ವೃತ್ತಿ, ಪ್ರವೃತ್ತಿ ಎರಡೂ ಅದೈತವಾದಾಗ ಹುಟ್ಟುವ ಅಮೃತ ಘಳಿಗೆ ಇದು.

ಇಲ್ಲಿ, ಜನಪದ ಕಥೆಗಳಿವೆ, ನಂಬಿಕೆಗಳಿವೆ. ಆಚರಣೆಗಳಿವೆ. ಹಿರಿಯರ ವಿವೇಕದ ನುಡಿಗಳಿವೆ. ಟ್ಯಾಗೂರರಂತಹವರ ಕವನಗಳಿವೆ. ಫ್ಲಾರೆನ್ಸ್ ನೈಟಿಂಗೇಲ್ ರವರ ಜೀವನ ಚರಿತ್ರೆಯ ಪುಟಗಳಿವೆ.

ಇವೆಲ್ಲವನ್ನ ಒಟ್ಟಂದದಲ್ಲಿ ಹೊಲಿದು ಚಂದದ ಉಡುಗೆ ಮಾಡಿರುವವರು ಸುಧಾ ಆಡುಕಳ ‘ದೀಪಧಾರಿಣಿ’ಯ ಮೂಲಕ, ಸುಮಾರು ಎರಡು ದಶಕಗಳ ನಂತರ ಮತ್ತೆ ವೇದಿಕೆ ಏರಬೇಕೆಂಬ ಕನಸಿನ ಮಹಲಿನ ‘ವಾಸ್ತುಶಿಲ್ಪಿ, ಡಾ.ಶ್ರೀಪಾದ ಭಟ್, ಅನುಷ್ ಶೆಟ್ಟಿಯವರು ಸಂಗೀತ ನೀಡಿದ್ದು, ಕಲೆ ಖಾಜು ಗುತ್ತಲರವರು ಮಾಡಿದ್ದಾರೆ. ನಾಟಕಕ್ಕೆ ಬೆಳಕಿನ ವಿನ್ಯಾಸವನ್ನು, ಅರುಣ್ ಮೂರ್ತಿಯವರು ನೀಡಿದ್ದಾರೆ. ಶಾಲೋಮ್ ಸನ್ನುತ ಅವರು ನಾಟಕದ ಹೆಜ್ಜೆ ಹೆಜ್ಜೆಯಲ್ಲೂ ಸಹಾಯ ನೀಡಿದ್ದಾರೆ.

‘ದೀಪಧಾರಿಣಿ’ಯ ಮತ್ತೊಂದು ವಿಶೇಷ ವೆಂದರೆ, ನಾಟಕ ಮೊದಲ ಪ್ರದರ್ಶನ ಕೊಂಕಣಿ ಭಾಷೆಯಲ್ಲಿ ಪ್ರಯೋಗಿಸಲಾಗಿದೆ. ಶ್ರೀವಿದ್ಯಾ ಕಾಮತರವರು, ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ಭಾಷೆಯ ಸದಸ್ಯರಾಗಿದ್ದು, ಕನ್ನಡದಿಂದ ಕೊಂಕಣಿಗೆ ತಾವೇ ತರ್ಜುಮೆಗೊಳಿಸಿದ್ದಾರೆ. ಇದು, ಕೊಂಕಣಿ ಭಾಷೆಯ ಪ್ರಥಮ ಮಹಿಳಾ ಏಕವ್ಯಕ್ತಿ ಪ್ರದರ್ಶನವಾಗಿದೆ. ಅಲ್ಲದೆ, ಇದೇ ನಾಟಕ ವನ್ನು, ಹಿಂದಿ, ಆಂಗ್ಲ ಭಾಷೆ, ಮತ್ತು ತಮಿಳಿಗೂ ಕೂಡ ತರ್ಜುಮೆಗೊಳಿಸಿ, ಈ ನಾಟಕವನ್ನು ಒಟ್ಟು ಐದು ಭಾಷೆಗಳಲ್ಲಿ ಪ್ರದರ್ಶಿಸಲಿದ್ದಾರೆ.

ಅ.27ರ, ಭಾನುವಾರ ಸಂಜೆ 7.00ಕ್ಕೆ, ಮೂಲತಃ ಮೈಸೂರಿನವರಾದ, ವೃತ್ತಿಯಲ್ಲಿ ಸಾಫ್ಟ್‌ವೇ‌ ಇಂಜಿನಿಯರ್ ಆಗಿರುವ, ನುಡಿ ಸುದರ್ಶನ ಅವರು ಅಭಿನಯಿಸುವ ‘ಸಕುಬಾಯಿ ಕಾಮವಾಲಿ’ ಏಕವ್ಯಕ್ತಿರಂಗ ಪ್ರದರ್ಶನವಿದೆ. ಈ ನಾಟಕವು, ಈಗಾಗಲೇ ರಾಜ್ಯಾದ್ಯಂತ ಪ್ರದರ್ಶನಗೊಂಡು, ಮೆಚ್ಚುಗೆಗೆ ಪಾತ್ರವಾಗಿದೆ. ಮನೆಗೆಲಸದವಳೊಬ್ಬಳ ಜೀವನದ ಕಥೆಯನ್ನು ಬಿಂಬಿಸುವ ಈ ನಾಟಕ, ತಿಳಿ ಹಾಸ್ಯವನ್ನೂ ಒಳಗೊಂಡಿದೆ. ನಾಟಕೋತ್ಸವದ

ಉದ್ಘಾಟನೆಯನ್ನು 26ರ ಸಂಜೆ 6.45ಕ್ಕೆ ನಟಿಯರಾದ ಸುಧಾ ನರಸಿಂಹರಾಜು, ಆಶಾ ರಾಣಿಯವರು ನಡೆಸಿಕೊಡಲಿದ್ದಾರೆ.

 

Tags:
error: Content is protected !!