ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ಶಾಲೆಗಳಿಗೆ ಅಕ್ಟೋಬರ್ 3ರಿಂದ ಅ.20ರವರೆಗೆ ರಜೆಯನ್ನು ನೀಡಿದೆ. ಆದರೆ ಕೆಲ ಖಾಸಗಿ ಶಾಲೆಗಳು ಸರ್ಕಾರದ ಅದೇಶವನ್ನು ಉಲ್ಲಂಘಿಸಿ ಮಕ್ಕಳಿಗೆ ನೀಡಬೇಕಿದ್ದ ದಸರಾ ರಜೆಯನ್ನು ಕಸಿದುಕೊಂಡುಬಿಟ್ಟಿವೆ.
ಕೆಲ ಶಾಲೆಗಳು ಕೇವಲ ಆಯುಧ ಪೂಜೆ, ವಿಜಯದಶಮಿಗೆ ಮಾತ್ರ ರಜೆ ನೀಡಿದ್ದರೆ, ಕೆಲ ಶಾಲೆಗಳು ಒಂದು ವಾರ ಮಾತ್ರ ರಜೆ ನೀಡಿ ಈಗಾಗಲೇ ಶಾಲೆಗಳನ್ನು ಪುನರಾರಂಭಿಸಿವೆ.
ಸರ್ಕಾರ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗುವಂತೆ 18 ದಿನಗಳ ದಸರಾ ರಜೆಯನ್ನು ಘೋಷಿಸಿದೆ. ಆದರೆ ಕೆಲ ಖಾಸಗಿ ಶಾಲೆಗಳು ಈ ಆದೇಶ ನಮಗೆ ಅನ್ವಯವಾಗುವುದಿಲ್ಲ ಎಂಬಂತೆ ವರ್ತಿಸುತ್ತಿದ್ದು, ರಜೆ ಮುಗಿಯುವ ಒಂದು ವಾರದ ಮುಂಚಿತವಾಗಿಯೇ ಶಾಲೆಗಳನ್ನು ಪುನರಾರಂಭಿಸಿದ್ದು, ಮಕ್ಕಳು ದಸರಾ ರಜೆಯಿಂದ ವಂಚಿತರಾಗುವಂತೆ ಮಾಡಿವೆ. ಹೀಗಾದರೆ ಮಕ್ಕಳು ದಸರಾ ಮಹೋತ್ಸವವನ್ನು ಕಣ್ತುಂಕೊಳ್ಳುವುದಾದರೂ ಹೇಗೆ? ಸರ್ಕಾರ ಈ ಬಗ್ಗೆ ಗಮನಹರಿಸಿ ರಜೆ ಕಡಿತಗೊಳಿಸಿರುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ,