Mysore
25
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಈ ರಸ್ತೆಯಲ್ಲಿ ಸಂಚರಿಸುವುದು ಬಹಳ ದುಸ್ತರ…

ತಿ.ನರಸೀಪುರ: ಕೆಸರಿನ ಗದ್ದೆಯಂತಾಗಿರುವ ಆಯಿಲ್ ಮಿಲ್ ರಸ್ತೆ ದುರಸ್ತಿ ಯಾವಾಗ?

ಎಂ.ನಾರಾಯಣ

ತಿ.ನರಸೀಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಪ್ರತಿನಿಧಿಸುತ್ತಿರುವ ಪಟ್ಟಣದ ಈ ರಸ್ತೆ ಹಲವಾರು ವರ್ಷಗಳಿಂದ ದುರಸ್ತಿಯಾಗದೆ ನಿತ್ಯ ಸಾರ್ವಜನಿಕರು ತೊಂದರೆ ಎದುರಿಸುತ್ತಿದ್ದಾರೆ.

ಈ ರಸ್ತೆಯ ದುಸ್ಥಿತಿ ಬಗ್ಗೆ ಇಲ್ಲಿನ ಜನತೆ ಪುರಸಭೆಗೆ ನೂರಾರು ಬಾರಿ ಅಲೆದು, ಅರ್ಜಿಗಳನ್ನು ನೀಡಿದ್ದರೂ ದುರಸ್ತಿ ಮಾತ್ರ ಆಗಲಿಲ್ಲ. ಕಳೆದ 2 ವರ್ಷಗಳಿಂದಲೂ ಟೆಂಡರ್ ಆಗಿದೆ, ಸದ್ಯದಲ್ಲೇ ಕೆಲಸ ಆರಂಭವಾಗಲಿದೆ’ ಎಂಬ ಉತ್ತರ ಕೇಳಿ ಬರುತ್ತದೆ. ಆದರೆ ದುರಸ್ತಿ ಮಾತ್ರ ಕಾಣಲಿಲ್ಲ. ಮಳೆ ಬಂದರೆ ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ.

ಪಟ್ಟಣದ ಆಯಿಲ್ ಮಿಲ್ ರಸ್ತೆ ಕಳೆದ ಹಲವಾರು ವರ್ಷಗಳಿಂದ ದುರಸ್ತಿ ಕಾಣದೆ ಜನ ಆಕ್ರೋಶ ವ್ಯಕ್ತಪಡಿಸುತ್ತಲೇ ಸಂಚರಿಸುವಂತಾಗಿದೆ.

ಅದರಲ್ಲೂ ಮಳೆ ಬಿದ್ದರೆ ಈ ರಸ್ತೆ ಕೆಸರುಗದ್ದೆಯಂತಾಗುತ್ತದೆ. ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದಿರುವ ನಿದರ್ಶನಗಳಿವೆ. ರಸ್ತೆಯಲ್ಲಿ ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ
ಅಡಚಣೆಯಾಗಿದೆ.

ಕೊಳ್ಳೇಗಾಲದ ಮಾರ್ಗವಾಗಿ ಪಟ್ಟಣಕ್ಕೆ ಬರುವ ಶಾಲಾ ಮಕ್ಕಳ ವಾಹನಗಳು, ಅಕ್ಕಿ ಗಿರಣಿಗೆ ಬರುವ ಟೆಂಪೊ, ಲಾರಿ ಹಾಗೂ ತಾಲ್ಲೂಕು ಕಚೇರಿ, ನಂಜನಗೂಡು ಮಾರ್ಗಗಳಿಗೆ ತೆರಳುವ ನೂರಾರು ವಾಹನಗಳು ಸಂಚರಿಸುವ ಜೊತೆಗೆ ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಕಾಲ್ನಡಿಗೆಯಲ್ಲಿ ಸಂಚರಿಸುವ ಜನ ಕೆಸರನ್ನೇ ತುಳಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಪುರಸಭೆಯ ಹಲವಾರು ಸಭೆಗಳಲ್ಲಿ ಈ ಬಗ್ಗೆ ಅನೇಕ ಬಾರಿ ಚರ್ಚೆಯಾಗಿದ್ದರೂ ಕಾಮಗಾರಿ ಮಾತ್ರ ಪ್ರಾರಂಭವಾಗದಿರುವುದು ವಿಷಾದನೀಯ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನವರು ಪುರಸಭೆಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಸೂಚನೆ
ನೀಡಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.

ತಿ.ನರಸೀಪುರ ಪಟ್ಟಣದ ಆಯಿಲ್ ಮಿಲ್ ರಸ್ತೆ ಹಲವಾರು ವರ್ಷಗಳಿಂದ ಹದಗೆಟ್ಟಿದ್ದು, ಮಳೆ ಬಿದ್ದರೆ ಸಂಚರಿಸುವುದೇ ಕಷ್ಟಕರವಾಗಿದೆ. ಪಟ್ಟಣದ ಹಲವಾರು ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿವೆ. ಆದರೆ ಈ ರಸ್ತೆ ಮಾತ್ರ ಕಾಂಕ್ರೀಟ್ ಇರಲಿ, ಡಾಂಬರೂ ಕೂಡ ಕಾಣದಿರುವುದು ವಿಪರ್ಯಾಸ.

-ಮಹೇಶ್, ಸ್ಥಳೀಯ ನಿವಾಸಿ

ರಸ್ತೆ ಸಂಪೂರ್ಣ ಹಾಳಾಗಿದ್ದು, ಜನಪ್ರತಿನಿಧಿಗಳಾಗಲಿ, ಸ್ಥಳೀಯ ಪುರಸಭಾ ಸದಸ್ಯರಾಗಲಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಸಚಿವ ಡಾ.ಹೆಚ್. ಸಿ. ಮಹದೇವಪ್ಪನವರು ಈ ರಸ್ತೆಯ ಮಾರ್ಗವಾಗಿ ಸಂಚರಿಸುವಾಗ ಅವರಿಗೆ ಮನವಿ ಮಾಡಿ ಐದಾರು ತಿಂಗಳು ಕಳೆದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ.

-ರವೀಂದ್ರ, ಪಟ್ಟಣ ನಿವಾಸಿ

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪನವರು ಪುರಸಭೆಗೆ 5 ಕೋಟಿ ರೂ. ಅನುದಾನ ನೀಡಿದ್ದು, ಅದರಲ್ಲಿ 85 ಲಕ್ಷ ರೂ. ವೆಚ್ಚದಲ್ಲಿ ಆಯಿಲ್ ಮಿಲ್ ರಸ್ತೆಯ ಕಾಮಗಾರಿ ನಡೆಸಲು ಅನುಮೋದನೆ ಪಡೆಯಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ.

-ನಾಗರಾಜು, ಇಂಜಿನಿಯರ್, ಪುರಸಭೆ, ತಿ.ನರಸೀಪುರ

Tags: