‘ಆಂದೋಲನ’ ಪ್ರತಿನಿಧಿ ನೀಡಿದ ಮಾಹಿತಿ ಮೇರೆಗೆ ಪೊಲೀಸರಿಂದ ಕಾರ್ಯಾಚರಣೆ
ಮಂಜು ಕೋಟೆ
ಎಚ್.ಡಿ.ಕೋಟೆ: ಅಕ್ರಮವಾಗಿ ಶೇಖರಣೆ ಮಾಡಿ ಸಾಗಣೆ ಮಾಡಲು ಮುಂದಾಗಿದ್ದ ಲಕ್ಷಾಂತರ ರೂ. ಮೌಲ್ಯದ ಗ್ರಾನೈಟ್ ಕಲ್ಲು ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ಇಟ್ನಾ ಹುಲಿಕುರ, ಹುನಗನಹಳ್ಳಿ, ಮನುಗನಹಳ್ಳಿ, ಲಂಕೆ, ಬೆಳತೂರು, ಸವೆ ಇನ್ನಿತರ ಗ್ರಾಮಗಳ ವ್ಯಾಪ್ತಿಯಲ್ಲಿರುವ ಸಾಮಾಜಿಕ ಅರಣ್ಯ ಪ್ರದೇಶದ ಬೆಟ್ಟದಲ್ಲಿರುವ ಬೆಲೆ ಬಾಳುವ ಕಲ್ಲುಗಳನ್ನು ಕೆಲವರು ಅಕ್ರಮವಾಗಿ ಸಂಗ್ರಹಿಸಿ ರಾತ್ರೋರಾತ್ರಿ ಲಾರಿಗಳ ಮೂಲಕ ತಮಿಳುನಾಡು, ರಾಜಸ್ಥಾನ, ಕೇರಳ ರಾಜ್ಯ ಗಳಿಗೆ ಸಾಗಿಸುತ್ತಿದ್ದು, ಈ ದಂಧೆಗೆ ಕಡಿವಾಣ ಹಾಕಲು ಹತ್ತು ವರ್ಷಗಳ ಹಿಂದೆಯೇ ಅಂದಿನ ಜಿಲ್ಲಾಧಿಕಾರಿಗಳು, ತಹಸಿಲ್ದಾರ್, ಎಸ್‌ಪಿ, ಸರ್ಕಲ್ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ಆದರೆ, ಮತ್ತೆ ಗಣಿಗಾರಿಕೆ ಕೆಲವು ತಿಂಗಳಿನಿಂದ ಗೌಪ್ಯವಾಗಿ ನಡೆಯುತ್ತಿರುವುದು ಕಂಡುಬಂದಿದೆ.
ಕಬಿನಿ ಜಲಾಶಯದ ಬಳಿ ಇರುವ ಗಣೇಶ್ ಗುಡಿ ಗ್ರಾಮದಲ್ಲಿನ ತಾರಕ ನಾಲೆ ಸಮೀಪದ ದೀಪಕ್ ಎಂಬುವರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಹಲವು ಗ್ರಾಮಗಳ ವ್ಯಾಪ್ತಿಯಿಂದ ಅಕ್ರಮವಾಗಿ ಗ್ರಾನೈಟ್ ಗಣಿಗಾರಿಕೆಯ ಕಲ್ಲುಗಳನ್ನು ಟ್ರ್ಯಾಕ್ಟರ್ ಮೂಲಕ ತಂದು ಶೇಖರಣೆ ಮಾಡಿ, ಶನಿವಾರ ರಾತ್ರಿ ಜೆಸಿಬಿ ಮೂಲಕ ಟಿಪ್ಪರ್‌ಗೆ ತುಂಬಿಸಿಕೊಂಡು ಹೊರ ರಾಜ್ಯಕ್ಕೆ ಕಳಿಸುತ್ತಿದ್ದ ವಿಚಾರ ತಿಳಿದ ‘ಆಂದೋಲನ’ ಪ್ರತಿನಿಧಿ ತಕ್ಷಣ ಅಂತರಸಂತೆ ಸಬ್ ಇನ್‌ಸ್ಪೆಕ್ಟರ್ ಚಂದ್ರಹಾಸ್ ಅವರಿಗೆ ತಿಳಿಸಿದರು. ತಕ್ಷಣ ಚಂದ್ರಹಾಸ್ ಮತ್ತು ಗೋಪಾಲ್, ಇನ್ನಿತರ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಟಿಪ್ಪರ್ ಮತ್ತು ಗಣಿಗಾರಿಕೆಯ ಗ್ರಾನೈಟ್ ಕಲ್ಲು, ಜೆಸಿಬಿಯನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ವಶಪಡಿಸಿಕೊಂಡಿರುವ ಕಲ್ಲುಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿ, ಪರೀಕ್ಷೆ ಮಾಡಿ, ವರದಿ ನೀಡುವಂತೆ ತಿಳಿಸಿದ್ದಾರೆ.
‘ಆಂದೋಲನ’ ಪ್ರತಿನಿಧಿ ಮೂಲಕ ವಿಷಯ ತಿಳಿದ ತಕ್ಷಣ ನಾನು ಮತ್ತು ಸಿಬ್ಬಂದಿ ಹೋಗಿ ಗ್ರಾನೈಟ್ ಕಲ್ಲುಗಳನ್ನು ತುಂಬಿಕೊಂಡಿದ್ದ ವಾಹನ ಮತ್ತು ಅದಕ್ಕೆ ಬಳಸುತ್ತಿದ್ದ ಜೆಸಿಬಿಯನ್ನು ವಶಪಡಿಸಿಕೊಂಡಿದ್ದೇವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ವಿಚಾರ ಮುಟ್ಟಿಸಿ ವರದಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
– ಚಂದ್ರಹಾಸ, ಎಸ್‌ಐ, ಅಂತರಸಂತೆ
ತಾಲ್ಲೂಕಿನಲ್ಲಿ ಯಾವುದೇ ಗಣಿಗಾರಿಕೆ ಮತ್ತು ಅಕ್ರಮಗಳು ನಡೆಯಲು ಬಿಡುವುದಿಲ್ಲ. ಪೊಲೀಸರು ವಶಪಡಿಸಿಕೊಂಡಿರುವ ಗಣಿಗಾರಿಕೆ ಕಲ್ಲುಗಳ ಬಗ್ಗೆ ಪರಿಶೀಲಿಸಿ ನಮ್ಮ ಇಲಾಖೆಯಿಂದಲೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಶ್ರೀನಿವಾಸ್, ತಹಸಿಲ್ದಾರ್